ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗ್ವಾಟಿಮಾಲ ನಗರ

ವಿಕಿಸೋರ್ಸ್ದಿಂದ

ಗ್ವಾಟಿಮಾಲ ನಗರ- ಮಧ್ಯ ಅಮೆರಿಕದ ಅತ್ಯಂತ ದೊಡ್ಡ ನಗರ. ಗ್ವಾಟಿಮಾಲದ ರಾಜಧಾನಿ; ಆರ್ಥಿಕ ಸಾಂಸ್ಕøತಿಕ ಕೇಂದ್ರ; ಗ್ವಾಟಿಮಾಲ ವಿಭಾಗದ ಆಡಳಿತ ಕೇಂದ್ರ ಕೂಡ. ಗ್ವಾಟಿಮಾಲದ ಮಧ್ಯದಲ್ಲಿ ಪರ್ವತಗಳ ನಡುವಿನ ಕಣಿವೆಯಲ್ಲಿ ಸು. 5000' ಎತ್ತರದಲ್ಲಿರುವ ಈ ನಗರ ಪ್ವೆರ್ಟೊ ವಾರ್ಯೊಸ್‍ಗೆ ನೈಋತ್ಯದಲ್ಲಿ 150 ಮೈ. ದೂರದಲ್ಲಿದೆ. ಇದರ ಔನ್ನತ್ಯದಿಂದಾಗಿ ಇಲ್ಲಿಯ ವಾಯುಗುಣ ತಂಪಾಗಿದೆ. ಗ್ವಾಟಿಮಾಲದ ರಾಜಧಾನಿಯಾಗಿದ್ದ ಆಂಟೀಗ್ವಾ ನಗರ 1773 ರಲ್ಲಿ ಭೂಕಂಪದಿಂದ ನೆಲಸಮವಾದಾಗ ಅದರ ಬದಲು ಗ್ವಾಟಿಮಾಲ ನಗರ ಸ್ಥಾಪಿತವಾಯಿತು (1776). ಮಧ್ಯ ಅಮೆರಿಕ ಸ್ಪೇನಿನಿಂದ ಸ್ವತಂತ್ರಗೊಂಡ ಮೇಲೆ ಮೆಕ್ಸಿಕನ್ ಚಕ್ರಾಧಿಪತ್ಯದ ಅಡಿಯಲ್ಲಿ ಸ್ಥಾಪಿತವಾದ ಮಧ್ಯ ಅಮೆರಿಕ ಪ್ರಾಂತ್ಯಕ್ಕೂ (1822 - 1823) ಅನಂತರ ಸ್ಥಾಪಿತವಾದ ಮಧ್ಯ ಅಮೆರಿಕ ಒಕ್ಕೂಟಕ್ಕೂ (1823 - 1833) . ಆ ಮೇಲೆ ಗ್ವಾಟಿಮಾಲ ರಾಜ್ಯಕ್ಕೂ ಕೊನೆಗೆ ಗ್ವಾಟಿಮಾಲ ಗಣರಾಜ್ಯಕ್ಕೂ ರಾಜಧಾನಿಯಾಯಿತು. 1917 - 1918 ರ ಭೀಕರ ಭೂಕಂಪದ ಅನಂತರ ನಗರವನ್ನು ಬಹಳ ಮಟ್ಟಿಗೆ ಪುನರ್ನಿರ್ಮಿಸಲಾಯಿತು. ಉಕ್ಕು ಮತ್ತು ಕಾಂಕ್ರೀಟಿನ ಹಲವು ಭಾರಿ ಕಟ್ಟಡಗಳು ನಿರ್ಮಾಣವಾದುವು. ಹಳೆಯ ನಗರದ ಹೊರವಲಯಗಳಲ್ಲಿ ಆಕರ್ಷಕವಾದ ವಿಸ್ತರಣಗಳು ಬೆಳೆದಿವೆ. ನಗರದ ಅನೇಕ ಕಡೆಗಳಲ್ಲಿ ಅಲ್ಪ ವೆಚ್ಚದ ಮನೆಗಳನ್ನು ಕಟ್ಟಲಾಗಿದೆ. ನಗರದ ರಸ್ತೆಗಳು ದೀಪಾಲಂಕೃತವೂ ಶುಭ್ರವೂ ಆಗಿವೆ. ಸರ್ಕಾರಿ ಕಚೇರಿಗಳ ಜೊತೆಗೆ ಗ್ವಾಟಿಮಾಲ ನಗರ ಕೈಗಾರಿಕಾ ವಾಣಿಜ್ಯ ಕಚೇರಿಗಳು ಮತ್ತು ಬ್ಯಾಂಕುಗಳಿಂದ ಕೂಡಿದೆ. ಇಡೀ ರಾಷ್ಟ್ರದ ಕೈಗಾರಿಕೆಗಳಲ್ಲಿ ಅರ್ಧದಷ್ಟು ಗ್ವಾಟಿಮಾಲಾದಲ್ಲೇ ಇವೆ. ಇದೊಂದು ಸಾರಿಗೆ ಕೇಂದ್ರ, ವಾಣಿಜ್ಯಕೇಂದ್ರ. ನಗರದ ದಕ್ಷಿಣದಲ್ಲಿ ಆರೋರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಇದೊಂದು ಶಿಕ್ಷಣ ಕೇಂದ್ರ ಕೂಡ. ಜನತಾ ವಿಶ್ವವಿದ್ಯಾಲಯ ಮತ್ತು ಸ್ಯಾಂಗ್ ಕಾರ್ಲೊಸ್ ವಿಶ್ವವಿದ್ಯಾಲಯ ಇವೆ. ಕಲಾ ಶಾಲೆಗಳೂ ವಾಣಿಜ್ಯ ತಾಂತ್ರಿಕ ಹಾಗೂ ಸೈನಿಕ ಶಿಕ್ಷಣ ಶಾಲೆಗಳೂ ಇವೆ. ಅನೇಕ ವಸ್ತುಸಂಗ್ರಹಾಲಯಗಳುಂಟು.

ಗ್ವಾಟಿಮಾಲ ನಗರದಲ್ಲಿಯ ರಾಷ್ಟ್ರೀಯ ಅರಮನೆ, ಅಂಚೆ ಕಚೇರಿ, ಪೋಲಿಸ್ ಕೇಂದ್ರ ಕಚೇರಿ, ರಾಷ್ಟ್ರೀಯ ಪತ್ರಾಗಾರ ಮತ್ತು ರಾಷ್ಟ್ರೀಯ ಗ್ರಂಥಾಲಯ ಕಟ್ಟಡಗಳೂ ಸಾನ್ ಫ್ರಾನ್ಸಿಸ್ಕೊ, ಸಾಂಟೊ ಡೊಮಿಂಗೊ, ಲ ಮರ್ಸೆದ್ ಚರ್ಚುಗಳೂ ಪ್ರೇಕ್ಷಣೀಯ. ಮಿನರ್ವ ಉದ್ಯಾನದಲ್ಲಿ ಗ್ವಾಟಿಮಾಲ ರಾಜ್ಯದ ಉಬ್ಬುತಗ್ಗು ಭೂಪಟವಿದೆ. ಪ್ರಾಕ್ತನ ಮತ್ತು ಇತಿಹಾಸ ವಸ್ತು ಸಂಗ್ರಹಾಲಯಗಳು, ಮೇಲು ಕಾಲುವೆ, ಕೇಂದ್ರೀಯ ಮಾರುಕಟ್ಟೆ, 1950ರ ಅಮೆರಿಕನ್ ಒಲಿಂಪಿಕ್ ಕ್ರೀಡೆಗಳಿಗಾಗಿ ಕಟ್ಟಲಾದ ಒಲಿಂಪಿಕ್ ನಗರ-ಇವೂ ಪ್ರಸಿದ್ಧವಾಗಿವೆ.