ಪಂಪ:ಕವಿ-ಕೃತಿ ಪರಿಚಯ

ವಿಕಿಸೋರ್ಸ್ದಿಂದ

ಪಂಪ: ಕವಿ ಪರಿಚಯ[ಸಂಪಾದಿಸಿ]

  • ಪಂಪನ ಜನನ : ಕ್ರಿ.ಶ. ೯೦೨, ದುಂದುಭಿ ಸಂವತ್ಸರ
  • ತಂದೆ : ಅಭಿರಾಮ ದೇವರಾಯ (ರೂಢಿಯ ಹೆಸರು:ಭೀಮಪ್ಪಯ್ಯ.)
  • ತಾಯಿ: ಅಬ್ಬಣಬ್ಬೆ (ಬೆಳ್ವೊಲದಣ್ಣಿಗೆರೆಯ ಜೋಯಿಸ ಸಿಂಘನಮೊಮ್ಮಗಳು)
  • ಮಾಧವ ಸೋಮಯಾಜಿ:->ಅಭಿಮಾನ ಚಂದ್ರ -> ಕೊಮರಯ್ಯ (ಈ ಮೂವರೂ ಬ್ರಾಹ್ಮಣರು) -> ಅಭಿರಾಮ ದೇವರಾಯ (ಜೈನಮತಕ್ಕೆ ಸೇರಿದನು) -> ಪಂಪ (ಜೈನ) [೧]
  • ಜನ್ಮಸ್ಥಳ : ವೆಂಗಿ ಪುಳುಪು, ವೆಂಗಿ ಮಂಡಳ (ಆಂಧ್ರ), ವೇಮಲವಾಡ,ರಾಜಮಂಡ್ರಿಜಿಲ್ಲೆ (ವೆಂಗಿಪಳು ಎಂಬ ಅಗ್ರಹಾರ)
  • ಗುರು : ದೇವೇಂದ್ರಮುನಿ
  • ವಿದ್ಯಾಭ್ಯಾಸ :ಗಣಿತ, ವ್ಯಾಕರಣ,ಅಲಂಕಾರ, ಸಂಗೀತ, ನಾಟ್ಯ, ಶಿಲ್ಪ, ವೈದ್ಯ, ವೇದಶಾಸ್ತ್ರವನ್ನು ಗುರುಕುಲದಲ್ಲಿ ಅಭ್ಯಾಸ ಮಾಡಿದ್ದನು. ದೇವೇಂದ್ರ ಮುನೀಂದ್ರಈತನ ಗುರುಗಳು.
  • ವೃತ್ತಿ: ವೆಂಗಿ ಚಾಲುಕ್ಯವಂಶದ ಎರಡನೆಯ ಅರಿಕೇಸರಿಯ ಆಸ್ಥಾನ ಪಂಡಿತ.

ಸಾಹಿತ್ಯ ಕೃತಿಗಳು[ಸಂಪಾದಿಸಿ]

  • ಆದಿಪುರಾಣ-ಮೊದಲನೆಯ ತೀರ್ಥಂಕರನಾದ ಪುರದೇವ/ವೃಷಭದೇವನ ಬಗ್ಗೆ ರಚಿತವಾದ ಜೈನಕಾವ್ಯ. ಜಿನಸೇನಾಚಾರ್ಯರಸಂಸ್ಕೃತಕಾವ್ಯ ಪೂರ್ವಪುರಾಣ ಇದರ ಆಕರ ಗ್ರಂಥ. ಇದರಲ್ಲಿ ೧೬ಆಶ್ವಾಸಗಳು ಮತ್ತು ೧೫೫೫ ಪದ್ಯಗಳೂ ಇವೆ. ಇದರಲ್ಲಿ ಪ್ರಮುಖವಾಗಿಆದಿತೀರ್ಥಂಕರನಾದ ವೃಷಭದೇವ ಮತ್ತು ಅವನ ಮಕ್ಕಳಾದ ಭರತ ಮತ್ತು ಬಾಹುಬಲಿಗಳ ಪ್ರಸಂಗವು ಚಿತ್ರಿತವಾಗಿದೆ ಹಾಗೂ ಜೈನಧರ್ಮದ ವರ್ಣನೆಯ ಜೊತೆಗೆ ಸರ್ವಧರ್ಮದ ಸಮನ್ವಯವನ್ನು ಮೆರೆದಿದ್ದಾನೆ.
  • ವಿಕ್ರಮಾರ್ಜುನ ವಿಜಯ-ಪಂಪಭಾರತವೆಂದೇ ಪ್ರಸಿದ್ಧಿ. ಇದರಲ್ಲಿವ್ಯಾಸರಚಿತವಾದ ಮಹಾಭಾರತವನ್ನು ಕನ್ನಡಕ್ಕೆ ತಂದ ಕೀರ್ತಿ ಪಂಪನಿಗೆ ಸಲ್ಲುತ್ತದೆ. ಪಂಪ ಭಾರತದಲ್ಲಿ ಅರ್ಜುನನನ್ನು ಪ್ರಧಾನ ಭೂಮಿಕೆಯಲ್ಲಿ ನಿಲ್ಲಿಸಿ ತನ್ನ ದೊರೆ ಅರಿಕೇಸರಿಗೆ ಹೋಲಿಸಿದ್ದಾನೆ. ಮಹಾಭಾರತದ ಕಾವ್ಯದ ವರ್ಣನೆಯ ಜೊತೆಗೆ ಪಂಪ ತನ್ನ ಕಾಲದ ಸಮಾಜದ ನಾಗರೀಕತೆ, ಸಂಪ್ರದಾಯ, ಸಂಸ್ಕೃತಿ ಹಾಗೂ ಜನ ಸಾಮನ್ಯರ ಜೀವನದ ಪೂರ್ಣ ಚಿತ್ರಣನೀಡಿದ್ದಾನೆ. ಅಂದಿನ ಕಾಲದ ಆಟಗಳು, ವಿದ್ಯಾಭ್ಯಾಸ ಪದ್ಧತಿ, ಜನರ ವಿಲಾಸಿಜೀವನ, ಪ್ರಕೃತಿ ಸೌಂದರ್ಯವನ್ನು ಸೊಗಸಾಗಿ ಚಿತ್ರಿಸಿದ್ದಾನೆ.

ಪ್ರಶಸ್ತಿ, ಪುರಸ್ಕಾರ, ಬಿರುದು:[ಸಂಪಾದಿಸಿ]

  • ಸಂಸಾರ ಸಾರೋದಯ, ಸರಸ್ವತೀ ಮಣಿಹಾರ, ಕವಿತಾಗುಣಾರ್ಣವ, ಆದಿಕವಿ, ಕನ್ನಡ ಕಾವ್ಯಗಳ ಜನಕ, ನಾಡೋಜ, ನೂತನ ಯುಗ ಪ್ರವರ್ತಕ.
  • "ಏಂ ಕಲಿಯೋ, ಸತ್ಕವಿಯೋ ಕವಿತಾಗುಣಾರ್ಣಭವಂ"ಎಂದು ಪಂಪನನ್ನು ಹೊಗಳಿದ್ದಾರೆ. "ಪಸರಿಪ ಕನ್ನಡಕ್ಕೋರ್ವನೇ ಸತ್ಕವಿ ಪಂಪನಾವಗಂ" ಎಂದು ನಾಗರಾಜ ಕವಿಯು ಪಂಪನನ್ನು ಹೊಗಳಿದ್ದಾನೆ.

ಕವಿ ಸಂದೇಶ:[ಸಂಪಾದಿಸಿ]

  • 'ಧರ್ಮಂ ಪ್ರಧಾನಂ ಅರ್ಥಂ ಧರ್ಮಾಂಘ್ರಿಪಫಳಂ ಅದರ್ಕ್ಕೆರಸಮದುಕಾಮಂ'- ಇದು ಪಂಪನ ಜೀವನ ದೃಷ್ಟಿ.
  • ಪದ ವಿಭಾಗ:ಧರ್ಮಂ ಪ್ರಧಾನಂ, ಅರ್ಥಂ ಧರ್ಮ ಅಂಘ್ರಿಪ ಫಳಂ, ಅದರ್ಕ್ಕೆ ರಸಮದು ಕಾಮಂ
  • ಅರ್ಥ:ಜೀವನಕ್ಕೆ ಮುಖ್ಯವಾದ ಧರ್ಮ, ಅರ್ಥ,ಕಾಮ, ಇವುಗಳಲ್ಲಿ ಧರ್ಮವು ಎಲ್ಲಕ್ಕೂ ಪ್ರಧಾನವು ಎಂದರೆ ಮುಖ್ಯವು, ಅರ್ಥವು ಎಂದರೆ ಸಂಪತ್ತು ಅಥವಾ ಧನವು, ಅದು ಧರ್ಮವೆಂಬ ಮರದ ಫಲವು/ ಹಣ್ಣು; ಆ ಫಲದ ರಸ ಅಥವಾ ಸಾರವೇ ಕಾಮವು ಎಂದರೆ ಅಗತ್ಯ ಬಯಕೆಗಳ ಈಡೇರಿಕೆ. ಧರ್ಮದಿಂದ ಬಯಕೆಗಳನ್ನು ಈಡೇರಿಸಿಕೊಳ್ಳಬೇಕು ಎಂಬುದು ಭಾವ.

ಬನವಾಸಿಯ ವರ್ಣನೆ[ಸಂಪಾದಿಸಿ]

  • ಕವಿಯ ಭಾಷಾಶೈಲಿಯ ಪರಿಚಯಕ್ಕಾಗಿ ಕೆಲವು ಪದ್ಯಗಳನ್ನು ಕೊಟ್ಟಿದೆ. (ಶ್ರೀ.ಡಿ.ಎಲ್ ನರಸಿಂಹಾಚಾರ್ಯರು ಪಂಪಭಾರತ ದೀಪಿಕೆಯಲ್ಲಿ ಈ ಸಾಲುಗಳು ಭಾವಗೀತೆಯಂತಿದೆ ಎಂದಿದ್ದಾರೆ.)
  • ಕನ್ನಡನಾಡಿನ ಬಗ್ಗೆ ಅಪಾರ ಹೆಮ್ಮೆಯಿಂದ ತನ್ನ ಕಾವ್ಯದಲ್ಲಿ ಹೊಗಳಿದ್ದಾನೆ.

ಸೊಗಯಿಸಿ ಬಂದ ಮಾಮರನೆ ತಳ್ತೆಲೆವಳ್ಳಿಯೆ ಪೂತಜಾತಿ ಸಂ
ಪಗೆಯೆ ಕುಕಿಲ್ವ ಕೋಗಿಲೆಯೆ ಪಾಡುವ......ko ತುಂಬಿಯೆ ನಲ್ಲರೊಳ್ಮೊಗಂ
ನಗೆಮೊಗದೊಳ್ ಪಳಂಚಲೆಯೆ ಕೂಡುವ ನಲ್ಲರೆ ನೋಳ್ಪೊಡಾವ ಬೆ
ಟ್ಟುಗಳೊಳಮಾವ ನಂದನವನಂಗಳೊಳಂ ಬನವಾಸಿ ದೇಶದೊಳ್|| ೪- ೨೮||
ಪದವಿಭಾಗ: ಸೊಗಸಾಗಿ ಬಂದ ಮಾಮರನೆ ತಲ್ತ ಎಲೆವಳ್ಳಿಯೆ ಪೂತಜಾತಿ ಸಂಪಗೆಯೆ ಕುಕಿಲ್ವ ಕೋಗಿಲೆಯೆ ಪಾಂಡುವ ತುಂಬಿಯೆ ನಲ್ಲರೊಳ್ ಮೊಗಂ ನಗೆಮೊಗದೊಳ್ ಪಳಂಚಲೆಯೆ ಕೂಡುವ ನಲ್ಲರೆ ನೋಳ್ಪೊಡೆ ಆವ ಬೆಟ್ಟುಗಳೊಳ ಮಾವ ನಂದನಂಗಳು ಒಳಂ ಬನವಾಸಿ ದೇಶದೊಳ್
ಪದ ಅನ್ವಯ:ಬನವಾಸಿ ದೇಶದೊಳ್ ಒಳಂ, ಆವ ಬೆಟ್ಟುಗಳ ಒಳಮ‍ ಆವ ನಂದನಂಗಳು ಒಳಂ ನೋಳ್ಪೊಡೆ, ಸೊಗಸಾಗಿ ಬಂದ ಮಾಮರನೆ, ತಲ್ತ ಎಲೆವಳ್ಳಿಯೆ, ಪೂತಜಾತಿ ಸಂಪಗೆಯೆ, ಕುಕಿಲ್ವ ಕೋಗಿಲೆಯೆ, ಪಾಂಡುವ ತುಂಬಿಯೆ, ನಲ್ಲರೊಳ್ ಮೊಗಂ ನಗೆ ಮೊಗದೊಳ್ ಪಳಂಚಲೆಯೆ (ಪಳಂಚು:ತಾಗು, ಬಡಿ) ಕೂಡುವ ನಲ್ಲರೆ.

  • ಅರ್ಥ:

ಆ ಬನವಾಸಿ ದೇಶದ ಯಾವ ಬೆಟ್ಟಗಳಲ್ಲಿಯೂ ಉದ್ಯಾನವನಗಳಲ್ಲಿಯೂ ನೋಡುವುದಾದರೆ
ಸೊಗಸಾಗಿ ಫಲ ಬಿಟ್ಟಿರುವ ಮಾವಿನ ಮರಗಳೇ; ದಟ್ಟವಾಗಿ ಸೇರಿಕೊಂಡಿರುವ ವಿಳ್ಳೆಯದೆಲೆಯ
ಬಳ್ಳಿಗಳೇ, ಹೂವನ್ನು ಬಿಟ್ಟಿರುವ ಜಾಜಿ ಮತ್ತು ಸಂಪಗೆ ಗಿಡಗಳೇ; ಸುಸ್ವರವಾಗಿ ಧ್ವನಿಮಾಡುವ ಕೋಗಿಲೆ,
ಝೇಂಕರಿಸುವ ದುಂಬಿಗಳೇ, ಪ್ರೇಯಸಿಯರ ಒಳ್ಳೆಯ ಮುಖಗಳೇ, ನಗುಮುಖದಲ್ಲಿ ಪ್ರತಿಭಟಿಸಿ ಕೂಡುವ ನಲ್ಲರೇ.
-$-
ತ್ಯಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ
ಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ
ನಾಗಿಯುಮೇನೊ ತೀರ್ದಪುದೆ ತೀರದೊಡಂ ಮರಿದುಂಬಿಯಾಗಿ ಮೇಣ್
ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್|| ೪-೨೯||
ಪದ ವಿಭಾಗ:ತ್ಯಾಗದ ಭೋಗದ ಅಕ್ಕರದ ಗೇಯದ ಗೊಟ್ಟಿಯ ಅಲಂಪಿನ ಇಂಪುಗಳ್ಗೆ ಆಗರವಾದ ಮಾನಸರೆ ಮಾನಸರು; ಅಂತವರಾಗಿ ಪುಟ್ಟಲು ಏನಾಗಿಯುಂ ಏನೊ ತೀರ್ದಪುದೆ? ತೀರದೊಡಂ ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್
ಪದ-ಅನ್ವಯನುಸಾರ: ವನವಾಸಿ ದೇಶದೊಳ್ ತ್ಯಾಗದ ಭೋಗದ ಅಕ್ಕರದ ಗೇಯದ ಗೊಟ್ಟಿಯ ಅಲಂಪಿನ ಇಂಪುಗಳ್ಗೆ ಆಗರವಾದ ಮಾನಸರೆ ಮಾನಸರು; ಅಂತವರಾಗಿ ಪುಟ್ಟಲು ಏನಾಗಿಯುಂ ಏನೊ ತೀರ್ದಪುದೆ? ತೀರದೊಡಂ; (ವನವಾಸಿ ದೇಶದೊಳ್) ನಂದನದೊಳ್ ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು

  • ಅರ್ಥ:

ಆ ಬನವಾಸಿ ದೇಶದಲ್ಲಿ ತ್ಯಾಗ, ಭೋಗ, ವಿದ್ಯೆ, ಸಂಗೀತ-ಗೋಷ್ಠಿಗಳ ಸಂತೋಷ ಸೌಖ್ಯಕ್ಕೆ
ಅರ್ಹರಾಗಿರುವ ಮನುಷ್ಯರೇ ಮನುಷ್ಯರು. ಅಂತಹ ಅದೃಷ್ಟಶಾಲಿಗಳಾದ ಮನುಷ್ಯರಾಗಿ ಹುಟ್ಟಲು
ಏನಾದರೂ ತಾನೇ ಸಾಧ್ಯವೇ? ಹಾಗೆ ಸಾಧ್ಯವಾಗದಿದ್ದರೂ ಆ ಬನವಾಸಿ
ದೇಶದ ನಂದನವನಗಳಲ್ಲಿ ಮರಿದುಂಬಿಯಾಗಿಯೋ ಅಥವಾ ಕೋಗಿಲೆಯಾಗಿಯೋ ಹುಟ್ಟಬೇಕು.
-$-
ತೆಂಕಣಗಾಳಿ ಸೋಂಕಿದೊಡಂ ಒಳ್ನುಡಿಗೇಳ್ದೊಡಮಿಂಪನಾಳ್ದ ಗೇ
ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ
ಪಂಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆ ನಾ
ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ|| ೪-೩೦||
ಪದವಿಭಾಗ:ತೆಂಕಣಗಾಳಿ ಸೋಂಕಿದೊಡಂ ಒಳ್ನುಡಿ (ಗೇ)ಕೇಳ್ದೊಡಂ ಮಿಂಪನು ಆಳ್ದ ಗೇಯಂ ಕಿವಿ (ವೊ)ಹೊಕ್ಕೊಡಂ ಬಿರಿದ ಮಲ್ಲಿಗೆ (ಗ )ಕಂಡೊಡಂ ಆದ ಕೆಂದು ಅಲಂಪಂಗೆ ಎಡೆಗೊಂಡೊಡಂ ಮಧುಮಹೋತ್ಸವಂ ಆದೊಡಂ ಏನನೆಂಬೆನು ಆರಂಕುಸಂ (ವಿ)ಇಟ್ಟೊಡಂ ನೆನೆವುದು ಎನ್ನ ಮನಂ ವನವಾಸಿ ದೇಶಮಂ.
ಪದ-ಅನ್ವಯನುಸಾರ: ತೆಂಕಣಗಾಳಿ ಸೋಂಕಿದೊಡಂ, ಒಳ್ನುಡಿ (ಗೇ)ಕೇಳ್ದೊಡಂ, (ಮಿ) ಇಂಪನು ಆಳ್ದ ಗೇಯಂ ಕಿವಿ (ವೊ)ಹೊಕ್ಕೊಡಂ, ಬಿರಿದ ಮಲ್ಲಿಗೆ (ಗ )ಕಂಡೊಡಂ, ಆದ ಕೆಂದು (ನಿದ್ದೆ) ಅಲಂಪಂಗೆ (ಸುಖ) ಎಡೆಗೊಂಡೊಡಂ (ಆದರೂ) ಮಧುಮಹೋತ್ಸವಂ ಆದೊಡಂ, ಏನನೆಂಬೆನು ಆರುಂ ಅಂಕುಸಂ (ಅಂಕುಶ)(ವಿ)ಇಟ್ಟೊಡಂ ನೆನೆವುದು ಎನ್ನ ಮನಂ ವನವಾಸಿ ದೇಶಮಂ.
*ಅರ್ಥ:
ಅತಿಸುಖಹೇತುಗಳಾದ) ದಕ್ಷಿಣ ದಿಕ್ಕಿನ ತಂಪಾದ ಗಾಳಿಯ ಸ್ಪರ್ಶವಾದರೂ, ಒಳ್ಳೆಯ ಮಾತನ್ನು ಕೇಳಿದರೂ,
ಇಂಪಾದ ಗಾನವು ಕಿವಿಯನ್ನು ಪ್ರವೇಶಿಸಿದರೂ, ಅರಳಿದ ಮಲ್ಲಿಗೆಯ ಹೂವನ್ನು ಕಂಡರೂ,
ನಿದ್ರಾಮುದ್ರಿತವಾದ ರತಿಸೌಖ್ಯಕ್ಕೆ ಪಾತ್ರವಾದರೂ, ವಸಂತೋತ್ಸವ ಪ್ರಾಪ್ತವಾದರೂ, ಏನು ಹೇಳಲಿ
(ಯಾರು ಬೇಡವೆಂದು ತಡೆದು) ಅಂಕುಶದಿಂದ ತಿವಿದರೂ, ನನ್ನ ಮನಸ್ಸು ಬನವಾಸಿ ದೇಶವನ್ನು ನೆನೆಯುವುದು.

[೨] [೩] -೦-

ಪಂಪಭಾರತ[ಸಂಪಾದಿಸಿ]

ಅನುಬಂಧ 16 ಪಂಪ:ಕವಿ-ಕೃತಿ ಪರಿಚಯ ಪಂಪಭಾರತ: ಅಧ್ಯಾಯ ಅಥವ ಆಶ್ವಾಸಗಳು-> 1 2 3 4 5 6 7
ಪಂಪ - ಒಂದು ಚಿಂತನೆ ವ್ಯಾಸ ಭಾರತ ಮತ್ತು ಪಂಪಭಾರತ: ಪರಾಮರ್ಶೆ ಪಂಪಭಾರತ:ಕಥಾ ಸಾರಾಂಶ 8 9 10 11 12 13 14

ನೋಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. (ಆದಿ ಪುರಾಣ ಮತ್ತು ಪಂಪ ಭಾರತದ ಹದಿನಾಲ್ಕನೇಅಶ್ವಾಸ ೪೦ ನೇ ಪದ್ಯದಿಂದ)
  2. ಪಂಪ ಭಾರತ - ಗದ್ಯಾನುವಾದ (ಲೇಖಕರು- ಎನ್ .ಅನಂತರಂಗಾಚಾರ್) ಕೃಪೆ:- ಕಣಜ
  3. ಪಂಪ ಭಾರತ ಡಿ.ಎಲ್.ನರಸಿಂಹಾಚಾರ್ ಕನ್ನಡ ಅಭಿವೃದ್ಧಿ ಪ್ರಾಧಿಕಾರ