ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಕ್ರಿಡಿನ್

ವಿಕಿಸೋರ್ಸ್ದಿಂದ

ಅಕ್ರಿಡಿನ್[ಸಂಪಾದಿಸಿ]

ಸಾರಜನಕದ ಪರಮಾಣುವೊಂದನ್ನುಳ್ಳ ಮಿಶ್ರಚಕ್ರೀಯ (ಹೆಟೆರೋಸೈಕ್ಲಿಕ್) ಸಂಯುಕ್ತ ಇದನ್ನು ಮುಂದೆ ತೋರಿಸಿರುವ ಅಣುಸೂತ್ರದಿಂದ ನಿರೂಪಿಸಬಹುದು. ಒಂದಕ್ಕೊಂದು ಸೇರಿಕೊಂಡಿರುವ ಮೂರು ಚಕ್ರಗಳನ್ನುಳ್ಳ ಈ ಸಂಯುಕ್ತ ರಚನೆ (ರಿಂಗ್ ಸ್ಟ್ರಕ್ಚರ್) ಆ್ಯಂಥ್ರಸೀನ್ ರಚನೆಯನ್ನು ಹೋಲುತ್ತದೆ.

ಕಲ್ಲಿದ್ದಲಿನಿಂದ ಉತ್ಪತ್ತಿಯಾಗುವ ಟಾರೆಣ್ಣೆಯಲ್ಲಿ ಈ ಸಂಯುಕ್ತ ಅಲ್ಪ ಪ್ರಮಾಣದಲ್ಲಿ ದೊರೆಯುತ್ತದೆ. ಕೃತಕವಾಗಿಯೂ ಇತರ ಸಂಯುಕ್ತಗಳಿಂದಲೂ ಅಕ್ರಿಡಿನ್ನನ್ನು ತಯಾರಿಸಬಹುದು.


ಶುದ್ಧ ಅಕ್ರಿಡಿನ್ನಿನ ರೂಪ ವರ್ಣ ರಹಿತ ಸೂಜಿಯಾಕಾರದ ಹರಳು ಗಳಂತಿರುತ್ತದೆ. ಅಕ್ರಿಡಿನ್ ಮತ್ತು ಅದರ ಇತರ ಸಂಯುಕ್ತಗಳೆಲ್ಲವೂ ತಮ್ಮದೇ ಆದ ಒಂದು ವಿಶಿಷ್ಟ ವಾಸನೆ ಯನ್ನು ಹೊಂದಿವೆ. ದ್ರಾವಣರೂಪ ದಲ್ಲಿದ್ದಾಗ ಹಳದಿ ಹಸಿರುಮಿಶ್ರಿತವಾಗಿ ಗೋಚರಿಸುವ ಕಿರಣಸ್ಫುರಣ ಅಥವಾ ಪ್ರತಿದೀಪ್ತಿಯನ್ನು (ಫೋರಸೆನ್್ಸ) ಇವು ಪ್ರದರ್ಶಿಸಬಲ್ಲುವು.

ಅಕ್ರಿಡಿನ್ನಿನಿಂದ ನೇರವಾಗಿ ಹೆಚ್ಚು ಉಪಯೋಗವಿಲ್ಲದಿದ್ದರೂ ಬಣ್ಣಗಳಾಗಿ ಉಪಯೋಗಿಸಲಾಗುತ್ತಿರುವ ಅಕ್ರಿಡಿನ್ ಆರೆಂಜ್, ಅಕ್ರಿಡಿನ್ ಯೆಲ್ಲೋ, ಕ್ರೈಸಾನಿಲಿನ್, ಟ್ರಿಪಫ್ಲೇವಿನ್ ಮತ್ತು ಬೆಂಜೋಫ್ಲೇವಿನ್ಗಳಲ್ಲಿ ಅಕ್ರಿಡಿನ್ನಿನ ಮಾತೃವೃತ್ತ (ಪೇರೆಂಟ್ರಿಂಗ್) ಇದೆ. ಮಲೇರಿಯಾ ಜ್ವರಕ್ಕೆ ಮದ್ದಾಗಿರುವ ಅಟೆಬ್ರಿನ್ ಮತ್ತು ಅಮೀಬದ ರಕ್ತಭೇದಿಯ ಚಿಕಿತ್ಸೆಯಲ್ಲಿ ಉಪಯೋಗಿಸುವ ರಿವನಾಲ್ ಸಂಯುಕ್ತಗಳು ಅಕ್ರಿಡಿನ್ ರಚನೆಯಿಂದ ಜನ್ಯವಾದವು.