ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಜ್ಮೀರ್

ವಿಕಿಸೋರ್ಸ್ದಿಂದ

ಅಜ್ಮೀರ್ ರಾಜಾಸ್ಥಾನದಲ್ಲಿನ ಈ ನಗರ 11ನೆಯ ಶತಮಾನದ ಕೊನೆಯಲ್ಲಿ ಚೌಹಾನ್ ವಂಶದ ರಾಜ ಅಜಯದೇವನಿಂದ ನಿರ್ಮಿತವಾಯಿತು. ಊರು ಅರಾವಳಿ ಬೆಟ್ಟಗಳ ಉತ್ತರದ ತುದಿಯ ಇಳಿಜಾರಿನಲ್ಲಿದೆ. (260, 28 ಉ. ಅ-740,41 ಪೂ.ರೇ). ಇದರ ಉತ್ತರಕ್ಕೆ ಆನಾಸಾಗರ, ಮೇಲುಭಾಗದಲ್ಲಿ ಫಾಯ್ ಸಾಗರಗಳೆಂಬ ಸರೋವರಗಳುಂಟು. ಎರಡನೆಯ ಸರೋವರ ಅಜ್ಮೀರ್ ಪಟ್ಟಣಕ್ಕೆ ನೀರನ್ನು ಸರಬರಾಜು ಮಾಡುತ್ತದೆ.

ಈ ಪಟ್ಟಣದಲ್ಲಿ ಖ್ಯಾತ ಮಹಮದೀಯ ಸಂತ ಮುಯಿನ್-ಉದ್-ದೀನ್ ಸಿಸ್ಥಿ ಸಮಾಧಿಯಿದೆ. ಇಲ್ಲಿ ಬಿಳಿ ಅಮೃತಶಿಲೆಯ ಕಟ್ಟಡಗಳುಂಟು. ಅಕ್ಬರ್ ದೊರೆ ತನ್ನ ರಾಣಿಯ ಸಂಗಡ ಆಗ್ರಾದಿಂದ ಇಲ್ಲಿಗೆ ನಡೆದುಬಂದು ಮಗನನ್ನು ಪಡೆಯುವುದಕ್ಕಾಗಿ ಪ್ರ್ರಾರ್ಥಿಸಿದನೆಂದು ಪ್ರತೀತಿ. 1200ರಲ್ಲಿ ಇಲ್ಲಿದ್ದ ಒಂದು ಜೈನ ದೇವಾಲಯವನ್ನು ಮಸೀದಿಯಾಗಿ ಪರಿವರ್ತಿಸಲಾಯಿತೆಂದು ತಿಳಿದುಬರುತ್ತದೆ. ಇದು ತಾರಗರ್ ಬೆಟ್ಟದ ಇಳಿಜಾರಿನಲ್ಲಿದೆ. ಇದರ ಕಲೆಯ ಸೌಂದರ್ಯ ಇಂದಿಗೂ ಅಲ್ಪಸ್ವಲ್ಪ ಉಳಿದಿದೆ. ಇಲ್ಲಿರುವ ಒಂದು ದೊಡ್ಡ ಛಾವಣಿಗೆ 40 ಆಧಾರಸ್ತಂಭಗಳಿವೆ. ಬೆಟ್ಟದ ತುದಿಯಲ್ಲಿರುವ ಕೋಟೆಯ ಗೋಡೆ ಸುಮಾರು 2 ಮೈ.ಗಳಷ್ಟಿದೆ. ಈ ಕೋಟೆಗೆ ಕಾಲುದಾರಿ ಮಾತ್ರವುಂಟು.

ಅಜ್ಮೀರ್ ನಗರ ಒಂದು ಮುಖ್ಯ ಆಡಳಿತ ಕೇಂದ್ರ ಮತ್ತು ರೈಲ್ವೆನಿಲ್ದಾಣ. ನಗರ ನಿರ್ಮಾಣ ಉತ್ತಮ ಯೋಜನೆಯಿಂದ ಕೂಡಿದ್ದು ಅದಕ್ಕೆ ಸೌಂದರ್ಯವನ್ನಿತ್ತಿದೆ. ಸಾಂಬಾರ್ ಸರೋವರ ಹಾಗೂ ರಾಮ್‍ಸುರ್‍ನಿಂದ ಬರುವ ಉಪ್ಪು ಇಲ್ಲಿ ವ್ಯಾಪಾರವಾಗುತ್ತದೆ. ಈ ನಗರ ಎಣ್ಣೆ ತಯಾರಿಕೆಗೆ, ಹತ್ತಿ ಬಟ್ಟೆಗಳಿಗೆ ಬಣ್ಣಹಾಕುವ ಕೈಗಾರಿಕೆಗೆ ಹೆಸರುವಾಸಿಯಾಗಿದೆ. 1875ರಲ್ಲಿ ವೇಯೋ ರಾಜಕುಮಾರ ಕಾಲೇಜನ್ನು ಸ್ಥಾಪಿಸಲಾಯಿತು. ಮೊದಲು ಇದು ರಾಜಪುತ್ರಸ್ಥಾನದ ಶ್ರೀಮಂತ ವರ್ಗದ ಮಕ್ಕಳಿಗೆ ಮೀಸಲಾಗಿತ್ತು. ಆಗ್ರಾ ವಿಶ್ವವಿದ್ಯಾನಿಲಯಕ್ಕೆ ಸೇರಿದ ಕಾಲೇಜುಗಳು ಈ ನಗರದಲ್ಲಿವೆ.

ಭಾರತದಲ್ಲಿ ಕಂಡುಬರುವ ಏಕಮಾತ್ರ ಬ್ರಹ್ಮ ದೇವಸ್ಥಾನ ಅಜ್ಮೀರ್‍ನಿಂದ 7 ಮೈಲಿ ದೂರದಲ್ಲಿನ ಪುಷ್ಕರ್ ಸರೋವರದ ಹತ್ತಿರ ಇದೆ. ವರ್ಷಕ್ಕೊಮ್ಮೆ ಇಲ್ಲಿ ಜಾತ್ರೆ ನಡೆಯುತ್ತದೆ. ಇಲ್ಲಿ ದೊರಕುವ ನೀರು ಬಹು ಶ್ರೇಷ್ಠ ಹಾಗೆ ಪಾವನವಾದುದೆಂದು ಮನ್ನಣೆ ಪಡೆದಿದೆ.

(ಎಂ.ಎಸ್.)