ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಣುವ್ರತ

ವಿಕಿಸೋರ್ಸ್ದಿಂದ

ಅಣುವ್ರತ

ಜೈನಧರ್ಮದಂತೆ ಗೃಹಸ್ಥನಾದವನು ತನಗಿರುವ ಪರಿಮಿತಿಯಲ್ಲಿ ಪಾಪದೂರನಾಗಿ ಪುಣ್ಯವಂತನಾಗಿ ಬಾಳು ಆಚರಿಸಬೇಕಾದ ಸಣ್ಣ ವ್ರತಗಳಿಗೆ ಈ ಹೆಸರಿದೆ. ಸುಖಕ್ಕಾಗಿ, ಆಸೆಯಿಂದ ಅವನು ಮಾಡಬಹುದಾದ ಅಪಚಾರಗಳನ್ನು ತಡೆಗಟ್ಟಿ ಅವನನ್ನು ಶೀಲವಂತನನ್ನಾಗಿ ಮಾಡಬಲ್ಲ ಈ ವ್ರತ ಐದು ತೆರನಾಗಿದ್ದು ಪಂಚಾಣುವ್ರತಗಳೆಂದು ಪ್ರಸಿದ್ಧವಾಗಿದೆ.

1. ಅಹಿಂಸೆ: ಸುಖವನ್ನು ಅಪೇಕ್ಷಿಸುವಾಗ ಪ್ರಮಾದದಿಂದಾಗಲಿ ಇತರ ಕಾರಣಗಳಿಂದಾಗಲಿ ಶರೀರದಿಂದ ಆತ್ಮವನ್ನು ಪ್ರತ್ಯೇಕಿಸುವುದಕ್ಕೆ ಹಿಂಸೆ ಎಂದು ಹೆಸರು. ಅಂಥ ಹಿಂಸೆಯನ್ನು ಮಾಡದಿರುವುದಕ್ಕೆ ಅಹಿಂಸೆ ಎಂದು ಹೆಸರು. ಆರಂಭಹಿಂಸೆ. ಉದ್ಯೋಗಹಿಂಸೆ, ವಿರೋಧಿಹಿಂಸೆ, ಸಂಕಲ್ಪಹಿಂಸೆ ಎಂದು ಹಿಂಸೆ ನಾಲ್ಕು ಪ್ರಕಾರವಾಗಿದೆ. ಅವುಗಳಲ್ಲಿ ಆರಂಭಹಿಂಸೆ, ಉದ್ಯೋಗಹಿಂಸೆಗಳನ್ನು ಗೃಹಸ್ಥನಾದವನು ಮಾಡದೆ ಜೀವಿಸುವುದು ಕಷ್ಟಸಾಧತ್ಯೆ. ನಮ್ಮನ್ನು ಕೊಲ್ಲಲು ಬಂದವರೊಡನೆ ಹೋರಾಡಿ ಆತ್ಮರಕ್ಷಣೆ ಮಾಡಿಕೊಳ್ಳುವುದು ವಿರೋಧಿಹಿಂಸೆ; ಸಂಕಲ್ಪಮಾಡಿ ಪ್ರಾಣಿಗಳನ್ನು ಕೊಲ್ಲುವುದು ಸಂಕಲ್ಪಹಿಂಸೆ. ಹಿಂಸೆಯಿಂದ ಪ್ರಾಣಿಗಳಿಗೆ ಬಹಳ ದುಃಖವಾಗುವುದರಿಂದ ಅಹಿಂಸೆಯನ್ನು ವ್ರತವೆಂಬಂತೆ ಆಚರಿಸಬೇಕು.

2. ಸತ್ಯ: ಸುಳ್ಳನ್ನು ಎಂದೂ ಹೇಳಬಾರದು; ಅದರಿಂದ ಅನೇಕ ಅನರ್ಥಗಳು ಸಂಭವಿಸುತ್ತವೆ. ಸತ್ಯವನ್ನು ಹೇಳುವುದರಿಂದ ಇಹದಲ್ಲಿ ಕೀರ್ತಿಯೂ ಪರದಲ್ಲಿ ಸುಖವೂ ಪ್ರಾಪ್ತವಾಗುತ್ತದೆ.

3. ಅಸ್ತೇಯ: ತನಗೆ ಸೇರದುದನ್ನು ಮೋಸದಿಂದಾಗಲಿ ಬಲತ್ಕಾರವಾಗಿಯಾಗಲಿ ತೆಗೆದುಕೊಳ್ಳುವುದಕ್ಕೆ ಕಳ್ಳತನವೆಂದು ಹೆಸರು. ಪರರ ವಸ್ತುಗಳನ್ನು ಮಣ್ಣಿನ ಹೆಂಟೆಗೆ ಸಮಾನವಾಗಿ ತಿಳಿದು ಅವುಗಳನ್ನು ತೆಗೆದುಕೊಳ್ಳದಿರುವುದಕ್ಕೆ ಅಸ್ತೇಯವೆಂದು ಹೆಸರು.

4. ಬ್ರಹ್ಮಚರ್ಯ: ಪರಸ್ತ್ರೀಯರನ್ನು ಮನಸ್ಸು ವಚನ ಕಾಯಗಳಿಂದ ಅಪೇಕ್ಷಿಸದೆ ಇರುವುದಕ್ಕೆ ಬ್ರಹ್ಮಚರ್ಯವೆಂದು ಹೆಸರು.

5. ಅಪರಿಗ್ರಹ: ಲೋಕದಲ್ಲಿರುವ ಸಮಸ್ತ ಭೋಗೋಪಭೋಗಗಳನ್ನು ನೋಡಿ ಜೀವನು ಮೋಹಿಸುತ್ತಾನೆ. ಮೋಹ ಆಸೆಗೆ ಮೂಲವಾಗುತ್ತದೆ. ಆಗ ದಾನವಾಗಿಯೋ ಬೇರೆ ಇನ್ನಾವ ವಿಧದಲ್ಲೋ ಮನುಷ್ಯ ಅನೇಕಾನೇಕ ವಸ್ತುಗಳನ್ನು ಸ್ವೀಕರಿಸುತ್ತಾನೆ. ಹಾಗೆ ಮಾಡದೆ ತನಗೆ ಅಗತ್ಯವಿದ್ದಷ್ಟು ಮಾತ್ರ ಪರಿಗ್ರಹಿಸಿ ನಿಯಮಕ್ಕನುಸಾರವಾಗಿ ಜೀವಿಸುವುದು ಈ ವ್ರತದ ಕಟ್ಟಳೆ.

ಸಂಪೂರ್ಣವಾಗಿ ಸಂಸಾರ, ಶಾರೀರಕ ಭೋಗೋಪಭೋಗಗಳನ್ನು ತ್ಯಜಿಸಿದ ಮುನಿಗಳೂ ಪಂಚಮಹಾವತ್ರಗಳನ್ನು ಆಚರಿಸುವರು. (ಎಂ.ಸಿ.ಪಿ.)