ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಣ್ಣಾಜಿ

ವಿಕಿಸೋರ್ಸ್ದಿಂದ

ಅಣ್ಣಾಜಿ

ಅರುವತ್ತುಮೂರು ಪುರಾತನರಲ್ಲಿ ಒಬ್ಬನಾದ ನಂಬಿಯಣ್ಣನನ್ನು ಕುರಿತು ಸೌಂದರವಿಳಾಸ ಎಂಬ ಕಾವ್ಯವನ್ನು ಬರೆದಿದ್ದಾನೆ. ಇವರು ವೀರೇಂದ್ರನ ಮೊಮ್ಮಗ. ಅಯ್ಯಣಭೂಪನ ಮಗ. ಕಾವ್ಯದಲ್ಲಿ ಸುಮಾರು 600 ಪದ್ಯಗಳಿವೆ. ಸಂಥಿ ಆಶ್ವಾಸಾದಿ ವಿಭಾಗ ಇಲ್ಲ. ಕಾವ್ಯದ ಬಹುಭಾಗ ವಾರ್ಥಕ ಷಟ್ಪದಿಯಲ್ಲಿದೆ. ಮಧ್ಯದಲ್ಲಿ ಕೆಲವು ಭಾಮಿನೀ ಷಟ್‍ಪದಿಗಳೂ ಇವೆ. ಕಾವ್ಯಾರಂಭದಲ್ಲಿ ಗಂಗಾಧರ ಮತ್ತು ಗಿರಿಜೆಯರ ಸ್ತುತಿ ಇದೆ. ಮೊದಲಲ್ಲಿ ಕೆರೆಯ ಪದ್ಮರಸ ಹಂಪೆಯ ಹರೀಶ್ವರ, ಪಾಲ್ಕುರಿಕೆ ಸೋಮಾರಾಧ್ಯ, ಮಲುಹಣರನ್ನೂ ಸ್ಮರಿಸಿ ಬಳಿಕ ವೀರಶೈವ ಸಂಪ್ರದಾಯದಂತೆ ಹೆಸರಾಂತ ಸಂಸ್ಕøತ ಕವಿಗಳಾದ ಭಾಣ ಮಯೂರ ಭವಭೂತಿ ಶ್ರೀಹರ್ಷ ಧನಂಜಯ ದಂಡಿ ಕಾಳಿದಾಸ ಇವರಿಗೆ ಮಣಿದು ವೀರಶೈವರಲ್ಲದ ರುದ್ರಭಟ್ಟ ಅಗ್ಗಳ ನೇಮಿಚಂದ್ರರನ್ನೂ ಕವಯಿತ್ರಿಯಾದ ಕಂತಿಯನ್ನೂ ಕವಿರಾಜಮಕುಟಮಣಿಯಾದ ಶ್ರೀನಾಥನನ್ನೂ ವಂದಿಸಿದ್ದಾನೆ. ವೀರಶೈವೇತರ ಕವಿಗಳನ್ನು ತನ್ನ ಕಾವ್ಯದಲ್ಲಿ ಸ್ಮರಿಸಿರುವುದು ಈ ಕವಿಯ ಒಂದು ವೈಶಿಷ್ಟ್ಯ. ಇದಲ್ಲದೆ ಶಿವನ ಆಸ್ಥಾನ ವರ್ಣನೆಯ ಸಂದರ್ಭದಲ್ಲಿ ಬಸವ, ಮಡಿವಾಳಯ್ಯ, ಮರುಳಶಂಕರ, ಓಹಿಲಿಯ್ಯ, ಮಾದಾರಚನ್ನ ಕಿನ್ನರ ಬ್ರಹ್ಮ, ಹಡಪದಪ್ಪಣ್ಣ, ಚನ್ನಬಸವಣ್ಣ, ಸಿದ್ಧರಾಮ, ಘಟ್ಟಿವಾಳಯ್ಯ, ಅಲ್ಲಮ ಪ್ರಭುದೇವ, ಅನಿಮಿಷಯ್ಯ ಮೊದಲಾದ ಪ್ರಮಥಗಣಗಳು ಆ ಸಭೆಯಲ್ಲಿ ಇದ್ದರೆಂದು ತಿಳಿಸಿರುವುದರಿಂದ ಕವಿ ವೀರಶೈವ ಮತಾನುಯಾಯಿ ಎಂದು ಸ್ಪಷ್ಟ ಪಡುತ್ತದೆ.

ತನ್ನನ್ನು ಅಯ್ಯಣಭೂಪನ ಸುಕುಮಾರ, ಅಣ್ಣಾಜಿ ರಾಜೇಂದ್ರ, ರಸಿಕ ರಾಜೇಂದ್ರ ನಣ್ಣಾಜಿ ಎಂದು ವಿಶೇಷಿಸಿಕೊಂಡಿರುವುದರಿಂದ ಈತ ರಾಜವಂಶಕ್ಕೆ ಸೇರಿದವನಾಗಿರಬಹುದು. ಯಾವ ಊರಿನವನು ಎನ್ನುವುದು ತಿಳಿಯದು.


ಸುಮಾರು 17ನೆಯ ಶತಮಾನದ ಅಂತ್ಯಭಾಗದಲ್ಲಿ ಅಂದರೆ ಇಕ್ಕೇರಿ ಸಂಸ್ಥಾನ ಅಸ್ತಿತ್ವದಲ್ಲಿದ್ದ ಕಾಲದಲ್ಲಿ ಕವಿ ಇದ್ದಿರಬಹುದು.

ಶಂಕರನ ಆದೇಶದಂತೆ ಅಲಂಕಾರ ಭಾವ ರಸಪೂರಿತವಾದ ಸೌಂದರವಿಲಾಸ ಕಾವ್ಯವನ್ನು ರಚಿಸಿರುವುದಾಗಿ ಹೇಳಿಕೊಂಡಿದ್ದಾನೆ. ಅದನ್ನು ಬಿಟ್ಟು ಮತ್ತಾವ ಕೃತಿಯನ್ನೂ ಈ ಕವಿ ರಚಿಸಿರುವಂತೆ ತಿಳಿದುಬರುವುದಿಲ್ಲ.

"ಶೂನ್ಯಸಿದ್ಧಾಂತವ, ಸೂಳೆಯರ ಮನೆಯ ಸಂಭಾಷಣೆಯ ಮಾಲ್ಪೆನೆಂದಾಳೋಚಿಸಿದರುಂಟೆ ಕುಕವಿಜನರೆಂಬ ಬಹು ಕೀಳು ಮಾನವರ ನಾಲಗೆಯ ಕೊನೆಯೊಳಗುಚಿತರಚನೆ ರಂಜಿಸಿ ಮೆರೆವುದೇ"-ಎಂದು ಹೇಳಿ ತನ್ನ ಈ ಕೃತಿ ಶೂನ್ಯ ಸಿದ್ಧಾಂತಕ್ಕೆ ಸಂಬಂಧಪಟ್ಟುದು ಎಂಬುದನ್ನು ಸ್ಪಷ್ಟಪಡಿಸಿದ್ದಾನೆ.

ಈ ಶೃಂಗಾರಕಾವ್ಯದಲ್ಲಿ ಸಮಯವರಿತು ಕವಿ ವರ್ಣನೆಗಳನ್ನು ಜೋಡಿಸಿದ್ದಾನಾದರೂ ಪುನರುಕ್ತಿ ಇದೆ; ಕಾವ್ಯಬಂಧ ಸಾಮಾನ್ಯವಾಗಿದೆ.

ಈಶ್ವರಪ್ರತಿಬಿಂಬರೂಪನಾದ ಪುಷ್ಪದತ್ತ ಮತ್ತು ರುದ್ರಕನ್ಯೆಯರಾದ ಕನಕಲತೆ ಮತ್ತು ಕಾಂತಿಮತಿ ಇವರು ಪುಷ್ಪಾಪಚಯ ಮಾಡಲು ಒಂದೇ ಸ್ಥಳಕ್ಕೆ ಆಕಸ್ಮಾತ್ತಾಗಿ ಬಂದು ಪರಸ್ಪರ ನೋಡಿ ಅನುರಕ್ತರಾದುದನ್ನು ತಿಳಿದ ಈಶ್ವರ ಗಿರಿಜೆಯರ ಆದೇಶದಂತೆ ಪುಷ್ಪದತ್ತನು, ಜಡೆಯ ನಾಯನಾರು ಮತ್ತು ಯಸ್ಯe್ಞÁನಸಂಬಂಧಿ ಇವರಿಗೆ ಸೌಂದರನೆಂಬ (ನಂಬಿಯಣ್ಣ) ಹೆಸರಿನಿಂದ ಮಗನಾಗಿ ಹುಟ್ಟುತ್ತಾನೆ. ರುದ್ರಕನ್ಯೆಯರು ಶಿವದೇವಿ ಮಂಗಲನಾಚಿಯರ ಉದರಲ್ಲಿ ಪರವೆ, ಸಂಕಿಲೆಯರಾಗಿ ಜನಿಸುತ್ತಾರೆ. ಸೌಂದರನಂಬಿ ಈ ಕನ್ಯೆಯರೊಡನೆ ನಡೆಸಿದ ಶೃಂಗಾರ ಈ ಕೃತಿ ವಸ್ತು. (ಎಚ್.ಎನ್.ಕೆ.)