ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಣ್ಣಾಮಲೈ ವಿಶ್ವವಿದ್ಯಾನಿಲಯ

ವಿಕಿಸೋರ್ಸ್ದಿಂದ

ಣ್ಣಾಮಲೈ ವಿಶ್ವವಿದ್ಯಾನಿಲಯ

ಚೆಟ್ಟಿನಾಡಿನ ಅಣ್ಣಾಮಲೈ ಚೆಟ್ಟಿಯಾರ್ ಅವರ ವಿದ್ಯಾಪ್ರೇಮ, ಔದಾರ್ಯಗಳ ಫಲವಾಗಿ 1929ರಲ್ಲಿ ಅಣ್ಣಾಮಲೈ ನಗರದಲ್ಲಿ ಸ್ಥಾಪಿತವಾಯಿತು. ಇದೊಂದು ಏಕರೂಪದ, ಬೋಧನೆಗೆ ಮೀಸಲಾದ, ವಿದ್ಯಾರ್ಥಿಗಳು ಸ್ಥಳದಲ್ಲೇ ವಾಸಿಸಬೇಕೆಂಬ ನಿಯಮವನ್ನು ಪಾಲಿಸುವ, ವಿದ್ಯಾ ಕೇಂದ್ರ.

ಚಿದಂಬರಂನಲ್ಲಿ 1929ಕ್ಕೆ ಮುಂಚೆಯೆ ಚೆಟ್ಟಿಯಾರರ ಮನೆತನದವರೇ ಸ್ಥಾಪಿಸಿ ಪೋಷಿಸಿಕೊಂಡು ಬಂದಿದ್ದ ಒಂದು ಪ್ರೌಢಶಾಲೆ ಇತ್ತು. ಚೆಟ್ಟಿಯಾರ್ ಅವರು 1920ರಲ್ಲಿ ಅದನ್ನು ಶ್ರೀ ಮೀನಾಕ್ಷಿ ಕಾಲೇಜು ಎಂಬ ಉನ್ನತ ವಿದ್ಯಾಶಾಲೆಯನ್ನಾಗಿ ಮಾರ್ಪಡಿಸಿದರು. 1927ರಲ್ಲಿ ಒಂದು ತಮಿಳು ಕಾಲೇಜು, ಒಂದು ಸಂಸ್ಕøತ ಕಾಲೇಜು ಸ್ಥಾಪಿತವಾದುವು. ಪೌರಸ್ತ್ಯ ಶಿಕ್ಷಣ ಕಾಲೇಜು ಮತ್ತು ಸಂಗೀತ ಶಿಕ್ಷಣ ಕಾಲೇಜು ಸ್ಥಾಪಿತವಾದದ್ದು 1929ರಲ್ಲಿ.

ಪ್ರೌಢವಿದ್ಯಾಶಾಲೆಗಳು ಹೆಚ್ಚಬೇಕು, ಯುವಕರು ಉಚ್ಚಶಿಕ್ಷಣ ಪಡೆಯಲು ಅವಕಾಶ ದೊರಕಬೇಕು, ಎಂಬ ಕೂಗು ಈ ಮಧ್ಯೆ ನಾಡಿನಲ್ಲೆಲ್ಲಾ ಹರಡಿತ್ತು. ಇದನ್ನು ಮನಗಂಡ ಅಣ್ಣಾಮಲೈ ಚೆಟ್ಟಿಯಾರರು ಸರ್ಕಾರ ವಿಶ್ವವಿದ್ಯಾನಿಲಯವೊಂದನ್ನು ತೆರೆಯುವುದಾದರೆ ತಮ್ಮ ಮೀನಾಕ್ಷಿ ಕಾಲೇಜು, ತಮಿಳು ಮತ್ತು ಸಂಸ್ಕøತ ಕಾಲೇಜುಗಳು, ಕಟ್ಟಡಗಳು, ಅವುಗಳಲ್ಲಿನ ಸಾಮಾನು ಸರಂಜಾಮುಗಳೂ, ಎಲ್ಲವನ್ನೂ ಕೊಟ್ಟು ಮೇಲೆ 20 ಲಕ್ಷ ರೂಪಾಯಿಗಳನ್ನು ಕೊಡಲು ಮುಂದೆ ಬಂದರು. ಇವರ ಧಾರಾಳ ಕೊಡುಗೆಯನ್ನು ಸರಕಾರ ಆಸಕ್ತಿಯಿಂದ ಸ್ವೀಕರಿಸಿತು; ಹೊಸ ವಿಶ್ವವಿದ್ಯಾಲಯ ಸ್ಥಾಪನೆಗೆ ಅವಶ್ಯಕವಾದ ಕಾನೂನನ್ನು 1928ರಲ್ಲಿ ರಚಿಸಿತು. ಮರು ವರ್ಷ ಜುಲೈನಲ್ಲಿ ಈ ವಿದ್ಯಾಲಯದ ಕೆಲಸ ಅಣ್ಣಾಮಲೈ ನಗರದ ಹೊರವಲಯದಲ್ಲಿ ಪ್ರಾರಂಭವಾಯಿತು. ಚಿದಂಬರಂಗೆ ಹತ್ತಿರ ಇರುವ ಅಣ್ಣಾಮಲೈನಗರ ಮನೋಹರವಾದ ಸ್ಥಳದಲ್ಲಿದೆ; ಜನಸಂಖ್ಯೆ ಸುಮಾರು ಆರು ಸಾವಿರ. ಪುರಾತನ ಚರಿತ್ರೆಗೆ ಸಂಬಂಧಿಸಿದ ಪುಣ್ಯಸ್ಥಳ ಅದು. ವಿಶ್ವವಿದ್ಯಾನಿಲಯದ ಅಧಿಕಾರವ್ಯಾಪ್ತಿ ಅದರ ಸುತ್ತಣ ಹತ್ತು ಮೈಲು ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ. ಅಂದವಾದ ಕಟ್ಟಡಗಳು ಆ ಸ್ಥಳದ ರಮ್ಯತೆಯನ್ನು ಇಮ್ಮಡಿಸಿದೆ.

ವಿಶ್ವವಿದ್ಯಾಲಯದ ಶಾಸಕಸಭೆ ಅಥವಾ ಸೆನೆಟ್‍ನಲ್ಲಿ ಎಂಬತ್ತೈದು ಸದಸ್ಯರಿದ್ದಾರೆ. ಎಲ್ಲ ಪಕ್ಷಗಳೂ ಪಂಗಡಗಳೂ ಇದರಲ್ಲಿ ಪ್ರಾತಿನಿಧ್ಯವನ್ನು ಪಡೆದಿವೆ. ಹದಿನೇಳು ಸದಸ್ಯರನ್ನೊಳಗೊಂಡ ಆಡಳಿತ ಸಮಿತಿ (ಸಿಂಡಿಕೇಟ್) ದೈನಂದಿನ ಆಡಳಿತದ ಮೇಲ್ವಿಚಾರಣೆ ನಡೆಸುತ್ತದೆ. ಪ್ರೌಢವಿದ್ಯಾಪರಿಣತಮಂಡಲಿ (ಅಕೆಡೆಮಿಕ್ ಕೌನ್ಸಿಲ್), ಆಯ್ಕೆ ಸಮಿತಿ (ಬೋರ್ಡ್ ಆಫ್ ಸೆಲೆಕ್ಷನ್), ಶಿಕ್ಷಣ ಸಮಿತಿ, ವಿಲೇಖನಾಧಿಕಾರಿ (ರಿಜಿಸ್ಟ್ರಾರ್)-ಇವರು ಆಡಳಿತದ ವಿವಿಧ ಅಂಗಗಳನ್ನು ನಡೆಸುತ್ತಾರೆ. ಆಡಳಿತಾಧಿಪತಿ ವಿಶ್ವವಿದ್ಯಾಲಯದ ಉಪಕುಲಪತಿ (ವೈಸ್ ಛಾನ್ಸೆಲರ್). ವಿ. ಎಸ್. ಶ್ರೀನಿವಾಸಶಾಸ್ತ್ರಿ, ಕೆ. ವಿ. ರೆಡ್ಡಿ, ಎಂ. ರತ್ನಸ್ವಾಮಿ, ಆರ್. ಕೆ. ಷಣ್ಮುಗಂ ಚೆಟ್ಟಿಯಾರ್, ಸಿ. ಪಿ. ರಾಮಸ್ವಾಮಿ ಅಯ್ಯರ್‍ಗಳಂಥ ಅತ್ಯಂತ ಸಮರ್ಥರೂ ಘನಪಂಡಿತರೂ ಆದ ಉಪಕುಲಪತಿ ಶ್ರೇಣಿಯನ್ನೇ ಪಡೆದಿರುವುದು ಈ ವಿಶ್ವವಿದ್ಯಾಲಯದ ಭಾಗ್ಯವಿಶೇಷವೆನ್ನಬೇಕು.

ಪ್ರಾರಂಭವಾದಾಗ, ಈ ವಿಶ್ವವಿದ್ಯಾಲಯದಲ್ಲಿ ಮೂರು ಶಾಖೆಗಳು (ಫ್ಯಾಕಲ್ಟೀಸ್) ಮಾತ್ರ ಇದ್ದುವು ; ಕುಶಲವಿದ್ಯೆಗಳು (ಆರ್ಟ್ಸ್), ವಿe್ಞÁನ ಮತ್ತು ಪೌರಸ್ತ್ಯ ಭಾಷಾಧ್ಯಯನ (ಓರಿಯಂಟಲ್ ಸ್ಟಡೀಸ್). 1932ರಲ್ಲಿ ಪೌರಸ್ತ್ಯ ಶಿಕ್ಷಣ ಪ್ರೌಢಶಾಲೆ ಮತ್ತು ಗಾಯನ ಕಲಾಪ್ರೌಢಶಾಲೆಗಳನ್ನು ಅಣ್ಣಾಮಲೈ ಚೆಟ್ಟಿಯಾರರೇ ಯೋಗ್ಯ ಶಾಶ್ವತ ವರಮಾನದೊಂದಿಗೆ ವಿಶ್ವವಿದ್ಯಾಲಯಕ್ಕೆ ಬಿಟ್ಟುಕೊಟ್ಟರು. ಆಧುನಿಕ ಕಾಲಕ್ಕೆ ಅವಶ್ಯವಾದ ಔದ್ಯೋಗಿಕ ವಿe್ಞÁನ, ಅದಕ್ಕೆ ಸಂಬಂಧಪಟ್ಟಂತೆ ಸಂಶೋಧನೆಗಳೂ-ಇವಕ್ಕೂ ಉತ್ತೇಜನ ದೊರಕಿತ್ತು. 1945ರಲ್ಲಿ ಯಂತ್ರಶಿಲ್ಪ ಪ್ರೌಢವಿದ್ಯಾಶಾಲೆ ಪ್ರಾರಂಭವಾಗಿ ಆಧುನಿಕ ಸಂಶೋಧನೆಗಳನ್ನೊಳಗೊಂಡು ನಾನಾ ಮುಖವಾಗಿ ಬೆಳೆಯುತ್ತಿದೆ. ಜೀವವಿe್ಞÁನದಲ್ಲಂತೂ ಇಲ್ಲಿ ನಡೆಯುತ್ತಿರುವ ಸಂಶೋಧನೆಗಳು ಪ್ರಖ್ಯಾತ ಪಾಶ್ಚಾತ್ಯ ವಿದ್ವಾಂಸರ ಮೆಚ್ಚುಗೆಯನ್ನೂ ಸಂಪಾದಿಸಿವೆ. ಕೃಷಿವಿe್ಞÁನ, ವಾಣಿಜ್ಯಶಾಸ್ತ್ರ-ಮುಂತಾದವುಗಳ ಅಧ್ಯಯನ ಸಂಶೋಧನೆಗಳು ತೀವ್ರಗತಿಯಿಂದ ಸಾಗುತ್ತಿವೆ. ವಿಶ್ವವಿದ್ಯಾಲಯಗಳ ಧನಸಹಾಯ ನಿಯೋಗವೂ (ಯೂನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್) ಉದಾರವಾಗಿ ಸಹಾಯ ನೀಡುತ್ತಿದೆ.

ವಿದ್ಯಾರ್ಥಿವಸತಿಗೃಹಗಳು ಬೇಕಾದಷ್ಟಿವೆ. ಗ್ರಂಥಾಲಯದಲ್ಲಿ 1,83,000 ಗ್ರಂಥಗಳಿವೆ. 1955 ರ ಫೆಬ್ರುವರಿ 9ರಂದು ಈ ವಿಶ್ವವಿದ್ಯಾಲಯದ ಬೆಳ್ಳಿಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಅದರ ಪ್ರಾರಂಭೋತ್ಸವವನ್ನು ನಡೆಸಿದವರು ಮೈಸೂರಿನ ರಾಜಪ್ರಮುಖರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್‍ರವರು. ವಿಶ್ವವಿದ್ಯಾಲಯದ ಆವರಣದಲ್ಲಿ ಸ್ಥಾಪಿಸಿದ್ದ ಅಣ್ಣಾಮಲೈ ಚೆಟ್ಟಿಯಾರ್‍ರವರ ಭವ್ಯ ಪತ್ರಿಮೆಯನ್ನು ಅವರೇ ಅನಾವರಣ ಮಾಡಿದರು. (ಎ.ಎಂ.)