ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅನಾಕ್ರಿಯಾನ್

ವಿಕಿಸೋರ್ಸ್ದಿಂದ

ಅನಾಕ್ರಿಯಾನ್ ಕ್ರಿ.ಪೂ. ಆರನೆಯ ಶತಮಾನದಲ್ಲೆ ಉತ್ಕøಷ್ಟಭಾವ ಗೀತೆಗಳನ್ನು ಬರೆದ ಗ್ರೀಕ್ ಕವಿ. ಅನಾಕ್ರಿಯಾನ್‍ಟಿಕ್ಸ್ ಎಂಬ ಹೊಸ ಛಂದಸ್ಸು ಮತ್ತು ಹೊಸ ಭಾವಕಲ್ಪನೆಯ ಮೂಲಪುರುಷ. ನಿರಂಕುಶ ಪ್ರಭುಗಳೇ ಹೆಚ್ಚಾಗಿದ್ದ ಆ ಕಾಲದಲ್ಲಿ ಒಂದು ಕಡೆ ನೆಲೆಯಾಗಿ ನಿಲ್ಲಲು ಅವನಿಗೆ ಸಾಧ್ಯವಾಗಲಿಲ್ಲ. ಸೇಮಾಸ್ ರಾಜ್ಯದ ಪಾಲಿಕ್ರಟೀಸ್‍ನ ಆಶ್ರಯದಲ್ಲಿ ಕೆಲಕಾಲ ಇದ್ದು, ಆ ದೊರೆಯ ಕೊಲೆಯಾದ ಮೇಲೆ ಅಥೆನ್ಸ್ ನಗರಕ್ಕೆ ಬಂದು ನೆಲೆಸಿದ. 85ನೆಯ ವಯಸ್ಸಿನಲ್ಲಿ ತೀರಿಕೊಂಡ. ಪಾಸೇನಿಯಸ್ ಎಂಬ ಪ್ರಸಿದ್ಧ ದಳಪತಿ ಇವನ ವಿಗ್ರಹವನ್ನು ಅಥೆನ್ಸಿನ ಅಕ್ರೋಪೋಲಿಸ್‍ನಲ್ಲಿ ನಿಲ್ಲಿಸಿದ್ದನೆಂದು ಹೇಳಿರುವುದರಿಂದಲೂ ಐದು ಮತ್ತು ನಾಲ್ಕನೆಯ ಶತಮಾನದ ಕವಿಗಳು ಇವನ ಕೃತಿಗಳಿಂದ ಉದ್ಧರಿಸಿರುವುದರಿಂದಲೂ ಇವನು ಅಥೆನ್ಸಿನಲ್ಲಿ ತುಂಬ ಮಾನ್ಯತೆ ಪಡೆದಿದ್ದನೆಂದು ಹೇಳಬಹುದು. ಇವನು ರಚಿಸಿದ ಯಾವ ಕಾವ್ಯವೂ ಸಂಪೂರ್ಣವಾಗಿ ಉಳಿದಿಲ್ಲ; ದೊರೆತಿರುವುದೆಲ್ಲ ತುಂಡುಗಳು ಮಾತ್ರ. ಆದರೂ ಅವುಗಳಲ್ಲಿ, ಅವನು ಆರಿಸಿರುವ ಛಂದಸ್ಸಿನ ಔಚಿತ್ಯ, ಶೈಲಿಯ ಸರಳತೆ, ಲಾಲಿತ್ಯ ಎದ್ದು ಕಾಣುತ್ತವೆ. ದೊರೆತಿರುವ ಕವಿತೆಗಳಲ್ಲಿ ಕಾಣುವ ವಿಷಯ ಮದ್ಯ, ಮಾನಿನಿಯನ್ನು ಕುರಿತವು; ಗಂಭೀರ ವಿಷಯಗಳನ್ನುಳ್ಳವು ಇಲ್ಲವೇ ಇಲ್ಲ. ಅನಾಕ್ರಿಯಾನ್‍ಟಿಕ ಎಂಬ ಹೆಸರಿನಿಂದ ಲಭ್ಯವಾಗಿರುವ ಕವನಗಳನ್ನು ಅವನ ಕಾಲದ ಐದಾರು ಶತಮಾನಗಳ ನಂತರ ಅವನನ್ನು ಅನುಕರಿಸಿದವರು ರಚಿಸಿದರು. (ಎ.ಎಂ.) (ಪರಿಷ್ಕರಣೆ: ಡಾ|| ಎಲ್. ಎಸ್. ಶೇಷಗಿರಿರಾವ್)