ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅನಿಲಗ್ರಸನ

ವಿಕಿಸೋರ್ಸ್ದಿಂದ

ಅನಿಲಗ್ರಸನ

ಪ್ಲಾಟಿನಂ, ಪೆಲೇಡಿಯಂ ಮೊದಲಾದ ಲೋಹಗಳು ಅಧಿಕ ಪ್ರಮಾಣದಲ್ಲಿ ಜಲಜನಕವನ್ನು ಹೀರಿಕೊಳ್ಳಬಲ್ಲವು. ಈ ಬಗೆಯ ಹೀರುವಿಕೆಯಿಂದ ಪೆಲೇಡಿಯಂ ಲೋಹದ ಗಾತ್ರ ಹೆಚ್ಚುತ್ತದೆ. ಆದರೆ ಸಾಮಾನ್ಯವಾಗಿ ಅದರ ಹೊರ ಲಕ್ಷಣವಾಗಲಿ ಗುಣಗಳಾಗಲಿ ಹೆಚ್ಚು ಮಾರ್ಪಾಡಾಗುವುದಿಲ್ಲ. ಇಂಥ ಕ್ರಿಯೆ ಅನಿಲಗ್ರಸನ (ಅಕ್ಲೂಷನ್ ಆಫ್ ಗ್ಯಾಸಸ್). ಸಾಧಾರಣ ಉಷ್ಣತೆಯಲ್ಲಿ ಪೆಲೇಡಿಯಂ ಲೋಹ ತನ್ನ ಗಾತ್ರದ 276ರಷ್ಟು ಮತ್ತು ಸುಮಾರು 600-800 ಸೆಂ. ಉಷ್ಣತೆಯಲ್ಲಿ 935ರಷ್ಟು ಜಲಜನಕವನ್ನು ಹೀರಿಕೊಳ್ಳುತ್ತದೆ. ಹೀಗೆ ಹೀರಿಕೆಹೊಂಡ ಅನಿಲಪ್ರಮಾಣ ಲೋಹದ ಭೌತಸ್ಥಿತಿಯನ್ನು ಅವಲಂಬಿಸಿರುತ್ತದೆ. ಈ ಲೋಹವನ್ನು ಕಾಯಿಸಿದಾಗ ಜಲಜನಕ ಬಿಡುಗಡೆಯಾಗುವುದು. ಇದನ್ನು ಮೊದಲು ಗ್ರಹ್ಯಾಂ ಅಧ್ಯಯನ ಮಾಡಿದ. ಜಲಜನಕವನ್ನು ಶುದ್ಧಿಮಾಡುವಲ್ಲಿ, ಅದನ್ನು ತೂಕ ಮಾಡುವ ವಿಧಾನದಲ್ಲಿ ಪೆಲೇಡಿಯಂ ಲೋಹದ ಈ ಗುಣ ಆಧಾರವಾಗಿದೆ. ಜಲಜನಕ-ಆಮ್ಲಜನಕಗಳ ಸಂಯೋಗ ತೂಕವನ್ನು (ಕಂಬೈನಿಂಗ್‍ವೇಟ್) ಕಂಡುಹಿಡಿಯುವ ಪ್ರಯೋಗದಲ್ಲಿ ಮಾರ್ಲೆ ಎಂಬಾತ ಈ ವಿಧಾನವನ್ನು ಬಳಸಿಕೊಂಡ. ಲೋಹದ ಹರಳುಗಳ ನಡುವಿನ ಜಾಗವನ್ನು ಜಲಜನಕ ವ್ಯಾಪಿಸುವುದೇ ವಸ್ತುವಿನ ಗಾತ್ರದ ಹೆಚ್ಚುವರಿಗೆ ಕಾರಣವೆಂದು ಭಾವಿಸಿ ಪ್ರಯೋಗಗಳನ್ನು ಈ ದಿಶೆಯಲ್ಲಿ ಮುಂದುವರಿಸಲಾಗಿದೆ. ಇದು ಜಲಜನಕ ಮಾತ್ರ ಹೊಂದಿರುವ ವಿಶಿಷ್ಟಗುಣವಲ್ಲ. ಸೂಕ್ತಸನ್ನಿವೇಶಗಳಲ್ಲಿ ಇತರ ಅನಿಲಗಳೂ ಇಂಥ ಗುಣವನ್ನು ಪ್ರದರ್ಶಿಸುತ್ತವೆ.

(ಎನ್.ಎಸ್.)