ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಪೊಮಾರ್ಫೀನ್

ವಿಕಿಸೋರ್ಸ್ದಿಂದ

ಅಪೊಮಾರ್ಫೀನ್

ಗಾಳಿ ಹೋಗದಂತೆ ಮುಚ್ಚಿರುವ ಸೀಸೆಯಲ್ಲಿ ರಾಸಾಯನಿಕ ಮಾರ್ಫೀನೊಂದಿಗೆ ಹೈಡ್ರೊಕ್ಲೋರಿಕಾಮ್ಲವನ್ನು ಸೇರಿಸಿ ಕಾಯಿಸಿದರೆ, ಮಾರ್ಫೀನಿಂದ ನೀರಿನ ಅಣುವೊಂದು ಕಳೆದು ಬರುವ ರಾಸಾಯನಿಕವಿದು. ಹೀಗಾದುದರಿಂದ ಮಾರ್ಫೀನಿನ ಮಂದಗೊಳಿಸುವ ಗುಣಗಳು ಕಳೆದು, ಚೋದಕ ಗುಣಗಳು ಮಾತ್ರ ಅಪೊಮಾರ್ಫೀನಲ್ಲಿ ಉಳಿಯುತ್ತವೆ. ಮಿದುಳೆಲ್ಲವನ್ನೂ ಇದು ಚೋದಿಸುವುದಾದರೂ ವಾಂತಿಕಾರಕ ಕೇಂದ್ರದ ಮೇಲೆ ಇದರ ಪ್ರಭಾವ ಬಹಳ. ವಿಷವೇರಿದ ರೋಗಿಯ ಹೊಟ್ಟೆ ತೊಳೆಯಲು ರಬ್ಬರ್ ಕೊಳವೆ ತೂರಿಸಲು ಆಗದಾಗ, ಬಲವಾದ ಈ ಮದ್ದನ್ನು ಚುಚ್ಚಿ ವಾಂತಿ ಕಾರಿಸುವ ರೂಢಿ ಹಿಂದಿತ್ತು. ವಾಂತಿಕಾರಕ ಪ್ರಮಾಣ ಕೂಡ ಮಿದುಳನ್ನು ಕುಂದಿಸುವುದರಿಂದ ಇದರ ಬಳಕೆ ಬಲು ಅಪಾಯಕರ.

(ಎಂ.ಎಸ್.ಎನ್.)