ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಬೆ, ಎರ್ನ್‌ಸ್ಟ್‌

ವಿಕಿಸೋರ್ಸ್ದಿಂದ

ಅಬೆ, ಎರ್ನ್‍ಸ್ಟ್ ಜರ್ಮನಿಯ ಭೌತಶಾಸ್ತ್ರಜ್ಞ (1840-1905). ಜೀವನದ ವಿವರವಿಷ್ಟು: ವಿದ್ಯಾಭ್ಯಾಸ ಗಟಿಂಗೆನ್ ಮತ್ತು ಯೆನ (ಎeಟಿಚಿ) ವಿಶ್ವವಿದ್ಯಾನಿಲಯಗಳಲ್ಲಿ; ಯೆನ ಉಚ್ಚಶಾಲೆಯ (ಊosಛಿhsಛಿhuಟe) ಉಪಾಧ್ಯಾಯ (1863); ಯೆನ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕ ಮತ್ತು ಅಲ್ಲಿನ ಖಗೋಳ ಮತ್ತು ಪವನಶಾಸ್ತ್ರೀವೇಧಶಾಲೆಗಳ ಮುಖಂಡ (1870); ಟ್ಸೈಸ್ (Zeiss) ಕಾರ್ಖಾನೆಯ ಸಂಬಂಧ (1866); ಅದರ ಪಾಲುದಾರ (1870); ಅದರ ಮುಖ್ಯಸ್ಥ (1888) ಮತ್ತು ಸಹಕಾರಪದ್ಧತಿ ಅನುಸಾರ ಅದರ ಸುಧಾರಕ (1896); 1889ರಲ್ಲಿ ಸ್ವಂತ ಹಣದಿಂದ ಕಾರ್ಲ್‍ಟ್ಸೈಸ್‍ನಿಲಯವೆಂಬ ವೈಜ್ಞಾನಿಕ ಸಂಶೋಧನಾಸಂಸ್ಥೆಯ ಸ್ಥಾಪಕ. ಅಬೆ ತನ್ನ ಸಂಶೋಧನೆಗಳಿಂದ ಸೂಕ್ಷ್ಮದರ್ಶಕ (ಮೈಕ್ರೊಸ್ಕೋಪ್) ಮತ್ತು ಬಿಂಬ ಗ್ರಾಹಕಗಳಲ್ಲಿ (ಕ್ಯಾಮರಾ) ಮುಖ್ಯ ಸುಧಾರಣೆಗಳನ್ನು ಮಾಡಿದುದಲ್ಲದೆ ಅವುಗಳ ತತ್ತ್ವಗಳನ್ನು ಕುರಿತು ಕೂಲಂಕಷಶೋಧನೆ ನಡೆಸಿದ. ಈತ ರಶ್ಮಿಭಂಗಮಾಪಕ (ರಿಫ್ರೇಕ್ಟೋಮೀಟರ್) ಮೊದಲಾದ ಉಪಕರಣಗಳ ರಚನಕಾರ ಮತ್ತು ಹೊಸ ಬಗೆಯ ಗಾಜುಗಳ ತಯಾರಿಕೆಗಾಗಿ ಒಂದು ಕಾರ್ಖಾನೆಯ ಸ್ಥಾಪಕ. ಇವನ ಲೇಖನಸಂಕಲನ 1903-06ರ ಮಧ್ಯೆ ಪ್ರಕಟಿತವಾಯಿತು. ಕೈಗಾರಿಕೆಯಲ್ಲಿ ವೈಜ್ಞಾನಿಕ ಸಂಶೋಧನೆಯ ಮುಖ್ಯಪಾತ್ರವನ್ನು ಜಗತ್ತಿಗೆ ತೋರಿಸಿಕೊಟ್ಟ ಕೀರ್ತಿ ಈತನಿಗೆ ಸಲ್ಲಬೇಕು. (ಟಿ.ಎಸ್.ಎಸ್.)