ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಮೈಲ್ ನೈಟ್ರೈಟ್

ವಿಕಿಸೋರ್ಸ್ದಿಂದ

ಅಮೈಲ್ ನೈಟ್ರೈಟ್

ರಕ್ತನಾಳಗಳನ್ನು ಹಿಗ್ಗಿಸುವುದರಿಂದ ಗುಂಡಿಗೆಯ ರೋಗದಿಂದೇಳುವ ಎದೆಸೆರೆಬಿಗಿತವನ್ನು (ಅಂಜೈನ ಪೆಕ್ಟೊರಿಸ್) ಕಳೆಯಲು ಬಳಸುವ ದ್ರವಮದ್ದು. ಹಿಟ್ಟು, ನೈಟ್ರಿಕಾಮ್ಲಗಳಿಂದ ಬರುವ ನೈಟ್ರಸ್ ಆವಿಯನ್ನು ಬೆಚ್ಚನೆಯ ಐಸೊಅಮೈಲ್ ಮಧ್ಯಸಾರದೊಳಗೆ ಹಾಯಿಸುವುದರಿಂದಲೋ 15 ಪಾಲು ನೀರಲ್ಲಿರುವ 26 ಪಾಲು ಐಸೊಅಮೈಲ್ ಮದ್ಯಸಾರವನ್ನು ಕೂಡಿಸಿ ಬಟ್ಟಿಯಿಳಿಸುವುದರಿಂದಲೋ ತಯಾರಾಗುತ್ತದೆ. ತುಸು ಚೊಕ್ಕ ಹಳದಿ ಬಣ್ಣದ, ಬಲು ಸುಲಭವಾಗಿ ಆರಿಹೋಗುವ, ಹತ್ತಿಕೊಂಡುರಿವ, (ಕುದಿವ ಮಟ್ಟ 95' - 96' ಸೆಂ.ಗ್ರೇ). ವಿಶಿಷ್ಟಚೊಗರಿನ ಹಣ್ಣಿನ ವಾಸನೆಯ ದ್ರವ. ಹತ್ತಿರ ಬೆಂಕಿ, ಉರಿ ಇದ್ದಲ್ಲಿ ಸಿಡಿಯಬಹುದು. ಈ ರಾಸಾಯನಿಕ ನೀರಲ್ಲಿ ವಿಲೀನವಾಗದಿದ್ದರೂ ಸಲೀಸಾಗಿ ಮದ್ಯಸಾರ, ಈಥರ್, ಹಿಮದಂದ, ಅಸೆಟಿಕಾಮ್ಲ, ಕ್ಲೋರೋಫಾರ್ಮ್, ಬೆಂಜೀನ್‍ಗಳಲ್ಲಿ ವಿಲೀನವಾಗುತ್ತದೆ. ಬಹುಮಟ್ಟಿಗೆ ಗುಂಡಿಗೆ ರೋಗಿಗಳು ಅನುಭವಿಸುವ ಮಾರಕ ಎದೆಶೂಲೆಯನ್ನು ಈ ದ್ರವ ಸರಕ್ಕನೆ ಕಳೆವುದು. ಶೂಲೆ ಬರುವ ಮುನ್ಸೂಚನೆ ಕಂಡಕೂಡಲೇ ತೆಗೆದುಕೊಳ್ಳಲು, ತೆಳುವಾದ ಗಾಜಿನ ಕಿರುಸೀಸೆಗಳಲ್ಲಿರುವ ಈ ದ್ರವವನ್ನು ರೋಗಿಗಳು ಯಾವಾಗಲೂ ಕಿಸೆಯಲ್ಲಿ ಇಟ್ಟುಕೊಂಡಿರುವವರು. ಬೇಕೆಂದಾಗ ಕೈವಸ್ತ್ರದ ಪದರಗಳಲ್ಲಿರಿಸಿ ಅಮುಕಿದಾಗ ಟಪಾರೆಂದು ಸದ್ದಾಗಿ ಒಡೆದು (0.3 ಮಿ.ರೇ.) ದ್ರವ ಕೂಡಲೇ ಆವಿಯಾಗಿ ಬರುವುದನ್ನು ಮೂಗಿನ ಬಳಿ ಹಿಡಿದು ಉಸಿರಲ್ಲಿ ಸೇದಿಕೊಳ್ಳುವರು. ಇದರ ಪ್ರಭಾವ ಸರಕ್ಕನೆ ಕಾಣಿಸಿಕೊಂಡು 3 ಮಿನಿಟು ಹೊತ್ತು ಇರಬಹುದು. ಹಲವು ವೇಳೆ ಮೊಗ ಕೆಂಪೇರಿ, ತಲೆನೋವಿನ ಸಿಡಿತ, ತಲೆತಿರುಗೂ ಆಗುವುದು ಅನಾನುಕೂಲ. ಇದ್ದಕ್ಕಿದ್ದಂತೆ ರಕ್ತದ ಒತ್ತಡ ಕುಸಿಯುತ್ತದೆ. ಕೋಣೆಯೆಲ್ಲ ಇದರ ಕಂಪು ಹರಡಿಕೊಳ್ಳುತ್ತದೆ. ಸಯನೈಡುಗಳ ವಿಷವೇರಿಕೆಯಲ್ಲೂ ಇದರ ಬಳಕೆಯಾಗುವುದು. ಡೈಯಜೋನಿಯಂ, ಐಸೊನೈಟ್ರೊಸೊ ಸಂಯುಕ್ತಗಳನ್ನು ತಯಾರಿಸಲೂ ತುಸುಮಟ್ಟಿಗೆ ಬಳಸುವುದುಂಟು. (ನೋಡಿ- ಎದೆ-ಸೆರಬಿಗಿತ)

(ಡಿ.ಎಸ್.ಎಸ್.)