ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಮ್ಮೊನೈಟ್

ವಿಕಿಸೋರ್ಸ್ದಿಂದ

ಅಮ್ಮೊನೈಟ್

ಈಗ ನಿರ್ವಂಶವಾಗಿರುವ ಪ್ರಾಣಿ. ಸಾಲಿಗ್ರಾಮ ಕ್ರಿಮಿ ಎಂಬ ಹೆಸರೂ ಇದೆ. ಮನೆಯಲ್ಲಿ ಪೂಜೆಗೆ ಉಪಯೋಗಿಸುವ ಸಾಲಿಗ್ರಾಮಗಳು ಈ ಕ್ರಿಮಿಯ ಚಿಪ್ಪುಗಳ ಅವಶೇಷಗಳು. ಪಳೆಯುಳಿಕೆಗಳು ತಿರುಚಿನಾಪಳ್ಳಿಯಿಂದ ಅನತಿದೂರದಲ್ಲಿರುವ ಅರಿಯಲೂರು ಬಳಿ ದೊರೆತಿವೆ. ಇವು ಮಧ್ಯಜೀವಕಲ್ಪದಲ್ಲಿ ಮಾತ್ರ ಜೀವಿಸಿದ್ದು ಹೇರಳವಾಗಿ ಸರ್ವತ್ರ ಕಾಣಬರುತ್ತಿದ್ದುದರಿಂದ ಮಧ್ಯಜೀವಕಲ್ಪವನ್ನು ಅಮ್ಮೊನೈಟ್‍ಗಳ ಕಲ್ಪವೆಂದು ಕರೆಯಲಾಗಿದೆ. ಮಧ್ಯಜೀವಕಲ್ಪದಲ್ಲಿ ಸರೀಸೃಪಗಳನ್ನು ಬಿಟ್ಟರೆ, ಇವೇ ಅತ್ಯಂತ ಪ್ರಭಾವಶಾಲಿ ಪ್ರಾಣಿಗಳು. ಅಲ್ಲದೆ ಮಧ್ಯಜೀವಕಲ್ಪದ ಶಿಲಾಸ್ತೋಮಗಳ ವಿವರವಾದ ವರ್ಗೀಕರಣಕ್ಕೆ ಇವೇ ಆಧಾರವಾಗಿವೆಯಲ್ಲದೆ ಜೀವವಿಕಾಸದ ಅನೇಕ ನಿಯಮಗಳನ್ನು ಉಲ್ಲೇಖಿಸಲು ಸಹಕಾರಿಯಾಗಿವೆ.

ಮಾದರಿ ಅಮ್ಮೊನೈಟ್ ಪ್ರಾಣಿಯ ಚಿಪ್ಪಿನಲ್ಲಿ ಮಧ್ಯೆ ಮೂಲಕುಳಿಯೊಂದಿದ್ದು ಅದರ ಸುತ್ತ ಕೊಳವೆಗಳು ಸುತ್ತಿಕೊಂಡಿವೆ. ಕೊಳವೆ ವಿಭಾಜಕಬತ್ತಿ ಅಥವಾ ನಡುತಡಿಕೆಗಳಿಂದ ಅನೇಕ ಗೂಡುಗಳಾಗಿ ವಿಭಾಗವಾಗಿದೆ. ವಿಭಾಜಕ ಭಿತ್ತಿಗಳು ಹೊರಗಡೆ ಚಿಪ್ಪಿಗೆ ಬಲವಾಗಿ ಹೊಲಿದಂತೆ ಇವೆ. ಕೊನೆಯ ಗೂಡಿನಲ್ಲಿ ಪ್ರಾಣಿ ವಾಸಿಸುವುದರಿಂದ ಅದನ್ನು ವಾಸದ ಗೂಡು ಎನ್ನುವರು. ಅದನ್ನುಳಿದು ಬೇರೆ ಗೂಡುಗಳನ್ನು ಒಂದು ಕೊಳವೆ (ಸೈಫಂಕಲ್) ಭೇದಿಸಿ ಹಾಯ್ದು ಹೋಗುತ್ತದೆ. ಇದು ಬಹುಪಾಲು ಚಿಪ್ಪಿನ ಹೊರವಲಯದಲ್ಲಿರುತ್ತದೆ. ಸಾಮಾನ್ಯವಾಗಿ ಚಿಪ್ಪಿನ ಸುರುಳಿಗಳೆಲ್ಲ ಒಂದೇ ಮಟ್ಟದಲ್ಲಿರುತ್ತವೆ; ಕೆಲವು ವೇಳೆ ಗೋಪುರಾಕೃತಿಯಲ್ಲಿ ಸುತ್ತಿರುವುದೂ ಉಂಟು. ಸುರುಳಿಗಳು ಒಳಮುಖವಾಗಿ ಸುತ್ತಿಕೊಂಡಿದ್ದರೆ, ಚಿಪ್ಪನ್ನು ಅಂತರ್ವಲಿತ ಚಿಪ್ಪೆಂದೂ ಹೊರಮುಖವಾಗಿ ಸುತ್ತಿಕೊಂಡಿದ್ದರೆ ಬಹಿರ್ವಲಿತ ಚಿಪ್ಪೆಂದೂ ಕರೆಯಲಾಗಿದೆ. ಸಾಮಾನ್ಯವಾಗಿ ಚಿಪ್ಪಿನ ಹೊರಮೈ ನಾನಾ ರೀತಿಯಲ್ಲಿ ಅಲಂಕರಿಸಲ್ಪಟ್ಟಿರುತ್ತದೆ; ಕೆಲವು ವೇಳೆ ಅಲಂಕಾರವಿಲ್ಲದೆ ಇರುವುದೂ ಉಂಟು.

ಅಮ್ಮೊನೈಟ್‍ಗಳನ್ನು ಪ್ರಾಚೀನ ಜೀವಕಲ್ಪದವು (ಗೋನಿಯೊಟೈಟ್‍ಗಳು), ಮಧ್ಯಜೀವಕಲ್ಪದವು (ನೈಜ ಅಮ್ಮೊನೈಟ್‍ಗಳು) ಎಂದು ಎರಡು ಭಾಗಗಳಾಗಿ ವಿಂಗಡಿಸಬಹುದು.

ಅಮ್ಮೊನೈಟ್‍ಗಳ ವಿಕಾಸದ ಮಟ್ಟದ ನಿರ್ಣಯದಲ್ಲಿ ಸುರುಳಿ ಸುತ್ತಿರುವ ರೀತಿ ಹೊಲಿಗೆ ಸೇರುವೆಗಳ ವಿನ್ಯಾಸ ಮತ್ತು ಅಲಂಕಾರ ವೈಖರಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.

ಸುರುಳಿ ಸುತ್ತುವಿಕೆ : ಆರ್ತೊಸೆರಾಸ್ ಪ್ರಾಣಿಯ ಚಿಪ್ಪು ನೇರವಾಗಿದೆ. ಸಿರ್ಟೊಸೆರಾಸ್ ಪ್ರಾಣಿಯ ಚಿಪ್ಪು ಬಾಗಿದೆ. ವೆಸ್ಟಿನಾಟಿಲಸ್, ನಾಟಿಲಸ್, ಗೋನಿಯೊಟೈಟಿಸ್, ಸೆರಟೈಟಿಸ್ ಮತ್ತು ಅನೇಕ ಅಮ್ಮೊನೈಟ್‍ಗಳಲ್ಲಿ ಚಿಪ್ಪು ಸುರುಳಿ ಸುತ್ತಿಕೊಂಡಿರುತ್ತದೆಯಲ್ಲದೆ ಸುರುಳಿಗಳೆಲ್ಲ ಒಂದೇ ಮಟ್ಟದಲ್ಲಿರುತ್ತವೆ. ಆದರೆ ವೆಸ್ಟಿನಾಟಿಲಸ್ ಬಹಿರ್ವಲಿತಚಿಪ್ಪನ್ನೂ ನಾಟಿಲಸ್ ಮತ್ತು ಗೋನಿಯೊಟೈಟ್‍ಗಳು ಅಂತರ್ವಲಿತಚಿಪ್ಪನ್ನೂ ಸೆರಟೈಟಿಸ್ ಅಪೂರ್ಣ ಬಹಿರ್ವಲಿತಚಿಪ್ಪನ್ನೂ ಅನೇಕ ಅಮ್ಮೊನೈಟುಗಳು ಬಹಿರ್ವಲಿತಚಿಪ್ಪನ್ನೂ ಹೊಂದಿವೆ. ಕ್ರಿಟೇಷಿಯಸ್ ಯುಗದ ಪ್ರಾರಂಭದ ವೇಳೆಗೆ ಅಮ್ಮೊನೈಟ್‍ಗಳು ಸುರುಳಿ ಸುತ್ತುವಿಕೆಯಲ್ಲಿ ಅತ್ಯುನ್ನತ ಮಟ್ಟವನ್ನು ತಲುಪಿದ್ದುವು. ಅನಂತರ ಆ ದಿಶೆಯಲ್ಲಿ ಮುನ್ನಡೆಯುವುದು ಸಾಧ್ಯವಾಗಲಿಲ್ಲ. ಆದ್ದರಿಂದ ಸುರುಳಿಬಿಚ್ಚುವಿಕೆ ಪ್ರಾರಂಭವಾಯಿತು. ಇದು ಅಮ್ಮೊನೈಟ್ ವಂಶದ ಅವನತಿಯ ಸೂಚನೆ. ಕ್ರಿಟೇಷಿಯಸ್ ಯುಗದಲ್ಲೆಲ್ಲ ವಿಕಾಸ ಹಿಮ್ಮುಖವಾಗಿ ಸಾಗಿತು (ಅವರೋಹಣ ವಿಕಾಸ). ಇದರ ಪ್ರಥಮ ಹಂತವನ್ನು ಸ್ಕ್ಯಾಪೈಟಿಸ್‍ನಲ್ಲಿ ಕಾಣಬಹುದು. ಸ್ಕ್ಯಾಪೈಟಿಸ್ ಚಿಪ್ಪಿನ ಕೊನೆಯ ಸುರುಳಿ ಮಾತ್ರ ಬಿಚ್ಚಿಕೊಂಡು ಗಾಳಾಕಾರದಲ್ಲಿ ಬಾಗಿದೆ. ಹ್ಯಾಮೈಟಿಸ್ ಚಿಪ್ಪಿನ ಮೂರು ಸುರುಳಿಗಳು ಬಿಚ್ಚಿಕೊಂಡು ಪರಸ್ಪರ ಸಂಪರ್ಕ ಕಡಿದುಕೊಂಡಿವೆ. ಇದು ಈ ದಿಶೆಯಲ್ಲಿ ಎರಡನೆಯ ಹಂತ. ಬ್ಯಾಕ್ಯುಲೈಟಿಸ್ ಚಿಪ್ಪಿನಲ್ಲಿ, ಮೂಲದ ಒಂದೆರಡು ಸುರುಳಿಗಳನ್ನು ಬಿಟ್ಟು ಉಳಿದವುಗಳೆಲ್ಲ ಬಿಚ್ಚಿಕೊಂಡು ನೇರವಾಗಿವೆ. ಇದು ಬಹುಶಃ ಕೊನೆಯ ಹಂತವನ್ನು ಪ್ರತಿನಿಧಿಸಬಹುದು.

ಅಲಂಕಾರ ವೈಖರಿ : ಚಿಪ್ಪಿನ ಹೊರಮೈ ಗೀರುದಿಂಡು, ಸಣ್ಣಗಂಟು ಅಥವಾ ಮುಳ್ಳುಗಳಿಂದ ಅಲಂಕೃತವಾಗಿದೆ. ಮಧ್ಯಜೀವಕಲ್ಪದ ಅಮ್ಮೊನೈಟ್‍ಗಳಲ್ಲಿ ಪ್ರಾಚೀನ ಜೀವಕಲ್ಪದವಕ್ಕಿಂತ ಅಲಂಕಾರ ಹೆಚ್ಚು. ಕೆಲವು ಅಮ್ಮೊನೈಟ್‍ಗಳಲ್ಲಿ ಚಿಪ್ಪಿನ ಹೊರಂಚಿನ ಮಧ್ಯದಲ್ಲಿ ಸಾದಾ ರೀತಿಯ ಅಥವಾ ಗರಗಸದ ಮಾದರಿಯ ದಿಂಡು (ಅಮಾಲ್ತಿಯಾಸ್) ಹಲ್ಲುಗಳಾಗಿ ಕತ್ತರಿಸಬಹುದು. ಹಾಪ್ಲೈಟಿಸ್‍ಚಿಪ್ಪಿನ ಮೇಲೆ ಇಬ್ಭಾಗವಾದ ದಿಂಡುಗಳಿದ್ದು ಅವುಗಳ ಮೇಲೆ ಎರಡು ಸಾಲುಗಂಟುಗಳಿವೆ.

ಸುರುಳಿ ಸುತ್ತುವಿಕೆ, ಸೇರುವೆಗಳ ಕ್ಲಿಷ್ಟತೆ ಮತ್ತು ಅಲಂಕಾರ ವೈಖರಿಗಳು ಪ್ರಾಣಿಯ ಜೀವಿತಕಾಲದಲ್ಲಿ ಒಂದು ನಿರ್ದಿಷ್ಟ ಕ್ರಮದಲ್ಲಿ ಬದಲಾಗುವುದು ವ್ಯಕ್ತವಾಗಿದೆ. ಭ್ರೂಣಶಾಸ್ತ್ರದ ಅಭ್ಯಾಸದಿಂದ ಅಮ್ಮೊನೈಟ್‍ಗಳ ವಂಶವೃಕ್ಷ ತಯಾರಿಸಲು ಸಾಧ್ಯವಾಗಿದೆ. ಒಂದೇ ರೂಪವನ್ನು ಹೊಂದಿರುವ ಕೆಲವು ಅಮ್ಮೊನೈಟ್ ಜಾತಿಗಳ ಭ್ರೂಣಗಳು ಬೇರೆ ಬೇರೆ ವಂಶಮೂಲವನ್ನು ಸೂಚಿಸುತ್ತವೆ. ಈ ಘಟನೆಗೆ ರೂಪಸಾಮ್ಯ ಎಂದು ಹೆಸರು.

ಅಮ್ಮೊನೈಟ್‍ಗಳು ಭೂಇತಿಹಾಸದ ಅಲ್ಫಾವಧಿಯಲ್ಲಿ ಮಾತ್ರ ಜೀವಿಸಿದ್ದ ಪ್ರಾಣಿಗಳು. ಆದರೆ ಆ ಕಾಲದಲ್ಲಿ ಅವು ವಿಶಾಲವಾದ ಭೌಗೋಳಿಕ ವ್ಯಾಪ್ತಿ ಹೊಂದಿದ್ದುವು. ಅಮ್ಮೊನೈಟ್‍ಗಳು ಮೂಲಜಾತಿಯಾದ ಎಗೋನಿಯಾಟೈಟ್‍ಗಳ ಅವಶೇಷಗಳು ಸೈಲ್ಯೂರಿಯನ್ ಕಾಲದ ಶಿಲೆಗಳಲ್ಲಿ ದೊರೆತಿವೆ. ಪ್ರಾಚೀನ ಜೀವಕಲ್ಪದ ಉತ್ತರಾರ್ಧದಲ್ಲಿ ಗೋನಿಯೊಟೈಟ್‍ಗಳು ಹೆಚ್ಚಾಗಿದ್ದುವು. ಟ್ರಯಾಸಿಕ್ ಕಾಲದಲ್ಲಿದ್ದ ಅಮ್ಮೊನೈಟ್‍ಗಳು ಸೆರಟೈಟ್ ಜಾತಿಯವು. ನಿಜವಾದ ಅಮ್ಮೊನೈಟ್‍ಗಳು ಟ್ರಯಾಸಿಕ್‍ಯುಗದ ಅಂತ್ಯದಲ್ಲಿ ಕಾಣಿಸಿಕೊಂಡು ಜುರಾಸಿಕ್ ಕಾಲದಲ್ಲಿ ಉನ್ನತಮಟ್ಟವನ್ನು ಮುಟ್ಟಿದ್ದುವು. ಅವುಗಳ ಅವನತಿ ಕ್ರಿಟೇಷಿಯಸ್ ಯುಗದಲ್ಲಿ ಪ್ರಾರಂಭವಾಯಿತು. ಸುರುಳಿ ಬಿಚ್ಚಿದ ಅಮ್ಮೊನೈಟ್‍ಗಳು ಕ್ರಿಟೇಷಿಯಸ್ ಯುಗದ ವೈಶಿಷ್ಟ್ಯಗಳಲ್ಲಿ ಒಂದು. ಕ್ರಿಟೇಷಿಯಸ್ ಯುಗದ ಅಂತ್ಯದಲ್ಲಿ ಅಮ್ಮೊನೈಟ್‍ಗಳು ಸಂಪೂರ್ಣವಾಗಿ ಅಳಿದುಹೋದುವು. (ಡಿ.ಆರ್.ಎಲ್.ಎಸ್.ಜಿ.)