ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಮ್ರೇಲಿ

ವಿಕಿಸೋರ್ಸ್ದಿಂದ

ಅಮ್ರೇಲಿ

ಗುಜರಾತಿನ ಒಂದು ಜಿಲ್ಲೆ. ಇದು ಆರುಕಡೆ ಛಿದ್ರಛಿದ್ರವಾಗಿ ಹರಡಿದೆ. ಹಿಂದಿನ ಬರೋಡ ಸಂಸ್ಥಾನದ ಒಂದು ಪ್ರಾಂತ್ಯವಾಗಿತ್ತು. (17) ಭಾಗಗಳಿಂದ ಕೂಡಿದ್ದ ಇದರ ವಿಸ್ತೀರ್ಣ (1,245) ಚ.ಮೈ.ಆಗಿತ್ತು. ಈಗಿನ ವಿಸ್ತೀರ್ಣ (1,545) ಚ.ಮೈ., ಜನಸಂಖ್ಯೆ (6,67,823). ಮಣ್ಣು ಕಪ್ಪು, ಫಲವತ್ತಾಗಿದೆ. ಷಿಯಾನಗರ್ ಅರ್ಧ ಜೌಗು ಅರ್ಧ ಮರುಭೂಮಿಯಾಗಿದ್ದು ಗೋದಿ ಬೆಳೆಗೆ ಅನುಕೂಲವಾಗಿದೆ. ಧಾರಿ ತಾಲ್ಲೂಕಿನಲ್ಲಿ ಮಣ್ಣು ತೆಳು ಬಣ್ಣಕ್ಕಿದ್ದು, ಗಿರ್ ಬೆಟ್ಟಗುಡ್ಡಗಳ ಕಡೆ ಕೆಂಪಾಗಿದೆ. (40")ಗಳಿಗಿಂತಲೂ ಹೆಚ್ಚು ಮಳೆ. ಉಳಿದ ತಾಲ್ಲೂಕುಗಳಲ್ಲಿ ಇಷ್ಟು ಮಳೆ ಇಲ್ಲ. ಇಲ್ಲಿ ಜೋಳ, ಬಾಜ್ರ, ಗೋದಿ, ಬೇಳೆ, ಹತ್ತಿ, ಕಬ್ಬು, ಕೆಂಪುಮೆಣಸು ಇತ್ಯಾದಿಗಳನ್ನು ಬೆಳೆಯುತ್ತಾರೆ. ಓಖಾಮಂಡಲ್‍ನಲ್ಲಿ ಮಳೆ ಕಡಿಮೆಯಿದ್ದರೂ ಜೋಳ ಮತ್ತು ಬಾಜ್ರಗಳನ್ನು ಬೆಳೆಯುತ್ತಾರೆ. ಧಾರಿ, ಅಮ್ರೇಲಿ ತಾಲ್ಲೂಕುಗಳು ಪರ್ವತ ಪ್ರದೇಶವಾಗಿದ್ದು ಅನೇಕ ನದಿಗಳ ಜನನ ಸ್ಥಾನವಾಗಿವೆ. ಮುಖ್ಯವಾದುದು ಶತ್ರುಂಜಿ. ಗಿರ್‍ನಲ್ಲಿ ಮಾತ್ರ ಸುಮಾರು (50,000) ಎಕರೆ ಕಾಡುಗಳಿವೆ. ಇಲ್ಲಿನ ಮೃಗಧಾಮದಲ್ಲಿ ಸಿಂಹಗಳ ಸಂತತಿಯನ್ನು ಸಂರಕ್ಷಿಸಲಾಗಿದೆ. ಹತ್ತಿ, ರೇಷ್ಮೆಬಟ್ಟೆಗಳು ಅಮ್ರೇಲಿ, ಕೋಡಿನಾರ್ ಮತ್ತು ದ್ವಾರಕೆಗಳಲ್ಲಿವೆ. ದ್ವಾರಕೆಯಲ್ಲಿ ಸಿಮೆಂಟ್ ಮತ್ತು ರಾಸಾಯನಿಕ ವಸ್ತುಗಳು ತಯಾರಾಗುತ್ತವೆ. ಓಖಾ ಬಂದರನ್ನು ಬರೋಡ ಸಂಸ್ಥಾನ ಅಭಿವೃದ್ಧಿಪಡಿಸಿತ್ತು. ಬೈಟ್‍ದ್ವೀಪದ ಬಂದರನ್ನು ಇತ್ತೀಚೆಗೆ ಅಭಿವೃದ್ಧಿಪಡಿಸಲಾಗುತ್ತಿದೆ.

ಅಮ್ರೇಲಿ (ಅಮರವಲ್ಲಿ) ಜಿಲ್ಲಾ ಕೇಂದ್ರ ಹಾಗೂ ಜಿಲ್ಲೆಯ ಅತ್ಯಂತ ದೊಡ್ಡ ಪಟ್ಟಣ. ಥೇಬಿ ನದಿಯ ದಡದ ಮೇಲಿದೆ. (1905)ರಲ್ಲಿ ಪುರಸಭೆ ರೂಪುಗೊಂಡಿತ್ತು. ಅನೇಕ ಪ್ರಾಚೀನ ಕಟ್ಟಡಗಳು ಇವೆ. ಕೈಮಗ್ಗ, ಬಣ್ಣಗಾರಿಕೆ, ಬೆಳ್ಳಿಕೆಲಸ-ಇಲ್ಲಿನ ಮುಖ್ಯ ಕೈಗಾರಿಕೆಗಳು. ಓಖಾ ಮತ್ತು ದ್ವಾರಕೆ ಮುಖ್ಯ ರೈಲ್ವೆ ಕೇಂದ್ರಗಳು. ದ್ವಾರಕೆ ಮುಖ್ಯ ಐತಿಹಾಸಿಕ ಸ್ಥಳ.


(ಕೆ.ಆರ್.ಆರ್.)