ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅರಿಸಿನ ಬೂರುಗ

ವಿಕಿಸೋರ್ಸ್ದಿಂದ

ಅರಿಸಿನ ಬೂರುಗ : ಕಾಕ್ಲೊಸ್ಪರ್ಮೇಸೀ ಕುಟುಂಬಕ್ಕೆ ಸೇರಿದ ಮರ. ಕಾಕ್ಲೊಸ್ಪರ್ಮಮ್ ರಿಲಿಜಿಯೋಸಮ್ ಇದರ ವೈಜ್ಞಾನಿಕ ಹೆಸರು(ಯೆಲೊ ಸಿಲ್ಕ್ ಕಾಟನ್). ಇದು ಹಿಮಾಲಯದ ವಾಯವ್ಯ ಪ್ರದೇಶಗಳು, ಬಿಹಾರ್, ಮಧ್ಯ ಪ್ರದೇಶ, ಒರಿಸ್ಸ, ಗುಜರಾತ್ ಮತ್ತು ದಖನ್ ಪ್ರದೇಶಗಳಲ್ಲಿ ಬೆಳೆಯುವುದು ಹೆಚ್ಚು.

ಇದು ಸಾಮಾನ್ಯ ಎತ್ತರ ಹಾಗೂ ಗಾತ್ರದ್ದಾಗಿದ್ದು ಎಲೆ ವರ್ಷಕ್ಕೊಮ್ಮೆ ಉದುರಿಹೋಗು ತ್ತದೆ. ತೊಗಟೆ ದಪ್ಪ, ನಾರು ಹ¼ದಿ ಮತ್ತು ಮಿಶ್ರ ಬಣ್ಣ ಉಳ್ಳದ್ದು. ತೊಗಟೆಯ ಮೇಲೆ ಹಳ್ಳದಿಣ್ಣೆಗಳುಂಟು. ಎಳೆಯ ಕೊಂಬೆಗಳ ಮೇಲೆ ದಟ್ಟವಾದ ಕೂದಲಿನ ಹೊದಿಕೆ ಇದೆ. ಕೊಂಬೆಗಳ ಮೇಲೆ ಅಲ್ಲಲ್ಲಿ ಎಲೆ ಉದುರಿದ ಜಾಗದಲ್ಲಿ ಗುರುತುಗಳಿರುತ್ತವೆ. ಕೊಂಬೆಗಳ ತುದಿಯಲ್ಲಿ ಎಲೆಗಳು ವಿರಳವಾಗಿರುತ್ತವೆ. ಎಲೆಯ ಮೇಲೆ ಅಂಗೈ ಬೆರಳುಗಳಂತೆ 3-5 ನರಗಳೂ ಎಲೆಯ ಕೆಳಭಾಗದಲ್ಲಿ ದಟ್ಟವಾದ ರೋಮದ ಹೊದಿಕೆಯೂ ಇರುತ್ತವೆ. ಎಲೆಯ ಬಣ್ಣ ಬೂದು; ತೊಟ್ಟು ತೆಳುವಾಗಿದ್ದು ನೀಲಿಯಾಗಿರುತ್ತದೆ. ಹೂಗಳು ದೊಡ್ಡವು. ಐದು ಅಂಗುಲ ಉದ್ದದವೂ ಉಂಟು. ಬಣ್ಣ ಬಂಗಾರಹಳದಿ; ಕೆಲವೇ ಹೂಗಳಿದ್ದು ಗೊಂಚಲು ಕೊಂಬೆಗಳ ತುದಿಯಲ್ಲಿದ್ದು ಮಿಶ್ರ ಮಂಜರಿಯಾಗಿರುತ್ತದೆ. ಐದು ದಳಗಳಿದ್ದು ಪರಸ್ಪರ ಹರಡಿಕೊಂಡಿರುತ್ತದೆ. ಶುಷ್ಕಫಲಗಳು ಜೋತುಬೀಳುತ್ತವೆ. ಹಣ್ಣುಗಳು ಆಕಾರದಲ್ಲಿ ಅಂಜೂರದಂತಿವೆ. ದಪ್ಪ ಎರಡು ಮೂರು ಅಂಗುಲ, ಬಣ್ಣ ಕಂದು, ಒಂದೊಂದು ಫಲವೂ 3-5 ಭಾಗಗಳಾಗಿಸೀಳುತ್ತವೆ. ಬೀಜಗಳು ಅಸಂಖ್ಯಾತ, ಬಣ್ಣ ಕಂದು. ಮೇಲೆ ಮೃದುವಾದ ರೇಷ್ಮೆಯಂಥ ಹೊದಿಕೆಯುಂಟು.

ತೊಗಟೆಯಿಂದ ಸವಿಸುವ ಬಿಳಿಯಾದ ಅಂಟುದವ ಸುಗಂಧ ದ್ರವ್ಯಗಳ ತಯಾರಿಕೆ ಯಲ್ಲೂ ಐಸ್‍ಕ್ರೀಯನ್ನು ಮಂದಗೊಳಿಸುವುದಕ್ಕೂ ಪುಸ್ತಕಗಳಿಗೆ ರಟ್ಟು ಹಾಕುವುದಕ್ಕೂ ಚರ್ಮ ಹದಮಾಡುವ ಕೆಲಸಕ್ಕೂ ಬಳಕೆಯಾಗುತ್ತದೆ. ಔಷದಿಯಾಗೂ ಇವನ್ನು ಬಳಸುತ್ತಾರೆ. ಇದರ ಹತ್ತಿ ಕುರ್ಚಿ, ಸೋಫ ಮುಂತಾದವುಗಳ ದಿಂಬು ತುಂಬುವುದಕ್ಕೆ ಉಪಯುಕ್ತವೆನಿಸಿದೆ. ತೊಗಟೆಯಿಂದ ಹಗ್ಗ ಮತ್ತು ಹುರಿಗೆ ಯೋಗ್ಯವಾದ ನಾರು ದೊರೆಯುತ್ತದೆ. ಕೆಲವು ಕಡೆ ಮೆದುವಾದ ಕಾಂಡವನ್ನು ಆಹಾರ ರೂಪದಲ್ಲಿ ಬಳಸುವುದೂ ಉಂಟು. ಕೊಂಬೆ, ಕಾಂಡ ಹಸಿಯಾಗಿದ್ದರೂ ಸರಾಗವಾಗಿ ಉರಿಯುವುದರಿಂದ ಕೊಳ್ಳಿ ದೀಪವಾಗಿ ಉಪಯೋಗಿಸುತ್ತಾರೆ. (ಎಂ.ಎಸ್.ಎಸ್.ಆರ್.)