ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅರ್ಥಾಪತ್ತಿ

ವಿಕಿಸೋರ್ಸ್ದಿಂದ

ಜ್ಞಾನದ ಪ್ರಮಾಣಗಳಲ್ಲಿ ಒಂದು. ದತ್ತವಾದ ಎರಡು ಅಂಶಗಳಿಂದ ಸಿದ್ಧಿಸುವ ಮೂರನೆಯ ಅಂಶವನ್ನು ಗ್ರಹಿಸುವುದು. ಇದನ್ನು ಎಲ್ಲ ಭಾರತೀಯ ದಾರ್ಶನಿಕರೂ ಅಂಗೀಕರಿಸುವುದಿಲ್ಲ. ಇದು ಪೂರ್ವ ಮೀಮಾಂಸಾ ದರ್ಶನಕ್ಕೂ ಪ್ರಮಾಣದ ವಿಚಾರದಲ್ಲಿ ಮೀಮಾಂಸಕರನ್ನೇ ಅನುಸರಿಸುವ ಅದ್ವೈತಕ್ಕೂ ವಿಶಿಷ್ಟವಾದ ಪ್ರಮಾಣ. ಇದನ್ನು ವಿವರಿಸಲು ಸಾಮಾನ್ಯವಾಗಿ ಕೊಡುವ ಉದಾಹರಣೆಗಳು ಇವು: ದೇವದತ್ತ ಬದುಕಿದ್ದಾನೆ ಮತ್ತು ಆತ ಮನೆಯಲ್ಲಿ ಇಲ್ಲ ಎಂಬ ಎರಡು ನಿಶ್ಚಯವಾದ ಪ್ರತಿಜ್ಞೆಗಳಿಂದ ದೇವದತ್ತ ಮನೆಯ ಹೊರಗೆ ಇರಬೇಕು ಎಂದು ತಿಳಿಯಬಹುದು. ದೇವದತ್ತ ಪುಷ್ಟನಾಗಿದ್ದಾನೆ ಮತ್ತು ಆತ ಹಗಲು ಊಟ ಮಾಡುವುದಿಲ್ಲ ಎಂಬ ಎರಡು ನಿಶ್ಚಿತ ಪ್ರತಿಜ್ಞೆಗಳು ತಿಳಿದಿದ್ದರೆ, ಆ ಪ್ರತಿಜ್ಞೆಗಳಿಂದ ದೇವದತ್ತ ರಾತ್ರಿ ಊಟ ಮಾಡುತ್ತಿರಬೇಕು ಎಂದು ತಿಳಿಯಬಹುದು. ಈ ತಿಳಿವು ಹುಟ್ಟಿಸುವ ಪ್ರಮಾಣವೇ ಅರ್ಥಾಪತ್ತಿ.