ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಲಂಕಾರ ಶಾಸ್ತ್ರ

ವಿಕಿಸೋರ್ಸ್ದಿಂದ

ಸಂಸ್ಕೃತದಲ್ಲಿ ಸಾಹಿತ್ಯಮೀಮಾಂಸಾಶಾಸ್ತ್ರಕ್ಕೆ ಈ ಹೆಸರಿದೆ. ಇಂದು ಅಲಂಕಾರವೆಂದರೆ ಅನುಪ್ರಾಸ, ಉಪಮಾದಿಗಳೆಂಬ ಸಂಕುಚಿತಾರ್ಥ ರೂಢವಾಗಿದೆ. ಆದರೆ ಹಿಂದೆ ರಸ, ರೀತಿ, ಗುಣ, ವಕ್ರೋಕ್ತಿ ಮುಂತಾದ ಪ್ರಕ್ರಿಯೆಗಳನ್ನೆಲ್ಲ ತನ್ನಲ್ಲಿ ಅಳವಡಿಸಿಕೊಳ್ಳುವಷ್ಟು ವಿಶಾಲಾರ್ಥ ಅಲಂಕಾರ ಶಬ್ದಕ್ಕಿದ್ದಂತೆ ತೋರುತ್ತದೆ. ಭಾಮಹನಿಂದ ಹಿಡಿದು ರುದ್ರಟನವರೆಗೆ ಲೇಖಕರೆಲ್ಲರೂ ಗ್ರಂಥಗಳ ಹೆಸರಿನಲ್ಲೇ ಅಲಂಕಾರವನ್ನು ಪ್ರಾಯಃ ಕೂಡಿಸುತ್ತಾರೆ. ಆದರೆ ಅಲ್ಲಿ ಕೇವಲ ಶಬ್ದಾಲಂಕಾರಗಳ ಪಟ್ಟಿ ಇರುವುದಿಲ್ಲ. ಸಾಹಿತ್ಯದ ಎಲ್ಲ ಅಂಶಗಳ ಚರ್ಚೆಯೂ ಇರುತ್ತದೆ. ಇದರಂತೆ ಕಾವ್ಯಲಕ್ಷಣ, ಕ್ರಿಯಾಕಲ್ಪ ಎಂಬ ಹೆಸರುಗಳೂ ಈ ಶಾಸ್ತ್ರಕ್ಕೆ ಬಹಳ ಪೂರ್ವದಲ್ಲಿ ಇದ್ದುವು.


ಅಲಂಕಾರದ ವಿಸ್ತೃತಾರ್ಥವೇನು? ಕಾವ್ಯಶೋಭಕರಗಳಾದ ಧರ್ಮಗಳು ಎಂಬುದು ದಂಡಿಯ ಉತ್ತರವಾದರೆ, ಸೌಂದರ್ಯವೇ ಅಲಂಕಾರ ಎನ್ನುವುದು ವಾಮನನ ಸೂತ್ರ. ಇಷ್ಟಾಭಿಧೇಯವಕ್ರೋಕ್ತಿರಿಷ್ಟಾ ವಾಚಾಮಲಂಕೃತಿಃ ಎನ್ನುವ ಭಾಮಹನ ಅಭಿಪ್ರಾಯವಾದರೂ ಇದೇ. ಈ ವ್ಯಾಪಕಾರ್ಥದಲ್ಲಿ ಮಾತ್ರ ದಂಡಿ ಹೇಳುವಂತೆ ಸಂಧ್ಯಂಗ, ವ್ಯತ್ತ್ಯಂಗ, ಲಕ್ಷಣ ಮುಂತಾದ ನಾಟ್ಯಶಾಸ್ತ್ರ ಪ್ರಕ್ರಿಯೆಗಳೆಲ್ಲ ಇಲ್ಲಿ ಅಲಂಕಾರವೆನಿಸಲು ಶಕ್ಯ. ಹಾಗೆಯೇ ಗುಣ, ರಸಗಳೂ ಅಲಂಕಾರವೆನಿಸಲು ಸಾಧ್ಯ. ಆದರೆ ಇಂದಿನ ಸಂಕುಚಿತಾರ್ಥದಲ್ಲಿ ಅಶಕ್ಯ. ಆದ್ದರಿಂದ ಪ್ರಾಚೀನ ಆಲಂಕಾರಿಕರು ಕಾವ್ಯದ ಆತ್ಮ ಅಲಂಕಾರವೆಂದರೆ, ಚಾರುತ್ವ ಪ್ರತೀತಿ ಕಾವ್ಯದ ಆತ್ಮವೆಂದೇ ಅವರ ಅಭಿಪ್ರಾಯ ಹೊರತು, ವಿಶಿಷ್ಟ ಶಬ್ದಾರ್ಥಾಲಂಕಾರಗಳೆಂದಲ್ಲ. ಈ ಮಾತನ್ನು ಅಭಿನವಗುಪ್ತ ಕೂಡ ಒಪ್ಪುತ್ತಾನೆ (ಯಚ್ಚೋಕ್ತಮ್-ಚಾರುತ್ವಪ್ರತೀತಿಸ್ತರ್ಹಿ ಕಾವ್ಯಸ್ಯಾತ್ಮಾಸ್ಯಾದಿತಿ, ತದಂಗೀಕುರ್ಮ ಏವ ನಾಸ್ತಿ ಖಲ್ವಯಂ ವಿವಾದಃ). ಕುಂತಕನ ವಕ್ರೋಕ್ತಿಜೀವಿತದ ನಾಮಾಂತರ ಅಲಂಕಾರ. ಈ ವಿಶಾಲಾರ್ಥದಲ್ಲಿಯೇ ನಾಟ್ಯಾಲಂಕಾರ, ಪಾಠ್ಯಾಲಂಕಾರ, ಸತ್ವಾಲಂಕಾರ, ವರ್ಣಾಲಂಕಾರ ಮುಂತಾದ ಶಬ್ದಪ್ರಯೋಗಗಳು ನಾಟ್ಯಶಾಸ್ತ್ರದಲ್ಲಿ ಬಂದಿವೆ. ಹಾಗೆಯೇ ಅಲ್ಲಿ ಹೇಳಿರುವ 36 ಲಕ್ಷಣಗಳು ಮುಂದೆ ಅಲಂಕಾರಗಳಾಗಿ ಬೆಳೆದಂತೆ ತೋರುತ್ತದೆ. ಅಲಂಕಾರಗಳ ವಿಕಲ್ಪನೆಗೆ ಬೀಜವನ್ನು ಪೂರ್ವಾಚಾರ್ಯರೇ ತಿಳಿಸಿದ್ದಾರೆ ಎನ್ನುವ ದಂಡಿಯ ಮಾತು ಲಕ್ಷಣಗಳನ್ನೇ ಕುರಿತಂತಿದೆ.


ಭರತನಿಗೂ ಪೂರ್ವದ ಯಾಸ್ಕ, ಪಾಣಿನಿಗಳೇ ಉಪಮೆಯ ಪರಿಚಯವನ್ನು ತೋರಿಸುತ್ತಾರೆ. ಬ್ರಹ್ಮಸೂತ್ರದಲ್ಲಿ ರೂಪಕದ ಉಲ್ಲೇಖವಿದೆ. ಮೀಮಾಂಸಕರು ವೇದಮಂತ್ರಗಳ ವಿವರಣೆಯಲ್ಲಿ ಹೇತು, ನಿರ್ವಚನ, ನಿಂದಾ, ಪ್ರಶಂಸಾ, ಸಂಶಯ, ವಿಧಿ, ಮುಂತಾದ ಲಕ್ಷಣಗಳನ್ನು ಹೇಳುತ್ತಾರೆ (ತಂತ್ರವಾರ್ತಿಕ). ಇವೇ ಕಾವ್ಯಲಕ್ಷಣಗಳ ಕಲ್ಪನೆಗೆ ಸ್ಫೂರ್ತಿಯ ನ್ನಿತ್ತಿರಬಹುದು. ಸಂದೇಹ, ದೃಷ್ಟಾಂತವೆಂಬ ಲಕ್ಷಣಗಳು, ಸಸಂದೇಹ, ದೃಷ್ಟಾಂತವೆಂಬ ಅಲಂಕಾರಗಳಾಗಿ ಬೆಳೆದಂತೆ, ಉಳಿದವೂ ನಾಮಾಂತರದಿಂದ ವಿಕಾಸಗೊಂಡವೆನ್ನಬಹುದು. ಈ ಶಬ್ದಾರ್ಥ ಮಾತ್ರ ಶೋಭಾಕಾರಕಗಳಾದ ಬಾಹ್ಯಧರ್ಮಗಳು ಸಂಕುಚಿತಾರ್ಥದ ಅಲಂಕಾರಗಳೇ ಸರಿ. ರಮಣಿ ಬಾಹ್ಯವಾದ ಹಾರದಿಂದ ಅಲಂಕೃತಳಾಗುವಂತೆ, ಅವಳ ವರ್ಣನೆ ಕವಿಬುದ್ಧಿಯಿಂದ ಸಮರ್ಪಿತವಾದ ಚಂದ್ರಾದಿ ಉಪಮಾನಗಳಿಂದಲೂ ಅಲಂಕೃತ ವಾಗುತ್ತದೆ. ಅನುಪ್ರಾಸಾದಿಗಳಿಂದ ಶಬ್ದ ಅಲಂಕೃತವಾಗುತ್ತದೆ. ಹೀಗೆ ಅಲಂಕಾರಗಳಲ್ಲಿ ಮುಖ್ಯವಾಗಿ ಶಬ್ದಾಲಂಕಾರ, ಅರ್ಥಾಲಂಕಾರಗಳೆಂಬ ಎರಡು ಭೇದಗಳಿವೆ. ಶಬ್ದಾರ್ಥಗಳು ರಸಾಭಿವ್ಯಕ್ತಿಪರವಾದಾಗ ತೋರುವ ಧರ್ಮಗಳೇ ಶಬ್ದಾರ್ಥ ಗುಣಗಳು. ಹೀಗೆ ರಸೋಚಿತ ಗುಣಾಲಂಕಾರಗಳಿಂದ ಕೂಡಿರುವುದೇ ಕಾವ್ಯದ ವೈಶಿಷ್ಟ್ಯ. ಗುಣಾಲಂಕಾರಗಳಿಗೆ ಕಾವ್ಯದೊಡನೆ ಇರುವ ಸಂಬಂಧದಲ್ಲಿ ವಾಮನ ಒಪ್ಪಿದರೆ, ಉದ್ಭಟ ಅದನ್ನೂ ಒಪ್ಪುವುದಿಲ್ಲ. ದಂಡಿ ರಸವತ್ತೆಯನ್ನೇ ಮಾಧುರ್ಯ ಗುಣವೆಂದಿರುವುದು ಗಮನಾರ್ಹ. ವಾಮನನಾದರೂ ರಸವನ್ನು ಕಾಂತಿಗುಣವೆಂದೇ ಬರೆಯುತ್ತಾನೆ. ಸಕಲಾಲಂಕಾರಗಳಿಗೂ ವಕ್ರೋಕ್ತಿ ಅಥವಾ ಅತಿಶಯವೇ ಮೂಲವೆಂದು ಹೇಳುವ ಭಾಮಹ ಅಲ್ಲಿಗೇ ನಿಲ್ಲದೆ, ಸೈಷಾ ಸರ್ವತ್ರ ವಕ್ರೋಕ್ತಿಃ, ಅನಯಾರ್ಥೋ ವಿಭಾವ್ಯತೇ ಎಂದು ಸ್ಪಷ್ಟವಾಗಿ ಅರ್ಥರಸಕ್ಕೆ ವಿಭಾವತ್ವವನ್ನು ತಳೆಯುವುದನ್ನು ಕೂಡ ನಿರ್ದೇಶಿಸಿದ್ದಾನೆ. ರುದ್ರಟನಂತೂ ವಿರಸವನ್ನು ದೋಷವೆಂದೇ ಬಗೆಯುತ್ತಾನೆ. ಇದನ್ನೆಲ್ಲ ಗಮನಿಸಿದರೆ, ಇವರು ರಸಾದಿಗಳನ್ನು ಕೂಡ ಅಲಂಕಾರವೆಂದಾಗ ವಿಶಾಲಾರ್ಥದಲ್ಲಿ ಮಾತ್ರ ಹಾಗೆನ್ನುವರೇ ಹೊರತು ಸಂಕುಚಿತಾರ್ಥದಲ್ಲಲ್ಲವೆಂದು ತಿಳಿದುಬರುತ್ತದೆ.


ಶಬ್ದಾರ್ಥಾಲಂಕಾರಗಳ ಸಂಖ್ಯೆಯ ಬೆಳವಣಿಗೆಯ ಇತಿಹಾಸ ಭಾರತೀಯರ ಭೇದಪ್ರಭೇದ ಮೋಹವನ್ನು ತೋರಿಸುತ್ತದೆ. ಭರತನಲ್ಲಿದ್ದ ನಾಲ್ಕೇ ಅಲಂಕಾರಗಳು ಅಗ್ನಿ ಪುರಾಣದಲ್ಲಿ 16, ಭಾಮಹನಲ್ಲಿ 38, ದಂಡಿಯಲ್ಲಿ 37, ಉದ್ಭಟನಲ್ಲಿ 41, ವಾಮನನಲ್ಲಿ 31, ರುದ್ರಟನಲ್ಲಿ 55, ಭೋಜನಲ್ಲಿ 54, ಮಮ್ಮಟನಲ್ಲಿ 69, ರುಯ್ಯಕನಲ್ಲಿ 81, ವಿಶ್ವನಾಥನಲ್ಲಿ 89, ಅಪ್ಪಯ್ಯ ದೀಕ್ಷಿತನಲ್ಲಿ 100 ಕ್ಕಿಂತ ಹೆಚ್ಚಾಗಿ ವಿಸ್ತಾರಗೊಳ್ಳುತ್ತವೆ. ಇವುಗಳ ಲಕ್ಷಣ-ಲಕ್ಷ್ಯ ಸಮನ್ವಯ, ವಿಭಾಗ ನಿರ್ಣಯಗಳಿಗೆ ಇಲ್ಲಿ ಎಡೆಯಿಲ್ಲ.


ಅಲಂಕಾರಗಳನ್ನೆಲ್ಲ ಕೆಲವೊಂದು ಮುಖ್ಯ ತತ್ತ್ವಗಳ ಆಧಾರದಿಂದ ವರ್ಗೀಕರಣ ಮಾಡಿದ ಕೀರ್ತಿ ರುಯ್ಯಕನದು. ಇವನ ಪ್ರಕಾರ-ಸಾದೃಶ್ಯ, ವಿರೋಧ, ಶೃಂಖಲಾ, ನ್ಯಾಯ ಕಾವ್ಯನ್ಯಾಯ, ಲೋಕನ್ಯಾಯ, ಗೂಢಾರ್ಥ-ಇವು ಮುಖ್ಯ ವಿಭಾಜಕ ತತ್ತ್ವಗಳು. ಭೇದ, ಅಭೇದ, ಆರೋಪ, ಅಧ್ಯವಸಾಯ, ವಿಶೇಷ್ಯ-ವಿಶೇಷಣಭಾವ ಪದ-ವಾಕ್ಯಗತತ್ತ್ವ-ಇತ್ಯಾದಿಗಳು ಪ್ರಭೇದಗಳಿಗೆ ಕಾರಕ ಧರ್ಮಗಳು.


ರಸೌಚಿತ್ಯದ ದೃಷ್ಟಿಯನ್ನು ಬಿಟ್ಟು, ಕೇವಲ ಚಕಿತಗೊಳಿಸುವ ಉದ್ದೇಶದಿಂದ, ತಮ್ಮ ಶಕ್ತಿಪ್ರದರ್ಶನಕ್ಕಾಗಿ ಬರೆಯುವ ಅಲಂಕಾರಗಳಿಗೆ ಕಾವ್ಯದಲ್ಲಿ ಹೆಚ್ಚಿನ ಸ್ಥಾನವಿಲ್ಲವೆಂದು ಸ್ಪಷ್ಟವಾಗಿ ಧ್ವನಿವಾದಿಗಳು ತೋರಿಸಿದರು. ಇದಕ್ಕೆ ಚಿತ್ರವೆಂಬ ಹೆಸರನ್ನು ಕೊಟ್ಟು ಅಧಮಕಾವ್ಯ ವೆಂದರೆ ಇದೇ ಎಂದು ತೀರ್ಮಾನಿಸಿದರು. ದುಷ್ಕರ ಯಮಕಾದಿ ಚಮತ್ಕಾರ ಪ್ರದರ್ಶನ ಕಾವ್ಯದ ಗುರಿಯಲ್ಲವೆಂಬುದನ್ನು ಸಾರಿದರು. ಇದು ತಪ್ಪುದಾರಿ ಹಿಡಿದ ಕವಿಗಳ ಮಾರ್ಗದರ್ಶನಕ್ಕೆಂದು ನುಡಿದ ಮಾತು; ಕಾವ್ಯದಲ್ಲಿ ವಿಶಾಲಾರ್ಥದ ಉಚಿತಾಲಂಕಾರಕ್ಕೆ ಸ್ಥಾನವಿಲ್ಲವೆಂದು ಹೇಳಿದ ಮಾತಲ್ಲ. ಕಾವ್ಯದಲ್ಲಿ ಸೌಂದರ್ಯಮಯವಾದ ಶಬ್ದಾರ್ಥ ಸಾಹಿತ್ಯದ ಅಗತ್ಯವನ್ನು ಭಾರತೀಯ ಲಾಕ್ಷಣಿಕರಾರೂ ಅಲ್ಲಗಳೆದಿಲ್ಲ. ಸೌಂದರ್ಯಕ್ಕೆ ಪರ್ಯಾಯವಾದ ಅಲಂಕಾರ ಕಾವ್ಯದ ಆತ್ಮವೇ ಸರಿ. ವ್ಯಂಗ್ಯಾರ್ಥ ಸ್ಪರ್ಶವಿದ್ದಾಗಲೂ ಅಲಂಕಾರದ ಚಮತ್ಕಾರಕ್ಕೆ ಕುಂದಿಲ್ಲ. ವ್ಯಂಗ್ಯಾರ್ಥಶೂನ್ಯವಾದ ಅಲಂಕಾರ ಮಾತ್ರ ನಿಷ್ಪ್ರಯೋಜಕ; ಅದು ಅಲಂಕಾರವೇ ಅಲ್ಲ. ಭಾರತೀಯ ಕಾವ್ಯಮೀಮಾಂಸೆ.