ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಲಕನಂದ

ವಿಕಿಸೋರ್ಸ್ದಿಂದ

ಗಂಗಾನದಿಯ ಜಲಮೂಲಗಳಲ್ಲಿ ಒಂದು. ಹಿಮಾಲಯ ಪರ್ವತ ಶ್ರೇಣಿಗಳಲ್ಲಿ, ಟಿಬೆಟ್ಟಿನ ಗಂಗೋತ್ರಿ ಹಿಮನದಿಯಿಂದ ಸು. 28 ಕಿಮೀ ದೂರದ ಗೋಮುಖ್ ಎಂಬ ಗುಹೆಯಲ್ಲಿ ಸು. 6600 ಮೀ ಎತ್ತರದಲ್ಲಿ ಉಗಮ ಹೊಂದುತ್ತದೆ. ಅನಂತರ ಪೂರ್ವಾಭಿಮುಖವಾಗಿ ಹರಿದು ದೇವಪ್ರಯಾಗದ ಬಳಿ ಭಾಗೀರಥಿ ಜಲ ಮೂಲವನ್ನು ಸೇರುತ್ತದೆ. ಅಲ್ಲಿಂದ ಮುಂದೆ ಈ ಎರಡೂ ನದಿಗಳು ಸೇರಿ ಗಂಗಾನದಿಯಾಗಿ ಹರಿಯುತ್ತವೆ. ಸರಸ್ವತೀ ನದಿಯಲ್ಲದೆ ಇದಕ್ಕೆ ಅನೇಕ ಉಪನದಿಗಳಿವೆ. ನಂದಾಕಿನಿ ನಂದಪ್ರಯಾಗದಲ್ಲೂ ಪಿಂದಾರ ಕರ್ಣಪ್ರಯಾಗದಲ್ಲೂ ಮಂದಾಕಿನಿ ರುದ್ರಪ್ರಯಾಗದಲ್ಲೂ ಈ ನದಿಗೆ ಸೇರಿ ಆಯಾ ಸ್ಥಳಗಳನ್ನು ಪವಿತ್ರ ಸಂಗಮಕ್ಷೇತ್ರಗಳಾಗಿ ಮಾಡಿವೆ.


ತ್ರಿಪಥಗಾಮಿನಿಯಾದ ಗಂಗೆ ದೇವಲೋಕದಲ್ಲಿ ಹರಿಯುವಾಗ ಈ ಹೆಸರನ್ನು ಪಡೆಯುತ್ತಾಳೆಂದು ಪುರಾಣದ ವಿವರಣೆ. ದಡದ ಮೇಲೆ ಬ್ರಹ್ಮಕಪಾಲವೆಂಬುದು ಪ್ರಸಿದ್ಧ ಪವಿತ್ರಸ್ಥಳ. ಬದರೀಯಾತ್ರೆಗೆ ಹೋಗುವವರೆಲ್ಲ ಇಲ್ಲಿ ಬಂದು ಪಿತೃಗಳಿಗೆ ಪಿಂಡಪ್ರದಾನ ಮಾಡುವುದು ರೂಢಿ. ಇಲ್ಲಿ ಮಾಡಿದ ಶ್ರಾದ್ಧದಿಂದ ವಿಷ್ಣು ಪದ ದೊರೆಯುವುದೆಂದು ನಂಬಿಕೆ.