ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಲಕಪಾದಿಗಳು

ವಿಕಿಸೋರ್ಸ್ದಿಂದ
ಅಲಕಪಾದಿಗಳು

ಸಿರ್ರಿಪೀಡಿಯ ಎಂದರೆ ಕೂದಲಿನಂತಹ ಕಾಲುಗಳುಳ್ಳ ಜೀವಿಗಳು. ಕ್ರಸ್ಟೇಷಿಯ ವರ್ಗದ ಒಂದು ಉಪವಿಭಾಗ. ಕುರುಳುಪಾದಿಗಳು. ಇವನ್ನು ಬಾರ್ನಕಲ್ಸ್‌ (ಚಿಪ್ಪುಳ್ಳ ಪ್ರಾಣಿಗಳು) ಎಂದು ಕರೆಯುತ್ತಾರೆ. ಇವು ಸಾಮಾನ್ಯವಾಗಿ ಸಮುದ್ರದಲ್ಲಿ ತೇಲುವ ಮರದ ದಿಮ್ಮಿಗಳಿಗೂ ಹಡಗಿನ ತಳಕ್ಕೂ ಅಂಟಿಕೊಂಡು ಬದುಕುತ್ತವೆ. ಬಾರ್ನ್‌ಕಲ್‌ಗಳ ಪ್ರಭೇದಗಳಲ್ಲಿ ಸಾಮಾನ್ಯವಾಗಿ ಹಡಗುಗಳಿಗೆ ಅಂಟಿಕೊಂಡಿರುವ ಪ್ರಾಣಿಗೆ ಲಿಪಾಸ್ ಎಂದು ಹೆಸರು; ಸಾಮಾನ್ಯ ರೂಢನಾಮ ಬಾತುಕೋಳಿಬಾರ್ನ್‌ಕಲ್‌ (ಗೂಸ್ ಬಾರ್ನಕಲ್). ಇದು ಕ್ರಸ್ಟೇಷಿಯ ವರ್ಗದ ಯಾವ ಪ್ರಾಣಿಯನ್ನೂ ಹೋಲುವುದಿಲ್ಲ. ಉದ್ದವಾದ ಮಾಂಸಖಂಡಗಳ ತೊಟ್ಟಿನಿಂದ ಆಧಾರಕ್ಕೆ ಅಂಟಿಕೊಡಿರುತ್ತದೆ. ತೊಟ್ಟಿನ ತುದಿಯಲ್ಲಿ ಒಂದರೊಡನೊಂದು ಬೆಸುಗೆ ಹಾಕಿದಂತೆ ಸೇರಿರುವ ಕಠಿಣವಾದ ಐದು ತಟ್ಟೆಗಳ ಚಿಪ್ಪು ಇದೆ. ಚಿಪ್ಪಿನ ಒಂದು ತುದಿಯಲ್ಲಿ ಸೀಳಿನಂತಿರುವ ಒಂದು ರಂಧ್ರವಿದೆ. ಪ್ರಾಣಿ ರಂಧ್ರದ ಮೂಲಕ ಸುರುಳಿಯಂತಿರುವ ತನ್ನ ಆರು ಜೊತೆ ಕುರುಳು ಕಾಲುಗಳನ್ನು ಬೇಕೆಂದಾಗ ಹೊರಚಾಚಬಲ್ಲದು, ಒಳಗೆ ಎಳೆದುಕೊಳ್ಳಬಲ್ಲದು. ಈ ಕಾಲುಗಳು ಅತ್ಯಂತ ಕಠಿಣವಾದ ಮತ್ತು ಒಂದರೊಡನೊಂದು ಭದ್ರವಾಗಿ ಹೆಣೆದು ಕೊಂಡಿರುವ ರೋಮಗಳಂತಿರುವ ರಚನೆಗಳನ್ನು ಹೊಂದಿವೆ.


ಲಿಪಾಸ್ ಪ್ರಾಣಿ ಅದರ ಕಾಲುಗಳನ್ನು ಹೊರಚಾಚಿ ಪೂರ್ಣವಾಗಿ ಬಿಡಿಸಿದಾಗ ಈ ರೋಮಗಳಂಥ ರಚನೆಗಳು ಒಂದು ರೀತಿಯ ಬಲೆಯಂತೆ ಕಾಣುತ್ತವೆ. ಇದರ ಸಹಾಯದಿಂದ ಅದು ನೀರನ್ನು ಶೋಧಿಸಿ ಅದರೊಳಗಿರುವ ಸೂಕ್ಷ್ಮ ಜೀವಿಗಳನ್ನು ಹಿಡಿದು ಆಹಾರವಾಗಿ ಸೇವಿಸುತ್ತದೆ; ಹಿಡಿದ ಮೇಲೆ ಕಾಲುಗಳನ್ನು ಚಿಪ್ಪಿನೊಳಕ್ಕೆ ಎಳೆದುಕೊಳ್ಳುತ್ತದೆ. ಲಿಪಾಸ್ ಅಂಟಿಕೊಂಡಿರುವ ತೊಟ್ಟು ಮುಂದಲೆ. ಇದು 5 ಚಿಪ್ಪುಗಳಿಂದ ರಕ್ಷಿಸಲ್ಪಟ್ಟಿದೆ. ಒಂದು ಜೊತೆ ಕುಡಿಮೀಸೆಗಳು ಈ ತೊಟ್ಟು ಉತ್ಪತ್ತಿ ಮಾಡುವ ಅಂಟಾದ ವಸ್ತುವಿನೊಳಗೆ ಅಡಗಿವೆ. ಆಹಾರ ಬೇಟೆಯಾಡುವ ವಿಧಾನವನ್ನು ಗಮನಿಸಿದ ಜೀವಶಾಸ್ತ್ರಜ್ಞ ಹಕ್ಸ್‌ಲೀ ಈ ಪ್ರಾಣಿಯನ್ನು ತಲೆಯ ಮೇಲೆ ನಿಂತು ಕಾಲಿನಿಂದ ಆಹಾರವನ್ನು ಬಾಯಿಗೆ ಬೀಳುವಂತೆ ಒದೆಯುವ ಪ್ರಾಣಿ ಎಂದು ವಿವರಿಸಿದ್ದಾನೆ.

ಲಿಪಾಸ್‍ ಲಾರ್ವ

ಬಲಾನಸ್[ಸಂಪಾದಿಸಿ]

ಅಲಕಪಾದಿಗಳ ಗುಂಪಿಗೆ ಸೇರಿದ ಮತ್ತೊಂದು ಪ್ರಾಣಿ. ರಚನೆಯಲ್ಲಿ ಲಿಪಾಸನ್ನೇ ಹೋಲುತ್ತದೆ. ಆದರೆ ಇದಕ್ಕೆ ಲಿಪಾಸ್‌ನಂತೆ ಉದ್ದವಾದ ತೊಟ್ಟು ಇಲ್ಲ. ಈ ಪ್ರಾಣಿ ತ್ರಿಕೋಣಾಕಾರದ ಗಟ್ಟಿ ಪದಾರ್ಥಕ್ಕೆ ಅಂಟಿಕೊಂಡಿರುವ ಗಟ್ಟಿಯಾದ ಚಿಪ್ಪಿನೊಳಗಿರುತ್ತದೆ. ಚಿಪ್ಪಿನ ಮೇಲುಭಾಗದಲ್ಲಿ ಒಂದು ದೊಡ್ಡ ರಂಧ್ರವಿದೆ. ಇದನ್ನು ಬಾಗಿಲುಗಳಂಥ ಕವಾಟವುಳ್ಳ ಒಂದು ಜೊತೆ ಚಿಪ್ಪುಗಳು ಮುಚ್ಚಿಕೊಂಡಿವೆ. ಚಿಪ್ಪುಗಳ ರಂಧ್ರದ ಮೂಲಕ ಪ್ರಾಣಿ ತನ್ನ ಪಾದಗಳನ್ನು ಹೊರಚಾಚಬಲ್ಲುದು.


ಬಾರ್ನ್‌ಕಲ್‌ಗಳಿಗೆ ಮೃದ್ವಂಗಿಗಳಂತೆಯೇ ಶರೀರವು ಚಿಪ್ಪಿನಿಂದ ಆವೃತವಾಗಿರುವುದರಿಂದ ಇವನ್ನು ಮೃದ್ವಂಗಿಗಳೆಂದೇ ತಿಳಿಯಲಾಗಿತ್ತು. ಆದರೆ ಜೆ.ವಿ. ಥಾಮ್ಸನ್ ಎಂಬ ನೌಕಾಪಡೆಯ ವೈದ್ಯ ಬಾರ್ನ್‌ಕಲ್‌ಗಳ ಲಾರ್ವಾ(ಡಿಂಬ)ಗಳು ಕ್ರಸ್ಟೇಷಿಯ ವರ್ಗದ ಲಾರ್ವಾಗಳನ್ನು ಹೋಲುತ್ತವೆಂದು ಕಂಡುಹಿಡಿದ (1830). ಆದ್ದರಿಂದ ಕುತೂಹಲಗೊಂಡ ಆ ವೈದ್ಯ ಬಾರ್ನಕಲ್ ಜೀವಿಯ ಮೊಟ್ಟೆಗಳನ್ನೂ ಭ್ರೂಣ ಬೆಳೆವಣಿಗೆಯ ಪ್ರಥಮ ಹಂತದಲ್ಲಿ ಪರೀಶೀಲಿಸಿದ. ಈ ಎರಡು ರೀತಿಯ ಮೊಟ್ಟೆಗಳಿಂದಲೂ ಒಂದೇ ರೀತಿ ಇರುವ ಲಾರ್ವಾ ಜೀವಿಗಳು ಹೊರಬಂದುವು. ಇವೇ ನಾಪ್ಲಿಯಸ್ ಲಾರ್ವಾಗಳು. ಬಾರ್ನ್‌ಕಲ್‌ನ ನಾಪ್ಲಿಯಸ್ ಲಾರ್ವಾಗಳಿಗೂ ಕ್ರಸ್ಟೇಷಿಯದ ನಾಪ್ಲಿಯಸ್ ಲಾರ್ವಾಗಳಿಗೂ ಕೇವಲ ಕೆಲವೇ ಸೂಕ್ಷ್ಮ ರಚನೆಗಳಲ್ಲಿ ಭಿನ್ನತೆಯಿದೆ. ನಾಪ್ಲಿಯಸ್ ಲಾರ್ವಾ ನೀರಿನಲ್ಲಿ ಈಸಿ ಬೆಳೆದು ಮುಂದೆ ಸೈಪ್ರಿಸ್ ಎಂಬ ಮತ್ತೊಂದು ರೀತಿಯ ಲಾರ್ವಾ ಆಗಿ ಪರಿವರ್ತನೆಗೊಳ್ಳುತ್ತದೆ. ಈ ಸೈಪ್ರಿಸ್ ಸಂದಿಪದಿಗಳ ಆಸ್ಟ್ರಕೋಡ ಗುಂಪಿನ ಲಾರ್ವಾಗಳನ್ನು ಹೋಲುತ್ತದೆ. ಈ ಲಾರ್ವ ತನ್ನ ಶರೀರವನ್ನು ಎರಡು ಚಿಪ್ಪುಗಳಿಂದ ಮುಚ್ಚಿಕೊಂಡಿರುತ್ತದೆ.

ನಾಪ್ಲಿಯಸ್‍ ಲಾರ್ವ

ಶರೀರದ ಮುಂಭಾಗದಲ್ಲಿ ಒಂದು ಜೊತೆ ವಿಚಿತ್ರರೀತಿಯ ಕುಡಿಮೀಸೆಗಳಿರುತ್ತವೆ. ಈ ಅವಸ್ಥೆಯಲ್ಲಿ ಅವಕ್ಕೆ ಆರು ಜೊತೆ ಪಾದಗಳಿರುತ್ತವೆ. ಅದರ ಕುಡಿಮೀಸೆಗಳಲ್ಲಿ ಅಂಟುಸಿಂಬಿಗಳಿದ್ದು ಸಕಾಲದಲ್ಲಿ ಯಾವುದಾದರೊಂದು ಗಟ್ಟಿ ಪದಾರ್ಥಕ್ಕೆ ಅಂಟಿಕೊಳ್ಳಲು ಸಹಾಯ ಮಾಡುತ್ತವೆ. ಈ ಜೀವಿ ಸಂಪುರ್ಣವಾಗಿ ಅಂಟಿಕೊಂಡ ಮೇಲೆ ಅದರ ಶರೀರದ ಎರಡು ಚಿಪ್ಪುಗಳನ್ನು ವಿಸರ್ಜಿಸಿ ರೂಪಾಂತರಣ ಹೊಂದುತ್ತದೆ.

ಬಾರ್ನಕಲ್ ಪ್ರಾಣಿ ಬಗ್ಗೆ ಪಾಶ್ಚಾತ್ಯ ದೇಶಗಳಲ್ಲಿ ದಂತಕಥೆಗಳು ಪ್ರಚಾರದಲ್ಲಿವೆ. ಜೀವವಿಕಾಸದ ಬಗೆಗೆ ವಿವರಣೆ ನೀಡುವಾಗ ಕೆಲವರು ಇವೇ ಹೇಗೆ ಬದಲಾಗಿ ಮುಂದೆ ಸಮುದ್ರದ ಬಾತುಕೋಳಿಯಾದುವೆಂದು ಕಥೆಯರೂಪದಲ್ಲಿ ಹೇಳುತ್ತಾರೆ. ಇವೆಲ್ಲ ಕಾಲ್ಪನಿಕ ಕಥೆಗಳು. ಬಾತುಕೋಳಿಗೂ ಬಾರ್ನಕಲ್ ಪ್ರ್ರಾಣಿಗಳಿಗೂ ಯಾವ ಸಂಬಂಧವೂ ಇಲ್ಲ.


ಸಾಕ್ಯುಲೈನ್[ಸಂಪಾದಿಸಿ]

ಅಲಕಪಾದಿಗಳ ವಿಭಾಗದಲ್ಲಿ ಆಶ್ಚರ್ಯಕರವಾದ ಪರತಂತ್ರ ಜೀವಿಗಳೂ ಇವೆ. ಇವುಗಳಿಗೂ ಬಾರ್ನಕಲ್ ಪ್ರಾಣಿಗಳಿಗೂ ಮತ್ತಿತರ ಸಂದಿಪದಿಗಳಿಗೂ ಬಾಹ್ಯವಾಗಿ ಯಾವ ರೀತಿಯಲ್ಲಿಯೂ ಹೋಲಿಕೆ ಇಲ್ಲ. ಕೆಲವು ಏಡಿಗಳಲ್ಲಿ ಅವುಗಳ ಉದರದ ತಳಭಾಗದಲ್ಲಿ ಒಂದು ರೀತಿಯ ಮಾಂಸದ ಮುದ್ದೆಯಂತಿರುವ ಮೃದುವಾದ ಗಡ್ಡೆಯನ್ನು ಕಾಣಬಹುದು. ಈ ಗಡ್ಡೆ ತನ್ನ ನೈಜರೂಪವನ್ನು ಸಂಪುರ್ಣವಾಗಿ ಕಳೆದುಕೊಂಡಿರುವ ಒಂದು ಅಲಕಪಾದಿ. ಇದೊಂದು ಪರತಂತ್ರ ಜೀವಿ. ಇದರ ಹೆಸರು ಸಾಕ್ಯುಲೈನ. ಗಡ್ಡೆಯಂತೆ ಕಾಣುವ ಈ ಜೀವಿ ಏಡಿಯ ಶರೀರಕ್ಕೆ ತನ್ನ ಒಂದು ಚಿಕ್ಕ ತೊಟ್ಟಿನಂತಿರುವ ರಚನೆಯಿಂದ ಅಂಟಿಕೊಂಡಿದೆ. ಸೂಕ್ಷ್ಮ ದಾರಗಳಂತಿರುವ ಬೇರುಗಳಂಥ ರಚನೆಗಳನ್ನು ಏಡಿಯ ಶರೀರದ ಎಲ್ಲ ಭಾಗಗಳಿಗೂ ಹರಡುತ್ತದೆ. ಈ ರೀತಿಯ ರಚನೆಗಳು ಏಡಿಯ ಕಾಲಿನ ತುದಿಯವರೆಗೂ ಹರಡಿರುವುದನ್ನು ಕಾಣಬಹುದು. ಬೇರುಗಳಂಥ ಈ ರಚನೆಗಳಿಂದ ಸಾಕ್ಯುಲೈನ ಜೀವಿ ಏಡಿಯ ಶರೀರದಿಂದ ತನಗೆ ಬೇಕಾದ ಆಹಾರ ಪದಾರ್ಥಗಳನ್ನು ಹೀರಿಕೊಳ್ಳುತ್ತದೆ. ಅದಕ್ಕೆ ಆಹಾರವನ್ನು ಅಗಿಯಲು ದವಡೆಗಳಿಲ್ಲ; ಜೀರ್ಣಿಸಿಕೊಳ್ಳಲು ಜೀರ್ಣಾಂಗಗಳಿಲ್ಲ; ಚಲನೆಗೆ ಕಾಲುಗಳಿಲ್ಲ; ವಿವರಿಸಲು ಸರಿಯಾದ ರೂಪವೇ ಇಲ್ಲ! ಈ ರೀತಿಯಲ್ಲಿರುವ ಸಂಪುರ್ಣ ಅಂಗವಿಕಾರವನ್ನು ಹೊಂದಿರುವ ಈ ಜೀವಿ ಪ್ರಾಪ್ತವಯಸ್ಸಿಗೆ ಬಂದಾಗ ಮೊಟ್ಟೆಯ ಚೀಲದಂತಿರುತ್ತದೆ. ಇದು ಪ್ರಾಯಕ್ಕೆ ಬಂದಾಗ ಕುರುಳುಪಾದಿಯೆನ್ನುವುದಕ್ಕಾಗಲಿ ಅಥವಾ ಸಂದಿಪದಿಯೆನ್ನುವುದಕ್ಕಾಗಲಿ ಯಾವ ಆಧಾರವೂ ಇಲ್ಲ. ಆದರೆ ಇದರ ಭ್ರೂಣ ಬೆಳೆವಣಿಗೆಯ ಅಧ್ಯಯನದಿಂದ ಇದು ಕುರುಳುಪಾದಿ ವಿಭಾಗಕ್ಕೆ ಸೇರಿದ್ದೆಂದು ಸ್ಥಿರಪಡಿಸಬಹುದು. ಇದರ ಮೊಟ್ಟೆಗಳಿಂದ ನಾಪ್ಲಿಯಸ್ ಲಾರ್ವಾ ಹೊರಬರುತ್ತದೆ. ಇದು ಮುಂದೆ ಸೈಪ್ರಿಸ್ ಲಾರ್ವಾ ಆಗಿ ಪರಿವರ್ತನೆಗೊಳ್ಳುತ್ತದೆ. ಸಾಕ್ಯುಲೈನ ಪ್ರಾಣಿಯಿಂದ ಹುಟ್ಟಿ ಬರುವ ಸೈಪ್ರಿಸ್ ಲಾರ್ವಾಗೂ ಇತರ ಬಾರ್ನಕಲ್ ಪ್ರಾಣಿಗಳ ಸೈಪ್ರಿಸ್ ಪ್ರಾಣಿಗಳಿಗೂ ವ್ಯತ್ಯಾಸವೇನಿಲ್ಲ. ಆದರೆ ಈ ಪ್ರಾಣಿಯ ಸೈಪ್ರಿಸ್ ಲಾರ್ವಾಕ್ಕೆ ಅನ್ನನಾಳ, ಬಾಯಿಗಳಿರುವುದಿಲ್ಲ. ಈ ಸೈಪ್ರಿಸ್ ಯಾವುದಾದರೊಂದು ಏಡಿಯ ಉದರಕ್ಕೆ ಅಂಟಿಕೊಂಡು ಬೆಳೆದು ದೊಡ್ಡದಾಗಿ ಸಾಕ್ಯುಲೈನ ಜೀವಿಯಾಗಿ ಪರಿವರ್ತನೆಗೊಳ್ಳುತ್ತದೆ. ಸಾಕ್ಯುಲೈನ ಪ್ರಾಣಿ ತನ್ನ ಆತಿಥೇಯ ಪ್ರಾಣಿಯಲ್ಲಿ ಲಿಂಗ ಪರಿವರ್ತನೆ ಮಾಡುವುದು ಕಂಡುಬಂದಿದೆ. ಈ ಪರತಂತ್ರ ಜೀವಿ ಗಂಡು ಏಡಿಗಳ ಆತಿಥೇಯದಲ್ಲಿ ಹೆಣ್ಣು ಏಡಿಗಳ ಬಾಹ್ಯ ಲಕ್ಷಣಗಳುಂಟಾಗುವಂತೆ ಮಾಡುತ್ತವೆ. ಹೆಣ್ಣು ಏಡಿಗಳ ಆತಿಥೇಯದಲ್ಲಿ ಅವುಗಳ ಅಂಡಾಶಯ ಕ್ಷೀಣಿಸುವಂತೆ ಮಾಡುತ್ತವೆ. ಲಿಂಗಪರಿವರ್ತನೆ ಮಾಡುವ ಈ ವಿಧಾನವನ್ನು ಪರತಂತ್ರ ನಿರ್ವೀರ್ಯಗೊಳಿಸುವಿಕೆ ಎನ್ನುತ್ತೇವೆ. ಕಠಿಣ-ಚರ್ಮಿಗಳು