ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಲರಿಪು

ವಿಕಿಸೋರ್ಸ್ದಿಂದ

ಭರತನಾಟ್ಯ ಮತ್ತು ಇತರ ನೃತ್ಯ ಪ್ರದರ್ಶನಗಳಲ್ಲಿ ದೇವಾಧಿದೇವತೆಗಳಿಗೆ ಪ್ರಾರ್ಥನಾರೂಪವಾಗಿ ಮಾಡುವ ಪ್ರಥಮ ನೃತ್ಯ. ಕೈಗಳನ್ನು ಅಂಜಲಿ ಬದ್ಧವಾಗಿ ಹಿಡಿದು ಕೊಂಡು ಸಮಪಾದವಾಗಿ ನಿಂತು ಇಡೀ ದೇಹವನ್ನು ಚಲನೆಯ ಮೂಲಕ ದೇವರಿಗೆ ಅರ್ಪಿಸತಕ್ಕದ್ದು. ಚಲನೆ ತಲೆಯಿಂದ ಮೊದಲ್ಗೊಂಡು ಕ್ರಮೇಣ ಕತ್ತು ಭುಜ ತೋಳುಗಳು ಸೊಂಟ ಮತ್ತು ಕಾಲುಗಳವರೆಗೆ ಅನುಕ್ರಮದಲ್ಲಿದ್ದು ದ್ವಿತೀಯ ತೃತೀಯ ಕಾಲಗಳಲ್ಲಿ ತಾಳಲಯಬದ್ಧವಾಗಿ ನರ್ತಿಸತಕ್ಕದ್ದು. ಇದನ್ನು ಕರ್ಣಾಟಕ ಸಂಗೀತಪದ್ಧತಿಯ ಚತುರಶ್ರ, ತ್ಯಶ್ರ, ಮಿಶ್ರ, ಖಂಡ, ಸಂಕೀರ್ಣ, ಎಂಬ ಐದು ಮೂಲಜಾತಿಗಳಲ್ಲಿ ನರ್ತಿಸ ಬಹುದು. ಆದರೆ ಸಾಮಾನ್ಯವಾಗಿ ನಾವು ತ್ಯಶ್ರ, ಮಿಶ್ರ, ಚತುರಶ್ರ, ಜಾತಿಗಳಲ್ಲಿ ಅಲರಿಪು ಪ್ರದರ್ಶನವನ್ನು ರಂಗಭೂಮಿಗಳ ಮೇಲೆ ಕಾಣುತ್ತೇವೆ. ಖಂಡ ಮತ್ತು ಸಂಕೀರ್ಣ ಜಾತಿಯ ಅಲರಿಪುಗಳು ಪ್ರದರ್ಶನಗಳು ಸ್ವಲ್ಪ ಅಪರೂಪ.

ಅಲರಿಪುವಿನಲ್ಲಿ ತಲೆಯ ಮೊದಲ ಚಲನೆಗಳು ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಮಹೇಶ್ವರರಿಗೆ ವಂದನೆಗಳು ಎಂದು ಕೆಲವರು ತಜ್ಞರು ಅಭಿಪ್ರಾಯ ಪಡುತ್ತಾರೆ. ಇನ್ನು ಕೆಲವರು ಅಲರಿಪು ಎಂದರೆ ಅರಳುವಿಕೆ. ಆತ್ಮ ಚಲನೆಯ ಮೂಲಕ ಅರಳಿ ದೈವಕ್ಕೆ ಅರ್ಪಿತವಾಗುವುದು ಎಂದು ಹೇಳುತ್ತಾರೆ. ಮತ್ತೂ ಕೆಲವರು ಅಲರಿಪುವನ್ನು ಗೋಪಿಕಾವಸ್ತ್ರಾ ಪರಣದ ತಿರುಳನ್ನೊಳಗೊಂಡು, ತಾನು, ತನ್ನದು ಎಂಬ ಅಹಂಭಾವವನ್ನು ತ್ಯಜಿಸಿ ದೇವರಿಗೆ ಶರಣಾಗಿ ಪ್ರಾರ್ಥಿಸುವ ನೃತ್ಯ ಎಂದು ಪರಿಗಣಿಸುತ್ತಾರೆ.