ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಲೆನ್ಬಿ ಎಡ್‌ಮಂಡ್‌ ಹೆನ್ರಿ ಹೈನ್‌ಮನ್‌

ವಿಕಿಸೋರ್ಸ್ದಿಂದ

1861-1936. ಪ್ರಸಿದ್ಧ ಬ್ರಿಟಿಷ್ ಯೋಧ. 19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟನ್ನಿಗೂ ದಕ್ಷಿಣ ಆಫ್ರಿಕ, ಈಜಿಪ್ಟ್, ತುರ್ಕಿಸ್ಥಾನ ಮೊದಲಾದ ರಾಜ್ಯಗಳಿಗೂ ನಡೆದ ಯುದ್ಧಗಳಲ್ಲಿ ಬ್ರಿಟಿಷ್ ಅಶ್ವಪಡೆಯ ಮುಖಂಡನಾಗಿ ಪ್ಯಾಲೆಸ್ಟೈನಿನಲ್ಲಿ ಯುದ್ಧಮಾಡಿದ. ಮೆಡಿಟರೇನಿಯನ್ ಸಮುದ್ರದ ಮೇಲಿನ ಬ್ರಿಟನ್ನಿನ ಹತೋಟಿಯನ್ನೂ ಜೆರುಸಲೆಮ್ಮಿನ ರಕ್ಷಣಾಕಾರ್ಯವನ್ನೂ ಯಶಸ್ವಿಗೊಳಿಸಿ ಡಮಾಸ್ಕಸ್ ಮತ್ತು ಅಲೆಪ್ಪೊಗಳನ್ನು ಸ್ವಾಧೀನಪಡಿಸಿಕೊಂಡು, ತುರ್ಕಿ ಸೈನ್ಯವನ್ನು ಚದರಿಸಿ ಮಹತ್ಕಾರ್ಯ ಸಾಧಿಸಿದ್ದುದರಿಂದ ವೈಕೌಂಟ್ ಪದವಿಯನ್ನು ಗಳಿಸಿದ. 1919ರಿಂದ 1925ರವರೆಗೆ ಈಜಿಪ್ಟಿನ ಹೈಕಮಿಷನರಾಗಿ ಪಕ್ಷಪಾತವಿಲ್ಲದೆ ಸಹಾನುಭೂತಿಯಿಂದ ಕಾರ್ಯಭಾರಮಾಡಿ ಬ್ರಿಟಿಷ್ ಸೈನಿಕ ಇತಿಹಾಸದಲ್ಲಿ ಗಣ್ಯಸ್ಥಾನ ಪಡೆದಿದ್ದಾನೆ.