ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಲ್ಬುಮೆನ್

ವಿಕಿಸೋರ್ಸ್ದಿಂದ

ಕೋಳಿಮೊಟ್ಟೆಯೊಳಗಿರುವ ಬಿಳಿಯ ಭಾಗ. ಹರಳೆಣ್ಣೆಯಂತೆ ದ್ರವವೂ ಅಲ್ಲದ, ಘನವೂ ಅಲ್ಲದ ಸ್ಥಿತಿಯಲ್ಲಿರುವ ಈ ವಸ್ತುವನ್ನು ಕುದಿಯುವ ನೀರಿನಲ್ಲಿ ಸ್ವಲ್ಪಕಾಲ ಕಾಯಿಸಿದರೆ ಬಿಳುಪಾದ ಘನರೂಪಕ್ಕೆ ಬರುತ್ತದೆ. ಇದನ್ನು ಸಾಮಾನ್ಯವಾಗಿ ಮೊಟ್ಟೆಯೊಳಗಿನ ಬಿಳಿ ಎನ್ನುತ್ತಾರೆ. ಗರ್ಭ ಧರಿಸಿದ ಮೊಟ್ಟೆ ಅಂಡಾಶಯದಿಂದ ಹೊರಹೊರಟ ಅನಂತರ ಅಂಡಾಶಯ ನಾಳದಲ್ಲಿ ಉರುಳುತ್ತ ಬರುವ ಈ ಮೊಟ್ಟೆಯ ಸುತ್ತಲೂ ಆ್ಯಲ್ಬುಮಿನ್ ಶೇಖರಗೊಳ್ಳತೊಡಗುತ್ತದೆ. ಅಂಡಾಶಯ ನಾಳದ ಗೋಡೆ ಈ ರಸವನ್ನು ಉತ್ಪಾದಿಸುತ್ತದೆ. ಮೊಟ್ಟೆಯೊಳಗೆ ಬೆಳೆಯುವ ಭವಿಷ್ಯಜೀವಿಗೆ ಇದು ಉತ್ತಮ ಆಹಾರ. ರಾಸಾಯನಿಕವಾಗಿ ಇದೊಂದು ಪ್ರೋಟೀನು (ಸಸಾರಜನಕಾದಿವಸ್ತು). ಇದರಲ್ಲಿ ಓವಾಲ್ಬುಮಿನ್, ಎನಾಲ್ಬುಮಿನ್, ಓವೋಮ್ಯೂಕಾಯ್ಡ್‌ ಮತ್ತು ಓವೊಮ್ಯೂಸಿನ್ ಎಂಬ ನಾಲ್ಕು ಬಗೆಯ ಪ್ರೋಟೀನುಗಳಿವೆ. ಅಲ್ಬುಮಿನ್ನಲ್ಲಿ ಓವಾಲ್ಬುಮಿನ್ ಶೇ.77 ಭಾಗವೂ ಎನಾಲ್ಬುಮೆನ್ ಶೇ.3 ಭಾಗವೂ ಓವೊಮ್ಯುಕಾಯ್ಡ್‌ ಶೇ.13 ಭಾಗವೂ ಓವೊಮ್ಯೂಸಿನ್ ಶೇ.7 ಭಾಗವು ಓವೊಗ್ಲೊಬುಲಿನ್ ಅತ್ಯಲ್ಪ ಭಾಗವೂ ಇರುತ್ತವೆ. ಮೇಲಿನ ವಸ್ತುಗಳ ಮಿಶ್ರಣದಿಂದಾಗಿ ಈ ‘ಬಿಳಿ’ ಲೋಳೆಯಾಗಿರುತ್ತದೆ.