ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಲ್ಲಮಂಡ

ವಿಕಿಸೋರ್ಸ್ದಿಂದ

ಅಪೊಸೈನೇಸೀ ಕುಟುಂಬಕ್ಕೆ ಸೇರಿದ ಅಲಂಕಾರ ಸಸ್ಯಜಾತಿ. ಇದು ಬಹುವಾರ್ಷಿಕ ಪೊದೆಸಸ್ಯವಾಗಿರುವುದರಿಂದ ತೋಟಗಾರಿಕೆಯಲ್ಲಿ ಉಪಯುಕ್ತವೆನಿ ಸಿದೆ. ಬಳ್ಳಿಯಾಗಿಯೂ ಬೆಳೆಯುವುದುಂಟು. ವರ್ಷವಿಡೀ ಗಂಟೆಯಾಕಾರದ ಸುಂದರ ಹಳದಿ ಹೂ ಬಿಡುತ್ತದೆ. ಅಲ್ಲಮಂಡ ಸಸ್ಯಗಳ ಕಾಂಡ ಆಕಾರದಲ್ಲಿ ಗುಂಡು. ಎಳೆಯ ಬಳ್ಳಿಯ ಬಣ್ಣ ಹಸಿರು. ಬಲಿತ ಮೇಲೆ ಬೂದಿ ಬಣ್ಣ ತಳೆಯುತ್ತದೆ. ಅಲ್ಲಮಂಡದ ವಿವಿಧ ಪ್ರಭೇದಗಳನ್ನು ಅನುಸರಿಸಿ ಎಲೆಗಳು ಆಕಾರಗಳು ವಿಧವಿಧವಾಗಿರುತ್ತವೆ. ಗಿಣ್ಣಿನಲ್ಲಿ ಎಲೆಗಳು ವೃತ್ತಾಕಾರದಲ್ಲಿ ಜೋಡಣೆಗೊಂಡಿರುತ್ತವೆ. ಕೆಲವು ಸಸ್ಯಗಳಲ್ಲಿ ಎಲೆಗಳು ಅಭಿಮುಖವಾಗಿ ಜೋಡಣೆಯಾಗಿರುತ್ತವೆ. ಎಲೆಗಳ ಅಂಚು ನಯ. ಹೂಗಳು ಸಾಮಾನ್ಯವಾಗಿ ದ್ವಿತೀಯ ಹಂಬುಗಳ (ಸೈಡ್ ಷಾಟ್ಸ್‌) ತುದಿಯಲ್ಲಿರುತ್ತವೆ. ಮೊಗ್ಗು ಕಳಸದಾಕಾರ.


ಅಲ್ಲಮಂಡದ ಕೆಲವು ಪ್ರಭೇದಗಳು :

1. ಅಲ್ಲಮಂಡ ನಿರಿಫೋಲಿಯ-ತವರೂರು ದಕ್ಷಿಣ ಅಮೆರಿಕ ಖಂಡದ ಬ್ರೆಜಿಲ್.

2. ಅಲ್ಲಮಂಡ ನೊಬಿಲಿಸ್ ಅತ್ಯುತ್ತಮ ಪ್ರಭೇದ ಎಂದು ಪರಿಗಣಿಸಲಾಗಿದೆ.

3. ಅಲ್ಲಮಂಡ ಗ್ರಾಂಡಿಫ್ಲೋರ-ತವರೂರು ಬ್ರೆಜಿಲ್.

4. ಅಲ್ಲಮಂಡ ಕ್ಯಾಥರ್ಟಿಕ.

ಕನ್ನಡದಲ್ಲಿ ಅಲ್ಲಮಂಡದ ಹೆಸರು ಅರಸಿನ್ಹು. ಈ ಜಾತಿ ಪೊದರಾಗಿಯೊ ಅಥವಾ ಸಣ್ಣ ಮರವಾಗಿಯೊ ಬೆಳೆಯುತ್ತದೆ. ಮೂರು ನಾಲ್ಕು ಗಿಣ್ಣುಗಳಿರುವಂತೆ ಕೊಂಬೆಗಳನ್ನು ಕತ್ತರಿಸಿ ಮೊದಲು ಕುಂಡಗಳಲ್ಲಿ ನೆಟ್ಟು ಬೆಳೆಸುತ್ತಾರೆ. ಇದರ ತೊಗಟೆ ಜಲೋದರ ಬೇನೆಯಲ್ಲಿ ಉಪಯುಕ್ತವೆನಿಸಿದೆ. ಮುಂಡ ಜನಾಂಗದವರು ಹಾವು ಕಚ್ಚಿದಾಗ ಬೇರನ್ನು ಔಷಧಿಯಾಗಿ ಬಳಸುತ್ತಾರೆ.