ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅವಿರುದ್ಧಸ್ತ್ರೀ

ವಿಕಿಸೋರ್ಸ್ದಿಂದ

ಹಿಂದು ಧರ್ಮಶಾಸ್ತ್ರದ ಪ್ರಕಾರ, ಪತಿ ಇದ್ದರೂ ಬೇರೊಬ್ಬ ಪುರುಷನಲ್ಲಿ ಅನುರಕ್ತಳಾಗಿ ಅವನೊಬ್ಬನಲ್ಲಿಯೇ ವ್ಯವಹರಿಸುವವಳು. ವೇಶ್ಯೆಯೊಬ್ಬಳು ಒಬ್ಬನೇ ಪುರುಷನೊಂದಿಗೆ ವ್ಯವಹರಿಸುತ್ತಿದ್ದಾಗಲೂ ಆಕೆಗೆ ಈ ಹೆಸರು ಸಲ್ಲುತ್ತದೆ. ವ್ಯವಹಾರವೆಂದ ಮಾತ್ರಕ್ಕೆ ಆಕೆ ಆತನ ಮನೆಯಲ್ಲಿಯೇ ಬಂದು ಇರಬೇಕೆಂಬ ನಿಯಮವಿಲ್ಲ. ಇಂಥ ಸ್ತ್ರೀಗೆ ಕೆಲವು ಹಕ್ಕು ಬಾಧ್ಯತೆಗಳಿವೆ. ಅವಿರುದ್ಧಸ್ತ್ರೀಗೆ ತಾನೊಲಿದ ಪುರುಷನ ಪಿತ್ರಾರ್ಜಿತ ಸ್ವತ್ತಿನಲ್ಲಿ ಜೀವನಾಂಶಕ್ಕೆ ಯಾವ ವಿಧವಾದ ಹಕ್ಕೂ ಇಲ್ಲ. ಅಲ್ಲದೆ ಅವನ ಜೀವಿತಕಾಲದಲ್ಲಿ ಅವನ ಸ್ವತ್ತಿನಿಂದ ಯಾವ ವಿಧವಾದ ಪರಿಹಾರವೂ ಆಕೆಗೆ ಸಿಗದು. ಒಂದು ವೇಳೆ ಆತ ಸಾಯುವವರೆಗೂ ಆಕೆ ಅವನ ಸಹವಾಸದಲ್ಲೇ ಇದ್ದರೆ ಅವನ ಸ್ವಯಾರ್ಜಿತ ಆಸ್ತಿಯಲ್ಲಿ ಜೀವನಾಂಶ ದೊರೆಯುವುದು. ಇಂಥ ಸ್ತ್ರೀಯಲ್ಲಿ ಹುಟ್ಟುವ ಮಕ್ಕಳಿಗೆ ಯಾವ ಪರಿಹಾರವೂ ಇಲ್ಲ. ಆದರೆ ಆಕೆಯ ಸ್ವಯಾರ್ಜಿತ ಆಸ್ತಿಗೆ ಆ ಮಕ್ಕಳು ವಾರಸುದಾರರು.

ಜೀವನಾಂಶ ಪರಿಹಾರ 1956ರವರೆಗೂ ದೊರೆಯುತ್ತಿದ್ದು ಹಿಂದೂ ಅಡಾಪ್ಷನ್ ಆ್ಯಂಡ್ ಮೇಂಟೆನೆನ್ಸ್‌ ಆಕ್ಟ್‌ನ ಪ್ರಕಾರ ನಿಂತುಹೋಯಿತು.