ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಶ್ವತ್ಥನಾರಾಯಣರಾವ್

ವಿಕಿಸೋರ್ಸ್ದಿಂದ

1899-1992. ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಪತ್ರಿಕೋದ್ಯಮಿ, ಮಕ್ಕಳ ಜ್ಞಾನಾಭಿವೃದ್ಧಿಗಾಗಿ ಶ್ರಮಿಸಿದ ಶಿಕ್ಷಣ ತಜ್ಞ. ಆಂಧ್ರದ ಮದನಪಲ್ಲಿ ಸಮೀಪದ ಕಾಟೇಪೇರಿ ಎಂಬ ಹಳ್ಳಿಯಲ್ಲಿ 1899 ನವೆಂಬರ್ 7 ರಂದು ಜನಿಸಿದರು. ತಂದೆ ಕೃಷ್ಣರಾಯರು, ತಾಯಿ ನರಸಮ್ಮ. ಇವರದು ಆರ್ಥಿಕವಾಗಿ ಹಿಂದುಳಿದ ಕುಟುಂಬ. ತಂದೆಯ ಅಕಾಲಿಕ ಮರಣ, ಸೋದರಮಾವನ ಆಶ್ರಯಗಳಿಂದಾಗಿ ತನ್ನನ್ನು ಓದಿಸದೆ, ಕೆಲಸಕ್ಕೆ ಸೇರಿಸುವರೆಂಬ ಸುಳಿವು ಸಿಕ್ಕ ತಕ್ಷಣ ತಿರುಪತಿಗೆ ಓಡಿಹೋಗಿ ಸಣ್ಣಪುಟ್ಟ ಕೆಲಸಮಾಡಿಕೊಂಡು ಅಲ್ಲಿಯೇ ಹೈಸ್ಕೂಲ್ ಮುಗಿಸಿ ಮದನಪಲ್ಲಿಗೆ ಪುನರಾಗಮಿಸಿದರು. ಆ್ಯನಿಬೆಸೆಂಟ್ ಸ್ಥಾಪಿಸಿದ ಎಸ್.ಪಿ.ಎನ್.ಇ ಸಂಸ್ಥೆ ನಡೆಸುತ್ತಿದ್ದ ಇಂಟರ್ಮೀಡಿಯೆಟ್ ಕಾಲೇಜ್. ಆರ್ಥಿಕ ಅಡಚಣೆ ನಿವಾರಿಸಲು ಪ್ರೈಮರಿ, ಮಿಡ್ಲ್‌, ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಮನೆಪಾಠ ಮಾಡುತ್ತಿದರು. ಬೆಸೆಂಟ್ ಕಾಲೇಜ್‌ನಲ್ಲಿ ಭಾರತದ ಸ್ಕೌಟ್ಸ್‌ ಮೊದಲ ತಂಡ ಆರಂಭವಾದಾಗ ಅಶ್ವತ್ಥನಾರಾಯಣ ಮತ್ತು ಗೆಳೆಯರು ಮೊದಲ ಸೇರಿದ್ದ ಸ್ಕೌಟ್ಸ್ ತಂಡದಿಂದ ಗ್ರಾಮಗಳಲ್ಲಿ ಸಮಾಜಸೇವೆ, ವಯಸ್ಕ ಶಿಕ್ಷಣ ಮತ್ತು ರಚನಾತ್ಮಕ ಕಾರ್ಯಗಳು ನಡೆದವು. ತನ್ಮೂಲಕ ಸಮಾಜಸೇವಾರಂಗಕ್ಕೆ ಇವರು ಪದಾರ್ಪಣೆ ಮಾಡಿದರು. ಮದನಪಲ್ಲಿ ಶಾಲೆಗೆ ಭೇಟಿನೀಡಿದ್ದ ಬೆಸೆಂಟ್‌ರ ಕೃಪಾದೃಷ್ಟಿ ಯುವಕ ಅಶ್ವತ್ಥನಾರಾಯಣರ ಮೇಲೆ ಬಿತ್ತು. ವಿದ್ಯಾಕಾಂಕ್ಷಿ ಯುವಕನಿಗೆ ಶಿಕ್ಷಣದ ಸಂಪುರ್ಣ ವ್ಯವಸ್ಥೆಯನ್ನೂ ಶಿಕ್ಷಣ ಸಂಸ್ಥೆಯನ್ನೇ ಮಾಡಬೇಕೆಂಬ ಆದೇಶವನ್ನು ನೀಡಿದರು. ಈ ಆದೇಶ ಅಶ್ವತ್ಥನಾರಾಯಣನ ಜ್ಞಾನದಾಹಕ್ಕೆ ತಂಪೆರೆದ ಸಂಜೀವಿನಿಯಾಯಿತು. ಮದನಪಲ್ಲಿಯಲ್ಲಿ ಇಂಟರ್ ಮುಗಿಸಿ, ಆನಿಬೆಸೆಂಟರ ಮದರಾಸಿನ ಅಡೆಯಾರ್ ಕಾಲೇಜಿನಲ್ಲಿ ಪಧವೀಧರರಾಗಿ ಪತ್ರಿಕೋದ್ಯಮದಲ್ಲಿ ಆಂಗ್ಲ ಸಾಹಿತ್ಯವನ್ನು ಪ್ರಧಾನವಿಷಯವಾಗಿ ಅಭ್ಯಾಸ ಮಾಡಿದರು. ಕಾಲೇಜಿನ ದಿನಗಳಲ್ಲಿ ಇವರಿಗೆ ಹೆಸರಾಂತ ಕವಿ, ದಾರ್ಶನಿಕ, ಕಲಾವಿಮರ್ಶಕರಾದ ಕಸಿನ್ಸ್‌ ಅವರ ಸಾಹಚರ್ಯ, ಮಾರ್ಗದರ್ಶನ ಲಭಿಸಿ ಭಾರತೀಯ ಕಲೆ, ಸಂಸ್ಕೃತಿ, ಪರಂಪರೆಗಳ ಅನಾವರಣ ಮಾಡಿದರು.


ಕಸಿನ್ಸ್‌ ಅವರ ಶಿಫಾರಸಿನ ಮೇಲೆ ಗಣೇಶನ್ ಕಂಪನಿ ಪ್ರಕಾಶನ ಸಂಸ್ಥೆಯಲ್ಲಿ ಪುಸ್ತಕ ಮಾರಾಟ ಪ್ರತಿನಿಧಿಯ ಕೆಲಸ ಪ್ರಾಪ್ತವಾಯಿತು. ಭಾರತೀಯ ಧರ್ಮ, ಕಲೆ, ಸಂಸ್ಕೃತಿ ಮತ್ತು ರಾಜಕೀಯ ವಿಚಾರಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಹೆಚ್ಚಾಗಿ ಮಾರಾಟ ಮಾಡುತ್ತಿದ್ದರು. ರಾಜಕೀಯ ಸಭೆ ಸಮಾರಂಭಗಳಲ್ಲಿ ಚುರುಕಿನ ಪ್ರಚಾರದಿಂದ ತೃಪ್ತಿಕರ ಫಲಿತಾಂಶ. ಧಾರಾಳವಾದ ಕಮೀಷನ್. ಮೈಸೂರಿಗೆ ಪ್ರಯಾಣಿಸಿ. ಗಣೇಶನ್ ಕಂಪೆನಿಯಲ್ಲಿ ಸಹ ಮಾರಾಟ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ ಅಗರಂ ರಂಗಯ್ಯನವರ ಮನೆಯಲ್ಲೇ ಆಶ್ರಯ ಪಡೆದರು. ಮಾರಾಟ ಕಲೆಯನ್ನು ಕರಗತ ಮಾಡಿಕೊಂಡಿದ್ದ ಅಶ್ವತ್ಥನಾರಾಯಣರಾಯರಿಗೆ ಮೈಸೂರಿನಲ್ಲೂ ಯಶಸ್ಸು. ಮೂರುಸಾವಿರದವರೆಗೆ ಕಮೀಷನ್ ದೊರೆಯುತ್ತಿದ್ದರಿಂದ ಸಂಬಳವನ್ನು ನಿರಾಕರಿಸಿದರು.


ಆ ಕಾಲದ ಯುವಜನರಿಗೆ ಇದ್ದಂತೆ, ಅಶ್ವತ್ಥನಾರಾಯಣರಾಯರಿಗೂ ದೇಶದ ಬಗೆಗೆ ಅಪಾರ ಅಭಿಮಾನ. ಆದರ್ಶಗಳ ಬಗೆಗೆ ಮಾತನಾಡದೆ, ಸಾಧನೆ ಮಾಡಿ ತೋರಿಸ ಬೇಕೆಂಬ ಹಂಬಲವೂ ಪ್ರಬಲವಾಗಿತ್ತು. ಪ್ರತಿಫಲಾಪೇಕ್ಷೆಯಿಲ್ಲದೆ ಸೇವೆ ಮಾಡಬೇಕೆಂಬ ಇವರ ಮನೋಭಾವ, ಬೆಸೆಂಟ್ ಮತ್ತು ಕಸಿನ್ಸ್‌ ಅವರ ಸಂಪರ್ಕದಿಂದ ಬೆಳೆದುಬಂದದ್ದು.


ಈ ಮಧ್ಯೆ 1921-22ರಲ್ಲಿ ಅಶ್ವತ್ಥನಾರಾಯಣರಾಯರಿಗೆ ಬೆಂಗಳೂರಿಗೆ ವರ್ಗಾವಣೆ ಯಾಗಿತ್ತು. ಆತ್ಮತೃಪ್ತಿಯ ಕೆಲಸ ಮಾಡಬೇಕೆಂದು ಹಂಬಲ ಜಾಗೃತವಾಯಿತು. ತಮ್ಮದೇ ಆದ ಪುಸ್ತಕ ಪ್ರಕಾಶನ ಸಂಸ್ಥೆ ಆರಂಭಿಸಲು ನಿರ್ಧರಿಸಿದರು. ಗುರಿ ಮಕ್ಕಳ ಮನೋವಿಕಾಸಕ್ಕೆ ‘ಮಕ್ಕಳ ಪುಸ್ತಕ’; ವಿಶ್ವಕೋಶದ ಮಾದರಿ. 1926-27ರಲ್ಲಿ 50 ಪುಟಗಳ ಕ್ರೌನ್ ಅಷ್ಟದಳ ಆಕಾರದ 50 ಪುಟಗಳ ಪುಸ್ತಕ ಸಿದ್ಧವಾಯಿತು. ಇದಕ್ಕೆ ಎಸ್.ಗರಳಪುರಿ ಶಾಸ್ತ್ರೀ, ಡಿ.ವಿ.ಜಿ, ರಾಜರತ್ನಂ ಮೊದಲಾದ ವಿದ್ವಾಂಸರ ಮಾರ್ಗದರ್ಶನ ಪಡೆದರು.


ರಾಜ್ಯ ಕೈಗಾರಿಕಾ ಇಲಾಖೆ ನಿರ್ದೇಶಕರೂ ಸಾಹಿತಿಗಳೂ ಆದ ಎಸ್.ಜಿ.ಶಾಸ್ತ್ರಿಗಳು ಮಕ್ಕಳ ಪುಸ್ತಕದ ಮೊದಲ ಸಂಚಿಕೆ ನೋಡಿ ನೀನು ಎರಡನೆ ಸಂಚಿಕೆ ಹೊರತರದಿದ್ದರೂ ಪರವಾಗಿಲ್ಲ. ಇದೊಂದೇ ಸಾಕು ನಿನ್ನ ಹೆಸರನ್ನು ಶಾಶ್ವತವಾಗಿ ಉಳಿಸಲು ಎಂದು ಹೇಳಿದ್ದು ಆ ಪ್ರಕಟಣೆಗೆ ಬಂದ ಸಾರ್ವಜನಿಕ ಪ್ರತಿಕ್ರಿಯೆಗಳಿಗೆ ಪ್ರಾತಿನಿಧಿಕವಾಗಿತ್ತು.


ಮುಂದೆ ಮಕ್ಕಳ ಪುಸ್ತಕ ಮೂರು ರೂಪದಲ್ಲಿ ಅವತರಿಸಿತು. ಪ್ರಾಥಮಿಕ ಹಂತದ ಮಕ್ಕಳಿಗೆ, ಸೆಕೆಂಡರಿ ಹಂತದ ವಿದ್ಯಾರ್ಥಿಗಳಿಗೆ, ಮತ್ತು ಹಿರಿಯರಿಗೆ ಹೀಗೆ ಮೂರು ಮುದ್ರಣ 3, 5, 10 ರೂಪಾಯಿಗಳು. ಪ್ರಸಾರ 50,000 ಮುಟ್ಟಿತು. ಮನೆಮನೆಗೆ ಹೋಗಿ ಪ್ರಚಾರಮಾಡಿ ಚಂದಾಸಂಗ್ರಹಿಸುತ್ತಿದ್ದುದು, ಬರೆವಣಿಗೆ ಅಕ್ಷರ ಜೋಡಣೆ, ಮುದ್ರಣ ಮತ್ತು ಬೀದಿಯಲ್ಲಿ ನಿಂತು ಮಾರಾಟ ಎಲ್ಲ ಅಶ್ವತ್ಥನಾರಾಯಣರದೇ.


ವಿದ್ಯಾರ್ಥಿದೆಸೆಯಿಂದಲೇ ಬೆಳೆದ ರಾಷ್ಟ್ರೀಯಭಾವನೆ ದೇಶಾಭಿಮಾನ, ಸ್ವಾತಂತ್ರ್ಯಾ ಕಾಂಕ್ಷೆಯ ಪರಿಣಾಮವಾಗಿ ‘ನವಜೀವನ’ 1927ರಿಂದ ವಾರದ ಪತ್ರಿಕೆಯಾಗಿ ಪ್ರಾರಂಭವಾಗಿ 1928ರಿಂದ ದಿನಪತ್ರಿಕೆಯಾಗಿ ಪ್ರಕಟಣೆಗೊಂಡಿತು. ವೀರಕೇಸರಿ ಸೀತಾರಾಮಶಾಸ್ತ್ರಿಗಳು ದುಡ್ಡಿನ ಅಡಚಣೆಯಿಂದ ಪತ್ರಿಕೆ ನಿಲ್ಲಿಸಿದ್ದರು. ಇಬ್ಬರೂ ಕಟ್ಟಾ ದೇಶಪ್ರೇಮಿಗಳು. ವಿದುರಾಶ್ವತ್ಥ, ಗಣೇಶನ ಗಲಾಟೆ ಮೊದಲಾದ ಪ್ರಸಂಗಗಳು ಸೇರಿದಂತೆ ದಿವಾನರ ಜನವಿರೋಧಿ ಮನೋಭಾವ ನಡವಳಿಕೆಯನ್ನೂ ಖಂಡಿಸುವ, ತಕ್ಷಣವೇ ಜವಾಬ್ದಾರಿ ಸರಕಾರ ರಚಿಸಬೇಕೆಂಬ ಆಗ್ರಹ ಪಡಿಸುವ ಲೇಖನಗಳು ಪ್ರಕಟವಾದವು. ರಾಜದ್ರೋಹದ ಆಪಾದನೆ ಮೇಲೆ ಮೊಕದ್ದಮೆ ಹೂಡಿ, 2 ವರ್ಷ ಜೈಲು ಶಿಕ್ಷೆ ವಿಧಿಸಲಾಯಿತು. ಇದು ಮೊದಲ ರಾಜಕೀಯ ದಾವೆ. ಮುದ್ರಣಾಲಯ ಮುಚ್ಚಿತು. ಅಶ್ವತ್ಥನಾರಾಯಣರಾಯರು ಮತ್ತು ವೀರಕೇಸರಿ ಜೈಲುಸೇರಿದರು. ಈ ಗಲಾಟೆಯ ಫಲವಾಗಿ, ಜವಾಬ್ದಾರಿ ಸರ್ಕಾರದ ಬೇಡಿಕೆಗೆ ಒತ್ತಾಯ ಎಲ್ಲಕಡೆಯಿಂದ ಬರಲಾರಂಭಿಸಿತು. 1926ರಲ್ಲಿ ವಿಶ್ವೇಶ್ವರಯ್ಯ ಅವರ ನೇತೃತ್ವದಲ್ಲಿ ಸಮಿತಿ ಸ್ಥಾಪನೆಗೆ ಚಾಲನೆ ದೊರೆಯಿತು.


`ನವಜೀವನ', ಸರ್ಕಾರದ ಎಲ್ಲ ಬಗೆಯ ಕಿರುಕುಳ ಸಹಿಸಿಕೊಂಡು ಮುನ್ನಡೆಯಿತು. ಪತ್ರಿಕೆ ದಿನಕ್ಕೆ ಎರಡು ಬಾರಿ 11 ಗಂಟೆಗೆ ಮೊದಲ ಸಂಚಿಕೆ. ಸಂಜೆ ಇನ್ನೊಂದು, ಹೀಗೆ ಆರ್ಥಿಕ ಅಡಚಣೆಯೊಡನೆ ಪ್ರಕಟವಾಗುತ್ತಾ ಬೆಳ್ಳಿಹಬ್ಬವನ್ನು ಆಚರಿಸಿಕೊಂಡದ್ದು ಅದರ ಹಿರಿಮೆಯಾಯಿತು. 1942ರ ಚಳವಳಿಯಲ್ಲಿ ಭಾಗವಹಿಸಿ ಅಶ್ವತ್ಥನಾರಾಯಣರು ಸೆರೆಮನೆಗೆ ಹೋದರು. ದೇಶಸೇವೆಯ ಹಂಬಲದ ಈ ವ್ಯಕ್ತಿ, ಬ್ರಿಟಿಷರನ್ನು ಹೊರದಬ್ಬಲು ಕ್ರಾಂತಿಕಾರಿ ಚಟುವಟಿಕೆಗಳಲ್ಲೂ ಭಾಗಿಯಾಗಿದ್ದರು. ಅಶ್ವತ್ಥನಾರಾಯಣರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿ, ರಾಜಕೀಯವಾಗಿ ಮುಂದೆ ಬಂದವರು ಅನೇಕರು. ಅಶ್ವತ್ಥನಾರಾಯಣರನ್ನು ಕಾಂಗ್ರೆಸಿಗರು ರಾಜಕೀಯ ಗುರು ಎಂದರು.


1947ರಲ್ಲಿ ಆರಂಭಿಸಿದ ಬಾಲಮಂದಿರಕ್ಕೆ ಬೆಸೆಂಟ್ರ ಪ್ರಭಾವವೂ ಕಾರಣವಾಗಿತ್ತು. ಸರ್ಕಾರದಿಂದ ಸಹಾಯಧನ ಪಡೆಯದೆ ಶಾಲೆ ನಡೆಸಿದರು. ಅದನ್ನು ಮಕ್ಕಳ ಶಿಕ್ಷಣದ ಪ್ರಯೋಗಶಾಲೆಯನ್ನಾಗಿ ಆದರ್ಶಶಾಲೆಯನ್ನಾಗಿ ಮಾಡಿದರು. ಅದು ಇಂದಿಗೂ ನಡೆಯುತ್ತಿದೆ.


ನವಜೀವನ, ಮಕ್ಕಳ ಪುಸ್ತಕದ ಜೊತೆಗೆ ಕಾನೂನು ಪುಸ್ತಕಗಳನ್ನೂ ಮಾರಾಟ ಮಾಡುತ್ತಿದ್ದದು, ಈಗ ಮಕ್ಕಳ ಪುಸ್ತಕ ಪಬ್ಲಿಕೇಷನ್ಸ್‌-ಎಂ.ಪಿ.ಪಿ ಎಂಬ ಹೆಸರಿನಲ್ಲಿ ಕಾರ್ಯನಿರತವಾಗಿದೆ.


ಖಾದಿ ಧಾರಿ, ಶಿಸ್ತಿನ ವ್ಯಕ್ತಿ, ಕನಸುನನಸುಗಳೆರಡರಲ್ಲಿಯೂ ದೇಶದ ಬಗೆಗೆ ಚಿಂತನೆಹೊತ್ತ ವ್ಯಕ್ತಿಯಾಗಿದ್ದ ಅಶ್ವತ್ಥನಾರಾಯಣರಾಯರು 1992 ಮೇ 10 ರಂದು ನಿಧನರಾದರು.