ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಹಲ್ಯಾಬಾಯಿ ಹೋಳ್ಕರ್

ವಿಕಿಸೋರ್ಸ್ದಿಂದ

ಅಹಲ್ಯಾಬಾಯಿ ಹೋಳ್ಕರ್ ಆಧುನಿಕ ಭಾರತದ ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧ ಸ್ತ್ರೀಯರಲ್ಲಿ ಒಬ್ಬಳು. ಹೋಳ್ಕರ್‍ವಂಶದ ಮುಲ್ಲಾರ್ ರಾವ್ ಹೋಳ್ಕರನ ಮಗ ಖಂಡೇರಾಯನ ಪತ್ನಿ. ಗಂಡ 1754ರಲ್ಲಿ ಕುಂಭೇರ್ ಮುತ್ತಿಗೆಯಲ್ಲಿ ಸತ್ತಾಗ ಈಕೆಯೇ ರಾಜ್ಯಸೂತ್ರಗಳನ್ನು ವಹಿಸಿದಳು (1754-1795). 1767ರಲ್ಲಿ ರಘೋಬ ಐಶ್ವರ್ಯವನ್ನೂ ರಾಜ್ಯವನ್ನೂ ಅಪಹರಿಸಲು ಯತ್ನಿಸಿದಾಗ ಧೃತಿಗೆಡದೆ ಅವನನ್ನು ಎದುರಿಸಿದಳು. ರಘೋಬ ನಾಚಿಕೆಯಿಂದ ಹಿಂದಿರುಗಿದ. ಒಟ್ಟು ಮೂವತ್ತು ವರ್ಷಗಳ ಕಾಲ ರಾಜ್ಯವನ್ನು ಆದರ್ಶ ರೀತಿಯಲ್ಲಿ ಆಳಿದಳು. ಅತ್ಯಂತ ದಕ್ಷತೆಯಿಂದ ಒಳಾಡಳಿತ ಸರ್ಕಾರವನ್ನು ಸ್ಥಾಪಿಸಿ ಶಾಂತಿಯನ್ನು ನೆಲೆಗೊಳಿಸಿದಳು. ಪ್ರಜೆಗಳ ಸೌಖ್ಯಸಾಧನೆಯೇ ಈಕೆಯ ಮುಖ್ಯ ಧ್ಯೇಯವಾಗಿತ್ತು. ಮಾಳವಪ್ರಾಂತ್ಯದಲ್ಲಿ ಎಂದೂ ಕಾಣದಂಥ ಸುಖೀರಾಜ್ಯ ಸ್ಥಾಪನೆ ಮಾಡಿದಳು. ಈಗಿನ ಇಂದೂರು ಪಟ್ಟಣ ಈಕೆಯಿಂದಲೇ ಅಭಿವೃದ್ಧಿಗೆ ಬಂದದ್ದು. ಉದಾರಚರಿತಳೂ, ಧರ್ಮಿಷ್ಠಳೂ ಆಗಿ ಮತಗ್ರಂಥಗಳ ಅಧ್ಯಯನದಲ್ಲಿ ಹೆಚ್ಚುಕಾಲ ಕಳೆಯುತ್ತಿದ್ದಳು. ದುರಭಿಮಾನ ಲವಲೇಶವೂ ಇರಲಿಲ್ಲ. ಸರ್ ಜಾನ್ ಮ್ಯಾಲ್‍ಕೋಮ್ ಅತ್ಯಂತ ಪರಿಶುದ್ಧಳಾದ ಅತ್ಯಂತ ಆದರ್ಶಪ್ರಾಯಳಾದ ರಾಜ್ಯಾಡಳಿತಗಾರಳೆಂದು ಈಕೆಯ ಬಗ್ಗೆ ಹೇಳಿದ್ದಾನೆ. (ಎಚ್.ಜಿ.ಆರ್.)