ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಂಡಲೂಸೈಟ್

ವಿಕಿಸೋರ್ಸ್ದಿಂದ

ಆಂಡಲೂಸೈಟ್ ಒಂದು ಖನಿಜ. ಇದರ ಹರಳುಗಳನ್ನು ಮೊಟ್ಟಮೊದಲಿಗೆ ಸ್ಪೇನ್ ದೇಶದ ಆಂಡಲೂಸಿಯ ಎಂಬಲ್ಲಿ ಗುರುತಿಸಿದ ಕಾರಣ ಖನಿಜಕ್ಕೆ ಆಂಡಲೂಸೈಟ್ ಎಂದು ಹೆಸರಿಸಲಾಯಿತು. ಇದು ಅರ್ಥೊರಾಂಬಿಕ್ ವರ್ಗದ ಹರಳುಗಳಾಗಿ ದೊರೆಯುತ್ತವೆ. ಬಹುಮಟ್ಟಿಗೆ ನೀಳಫಲಕಗಳಂತೆ ಅಥವಾ ಚಚ್ಚೌಕಾಕಾರದ ಹರಳುಗಳಾಗಿ ಶಿಲೆಗಳಲ್ಲಿ ಹುದುಗಿರುತ್ತದೆ. ಹಲವು ವೇಳೆ ಅಸ್ಪಷ್ಟಾಕೃತಿಯ ಕಣಗಳ ಮುದ್ದೆ ಇಲ್ಲವೆ ಸ್ತಂಭಾಕೃತಿಯನ್ನು ತೋರ್ಪಡಿಸುವುದುಂಟು. ಇದರ ರಾಸಾಯನಿಕ ಸಂಕೇತ ಂಟ2Siಔ2, ಅಲ್ಯುಮಿನಿಯಂ ಸಿಲಿಕೇಟ್, ಬಣ್ಣದಲ್ಲಿ ಬಿಳುಪು, ಗುಲಾಬಿ ಕೆಂಪು, ಬಾಡುಕೆಂಪು (ಫ್ಲೆಶ್‍ರೆಡ್) ಊದಾ, ಬೂದು, ಕೆಂಗಂದು ಮತ್ತು ಹಿಪ್ಪೆ ಹಸಿರು ಬಣ್ಣವಿಲ್ಲದ ಒರೆಗಾಜಿನ ಹೊಳಪು, ಪಾರದರ್ಶಕದಿಂದ ಅಪಾರದರ್ಶಕ; ಬಹುಮಟ್ಟಿಗೆ ಮಿತಪಾರದರ್ಶಕ. ಉತ್ತಮ ದರ್ಜೆಯ ಸೀಳುಗಳು, ಅಸಮ ಅಥವಾ ಅಸ್ಪಷ್ಟ ಬಿರಿತ. ಸುಲಭವಾಗಿ ಪುಡಿಪುಡಿಯಾಗುವ ಸ್ವಭಾವ. ಕಾಠಿಣ್ಯ 7.5. ಹೀಗಾಗಿ ಚಾಕುವಿನ ಅಲುಗಿನಿಂದಲೂ ಗೀರಲು ಸಾಧ್ಯವಿಲ್ಲ.

14000, ಸೆಂ.ಗ್ರೇ. ಉಷ್ಣತೆಯಲ್ಲಿ ಈ ಖನಿಜ ಮಲ್ಲೈಟ್ ಮತ್ತು ಸಿಲಿಕ ಆಗಿ ಮಾರ್ಪಡುತ್ತದೆ.

ಆಂಡಲೂಸೈಟ್‍ನಲ್ಲಿ ಚಯಾಸ್ಟೊಲೈಟ್ ಅಥವಾ ಮ್ಯಾಕ್ಲ್ ಮತ್ತು ವಿರಿಡೈನ್ ಎಂಬ ವಿಧಗಳಿವೆ. ಚಯಾಸ್ಟೊಲೈಟ್ ಹರಳುಗಳು ಗಾತ್ರದಲ್ಲಿ ದೊಡ್ಡದಾಗಿದ್ದು ತಮ್ಮ ಒಳರಚನೆಯಲ್ಲಿ ಅಸಂಖ್ಯಾತ ಸೂಕ್ಷ್ಮ ಇಂಗಾಲದ ಕಣಗಳನ್ನು ಹೊಂದಿರುತ್ತವೆ. ಈ ಕಣಗಳು ವಿಶಿಷ್ಟವಾದ ರೀತಿಯಲ್ಲಿ ಹುದುಗಿರುವ ಕಾರಣ ಹರಳುಗಳನ್ನು ಅಡ್ಡ ಕತ್ತರಿಸಿದಾಗ ಮನೋಹರವಾದ ಆಕೃತಿಗಳನ್ನು ನೋಡಬಹುದು. ಈ ಖನಿಜ ಬಹುಮಟ್ಟಿಗೆ ಸಂಪರ್ಕ ರೂಪಾಂತರಕ್ಕೊಳಗಾದ ಜೇಡುಶಿಲೆಗಳಲ್ಲೂ ಅಲ್ಲದೆ ಬೃಹತ್ ರೂಪಾಂತರಕ್ಕೊಳಗಾದ ನೈಸ್ ಮತ್ತು ಮೈಕಾಪದರು ಶಿಲೆಗಳಲ್ಲೂ ಮತ್ತು ಅಗ್ನಿಶಿಲೆಯಾದ ಪೆಗ್ಮಟೈಟ್‍ನಲ್ಲೂ ದೊರೆಯುತ್ತದೆ. ಉತ್ತಮದರ್ಜೆಯ ಪಾರದರ್ಶಕ ಹರಳುಗಳನ್ನು ಜವಾಹಿರಯಲ್ಲೂ ಮತ್ತು ಸಾಮಾನ್ಯ ಖನಿಜವನ್ನು ಸ್ಪಾರ್ಕ್‍ಪ್ಲಗ್‍ಗಳ ತಯಾರಿಕೆಯಲ್ಲೂ ಉಪಯೋಗಿಸುತ್ತಾರೆ.

(ಬಿ.ವಿ.ಜಿ.)