ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಕ್ಸಿಟೆಟ್ರಸೈಕ್ಲೀನ್

ವಿಕಿಸೋರ್ಸ್ದಿಂದ

ಆಕ್ಸಿಟೆಟ್ರಸೈಕ್ಲೀನ್ ಅಗಲರೋಹಿತ ಜೀವಿವಿರೋಧಕಗಳ (ಬ್ರಾಡ್ - ಸ್ಪೆಕ್ಟ್ರಂ ಆಂಟಿಬಯೋಟಿಕ್ಸ್) ಗುಂಪಿನ ಮದ್ದುಗಳಲ್ಲಿ ಒಂದು. ಮೊಟ್ಟಮೊದಲು (1950) ಫಿಂಡ್ಲೆ ಮತ್ತು ಸಂಗಡಿಗರು ತಯಾರಿಸಿದರು. ಮದ್ದು ತಯಾರಕರ ವ್ಯಾಪಾರದ ಹೆಸರು ಟೆರೆಮೈಸಿಸ್. ಮೊದಲಿಗೆ ಇದನ್ನು ಮಣ್ಣಲ್ಲಿರುವ ಕಿರಣಣಬೆ ಸ್ಟ್ರೆಪ್ಟೊಮೈಸಿಸ್ ರೈಮೋಸಸನ್ನು ತಳಿಯೆಬ್ಬಿಸಿ ಬಂದ ರಸದಿಂದ ಹರಳುಗಳಾಗಿ ತಯಾರಿಸಿದ್ದರೂ ಈಗ ಇದು ಕೃತಕವಾಗೂ ತಯಾರಾಗುತ್ತಿದೆ. ಇದರ ಹೈಡ್ರೊಕ್ಲೋರೈಡು, ಹೈಡ್ರೇಟು ಲವಣಗಳಿಂದ ಗ್ರಾಂ ಬಣ್ಣವೇರದ, ಗ್ರಾಂ ಬಣ್ಣವೇರುವ (ಗ್ರಾಂ-ನೆಗೆಟಿವ್, ಗ್ರಾಂ-ಪಾಸಿಟಿವ್) ಏಕಾಣುಜೀವಿಗಳು, ರಿಕೆಟ್ಸ್ ರೋಗಾಣುಗಳು (ರಿಕೆಟ್ಸಿಯಾಸ್), ಕೆಲವು ದೊಡ್ಡ ವಿಷಕಣಗಳು, ಕೆಲವು ಮುಂಜೀವಿ ಪರಪಿಂಡಿಗಳೂ ಸಾಯುತ್ತವೆ. ಇಲ್ಲವೇ ಗುಣಿತವಾಗುವುದನ್ನು ಅಣಗಿಸುತ್ತವೆ. ಚಲ್ಕಣದ (ಅಮೀಬಿಕ್) ರಕ್ತಭೇದಿ, ವಿಷಮಶೀತ ಜ್ವರಗಳಲ್ಲೂ ಕೊಡುವುದುಂಟು. ಕ್ಷಯ, ಕುಷ್ಠ, ಬೂಷ್ಟಿನ (ಅಣಬೆ) ರೋಗಗಳಲ್ಲಿ ಕೆಲಸಕ್ಕೆ ಬರದು. ಬಾಯಿ ಮೂಲಕ ಕೊಡುವುದು ಸಾಮಾನ್ಯ; ರಕ್ತನಾಳಾಂತರವಾಗೂ, ಒಂದೆಡೆ ಹಚ್ಚುವ ದ್ರಾವಣವಾಗೂ ಕೊಡಬಹುದು. ಯಾವಾಗಲೂ ಕರುಳಲ್ಲಿ ಇದ್ದೇ ಇರುವ ಏಕಾಣುಜೀವಿಗಳನ್ನು ಇದು ಹಾಳುಮಾಡಿ ತೊಂದರೆ ಕೊಡಬಹುದು. ಮಜ್ಜಿಗೆ ಸೇವನೆಯಿಂದ ಇದು ಸರಿಹೋಗುತ್ತದೆ.

(ಡಿ.ಎಸ್.ಎಸ್.)