ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಗೈಟ್

ವಿಕಿಸೋರ್ಸ್ದಿಂದ

ಆಗೈಟ್ ಪೈರಾಕ್ಸೀನ್ ವರ್ಗದ ಮುಖ್ಯ ಖನಿಜ. ರಾಸಾಯನಿಕ ಸಂಯೋಜನೆಯಲ್ಲಿ ಇದು ಕ್ಯಾಲ್ಸಿಯಂ, ಮೆಗ್ನೀಸಿಯಂ, ಕಬ್ಬಿಣ ಮತ್ತು ಅಲ್ಯುಮಿನಿಯಂ ಸಿಲಿಕೇಟ್. ಈ ಖನಿಜ ಮಾನೊಕ್ಲಿನಿಕ್ ವರ್ಗಕ್ಕೆ ಸೇರಿದ ಹರಳುಗಳಾಗಿ ರೂಪುಗೊಂಡಿರುತ್ತದೆ. ಹರಳುಗಳು ಗಾತ್ರದಲ್ಲಿ ಕೊಂಚ ದಪ್ಪ. ಹಲವು ವೇಳೆ ಮುದ್ದೆಯಾಗಿ, ಮಂದವಾದ ಪದರಗಳೋಪಾದಿಯಲ್ಲಿ ಅಥವಾ ಕಣಗಳ ಮುದ್ದೆಯಾಗಿ ಕಂಡುಬರುವುದೂ ಉಂಟು. ಅವಳಿ ಹರಳುಗಳೂ ಆಗಾಗ ಸಿಗುತ್ತವೆ. ಬಣ್ಣದಲ್ಲಿ ಕಪ್ಪು ಮತ್ತು ಹಸಿರು ಮಿಶ್ರಿತ ಕಪ್ಪು. ಒರೆಗೆ ಬಣ್ಣವಿಲ್ಲ, ಹೊಳಪಿನಲ್ಲಿ ಗಾಜಿನಂತೆ ಅಥವಾ ಗೋಂದಿನಂತೆ. ಮಿತಪಾರದರ್ಶಕ ಅಥವಾ ಅಪಾರದರ್ಶಕ. ಉತ್ತಮ ಬಗೆಯ ಸಾಮಾನ್ಯವಾಗಿ ಒಂದೇ ವರ್ಗದ ಪ್ರಿಸ್‍ಮ್ಯಾಟಿಕ್ ಸೀಳುಗಳು. ಹಲವು ಬಾರಿ ಎರಡು ಬಗೆಯ ಸೀಳುಗಳಿದ್ದು ಪರಸ್ಪರ ಚೌಕಾಕೃತಿಯಲ್ಲಿ ಛೇದಿತವಾಗುತ್ತವೆ. ಕಾಠಿಣ್ಯ 5-6; ಚಾಕುವಿನ ಅಲಗಿನಿಂದ ಕಷ್ಟಪಟ್ಟು ಗೀರಬಹುದು.

ಈ ಖನಿಜದ ಹಸಿರು ಬಣ್ಣದ ಬಗೆಯನ್ನು ಡಯಲೇಜ್ ಎನ್ನುತ್ತಾರೆ. ಇದು ಮಿತಪಾರದರ್ಶಕವಾಗಿದ್ದು ಕಂಚಿನಂತೆ ಹೊಳೆಯುತ್ತದೆ. ಆಗೈಟ್ ಬಹುಮಟ್ಟಗೆ ಅಗ್ನಿ ಶಿಲಾವರ್ಗದ ಆಂಡಿಸೈಟ್, ಬೆಸಾಲ್ಟ್, ಡಾಲರೈಟ್ ಗ್ಯಾಬ್ರೋಗಳಲ್ಲೂ ರೂಪಾಂತರ ವರ್ಗಕ್ಕೆ ಸೇರಿದ ನೈಸ್ ಮತ್ತು ಗ್ರ್ಯಾಸ್ಯುಲೈಟ್‍ಗಳಲ್ಲೂ ಕಂಡುಬರುತ್ತದೆ. (ಬಿ.ವಿ.ಜಿ.)