ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆತುಕೂರಿ ಮೊಲ್ಲ

ವಿಕಿಸೋರ್ಸ್ದಿಂದ

ಆತುಕೂರಿ ಮೊಲ್ಲ ಆಂಧ್ರಕವಿಯಿತ್ರಿಯರಲ್ಲಿ ಅತ್ಯುತ್ತಮವಾದ ಕಾವ್ಯವನ್ನು ಬರೆದು ಪ್ರಸಿದ್ಧಳೂ ಆದ್ಯಳೂ ಆದ ಮಹಿಳೆ. ಕುಂಬಾರ ಕುಲಕ್ಕೆ ಸೇರಿದವಳು. ತಂದೆ ಆತುಕೂರಿ ಕೇಶನ ಶೆಟ್ಟಿ. ಗುರು ಲಿಂಗ ಜಂಗಮಾರ್ಚನಪರನಾದ ಶಿವಭಕ್ತ. ಇವಳಿಗೂ ಶ್ರೀಶೈಲಮಲ್ಲಿಕಾರ್ಜುನನ ಮೇಲೆ ಅಪಾರವಾದ ಭಕ್ತಿ. ತನ್ನ ರಾಮಾಯಣ ಮಹಾಕಾವ್ಯದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯನ್ನು ಭಕ್ತಿಪೂರ್ವಕವಾಗಿ ಸ್ತುತಿಸಿದ್ದಾಳೆ.

ಗೋಪವರ ಶ್ರೀಕಂಠಮಲ್ಲೇಶ್ವರನ ಅನುಗ್ರಹದಿಂದ ತನಗೆ ಕವಿತಾಶಕ್ತಿ ಸಿದ್ಧಿಸಿತೆಂದು ಹೇಳಿಕೊಂಡಿದ್ದಾಳೆ. ನೆಲ್ಲೂರು ಮಂಡಲದಲ್ಲಿ ಗೋಪವರ ಎಂಬ ಗ್ರಾಮವಿದೆ. ಈ ಕಾರಣದಿಂದ ಇವಳನ್ನು ನೆಲ್ಲೂರು ಮಂಡಲ ಕವಯಿತ್ರಿ ಎಂದು ಹೇಳಬಹುದು. ಇವಳ ಕಾಲ ಸಂಶಯಾಸ್ಪದವಾಗಿದೆ. ತನ್ನ ಗ್ರಂಥದಲ್ಲಿ ನನ್ನಯ್ಯ ತಿಕ್ಕನ, ಭೀಮನ, ನಾಚನಸೋಮನ, ರಂಗನಾಥ, ಶ್ರೀನಾಥ ಮಹಾಕವಿಗಳನ್ನು ಸ್ತುತಿಸಿರುವುದರಿಂದ ಇವಳು ಶ್ರೀನಾಥನ ಅನಂತರದ ಕವಿಯಿತ್ರಿ ಅಂದರೆ ಕೃಷ್ಣದೇವರಾಯನ ಕಾಲದಲ್ಲಿದ್ದವಳು ಎಂದು ಊಹಿಸಬಹುದು. ಜನ್ಮತಃ ಶಿವಭಕ್ತಳಾದರೂ ಈಕೆಗೆ ರಾಮಕಥೆಯ ಮೇಲೆ ವಿಶೇಷ ಆಸಕ್ತಿ.

ತನಗಿಂತ ಪ್ರಾಚೀನರಾದ ಮಹಾಕವಿಗಳು ತೆಲುಗಿನಲ್ಲಿ ರಾಮಾಯಣವನ್ನು ಬರೆದರೂ ತಾನೂ ರಾಮಕಥೆಯನ್ನು ಬರೆದಳು. ಹಾಗೆ ಬರೆಯುವುದಕ್ಕೆ ಅವಳಿಗೆ ರಾಮನಾಮಸ್ಮರಣ ಜನ್ಮತಾರಕವೆಂಬ ಅಚಲವಿಶ್ವಾಸವಿತ್ತು. ಅಜ್ಞರಿಗೂ ತಜ್ಞರಿಗೂ ಸರ್ವರಿಗೂ ಮುಕ್ತಿ ಭುಕ್ತಿಪ್ರದಾತ ಶ್ರೀರಾಮನೇ ಎಂದು ಅವಳ ನಂಬಿಕೆ. ತಾನು ದೊಡ್ಡ ವಿದ್ಯಾವಂತಳಲ್ಲವೆಂದು ವಿನಯದಿಂದ ತನ್ನ ಗ್ರಂಥದಲ್ಲಿ ಹೇಳಿಕೊಂಡಿರುವಳು. ಜಟಿಲವಾದ ಸಂಸ್ಕøತಪದಗಳಿಗಿಂತ ಪುಟ್ಟ ಪುಟ್ಟ ತಿಳಿ ತೆಲುಗಿನ ನುಡಿಗಳನ್ನೇ ಇವಳು ಹೆಚ್ಚಾಗಿ ಉಪಯೋಗಿಸಿರುವುದು ಒಂದು ವೈಶಿಷ್ಟ್ಯ. ಹಾಗಲ್ಲದೇ ಇರುವ ಕವಿತ್ವ ಮೂಕ, ಕಿವುಡರಿಗೆ ಪ್ರಿಯವಾಗಬಹುದು ಎಂದು ಅವಳ ಅಭಿಪ್ರಾಯ.

ತನ್ನ ಗ್ರಂಥದಲ್ಲಿ ಸಾಕೇತಪುರವನ್ನು ಬಣ್ಣಿಸುವಾಗ ಪ್ರೌಢಿಮೆಯನ್ನೂ ತೋರಿಸಿದ್ದಾಳೆ. ಆ ಪ್ರೌಢಿಮೆ ಶಾಬ್ದಿಕವಲ್ಲ, ಚಮತ್ಕಾರಜನ್ಯ. ಸುಲಭವಾದ ಶ್ಲೇಷಾರ್ಥಗಳನ್ನು ಬಹಳ ಜಾಣ್ಮೆಯಿಂದ ಉಪಯೋಗಿಸಿದ್ದಾಳೆ. ಪ್ರಕೃತಿಯನ್ನು ಮನೋಜ್ಞವಾಗಿ ಬಣ್ಣಿಸಿದ್ದಾಳೆ. ಬಾಹ್ಯ ಸೌಂದರ್ಯವನ್ನಲ್ಲದೆ ಸ್ತ್ರೀಯರ ಸಹಜವಾದ ಸಭ್ಯತಾರುಚಿ ಔಚಿತ್ಯಗಳನ್ನೂ ತನ್ನ ಗ್ರಂಥದಲ್ಲಿ ಸಮಂಜಸವಾಗಿ ತಂದಿದ್ದಾಳೆ. ಇವಳ ರಾಮಾಯಣದಲ್ಲಿ ಮೊದಲು ನಾಲ್ಕು ಕಾಂಡಗಳೂ ಶರವೇಗದಿಂದ ಸಾಗುತ್ತವೆ. ಮಂಥರಾವೃತ್ತಾಂತವನ್ನೇ ಈಕೆ ಪ್ರಸ್ತಾಪಿಸಿಲ್ಲ. ಸೀತಾವಿಯೋಗ ಸಂದರ್ಭದಲ್ಲಿ ರಾಮನ ದುಃಖ ಹೃದಯವಿದ್ರಾವಕವಾಗಿ ಚಿತ್ರಿತವಾಗಿದೆ. ಸುಂದರ, ಯುದ್ಧಕಾಂಡಗಳೂ ತುಸು ವಿಸ್ತಾರವಾಗಿವೆ. ಕಾಲನೇಮಿವೃತ್ತಾಂತ ಸ್ವಲ್ಪ ವಿಸ್ತಾರವಾಗಿದೆ. ಕಾವ್ಯದ ಉದ್ದಕ್ಕೂ ಮೃದು ಮಧುರವಾದ, ಸಂದರ್ಭೋಚಿತವಾದ ಗಾದೆಗಳಿವೆ. ಒಟ್ಟಿನಲ್ಲಿ ಈಕೆಯ ಕಾವ್ಯ ಪಂಡಿತ ಪಾಮರರಿಬ್ಬರಿಗೂ ಪ್ರಿಯವಾಗಿದೆ. (ಬಿ.ಆರ್.)