ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆದಯ್ಯ

ವಿಕಿಸೋರ್ಸ್ದಿಂದ

ಆದಯ್ಯ ಬಸವಣ್ಣನವರ ಕಾಲದ ವಚನಕಾರ. ಜನ್ಮಸ್ಥಳ ಗುಜರಾತಿನ ದ್ವಾರಕಾನಗರ. ಘೋರದತ್ತ ಮತ್ತು ಪುಣ್ಯವತಿಯರ ಮಗ. ವಂಶವೃತ್ತಿ ವ್ಯಾಪಾರ. ವರ್ತಕರ ಮನೆಯಲ್ಲಿ ಹುಟ್ಟಿ ಬಾಲ್ಯದಲ್ಲಿ ಬಹಳ ಸೂಟಿಯಾಗಿದ್ದುದರಿಂದ ವ್ಯವಹಾರಕುಶಲನಾಗಿ ಬಹುಭಾಷಾವಿಶಾರದನಾದ. ಯುವಕನಾದ ಮೇಲೆ ದೇಶದ ನಾನಾ ಭಾಗಗಳಲ್ಲಿ ಸಂಚರಿಸಿ ಕರ್ನಾಟಕದ ಬಹು ಪ್ರಸಿದ್ಧ ಜೈನರ ನಗರಿಯಾದ ಪುಲಿಗೆರೆ ಅಥವಾ ಈಗಿನ ಲಕ್ಷ್ಮೇಶ್ವರಕ್ಕೆ ಬಂದು ಅಲ್ಲಿನ ಜೈನಧರ್ಮಾವಲಂಬಿಯಾದ ಪಾರಿಶೆಟ್ಟಿಯ ಏಕೈಕ ಪುತ್ರಿ ಪದ್ಮಾವತಿಯನ್ನು ಮದುವೆಯಾಗಿ ಸೌರಾಷ್ಟ್ರದ ಸೋಮನಾಥನನ್ನು ತಂದು ಪುಲಿಗೆರೆಯಲ್ಲಿ ಪ್ರತಿಷ್ಠಾಪಿಸಿ (1100) ವೀರಶೈವ ಧರ್ಮವನ್ನು ಮೆರೆದ. ಶೈವಾಚಾರದಲ್ಲಿ ತೊಡಗಿದ್ದವ. ವೀರಶೈವದಲ್ಲಿ ತೊಡಗಿ ಸೋಮನಾಥನಲ್ಲಿದ್ದ ಪರಮನಿಷ್ಠೆಯಿಂದ ಮುಂದೆ ಸೌರಾಷ್ಟ್ರ ಸೋಮೇಶ್ವರ ಎಂಬ ಅಂಕಿತವನ್ನಿಟ್ಟುಕೊಂಡು ಪ್ರಸಿದ್ಧ ವಚನಕಾರನೆನಿಸಿಕೊಂಡ.

ದೊರೆತಿರುವ ಈತನ ವಚನಗಳಲ್ಲಿ ಹೆಚ್ಚು ತತ್ವನಿರೂಪಣೆಗೆ ಸಂಬಂಧಿಸಿದುವು. ಬೆಡಗಿನ ವಚನಗಳನ್ನು ಬಿಟ್ಟರೆ ಉಳಿದ ವಚನಗಳ ಶೈಲಿ ನೇರವಾಗಿದೆ, ಸರಳವಾಗಿದೆ. ಹೊರನಾಡಿನಿಂದ ಬಂದು ಕನ್ನಡವನ್ನು ಕಲಿತು ಕನ್ನಡದಲ್ಲಿ ಹಾಡಿದ ಆದಯ್ಯನ ಹೆಸರು ಕನ್ನಡ ನಾಡಿನ ಜನಮನದಲ್ಲಿ ಆಚಂದ್ರಾರ್ಕವಾಗಿ ಉಳಿಯುತ್ತದೆ. ವೀರಶೈವ ಇತಿಹಾಸ, ತತ್ವನಿರೂಪಣೆ ಮತ್ತು ಶಿವಾನುಭಾವ ಮಾರ್ಗಗಳಲ್ಲಿ ಚಿರಂತನವಾಗಿರುತ್ತದೆ. ಆದಯ್ಯ ಕಾವ್ಯಗಳಲ್ಲಿ ಪರವಸ್ತುವಿನ ಅಸ್ತಿತ್ವವನ್ನು ಪ್ರಸ್ತಾಪಿಸುವ ಕಟುತರ ನಿಷ್ಠೆಯುಳ್ಳ ಕಲಿಯಾಗಿ ಕಾಣುತ್ತಿದ್ದರೆ ವಚನಗಳಲ್ಲಿ ಮಹಾನುಭಾವಿಯಾಗಿ ಶ್ರೇಷ್ಠನಾದ ಪಂಡಿತನಾಗಿ ಕಂಗೊಳಿಸುತ್ತಿದ್ದಾನೆ. (ಬಿ.ಎನ್.ಸಿ.)