ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಲ್ಕೊಹಾಲ್ ಪಾನೀಯಗಳು

ವಿಕಿಸೋರ್ಸ್ದಿಂದ
      ಮೂಲದೊಡನೆ ಪರಿಶೀಲಿಸಿ

ಆಲ್ಕೊಹಾಲ್ ಪಾನೀಯಗಳು

ಇವುಗಳಲ್ಲಿ ಹುಳಿಬರಿಸಿದ (ಫರ್ಮೆಂಟೆಡ್) ಮತ್ತು ಬಟ್ಟಿ ಇಳಿಸಿದ ಪಾನೀಯಗಳು ಎಂದು ಎರಡು ವರ್ಗಗಳಿವೆ. ಬಟ್ಟಿ ಇಳಿಸಿದ ಮದ್ಯಗಳ ಬಗ್ಗೆ ಮಾತ್ರ ಇಲ್ಲಿ ವಿವೇಚಿಸಲಾಗಿದೆ. ಬ್ರಾಂದಿ, ಜಿನ್, ರಮ್, ವಿಸ್ಕಿ ಮತ್ತು ವೋದ್ಕಾ ಇಂಥ ಪಾನೀಯಗಳ ಪೈಕಿ ಮುಖ್ಯವಾದುವು. ಆಲ್ಕೊಹಾಲನ್ನು ಒಳಗೊಂಡ ಪಾನೀಯಗಳ ಮೇಲೆ ತೆರಿಗೆ ಹೆಚ್ಚು. ಆದ್ದರಿಂದ ವಿಶ್ವದಾದ್ಯಂತ ಎಲ್ಲ ರಾಜ್ಯಸರ್ಕಾರಗಳಿಗೂ ಇದೊಂದು ಆಕರ್ಷಕ ವರಮಾನದ ಮೂಲ. ಅನೇಕ ನಿರ್ಬಂಧ ಮತ್ತು ನಿಯಂತ್ರಣಗಳಿಗೆ ಒಳಗಾದ ಉದ್ಯಮವಿದು. ಮದ್ಯ ತಯಾರಿಕೆಯನ್ನು ರಾಷ್ಟ್ರೀಕರಣ ಮಾಡಿರುವ ದೇಶಗಳೂ ಇವೆ. ರಹದಾರಿ ಇಲ್ಲದೆ ಯಾರೂ ಬಟ್ಟಿಯನ್ನು ನಡೆಸುವಂತಿಲ್ಲ. ನಿಯಮಗಳನ್ನು ಕಿಂಚಿತ್ತು ಉಲ್ಲಂಘಿಸಿದರೂ ರಹದಾರಿಯನ್ನು ರದ್ದುಪಡಿಸಲಾಗುವುದು. ಯಾವ ಗಳಿಗೆಯಲ್ಲಾದರೂ ಸರ್ಕಾರದ ಪ್ರತಿನಿಧಿ ಅನಿರೀಕ್ಷಿತವಾಗಿ ಬಟ್ಟಿಯನ್ನು ತನಿಖೆ ಮಾಡಲು ಶಾಸನದಲ್ಲಿ ಅವಕಾಶವಿದೆ. ಈ ಪಾನೀಯಗಳನ್ನು ಕಲಬೆರಕೆ ಮಾಡಿ ಮಾರುವ ಸಂಭವ ಇರುವುದರಿಂದ ಅದರ ವಿರುದ್ಧ ಕಾನೂನಿನ ರಕ್ಷಣೆಯಿದೆ. ಮಾದಕ ಪಾನೀಯಗಳು ಬಳಕೆಗೆ ಬಂದ ಕಾಲ, ದೇಶ ಮತ್ತು ಸನ್ನಿವೇಶಗಳನ್ನು ಕುರಿತ ಐತಿಹಾಸಿಕ ದಾಖಲೆಗಳು ಸ್ಪಷ್ಟವಾಗಿಲ್ಲ. ಸ್ಥೂಲ ವಿವರಗಳು ಕೆಳಕಂಡಂತಿವೆ.

ಕಾಲ

ದೇಶ

ಕಚ್ಚಾವಸ್ತು

ಹುಳಿ ಬರಿಸಿದ ಪಾನೀಯ

ಬಟ್ಟಿ ಇಳಿಸಿದ ಪಾನೀಯ


-

ಕ್ರಿ.ಪೂ. 800


  - 

ಕ್ರಿ.ಶ. 500 ಕ್ರಿ.ಶ. 1000 ಕ್ರಿ.ಶ. 1100

ಕ್ರಿ.ಶ. 1200 ಕ್ರಿ.ಶ. 1300 ಕ್ರಿ.ಶ. 1500


ಚೀನ

ಭಾರತ ಮತ್ತು ಸಿಂಹಳ


ಜಪಾನ್ ಬ್ರಿಟನ್ ಇಟಲಿ ಐರ್ಲೆಂಡ್


ಸ್ಪೇನ್ ಫ್ರಾನ್ಸ್ ಸ್ಕಾಟ್‍ಲೆಂಡ್


ಅಕ್ಕಿ ಮತ್ತು ಮಿಲೆಟ್ ಅಕ್ಕಿ, ಕಾಕಂಬಿ, ತಾಳೆ ಬೆಲ್ಲ, ಈಚಲ ಮತ್ತು ತೆಂಗಿನ ನೀರ ಅಕ್ಕಿ ಜೇನುತುಪ್ಪ ದ್ರಾಕ್ಷಿ ಹಣ್ಣು ಬಾರ್ಲಿ ಮತ್ತು ಓಟ್ಸ್

ದ್ರಾಕ್ಷಿ ಹಣ್ಣು ದ್ರಾಕ್ಷಿ ಹಣ್ಣು ಮೊಳೆತ ಬಾರ್ಲಿ


ಚೂ

ಹೆಂಡ


ಸ್ಯಾಕೆ ಮೀಡ್ ವೈನ್ ಬೀರ್


ವೈನ್ ವೈನ್ ಬೀರ್


ಸಾಚೂ

ಸಾರಾಯಿ


ಸೋಚು ಮೀಡ್ ಬ್ರಾಂದಿ ಅಸ್ಕ್ವಿಬಾ


ವಿನಿಜಲ ಕೊನ್ಯಾಕ್ ವಿಸ್ಕಿ


ಮೇಲಿನ ಪಟ್ಟಿಯ ಪರಿಶೀಲನೆಯಿಂದ ಒಂದು ಮುಖ್ಯ ತತ್ತ್ವ ವ್ಯಕ್ತವಾಗುತ್ತದೆ. ಮದ್ಯ ತಯಾರಿಕೆಗೆ, ಸಕ್ಕರೆಯ ಅಂಶವಿರುವ ಜೇನುತುಪ್ಪ, ಮಾಗಿದ ಹಣ್ಣುಗಳು, ಕಬ್ಬು, ಬೀಟ್‍ಗೆಡ್ಡೆ, ಹಾಲು ಅಥವಾ ಸುಲಭವಾಗಿ ಸಕ್ಕರೆಯಾಗಬಲ್ಲ ಯಾವುದಾದರೂ ಪಿಷ್ಟ ಪದಾರ್ಥ ಅಗತ್ಯ. ಸಾಮಾನ್ಯವಾಗಿ ಪಿಷ್ಟ ಪದಾರ್ಥಗಳಲ್ಲಿ ಅವನ್ನು ಸಕ್ಕರೆಯಾಗಿ ಮಾರ್ಪಡಿಸಲು ಶಕ್ತವಾದ ಪ್ರೇರಕ ವಸ್ತುಗಳೂ ಇರುವುದು ಒಂದು ಆಕಸ್ಮಿಕ ಸುಯೋಗ. ಹಾಗಿಲ್ಲದಿರುವ ಸಂದರ್ಭಗಳಲ್ಲಿ (ಉದಾಹರಣೆಗೆ ಆಲೂಗೆಡ್ಡೆಯ ಪಿಷ್ಟ) ಸಾಕಷ್ಟು ಮೊಳೆತ ಧಾನ್ಯವನ್ನು ಕೂಡಿಸಬೇಕಾಗುತ್ತದೆ. ಪಿಷ್ಟವನ್ನು ಸಕ್ಕರೆಗೆ ಮತ್ತೆ ಅದನ್ನು ಆಲ್ಕೊಹಾಲಿಗೆ ಪರಿವರ್ತಿಸುವ ಇಂಥ ಪ್ರೇರಕ ವಸ್ತುಗಳಿಗೆ ಕಿಣ್ವಗಳೆಂದು (ಎನ್‍ಜೈಮ್ಸ್) ಹೆಸರು. ಅವು ದ್ರಾವ್ಯವಾದ ಪ್ರೋಟೀನ್ ವಸ್ತುಗಳು; ವೇಗವರ್ಧಕಗಳಂತೆ ವರ್ತಿಸುತ್ತವೆ. ಹೈಡ್ರೊಸಯನಿಕ್ ಆಮ್ಲ, ಪಾದರಸದ ಲವಣಗಳು ಮತ್ತು ಫಾರ್ಮಲಿನ್ ಇತ್ಯಾದಿಗಳ ಸಂಪರ್ಕದಲ್ಲೂ ಮತ್ತು ಉಷ್ಣ ವ್ಯತ್ಯಾಸದಿಂದಲೂ ನಿಷ್ಕ್ರಿಯವಾಗುತ್ತವೆ. ಒಂದೊಂದು ಕಿಣ್ವವೂ ನಿರ್ದಿಷ್ಟ ವಸ್ತುವಿನ ಮೇಲೆ ಮಾತ್ರ ಪ್ರಭಾವ ಬೀರುತ್ತದೆ. ಅವುಗಳ ವ್ಯಾಪ್ತಿ ಪೂರ್ವ ನಿಯೋಜಿತವಾದಂತಿದೆ. ಪಿಷ್ಟವನ್ನು ಡ್ಯಕ್ಸ್ಟ್ರಿನ್ ಮೂಲಕ ಮಾಲ್ಟೋಸ್ ಸಕ್ಕರೆಗೆ ಪರಿವರ್ತಿಸುವ ಅಮೈಲೇಸ್ ಕಿಣ್ವ, ಮಾಲ್ಟೋಸನ್ನು ಡೆಕ್ಸ್ಟ್ರೋಸಾಗಿ ಮಾಡುವ ಮಾಲ್ಟೇಸ್ ಕಿಣ್ವ, ಡೆಕ್ಸ್ಟ್ರೋಸನ್ನು ಆಲ್ಕೊಹಾಲ್ ಮತ್ತು ಕಾರ್ಬನ್ ಡೈಆಕ್ಸೈಡಿಗೆ ಬದಲಾಯಿಸುವ ಜೈಮೇಸ್ ಕಿಣ್ವಗಳನ್ನು ಪ್ರಕೃತ ಸಂದರ್ಭದಲ್ಲಿ ಉದಾಹರಿಸಬಹುದು. ಈ ಕ್ರಿಯೆಗಳು ಜಲಮಾಧ್ಯಮದಲ್ಲಿ ಸರಾಗವಾಗಿ ನಡೆಯುವುದು ವಿಶೇಷ ಸಂಗತಿ. ಅಮ್ಯಲೇಸ್ ಮತ್ತು ಮಾಲ್ಟೇಸ್ ಕಿಣ್ವಗಳು ಮೊಳೆತ ಧಾನ್ಯಗಳಲ್ಲೂ ಮತ್ತು ಜೈಮೇಸ್ ಕಿಣ್ವ ಯೀಸ್ಟ್ ಸಸ್ಯದಲ್ಲೂ ಇರುವುದರಿಂದ, ಮಿತವ್ಯಯದಿಂದ ಮದ್ಯ ತಯಾರಿಕೆ ಸಾಧ್ಯವಾಗಿದೆ. ಧಾನ್ಯಗಳಿಂದ ಹಾಗೂ ಸಕ್ಕರೆಯ ಅಂಶವಿರುವ ಇತರ ವಸ್ತುಗಳನ್ನು ಹುಳಿ ಬರಿಸಿ ಆಲ್ಕೊಹಾಲ್ ತಯಾರಿಸುವ ವಿಧಾನವನ್ನು ಈಥೈಲ್ ಅಲ್ಕೊಹಾಲ್ ಎಂಬ ಶಿರೋನಾಮೆಯಲ್ಲಿ ವಿವರಿಸಲಾಗಿದೆ. ಬಟ್ಟಿ ಇಳಿಸುವ ಕ್ರಮ : ಹುಳಿಬರಿಸುವ ವಿಧಾನದಿಂದ ದೊರೆತ ಮದ್ಯಸಾರಕ್ಕೆ ವಾಷ್ ಎನ್ನುವರು. ಇದರಲ್ಲಿ ಸಾಮಾನ್ಯವಾಗಿ 8-10% ಭಾಗ ಆಲ್ಕೊಹಾಲ್ ಇರುತ್ತದೆ. ಇದರಲ್ಲಿರುವ ನೀರಿನ ಭಾಗವನ್ನು ಕಡಿಮೆ ಮಾಡುವುದೇ ಸಾಂದ್ರೀಕರಣದ ಉದ್ದೇಶ. ಆಲ್ಕೊಹಾಲ್ ಮತ್ತು ನೀರಿನ ಕುದಿಯುವ ಬಿಂದುಗಳು ಕ್ರಮವಾಗಿ 78.3% ಸೆ. ಮತ್ತು 1000 ಸೆ. ಆಲ್ಕೊಹಾಲ್ ಮತ್ತು ನೀರಿನ ಮಿಶ್ರಣವನ್ನು 78.30-1000 ಸೆ. ಉಷ್ಣತೆಯ ಮಿತಿಯಲ್ಲಿ ಕುದಿಸಿದರೆ ಆಲ್ಕೊಹಾಲಿನ ಅಂಶ ಹೆಚ್ಚಾಗಿರುವ ಮಿಶ್ರಣ ಬಟ್ಟಿ ಇಳಿಯುತ್ತದೆ. ಆಲ್ಕೊಹಾಲಿನಲ್ಲಿರುವ ನೀರಿನ ಭಾಗವನ್ನು ಹೆಪ್ಪುಗಟ್ಟಿಸಿಯೂ ತೆಗೆಯಬಹುದು. ಇದಕ್ಕಿಂತ ಮೊದಲನೆಯ ವಿಧಾನ ಉತ್ತಮ. ಬಟ್ಟಿ ಇಳಿಸಿದ ಪಾನೀಯಗಳಲ್ಲಿರುವ ಪ್ರಧಾನ ಅಂಶಗಳು ನೀರು ಮತ್ತು ಆಲ್ಕೊಹಾಲ್ ಆದರೂ ಕೇವಲ ಇವೆರಡರ ಮಿಶ್ರಣ ಮಾತ್ರದಿಂದ ಅವು ಆಕರ್ಷಕ ಪಾನೀಯವಾಗಲಾರವು. ಅವುಗಳಲ್ಲಿರುವ ಇತರ ವಸ್ತುಗಳು ಮದ್ಯಕ್ಕೆ ವಿಶಿಷ್ಟ ಗುಣ ನೀಡುವುವು. ಈ ಅಪ್ರಧಾನ ಅಂಶಗಳಿಗೆ ಸಹಜಾತ ವಸ್ತುಗಳು (ಕಂಜೀನ್‍ರ್ಸ್) ಎಂದು ಹೆಸರು. ಅವುಗಳಲ್ಲಿ ಉನ್ನತ ಆಲ್ಕೊಹಾಲ್‍ಗಳು ಆಲ್ಡಿಹೈಡುಗಳು, ಈಥರ್‍ಗಳು, ಎಸ್ಟರುಗಳು, ಅವ್ಯಾಸಕ್ತ ಆಮ್ಲಗಳು, ಫರ್‍ಫ್ಯುರಾಲ್ ಮತ್ತು ಇತರ ಆಗ್ರ್ಯಾನಿಕ್ ವಸ್ತುಗಳಿರುತ್ತವೆ. ಮದ್ಯದ ರುಚಿ ಮತ್ತು ಮಾಧುರ್ಯವನ್ನು ಹೆಚ್ಚಿಸುವುದರಲ್ಲಿ, ಇವು ಮಹತ್ತ್ವ ಪಾತ್ರ ವಹಿಸುತ್ತವೆ. ಅವುಗಳ ಪ್ರಮಾಣವನ್ನು ಹೆಚ್ಚು ಕಡಿಮೆ ಮಾಡಿದರೆ ಮದ್ಯಕ್ಕೆ ಅಪೇಕ್ಷಿತ ರುಚಿ ಮತ್ತು ವಾಸನೆಗಳು ಪ್ರಾಪ್ತವಾಗುವುವು. ಸಾಂದ್ರೀಕರಣದ ಮೂಲೋದ್ದೇಶವೂ ಇದೇ ಆಗಿದೆ. ಪ್ರಾಚೀನ ವಿಧಾನಗಳು : ಕುದಿಯುತ್ತಿರುವ ದ್ರವದಿಂದ ಬಿಸಿಯಾದ ಆವಿ ಹೊರಬೀಳುತ್ತದೆ. ಅದಕ್ಕೆ ತಣ್ಣನೆಯ ಪಾತ್ರೆಯನ್ನು ಹಿಡಿದರೆ ಅದರ ಹೊರಮೈ ಮೇಲೆ ದ್ರವದ ಹನಿಗಳು ಕೂಡಿಕೊಳ್ಳುತ್ತವೆ. ಅವನ್ನು ಆಗಿಂದಾಗ್ಗೆ ಸಂಗ್ರಹಿಸುವುದು ಪದ್ಧತಿಯಾಗಿತ್ತು. ತರುವಾಯ ಇದಕ್ಕಾಗಿ ತಣ್ಣೀರು ತುಂಬಿದ ಬೋಗುಣಿಯನ್ನು ಉಪಯೋಗಿಸುವುದು ಪ್ರಾರಂಭವಾಯಿತು. ಟಿಬೆಟ್ ಮತ್ತು ಭೂತಾನಿನಲ್ಲಿ ಉಪಯೋಗಿಸುತ್ತಿದ್ದ ಇಂಥ ಮಾದರಿ ಸಾಂದ್ರಕವನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ. ಪೆರು ದೇಶೀಯರು ಇದಕ್ಕೋಸ್ಕರ ನೀಳವಾದ ಕೊಳವೆಯನ್ನು ಬಳಸುತ್ತಿದ್ದರು. ಬಿಸಿಯಾದ ಆವಿ, ಅದರ ಮೂಲಕ ಹಾದು ಬೇರೊಂದು ಸಂಗ್ರಾಹದಲ್ಲಿ ದ್ರವರೂಪ ತಳೆಯುತ್ತಿತ್ತು.

	ಸಂಗ್ರಾಹಕವನ್ನು ತಣ್ಣೀರಿನಲ್ಲಿ ಇಟ್ಟಾಗ, ಇನ್ನೂ ಜಾಗ್ರತೆಯಾಗಿ ಹನಿಗೂಡುತ್ತಿದ್ದುವು. ಇದನ್ನು ಜಾರಿಗೆ ತಂದವರು ಸಿಂಹಳೀಯರು. ತಾಹಿತಿಯ ಮೂಲನಿವಾಸಿಗಳು ಮತ್ತೊಂದು ಕ್ರಾಂತಿಕಾರಕ ಬದಲಾವಣೆಯನ್ನು ರೂಪಿಸಿದರು. ಬಿಸಿ ಆವಿ ಹಾಯುತ್ತಿರುವ ನಾಳದ ಸುತ್ತ ತಣ್ಣೀರನ್ನು ಹಾಯಿಸುವುದೇ ಈ ಸುಧಾರಣೆ. ಆಧುನಿಕ ಲೀಬಿಗ್ ಸಾಂದ್ರಕದ ನಿರ್ಮಾಣಕ್ಕೆ ಇದು ನಾಂದಿಯಾಯಿತೆನ್ನಬಹುದು. ದಕ್ಷಿಣ ಭಾರತದಲ್ಲಿ ಅದರಲ್ಲೂ ಮೈಸೂರು ಮಾದರಿ ಎಂದು ಪ್ರಸಿದ್ಧವಾಗಿರುವ ಸಾಂದ್ರಕದ ಮೂಲ ರೂಪವನ್ನು (ಚಿತ್ರ 3) ಕಾಣಬಹುದು.

ತಾಹಿತಿ ಮಾದರಿಯ ಮಡಿಕೆ ಸಾಂದ್ರಕಗಳನ್ನು ಫ್ರಾನ್ಸಿನಲ್ಲಿ ಬ್ರಾಂದಿಯನ್ನೂ ಮತ್ತು ಸ್ಕಾಟ್ಲೆಂಡ್, ಐರ್ಲೆಂಡುಗಳಲ್ಲಿ ವಿಸ್ಕಿಯನ್ನೂ ತಯಾರಿಸಲು ಇನ್ನೂ ಉಪಯೋಗಿಸುತ್ತಿದ್ದಾರೆ. ಆದರೆ ಕುದಿಪಾತ್ರೆಯ ಮೇಲೆ ಬಲ್ಬ್ ನಮೂನೆಯ ಶಿರೋಕರಂಡವಿರುತ್ತದೆ. ಇದು ಆವಿಯಲ್ಲಿರುವ ತುಂತುರನ್ನು ಹನಿಗೂಡಿಸಿ ಕುದಿ ಪಾತ್ರೆಗೇ ಬೀಳುವಂತೆ ಮಾಡುತ್ತದೆ. ಆದ್ದರಿಂದ ಸಂಗ್ರಹಿಸಿದ ದ್ರವ ಶುದ್ಧವಾಗಿರುತ್ತದೆ. ಕೆಲವು ಐರಿಷ್ ಸಾಂದ್ರಕಗಳಲ್ಲಿ ಅವ್ಯಾಸಕ್ತ ಅಂಶಗಳು ಮಾತ್ರ ಸಾಂದ್ರಕ ಕೊಳವೆಯನ್ನು ತಲಪುತ್ತವೆ. ಉಳಿದ ಭಾಗವನ್ನು ಕುದಿಪಾತ್ರೆಗೆ ಹಿಂತಿರುಗಿಸುವ ಏರ್ಪಾಡಿರುತ್ತದೆ. ಇದು ಇಂದು ನಾವು ಬಳಸುವ ಅಂಶ ಬಾಷ್ಪೀಕರಣದ ಉಪಕರಣವನ್ನು ಹೋಲುತ್ತದೆ. ಫ್ರೆಂಚ್ ಬ್ರಾಂದಿ ತಯಾರಿಸುವ ಉಪಕರಣದಲ್ಲಿ ಕುದಿಪಾತ್ರೆಗೂ ಸಾಂದ್ರಕಕ್ಕೂ ನಡುವೆ ಎರಡು ಬಲ್ಬುಗಳಿರುವ ಒಂದು ಪಾತ್ರೆ ಇರುತ್ತದೆ. ಒಂದರಲ್ಲಿ ಕುದಿಪಾತ್ರೆಗೆ ಹಾಕಬೇಕಾಗಿರುವ ವೈನ್ ಇರುವುದು. ಇನ್ನೊಂದರಲ್ಲಿ ಅವ್ಯಾಸಕ್ತಿ ಕಡಿಮೆಯಿರುವ ಅಂಶಗಳು ಸಾಂದ್ರೀಕರಿಸುತ್ತವೆ. ಆಗ ಹೊರಬಿದ್ದ ಗುಪ್ತೋಷ್ಣವನ್ನು ವೈನ್ ಹೀರಿಕೊಂಡು ಕುದಿಪಾತ್ರೆಗೆ ಬೀಳುತ್ತದೆ. ಈ ಉಷ್ಣ ವಿನಿಮಯ ತಂತ್ರದಿಂದ ಇಂಧನ ಉಳಿತಾಯವಾಗುವುದು. ಸ್ಕಾಟ್ಲೆಂಡಿನ ವಿಸ್ಕಿ ಕೇಂದ್ರಗಳಲ್ಲಿ ಉಪಯೋಗಿಸುವ ಕುದಿಪಾತ್ರೆಗಳ ರಚನೆ ಇನ್ನೂ ಜಟಿಲವಾಗಿದ್ದು, ಇಂಥ ಹಲವು ಮಧ್ಯವರ್ತಿ ಪಾತ್ರೆಗಳನ್ನು ಒಳಗೊಂಡಿರುತ್ತದೆ. ಇವು ಹಗುರವಾದ ಅಂಶಗಳನ್ನು ಸಾಂದ್ರಕದ ಎಡೆಗೆ ಒಯ್ದು ಶೇಷಾಂಶವನ್ನು ಕುದಿಪಾತ್ರಗೆ ಹಿಂತಿರುಗಿಸುತ್ತವೆ.

ಚಿತ್ರ-4

ಆಧುನಿಕ ಕಾಫೆ ಸಾಂದ್ರಕ : ಹೀಗೆ ರೂಪಾಂತರ ಹೊಂದುತ್ತ ನಡೆದು ಅಂತಿಮವಾಗಿ ಕಾಫೆ ಸಾಂದ್ರಕ ಜನ್ಮತಾಳಿತು ಎನ್ನಬಹುದು. 1831ರಲ್ಲಿ ಪೇಟೆಂಟ್ ಮಾಡಿಕೊಂಡ ಈ ಉಪಕರಣದಲ್ಲಿ ಪ್ರಧಾನವಾಗಿ ಎರಡು ಗೋಪುರಗಳಿವೆ. ವಿಶ್ಲೇಷಕ ಎಂದು ಕರೆಯಲ್ಪಡುವ ಮೊದಲನೆಯ ಗೋಪುರದ (ಸ್ತಂಭ) ಮೇಲ್ಭಾಗದಿಂದ ಆಲ್ಕೊಹಾಲ್ ದ್ರವವನ್ನೂ, ಬುಡದಿಂದ ಹಬೆಯನ್ನೂ ಹಾಯಿಸುತ್ತಾರೆ. ಗೋಪುರದಲ್ಲಿ ಸರಂಧ್ರ ತಟ್ಟೆಗಳಿರುತ್ತವೆ. ಮೇಲೇರುತ್ತಿರುವ ಹಬೆಯ ದೆಸೆಯಿಂದ ಆಲ್ಕೊಹಾಲ್ ರಂಧ್ರಗಳ ಮೂಲಕ ಕೆಳಗಿನತಟ್ಟೆಗೆ ಸೋರಿಹೋಗುವಂತಿಲ್ಲ. ಸಾಕಷ್ಟು ದ್ರವ ತಟ್ಟೆಯಲ್ಲಿ ಶೇಖರಿಸಿದಾಗ ಹೆಚ್ಚುವರಿ ದ್ರವ ವಿಶೇಷ ನಳಿಗೆಯೊಂದರ ಮೂಲಕ ಅಡಿ ತಟ್ಟೆಯಲ್ಲಿರುವ ಬಟ್ಟಲಿಗೆ ಹರಿದು ಹೋಗುತ್ತದೆ. ಹಬೆಯ ಉಷ್ಣದಿಂದ ಮದ್ಯದಲ್ಲಿರುವ ಆಲ್ಕೊಹಾಲಿನ ಒಂದಂಶ ಆವಿಯಾಗಿ ಹಬೆಯೊಡನೆ ಬೆರೆತು ರೆಕ್ಟಿಫಯರ್ ಎಂಬ ಎರಡನೆಯ ಗೋಪುರವನ್ನು ಬುಡದಿಂದ ಪ್ರವೇಶಿಸುವುದು. ವಿಶ್ಲೇಷಕದಂತೆ ಇಲ್ಲೂ ಸರಂಧ್ರ ತಟ್ಟೆಗಳಿವೆ. ಪ್ರತಿ ತಟ್ಟೆಗಳ ನಡುವೆ ಸುರುಳಿಯಾಕಾರದ ಕೊಳವೆ ಇದೆ. ಇದು ಎರಡು ಕೆಲಸ ನಿರ್ವಹಿಸುವುದು. ವಿಶ್ಲೇಷಕದ ಮೇಲ್ಭಾಗಕ್ಕೆ ಹೋಗುತ್ತಿರುವ ವಾಷನ್ನು ಬಿಸಿ ಮಾಡಿ ಉಷ್ಣವಿನಿಮಯಕ್ಕೆ ಅನುಕೂಲ ಮಾಡಿಕೊಡುವುದು; ಎರಡನೆಯದಾಗಿ ಹಾಯುತ್ತಿರುವ ಹಬೆ ಮತ್ತು ಆಲ್ಕೊಹಾಲ್. ಮಿಶ್ರಣವನ್ನು ತಣಿಸಿ ಭಾಗಷಃ ಸಾಂದ್ರೀಕರಿಸುವುದು. ಅಂತಿಮವಾಗಿ ಮೇಲ್ಭಾಗದಿಂದ ಹೊರಬೀಳುವ ಆವಿಯನ್ನು ತಣಿಸಿದರೆ ಉಂಟಾಗುವ ಮದ್ಯದಲ್ಲಿ ಆಲ್ಕೊಹಾಲಿನ ಅಂಶ ವೃದ್ಧಿಯಾಗಿರುತ್ತದೆ. ಇದನ್ನು ಇತರ ಮದ್ಯಪಾನೀಯಗಳೊಡನೆ ಸೇರಿಸಿ ಸಂಯೋಜಿತ (ಕಾಂಪೌಂಡೆಡ್) ಮತ್ತು ಸಂರಕ್ಷಿತ (ಫಾರ್ಟಿಫೈಡ್) ಮದ್ಯಗಳನ್ನು ತಯಾರಿಸುವರು. ಹದಗೊಳಿಸುವಿಕೆ (ಮೆಚೂರಿಂಗ್) : ಬಟ್ಟಿ ಇಳಿಸಿದ ಮದ್ಯಗಳು ಪಾನಯೋಗ್ಯವಾಗಬೇಕಾದರೆ ಅವುಗಳನ್ನು ಬಿಳಿ ಓಕ್ ಮರದಿಂದ ಮಾಡಿದ ಪೀಪಾಯಿಗಳು ಅಥವಾ ಜಾಡಿಗಳಲ್ಲಿ ಕೂಡಿಡಬೇಕು. ಕೆಲವು ಮದ್ಯಗಳನ್ನು ಕರಿಯ ಓಕ್ ಮರದ ಪೀಪಾಯಿಗಳಲ್ಲಿಟ್ಟು ಹದಗೊಳಿಸುವರು. ಅಮೆರಿಕನ್ ವಿಸ್ಕಿಯನ್ನು ಕೂಡಿಡುವ ಪೀಪಾಯಿಗಳು ಹೊಸದಾಗಿರಬೇಕು. ಅವನ್ನು ಹಿಂದೆ ಬಳಸಿರಬಾರದು. ಅವುಗಳ ಒಳಭಾಗ ಸುಟ್ಟು ಕಪ್ಪಾಗಿರಬೇಕು. ಕೆಲವು ಬಟ್ಟಿಗಳಲ್ಲಿ ಒಮ್ಮೆ ಉಪಯೋಗಿಸಿರುವ ಪೀಪಾಯಿಗಳಿಗೆ ಪ್ರಾಶಸ್ತ್ಯ ಹೆಚ್ಚು. ಪೀಪಾಯಿಗಳಲ್ಲಿ ಶೇಖರಿಸುವ ಮದ್ಯಕ್ಕೆ ನೀರು ಬೆರೆಸಿ ಆಲ್ಕೊಹಾಲಿನ ಅಂಶವನ್ನು ಕಡಿಮೆ ಮಾಡುವುದು ವಾಡಿಕೆ. ಇದೊಂದು ಪ್ರಾದೇಶಿಕ ಸಂಪ್ರದಾಯ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ 51.5% ಸ್ಕಾಟ್ಲೆಂಡಿನಲ್ಲಿ 62% ಮತ್ತು ಫ್ರಾನ್ಸಿನಲ್ಲಿ 70% ಆಲ್ಕೊಹಾಲನ್ನು ಪೀಪಾಯಿಗಳಲ್ಲಿಟ್ಟು ಭದ್ರಪಡಿಸುತ್ತಾರೆ. ಸಾಮಾನ್ಯವಾಗಿ ಇಂಥ ಮದ್ಯ ತುಂಬಿದ ಪೀಪಾಯಿಗಳನ್ನು ಗಾಳಿಯ ಹೊಡೆತಕ್ಕೆ ಆಸ್ಪದವಿಲ್ಲದ ಉಗ್ರಾಣಗಳಲ್ಲಿ ಸಾಲಾಗಿ ಹಂತಹಂತವಾಗಿ ಪೇರಿಸಿರುತ್ತಾರೆ. ಆಲ್ಕೊಹಾಲ್ ಸೋರಿ ನಷ್ಟವಾಗುತ್ತಿದ್ದರೆ ತನಿಖೆಮಾಡಲು ಈ ವ್ಯವಸ್ಥೆ ಅನುಕೂಲ. ಹದಗೊಳಿಸುವ ಈ ಅವಧಿಯಲ್ಲಿ ಮದ್ಯದಲ್ಲಿ ಗಣನೀಯ ಬದಲಾವಣೆಗಳಾಗುತ್ತವೆ. ಮರದ ಪೀಪಾಯಿ ಸಾಕಷ್ಟು ಸರಂಧ್ರವಾಗಿರುವುದರಿಂದ ಅದರೊಳಕ್ಕೆ ಗಾಳಿ ತೂರಬಹುದು. ಸ್ವಲ್ಪ ದ್ರವ ಆವಿಯಾಗಿ ಹೊರಕ್ಕೆ ಹೋಗಬಹುದು. ನೀರಿನ ಅಂಶ ನಿರ್ಗಮಿಸಿ ಪೀಪಾಯಿಯಲ್ಲಿರುವ ದ್ರವದಲ್ಲಿ ಆಲ್ಕೊಹಾಲಿನ ಅಂಶ ಹೆಚ್ಚುವುದು ಸರ್ವಸಾಮಾನ್ಯ. ಇದು ಅಮೆರಿಕನ್ ವಿಸ್ಕಿಗೆ ಅನ್ವಯಿಸುತ್ತದೆ. ಆದರೆ ಕೊನ್ಯಾಕ್ ಹೀಗೆ ಶೇಖರಿಸಲ್ಪಟ್ಟಾಗ ಜಲಾಂಶ ವೃದ್ಧಿಯಾಗುವುದು ಕಂಡುಬಂದಿದೆ. ಏತನ್ಮಧ್ಯೆ ಮದ್ಯದಲ್ಲಿರುವ ಅಪ್ರಧಾನ ವಸ್ತುಗಳಲ್ಲಿ ಮುಖ್ಯ ಬದಲಾವಣೆಗಳಾಗುತ್ತವೆ. ಅದರಲ್ಲಿರುವ ಆಮ್ಲಗಳು ಆಲ್ಕೊಹಾಲುಗಳೊಂದಿಗೆ ವರ್ತಿಸಿ ಮಧುರ ಎಸ್ಟರುಗಳಾಗುತ್ತವೆ. ಇದರಿಂದ ಎಸ್ಟರುಗಳ ಅಂಶ ಏರುತ್ತದೆ. ಅಲ್ಲದೆ ಗಾಳಿಯಲ್ಲಿರುವ ಆಕ್ಸಿಜನ್ನಿನ ಸಂಪರ್ಕದಲ್ಲಿ ಆಲ್ಕೊಹಾಲುಗಳು ಆಲ್ಡಿಹೈಡುಗಳಿಗೆ ಉತ್ಕರ್ಷಿತವಾಗುವುವು. ಟ್ಯಾನಿನ್ನುಗಳು ಮತ್ತು ಇನ್ನಷ್ಟು ಫರ್‍ಫ್ಯುರಾಲ್ (ಇದೂ ಒಂದು ಆಲ್ಡಿಹೈಡು) ಮರದ ಪೀಪಾಯಿಯಿಂದ ಮದ್ಯದಲ್ಲಿ ಲೀನವಾಗುವುವು. ಮದ್ಯಕ್ಕೆ ಬಣ್ಣವೂ ಪ್ರಾಪ್ತವಾಗುತ್ತದೆ. ನಿರೀಕ್ಷಿತ ಮಟ್ಟಕ್ಕೆ ಹದಗೊಳ್ಳಲು ಒಂದೊಂದು ಮದ್ಯಕ್ಕೆ ಬೇರೆ ಬೇರೆ ಕಾಲಾವಧಿ ಅಗತ್ಯ. ಕರಿಗಟ್ಟಿಸಿದ ಹೊಸ ಓಕ್ ಮರದ ಪೀಪಾಯಿಗಳಲ್ಲಿ ಮದ್ಯ ಬೇಗ ಹದವಾಗುವಷ್ಟು ಬಳಸಿದ ಜಾಡಿಗಳಲ್ಲಿಟ್ಟರೆ ಆಗುವುದಿಲ್ಲ. ಹೀಗಾಗಲು ಹವಾಗುಣವೂ ಕಾರಣ. ಮದ್ಯ ಹದವಾಗುವ ಕನಿಷ್ಠ ಅವಧಿ ಎರಡು ವರ್ಷಗಳು. ಆದರೆ ನಾಲ್ಕು ವರ್ಷಗಳಿಗೂ ಮೀರಿ ಕೂಡಿಡುವುದು ರೂಢಿ. ಇಂಥ ಮದ್ಯಗಳಲ್ಲಿ ಟ್ಯಾನಿನ್ ಮತ್ತು ಫರ್‍ಫ್ಯುರಾಲ್ ಅಂಶ ಹೆಚ್ಚಾಗಿರುವುದರಿಂದ ತೀಕ್ಷ್ಣವಾದ ಮರದ ರುಚಿ ಹುಟ್ಟುವುದು ಸಹಜ. ಇತರ ಬಟ್ಟಿ ಇಳಿಸಿದ ಮದ್ಯಗಳಿಗಿಂತ ಕೊನ್ಯಾಕ್ ಬ್ರಾಂದಿಯನ್ನು ಸುಮಾರು 50 ವರ್ಷಗಳ ಕಾಲ ಹೀಗೆ ಸುರಕ್ಷಿತವಾಗಿ ಕಾಪಾಡಬಹುದು. ಇಷ್ಟು ದೀರ್ಘಕಾಲ ಕೂಡಿಡುವ ಪ್ರಸಂಗ ಒದಗಿದರೆ ಆಗಿಂದಾಗ್ಗೆ ಹೊಸ ಬ್ರಾಂದಿಯನ್ನು ಅದಕ್ಕೆ ಸೇರಿಸುತ್ತ ಇರಬೇಕು. ಬಟ್ಟಿ ಇಳಿಸಿದ ಮದ್ಯಗಳು ಹಳತಾದಷ್ಟೂ ಹಿತವಾಗಿರುತ್ತವೆ. ಗಾಜಿನ ಪಾತ್ರೆಗಳಲ್ಲಿಟ್ಟ ಮದ್ಯ ಎಂದೂ ಹದವಾಗುವುದಿಲ್ಲ. ಇದು ಗಮನಾರ್ಹ. ಸೀಸೆಗೆ ತುಂಬಿದ ದಿವಸ ಇದ್ದಂತೆಯೇ ಮದ್ಯ ಅದನ್ನು ತೆರೆದ ದಿವಸವೂ ಇರುತ್ತದೆ.

ಪಾನೀಯಗಳ ವರ್ಗೀಕರಣ. 1. ವಿಸ್ಕಿ : ಧಾನ್ಯದಿಂದ ಬಂದ ಮ್ಯಾಷ್ ಗಂಜಿಯನ್ನು ಹುಳಿಬರಿಸಿ ಬಂದ ಮದ್ಯವನ್ನು ಬಟ್ಟಿ ಇಳಿಸಿ ಮರದ ಪೀಪಾಯಿಗಳಲ್ಲಿಟ್ಟು ಹಳತು ಮಾಡಿದ ಪಾನೀಯ. ಇದನ್ನು ತಯಾರಿಸುವ ಪ್ರಮುಖ ದೇಶಗಳು ಕ್ರಮವಾಗಿ ಅಮೆರಿಕ ಸಂಯಕ್ತ ಸಂಸ್ಥಾನ, ಸ್ಕಾಟ್ಲೆಂಡ್, ಕೆನಡ ಮತ್ತು ಐರ್ಲೆಂಡ್. ಅಮೆರಿಕ ಸರ್ಕಾರದ ನಿಯಮಗಳ ಪ್ರಕಾರ ನೇರ, ಬೂರ್ಬನ್, ರೈ ಮತ್ತು ಸಂಮಿಳಿತ ವಿಸ್ಕಿಗಳೆಂಬ ದರ್ಜೆಗಳಿವೆ. ಸ್ಕಾಚ್ ವಿಸ್ಕಿಯನ್ನು ತಯಾರಿಸುವಾಗ ಬಾರ್ಲಿ ಮಾಲ್ಟನ್ನು ಪೀಟ್ ಹೊಗೆಯ ಸಂಪರ್ಕದಲ್ಲಿ ಕಾಸಿ ಒಣಗಿಸುವರು. ಜೊತೆಗೆ ಅಲ್ಲಿಯ ನೀರಿನ ಗುಣದ ಪರಿಣಾಮವೂ ಸೇರಿ ವಿಸ್ಕಿಗೆ ಧೂಮ ರುಚಿ ಉಂಟಾಗುತ್ತದೆ. ಐರಿಷ್ ವಿಸ್ಕಿಗೆ ಈ ರುಚಿ ಇರುವುದಿಲ್ಲ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಮತ್ತು ಕೆನಡಾದಲ್ಲಿ ವಿಸ್ಕಿ ತಯಾರಿಸುವ ಕ್ರಮದಲ್ಲಿ ಏಕರೂಪತೆಯಿದೆ.

2. ವೋದ್ಕಾ : ಇದೊಂದು ಹಳತು ಮಾಡದ ಬಟ್ಟಿ ಇಳಿಸಿದ ಮದ್ಯ. ಇದ್ದಲಿನ ಮೂಲಕ ಶೋಧಿಸಿ ಅಗತ್ಯವಿದ್ದಷ್ಟು ನೀರು ಸೇರಿಸಿ ಕುಡಿಯಲು ಹದ ಮಾಡಿರುತ್ತಾರೆ. ರಷ್ಯ ಮತ್ತು ಪೋಲೆಂಡುಗಳಲ್ಲಿ ಆಲೂಗೆಡ್ಡೆಯಿಂದ ವೋದ್ಕಾ ತಯಾರಿಸುವುದೇ ಹೆಚ್ಚು. ಆದರೆ ಅಮೆರಿಕದಲ್ಲಿ ಧಾನ್ಯದಿಂದ ವೋದ್ಕಾ ತಯಾರಿಸುವುದು ವಾಡಿಕೆ. ಬಟ್ಟಿ ಇಳಿಸಿದ ಅಮೆರಿಕನ್ ವೋದ್ಕಾ ಪಾನೀಯದಲ್ಲಿ 95% ಆಲ್ಕೊಹಾಲ್ ಇರುತ್ತದೆ. ಇದನ್ನು ಇದ್ದಲಿನ ಮೂಲಕ ಶೋಧಿಸಿದರೆ ವಿಶಿಷ್ಟ ರುಚಿ, ವಾಸನೆ ಒಂದೂ ಇಲ್ಲದ ಪಾನೀಯ ದೊರೆಯುತ್ತದೆ.

3 ರಮ್ : ಕಬ್ಬಿನ ರಸ ಅಥವಾ ಕಾಕಂಬಿಯನ್ನು ಹುಳಿಸಿ ಬಟ್ಟಿ ಇಳಿಸಿ ಪಡೆದ ಮದ್ಯ. ಆದ್ದರಿಂದ ಸಕ್ಕರೆ ಕೈಗಾರಿಕೆಯ ಉಪವಸ್ತುವಾಗಿ ದೊರೆಯುವ ಈ ಪಾನೀಯ ಕಬ್ಬು ಬೆಳೆಯುವ ಪ್ರದೇಶಗಳಲ್ಲಿ ಉತ್ಪಾದನೆಯಾಗುತ್ತದೆ. ಅದರಲ್ಲಿ ಮೂರು ಮುಖ್ಯ ದರ್ಜೆಗಳಿವೆ. ಶುಷ್ಕ ರಮ್ ಉತ್ಪಾದಿಸುವ ದೇಶಗಳೆಂದರೆ ಕ್ಯೂಬ, ಮೆಕ್ಸಿಕೊ, ಬ್ರೆಜಿಲ್, ಅರ್ಜೆಂಟೈನಾ ಮತ್ತು ಪೆರುಗ್ವೆ, ಘಾಟು ರಮ್, ಜಮೈಕ, ಬಾರ್ಬಡಾಸ್ ಮತ್ತು ಬ್ರಿಟಿಷ್ ಗಯಾನದಿಂದ ಬರುತ್ತದೆ. ಬ್ರಾಂದಿಯಂತಿರುವ ರಮ್ ಜಾವಾದಲ್ಲಿ ಹೆಚ್ಚು ಬಳಕೆಯಲ್ಲಿದೆ.

4 ಬ್ರಾಂದಿ : ಇದನ್ನು ದ್ರಾಕ್ಷಾರಸದಿಂದ ತಯಾರಿಸುವುದು ಪದ್ಧತಿ. ಮರದ ಪೀಪಾಯಿಯಲ್ಲಿಟ್ಟು ಹಳತು ಮಾಡುವರು. ದ್ರಾಕ್ಷಾರಸದಿಂದ ಪಡೆದ ಪಾನೀಯಕ್ಕೆ ಈ ಹೆಸರನ್ನು ಸಾಮಾನ್ಯವಾಗಿ ಅನ್ವಯಿಸಿದರೂ ಫ್ರಾನ್ಸಿನ ಕೊನ್ಯಾಕ್ ಅತ್ಯುತ್ತಮ ಬ್ರಾಂದಿಯೆಂದು ಪರಿಗಣಿಸಲ್ಪಟ್ಟಿದೆ. ಇತರ ಬ್ರಾಂದಿಗಳನ್ನು ಸೇಬು, ಪ್ಲಮ್, ಚೆರ್ರಿ ಮತ್ತು ಏಪ್ರಿಕಾಟ್ ಹಣ್ಣುಗಳ ರಸದಿಂದ ತಯಾರಿಸುತ್ತಾರೆ. ಇವುಗಳಿಗೆ ವಿಶಿಷ್ಟ ಹೆಸರುಗಳಿಟ್ಟು ಮಾರುತ್ತಾರೆ. ಹಂಗೆರಿ, ಯುಗೋಸ್ಲೇವಿಯ ಮತ್ತು ರುಮೇನಿಯ ದೇಶಗಳಲ್ಲಿ ಪ್ಲಮ್ ಬ್ರಾಂದಿಗೆ ಪ್ರಾಶಸ್ತ್ಯ. ಅದು ಅವರ ರಾಷ್ಟ್ರೀಯ ಪಾನೀಯವಿದ್ದಂತೆ. ಅದಕ್ಕೆ ಪ್ಲಮ್ ಹಣ್ಣಿನ ವಿಶಿಷ್ಟ ರುಚಿ ವಾಸನೆಗಳೂ ಮತ್ತು ಹೊಂಬಣ್ಣವೂ ಇರುತ್ತವೆ. ಪ್ಲಮ್ ಹಣ್ಣುಗಳಲ್ಲಿ ನಾನಾ ಜಾತಿಗಳಿರುವಂತೆ ಪ್ಲಮ್ ಬ್ರಾಂದಿಯಲ್ಲೂ ಹಲವು ಬಗೆಯುಂಟು. ಚೆರ್ರಿ ಬ್ರಾಂದಿಯನ್ನು ಫ್ರಾನ್ಸಿನಲ್ಲಿ ಕಿರ್ಷ್ ಎಂದೂ ಜರ್ಮನಿ ಮತ್ತು ಸ್ವಿಟ್ಜ್‍ರ್‍ಲ್ಯಾಂಡುಗಳಲ್ಲಿ ಕಿರ್ಷ್‍ವಾಸೆರ್ ಎಂದೂ ಕರೆಯುವರು. ರೈನ್ ನದೀ ಪಾತ್ರದಲ್ಲಿ ಹೇರಳವಾಗಿ ಬೆಳೆಯುವ ಕಪ್ಪು ಚೆರ್ರಿ ಹಣ್ಣುಗಳಿಂದ ಇದನ್ನು ಮಾಡುವರು. ಅದಕ್ಕೆ ಬಣ್ಣವಿರುವುದಿಲ್ಲ; ಮತ್ತು ಅದನ್ನು ಹಳತು ಮಾಡುವುದಿಲ್ಲ. ಹುಳಿ ಬರಿಸುವಾಗ ಚೆರ್ರಿ ಬೀಜಗಳೂ ಅರೆಯಲ್ಪಟ್ಟು ಮ್ಯಾಷ್ ಗಂಜಿಯೊಡನೆ ಬೆರೆಯುವುದರಿಂದ ಕಹಿ ಬಾದಾಮಿಯ ಲಘುವಾಸನೆ ಹೊಂದಿರುತ್ತದೆ. ಆದರೆ ಮದ್ಯದ ಸೊಗಸಾದ ಚೆರ್ರಿ ಹಣ್ಣಿನ ಮಾಧುರ್ಯ ಇದನ್ನು ಮರೆಮಾಚುತ್ತದೆ. ಈ ಕಾರಣಕ್ಕಾಗಿಯೇ ಸೇಬಿನ ಬ್ರಾಂದಿಯ ಹೊರತು ಉಳಿದ ಹಣ್ಣಿನ ಬ್ರಾಂದಿಗಳಿಗೆಲ್ಲ ಕಹಿ ಬಾದಾಮಿಯ ತೆಳು ವಾಸನೆಯಿರುವುದು.

ಇತರ ಪಾನೀಯಗಳು. 1. ಟೆಕ್ವಿಲ : ಮೆಕ್ಸಿಕೊ ದೇಶದ ಜನಾನುರಾಗಿ ಪಾನೀಯ. ಶತಮಾನಸಸ್ಯ ಎಂದು ಹೆಸರಾದ, ಅಲ್ಲಿ ಮೆಸ್ಕಲ್ ಎಂದು ಕರೆಯುವ ಗಿಡದ ಜೀವರಸದಿಂದ ಇದನ್ನು ಮಾಡುತ್ತಾರೆ. ಹೊಸದಾದ ಮತ್ತು ನಾಲ್ಕು ವರ್ಷ ಹದ ಮಾಡಿದ ಟೆಕ್ವಿಲ ಮದ್ಯವನ್ನು ( 43-50% ಆಲ್ಕೊಹಾಲ್ ಇರುವುದು) ಮೆಕ್ಸಿಕೊ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಮಾರುವರು.

2. ಓಕೊಲೆಹೊ : ಹವಾಯ್ ದ್ವೀಪ ನಿವಾಸಿಗಳು ತಯಾರಿಸುವ ಮದ್ಯವಿಶೇಷ. ಕಾಕಂಬಿ, ಅಕ್ಕಿ ಮತ್ತು ಟಿರೂಟ್ ಬೇರಿನ ಸೂಕ್ತ ಮಿಶ್ರಣದ ಹುಳಿಬರಿಸುವಿಕೆಯಿಂದ ಲಭ್ಯವಾದ ಪಾನೀಯ. ಇದರಲ್ಲಿ 40-50% ಆಲ್ಕೊಹಾಲಿರುತ್ತದೆ. ಕಪ್ಪು ಬಣ್ಣ ಮತ್ತು ಧೂಮ ರುಚಿ ಇರುವ (ಬೇಯಿಸಿದ ಟಿರೂಟ್ ಬೇರಿನಿಂದ ಹುಟ್ಟಿದ್ದು) ಈ ಮದ್ಯವನ್ನು ಸುಟ್ಟ ಮರದ ಪೀಪಾಯಿಗಳಲ್ಲಿ ಹಲವು ವರ್ಷಗಳ ಕಾಲ ಕೂಡಿಟ್ಟಿರುತ್ತಾರೆ. ಟಿರೂಟ್ ಬೇರಿನ ಬದಲು ತೆಂಗಿನ ಹಾಲನ್ನು ಬಳಸಿ ಸುಡದಿರುವ ಮರದ ಪೀಪಾಯಿಗಳಲ್ಲಿಟ್ಟು ಹಳತು ಮಾಡಿದರೆ ನಿರ್ವರ್ಣವಾದ ಮದ್ಯ ದೊರೆಯುತ್ತದೆ.

3. ಎನ್ಜಿಕಾಪಿ ಅಥವಾ ಚೀನಿ ವಿಸ್ಕಿ : ಮಿಲೆಟ್ ಗಂಜಿಯಿಂದ ತಯಾರಿಸಿ ಸುಗಂಧಯುಕ್ತ ಬೇರುಗಳ ಕಷಾಯದಿಂದ ಆಕರ್ಷಕಗೊಳಿಸಿದ ಮದ್ಯಪಾನೀಯ. ಇದರಲ್ಲಿ 48% ಆಲ್ಕೊಹಾಲ್ ಇರುತ್ತದೆ. ಇದನ್ನು ಸಹ ಮರದ ಸಂಪರ್ಕದಲ್ಲಿ ಹದಗೊಳಿಸಬೇಕು.

ಮಧುರಗೊಳಿಸಿದ ಮದ್ಯಗಳು : ಇದರಲ್ಲಿ ಜಿನ್ ಮುಖ್ಯವಾದುದು. ಮದ್ಯವನ್ನು ಮಾಧುರ್ಯಜನಕ ವಸ್ತುವಿನ ಸಂಪರ್ಕದಲ್ಲಿ ಬಟ್ಟಿ ಇಳಿಸಿ ಇವನ್ನು ತಯಾರಿಸಬಹುದು. ಇದಕ್ಕಾಗಿ ಜ್ಯೂನಿಪರ್ ಕಾಯಿ ಇತ್ಯಾದಿಗಳನ್ನು ಬಳಸುವರು. ಸ್ಕಾಂಡಿನೇವಿಯನ್ ರಾಜ್ಯಗಳಲ್ಲಿ ಬಳಕೆಯಲ್ಲಿರುವ ಪಾನೀಯವೆಂದರೆ ಅಕ್ವಾವಿಟ್, ಕ್ಯೂಮಿನ್, ಕ್ಯಾರವೇ ಇತ್ಯಾದಿ ಬೀಜಗಳ ಸಂಪರ್ಕದಲ್ಲಿ ಆಲೂಗೆಡ್ಡೆಯಿಂದ ಬಂದ ಮದ್ಯವನ್ನು ಕಾಯಿಸಿದಾಗ ಇದು ಉಂಟಾಗುವುದು. ಡೆನ್ಮಾರ್ಕಿನ ಮದ್ಯ ನಿರ್ವರ್ಣವಾಗಿಯೂ ನಾರ್ವೀಜಿಯನ್ ಮತ್ತು ಸ್ವೀಡಿಷ್ ಮದ್ಯಗಳು ತಿಳಿ ಹಳದಿ ಬಣ್ಣ ಮತ್ತು ಮಸಾಲೆ ವಾಸನೆಯನ್ನೂ ಫಿನ್ಲೆಂಡಿನ ಮದ್ಯ ದಾಲ್ಚಿನ್ನಿಯ ವಾಸನೆಯನ್ನೂ ಹೊಂದಿರುತ್ತವೆ. ಆಕ್ವಾವಿಟ್ ಮದ್ಯದಲ್ಲಿ 41.5-45% ಆಲ್ಕೊಹಾಲಿರುತ್ತದೆ.

ಮದ್ಯಪಾನಕಗಳು (ಕಾರ್ಡಿಯಲ್ಸ್) : ಮಧ್ಯಯುಗದ ವೈದ್ಯರು ಮತ್ತು ರಸವಾದಿಗಳು ರೋಗನಿವಾರಣೆಗಾಗಿ ತಯಾರಿಸಿದ ಈ ಪಾನೀಯಗಳ ಬಳಕೆ ಸುಧಾರಿತ ರೀತಿಯಲ್ಲಿ ವಿಶ್ವವ್ಯಾಪಕವಾಗಿದೆ. ಅಮೆರಿಕ ದೇಶದ ನಿಯಮದ ಪ್ರಕಾರ ಈ ಪಾನಕಗಳಲ್ಲಿ ಕನಿಷ್ಟಪಕ್ಷ 2.5% ಸಕ್ಕರೆಯ ಅಂಶವಿರಬೇಕು. ಆಲ್ಕೊಹಾಲಿನ ಅಂಶ 6-49% ಮಿತಿಯಲ್ಲಿರುವುದು. ಅವುಗಳ ಆಕರ್ಷಕ ಬಣ್ಣ ಮಾಧುರ್ಯ ಮತ್ತು ಅಂಗಾಂಶಗಳ ವೈವಿಧ್ಯಕ್ಕೆ ಕೊನೆಯಿಲ್ಲ.

(ಎಸ್.ಜಿ.ಎಸ್.)