ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಲ್ಬರ್ಟ್

ವಿಕಿಸೋರ್ಸ್ದಿಂದ

೧೮೧೯-೬೧. ಪ್ರಿನ್ಸ್ ಆಲ್ಬರ್ಟ್ ಎಂಬ ಹೆಸರಿನಿಂದ ಪ್ರಸಿದ್ಧನಾದ ಈತ ಇಂಗ್ಲೆಂಡಿನ ವಿಕ್ಟೋರಿಯ ರಾಣಿಯ ಗಂಡ. ತಂದೆ ಜರ್ಮನಿಯ ಸ್ಯಾಕ್ಸ್-ಕೊಬರ್ಗ್-ಗೋಥಾದ ಡ್ಯೂಕ್ ಅರ್ನೆಸ್ಟ್. ತಾಯಿ ಲೊಯಿಸಾ ಸ್ಯಾಕ್ಸ್-ಗೋಥಾ ಅಲ್ಟೆನ್ಬರ್ಗ್ ಡ್ಯೂಕನ ಮಗಳು. ಬಾಲ್ಯ ಕಾರ್ಪಣ್ಯದ ಜೀವನದಲ್ಲಿ ಕಳೆಯಿತು. ಮುಂದೆ ಬ್ರಸಲ್ಸ್ ಮತ್ತು ಬಾನ್ ನಗರಗಳಲ್ಲಿ ಉಚ್ಚ ಶಿಕ್ಷಣ ಪಡೆದು ತುಂಬ ಮೇಧಾವಿ, ಶ್ರದ್ಧಾವಂತನೆಂದು ಹೆಸರು ಪಡೆದ. ಆದರೂ ತನ್ನ ಪ್ರಾಂತ್ಯದ ನಡೆನುಡಿ, ದೃಷ್ಟಿ, ಭಾವನೆಗಳಿಗೆ ಕೊನೆಯವರೆಗೂ ಅಂಟಿಕೊಂಡೇ ಇದ್ದ. ತಾರುಣ್ಯದಲ್ಲಿ ಅವನ ಸಲಹೆಗಾರನಾಗಿ (ಮೆಂಟಾರ್) ನೇಮಿಸಲ್ಪಟ್ಟಿದ್ದ ಬ್ಯಾರನ್ ಸ್ಟಾಕ್ಮಾರ್ ಸಂದರ್ಭ ಸಾಧಕ ಮತ್ತು ಸ್ವಾರ್ಥಿಯಾದುದರಿಂದ ಅವನಿಂದಲೂ ಸರಿಯಾದ ರಾಜಕೀಯ ಶಿಕ್ಷಣ ದೊರಕಲಿಲ್ಲ. ಆಲ್ಬರ್ಟ್ ಸ್ಫುರದ್ರೂಪಿ; ಅವನದು ಆಕರ್ಷಕ ವ್ಯಕ್ತಿತ್ವ.. ಇಂಗ್ಲೆಂಡಿನ ಸಾಮ್ರಾಜ್ಞಿ ವಿಕ್ಟೋರಿಯಾಳನ್ನು 1840ರಲ್ಲಿ ಮದುವೆಯಾದ. 1842ರಲ್ಲಿ ಕಾನ್ಸಾರ್ಟ್ (ರಾಣಿಯ ಪತಿ) ಎಂಬ ಪ್ರಶಸ್ತಿಯೂ 1857ರಲ್ಲಿ ಪ್ರಿನ್ಸ್ ಕಾನ್ಸಾರ್ಟ್ (ರಾಣಿಯ ಪತಿಯಾದ ರಾಜಕುಮಾರ) ಎಂಬ ಬಿರುದೂ ಅವನಿಗೆ ವಿಧ್ಯುಕ್ತವಾಗಿ ಬಂದವು. ಇಂಗ್ಲೆಂಡಿನ ಮಂತ್ರಿವರ್ಗದವರಿಗೆ ಅವನಲ್ಲಿ ಸಂಶಯ; ಜನತೆಗೂ ಅವನು ಜರ್ಮನಿಯವನಾದ್ದರಿಂದ ಅಪನಂಬಿಕೆ. ಆದರೂ ರಾಣಿಯ ಮೂಲಕ ಮಂತ್ರಿಗಳಿಗೆ ತಿಳಿದುಬಂದ ಅವನ ಅನೇಕ ರಾಜಕೀಯ ಸಲಹೆಗಳು ಅವನ ಪರಿಜ್ಞಾನವನ್ನೂ ದೂರದರ್ಶಿತ್ವವನ್ನೂ ತೋರಿಸಿದುವು. ರಾಜಕೀಯದಲ್ಲಿ ತನಗೆ ಆಸ್ಪದವಿಲ್ಲದುದನ್ನು ಕಂಡು ಆಲ್ಬರ್ಟ್ ಕಲೆ, ಸಮಾಜ ಕಲ್ಯಾಣ, ಆರ್ಥಿಕ ಪ್ರಗತಿಗಳಂಥ ವಿಷಯಗಳಲ್ಲಿ ಆಸಕ್ತಿ ವಹಿಸಿ ಶ್ರದ್ಧೆಯಿಂದ ದುಡಿದ. 1851ರ ಗ್ರೇಟ್ ಎಗ್ಸಿಬಿಷನ್ (ವಸ್ತುಪ್ರದರ್ಶನ) ಯಶಸ್ವಿಯಾಗಿ ಎಲ್ಲರಿಂದಲೂ ಮೆಚ್ಚುಗೆ ಪಡೆದಿದ್ದು ಅವನ ಶ್ರಮದ ಫಲವಾಗಿ.