ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಸಂದಿ

ವಿಕಿಸೋರ್ಸ್ದಿಂದ

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಒಂದು ಗ್ರಾಮ. ಅಜ್ಜಂಪುರದ ಆಗ್ನೇಯಕ್ಕೆ 11ಕಿಮೀ ದೂರದಲ್ಲಿದೆ. ಗಂಗರ ಮತ್ತು ಹೊಯ್ಸಳರ ಕಾಲದಲ್ಲಿ ಇದು ಆಸಂದಿನಾಡು ಎಂಬ ಆಡಳಿತ ಪ್ರಾಂತ್ಯದ ಮುಖ್ಯ ಸ್ಥಳವಾಗಿದ್ದಿತು. ಎಂಟನೆಯ ಶತಮಾನದಲ್ಲಿ ಇದು ಶ್ರೀಪುರುಷನ ಮಗ ವಿಜಯಾದಿತ್ಯನ ಆಳ್ವಿಕೆಗೂ ಹನ್ನೆರಡು, ಹದಿಮೂರನೆಯ ಶತಮಾನಗಳಲ್ಲಿ ಗಂಗವಂಶದ ಒಂದು ಶಾಖೆಯ ಆಡಳಿತಕ್ಕೂ ಒಳಪಟ್ಟಿತ್ತು. ಇಲ್ಲಿನ ಪಾಳು ಬಿದ್ದಿರುವ ದೇವಾಲಯಗಳೂ ದೊರೆತಿರುವ ಶಾಸನಗಳೂ ಇದು ಹಿಂದೆ ಪ್ರಸಿದ್ಧಿಪಡೆದ ಸ್ಥಳವೆಂಬ ಅಂಶವನ್ನು ಸ್ಪಷ್ಟಪಡಿಸುತ್ತವೆ.

1206ರ ಒಂದು ಶಾಸನದಿಂದ ಇಲ್ಲಿ 13 ಶೈವದೇವಾಲಯಗಳಿದ್ದುವೆಂದು ತಿಳಿಯುತ್ತದೆ. ಈಗ ಮೂರು ಮಾತ್ರ ಉಳಿದಿವೆ. ಮುಖ್ಯವಾದ್ದು ಗಂಗೇಶ್ವರ, ಬ್ರಹ್ಮೇಶ್ವರ ದೇವಾಲಯಗಳು. ವಸ್ತುತಃ ಇವೆರಡೂ ಎರಡು ಗುಡಿಗಳಿರುವ ಒಂದೇ ದೇವಾಲಯ. ಇದು ಇಲ್ಲಿ ಆಳುತ್ತಿದ್ದ ಸಾಮಂತ ಗಂಗ ಅರಸನಿಂದ 1191ರಲ್ಲಿ ರಚಿತವಾಯಿತು. ಎರಡು ಗುಡಿಗಳೂ, ಹಿನ್ಸರಿತ ಮುನ್ಸರಿತಗಳಿಂದ ಕೂಡಿದ ಪರಿಘವಿರುವ ಆಯಾಕಾರದ ತಳವಿನ್ಯಾಸದಲ್ಲಿವೆ. ಗರ್ಭಗುಡಿ, ಅಂತರಾಳ ಮತ್ತು ತೆರೆದ ಮಂಟಪಗಳಿವೆ. ಹೊರಮೈಯಲ್ಲಿ ಅಡ್ಡಪಟ್ಟಿಕೆಗಳ ಅದಿsಷ್ಠಾನ, ಶಿಖರಾಕೃತಿಗಳು, ಸಿಂಹ ಲಲಾಟಗಳನ್ನು ಕೆತ್ತಿರುವ ಅರೆಗಂಬಗಳಿಂದ ಕೂಡಿದ ಭಿತಿ ಇವೆ. ಶಿಖರಗಳು ಉಳಿದಿಲ್ಲ. ಒಳಕಂಬಗಳು ಹೊಯ್ಸಳ ರೀತಿಯವು. ದ್ವಾರಬಂಧಗಳು ಮತ್ತು ಭುವನೇಶ್ವರಿಗಳಲ್ಲಿ ಸುಂದರವಾದ ಕೆತ್ತನೆಗಳಿವೆ.

ಇಲ್ಲಿನ ವೀರಭದ್ರ ದೇವಾಲಯ 1205ರಲ್ಲಿ ಹರಹ ಸಾಹಣೆ ಎಂಬುವನಿಂದ ರಚಿತವಾದ್ದು. ಶಾಸನಗಳಲ್ಲಿ ದೇವರನ್ನು ಬಲ್ಲೇಶ್ವರ ಎಂದು ಹೆಸರಿಸಲಾಗಿದೆ. ಇದೊಂದು ತ್ರಿಕೂಟಾಚಲ. ಮೂರು ಗರ್ಭಗೃಹಗಳು, ಅಂತರಾಳ, ನವರಂಗ ಮತ್ತು ಮುಖಮಂಟಪ ವಿರುವ ಕಟ್ಟಡ. ಹೊರಮೈಯಲ್ಲಿ ಶಿಲ್ಪಾಲಂಕರಣಗಳು, ಒಳಗೆ ಹೊಯ್ಸಳ ಮಾದರಿಯ ಕಂಬಗಳು, ಕುಸುರಿ ಕೆತ್ತನೆಯ ಬಾಗಿಲುವಾಡ, ಭುವನೇಶ್ವರಿಗಳು ಇದ್ದು ಇದೊಂದು ಉತ್ತಮ ಹೊಯ್ಸಳ ವಾಸ್ತುಕೃತಿಯ ಉದಾಹರಣೆಯಾಗಿದೆ. ಹೊರಬಿsತ್ತಿಯ ಶಿಲ್ಪಗಳಲ್ಲಿ ತಾಂಡವೇಶ್ವರ, ತ್ರಿವಿಕ್ರಮ ಮೊದಲಾದವು ಅನುಪಮ ಸುಂದರ ಕೃತಿಗಳು. ಒಳಗಿರುವ ವೀರಭದ್ರಮೂರ್ತಿ ಇತ್ತೀಚಿನದು. ದೇವಾಲಯದಲ್ಲಿ ಕೆಲವು ಕಂಚಿನ ಮೂರ್ತಿಗಳಿವೆ. ಇಲ್ಲಿನ ಇನ್ನೊಂದು ದೇವಾಲಯ ಚಂಡಿಕೇಶ್ವರನದು. ಇದೂ ಬಹುಶಃ ಹೊಯ್ಸಳ ಕಾಲದ್ದಾದರೂ ಹೆಚ್ಚಿನ ಅಲಂಕರಣಗಳಿಲ್ಲದ ಸಾಮಾನ್ಯ ಕಟ್ಟಡ.