ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇಂಗರ್ಸಾಲ್, ರಾಬರ್ಟ್ ಗ್ರೀನ್

ವಿಕಿಸೋರ್ಸ್ದಿಂದ

1833-99. ಅಮೆರಿಕ ಸಂಯುಕ್ತ ಸಂಸ್ಥಾನದ ಪ್ರಸಿದ್ಧ ವಕೀಲ. ಬಾಬ್ ಇಂಗರ್ಸಾಲ್ ಎಂದು ಜನ ಕರೆಯುತ್ತಿದ್ದರು. ನ್ಯೂಯಾರ್ಕ್ ನಗರದಲ್ಲಿ ಜನಿಸಿದ. ತಂದೆ ಚರ್ಚಿನಲ್ಲಿ ಪುರೋಹಿತ. ಶಾಸ್ತ್ರೀಯ ವಿದ್ಯಾಭ್ಯಾಸ ದೊರಕಿದ್ದುದು ಅತ್ಯಲ್ಪ. ಆದರೆ ಸ್ವತಃ ವಿದ್ಯಾಪಾರಂಗತನಾಗಿ 1854ರಲ್ಲಿ ಇಲಿನಾಯ್ ಎಂಬಲ್ಲಿ ವಕೀಲವೃತ್ತಿಗೆ ಅರ್ಹತೆ ಪಡೆದ. ಪಿಯೋರಿಯ, ವಾಷಿಂಗ್ಟನ್, ನ್ಯೂಯಾರ್ಕ್ ನಗರಗಳಲ್ಲಿ ವಕೀಲವೃತ್ತಿಯಿಂದ ಅಧಿಕವಾಗಿ ಹಣಗಳಿಸಿದ. ಇಲಿನಾಯ್ನ ಅಶ್ವದಳದಲ್ಲಿ ಸ್ವಯಂಸೇವಕನಾಗಿ ಕರ್ನಲ್ ಅಧಿಕಾರದಲ್ಲಿದ್ದು ಅಚಾತುರ್ಯಕ್ಕೆ ಸಿಕ್ಕಿ ಹುದ್ದೆ ಕಳೆದುಕೊಂಡ (1862); ರಿಪಬ್ಲಿಕನ್ ಪಕ್ಷಕ್ಕೆ ಸೇರಿ ಇಲಿನಾಯ್ನಲ್ಲಿ 1867-69ರವರೆವಿಗೆ ಅಟಾರ್ನಿ ಜನರಲ್ ಆಗಿ ನೇಮಕವಾದ. ಆ ಪಕ್ಷದ ಮುಖ್ಯ ಭಾಷಣಕಾರನಾಗಿ ಪ್ರೆಸಿಡೆಂಟ್ ಚುನಾವಣೆಯ 1876 ಮತ್ತು 1880ರ ಚಳವಳಿಗಳಲ್ಲಿ ಹೆಸರು ಗಳಿಸಿದ. ರಿಪಬ್ಲಿಕನ್ ಪಕ್ಷದವರು ಯಾವುದೋ ಒಂದು ನ್ಯಾಯವ್ಯವಹಾರದಲ್ಲಿ ಸಿಕ್ಕಿದಾಗ ಅವರ ಪಕ್ಷದ ವಕೀಲನಾದ. ಕ್ರೈಸ್ತಧರ್ಮವನ್ನು ಖಂಡಿಸಿದುದರಿಂದ, ಮಂತ್ರಿವರ್ಗದಲ್ಲಿಯಾಗಲಿ ರಾಜಕೀಯದಲ್ಲಾಗಲಿ ಮಹತ್ತ್ವದ ಸ್ಥಾನ ದೊರೆಯಲಿಲ್ಲ. ಅವನ ಭಾಷಣಗಳು ಬಹಳ ಮನ್ನಣೆ ಪಡೆದಿದ್ದು ಒಂದು ಸಂಜೆಯ ಭಾಷಣಕ್ಕೆ 3500 ಡಾಲರ್ವರೆಗೂ ಸಂಭಾವನೆ ಸಿಗುತ್ತಿತ್ತು. ಇಂಗರ್ಸಾಲ್ ಬೈಬಲ್ಲನ್ನೂ ಕ್ರೈಸ್ತ ನಂಬಿಕೆಗಳನ್ನೂ ಕಟುವಾಗಿ ಟೀಕಿಸುತ್ತಿದ್ದ. ಮಾನವಹಿತಸಾಧನೆಯೇ ಇವನ ಮತವಾಗಿತ್ತು. ಅಲ್ಲದೆ ವಿಜ್ಞಾನವಿಚಾರತತ್ತ್ವಗಳಿಗೆ ಪ್ರಧಾನಸ್ಥಾನ ಕೊಟ್ಟಿದ್ದ. ಈತನ ಭಾಷಣಗಳೂ ನಿರೂಪಣೆಗಳೂ 12 ಹೊತ್ತಿಗೆಗಳನ್ನೊಳಗೊಂಡ ಗ್ರಂಥ ಸಂಪುಟದಲ್ಲಿ, ಕ್ಲಿಂಟನ್ ಪಿ. ಫ್ಯಾರೆಲ್ನ ಸಂಪಾದಕತ್ವದಲ್ಲಿ ಪ್ರಕಟವಾಗಿವೆ. ಈತನ ಜೀವನಚರಿತ್ರೆ 1952ರಲ್ಲಿ ಸಿ.ಎಚ್.ಕ್ರೇಮಲ್ ಎಂಬಾತನಿಂದ ರಾಯಲ್ ಬಾಬ್ ಎಂಬ ಹೆಸರಿನಲ್ಲಿ ಹೊರಬಿದ್ದಿದೆ. ಸಮ್ ಮಿಸ್ಟೇಕ್ಸ್ ಆಫ್ ಮೋಸೆಸ್ (1879) ವೈ ಐ ಆ್ಯಮ್ ಎನ್ ಅಗ್ನೋಸ್ಟಿಕ್ (1896), ದಿ ಗಾಡ್ಸ್ ಆ್ಯಂಡ್ ಅದರ್ ಲೆಕ್ಚರ್ಸ್ (1876), ಸೂಪರ್ ಸ್ಟಿಷನ್ (1898) ಎಂಬುವು ಈತನ ಮುಖ್ಯ ಗ್ರಂಥಗಳು. ಈತನನ್ನು ಡಾರ್ವಿನ್ನನ ಪರಮ ಶಿಷ್ಯನೆಂದು ಅಮೆರಿಕದವರು ಕರೆದಿದ್ದಾರೆ.