ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇಂಜೆಲೊ, ಜೀನ್

ವಿಕಿಸೋರ್ಸ್ದಿಂದ

ಇಂಜೆಲೊ, ಜೀನ್ 1820-1897. ಆಂಗ್ಲ ಕವಯಿತ್ರಿ. ಲಿಂಕನ್ ಷೈರಿನ ಬೋಸ್ಟನ್ ಎಂಬಲ್ಲಿ ಈಕೆಯ ಜನನ. ಭಕ್ತಿಗೀತೆಗಳನ್ನೂ ಹಾಡುಕಬ್ಬಗಳನ್ನೂ ಭಾವಗೀತೆಗಳನ್ನೂ ಬರೆದಿದ್ದಾಳೆ. ಕ್ಯಾಲ್‍ವರ್ಲಿ ಎಂಬಾತ ಇವುಗಳನ್ನು ಅಣಕ ಮಾಡಿ ಜನಪ್ರಿಯ ಹಾಸ್ಯ ಪದ್ಯ ಬರೆದಿದ್ದರಿಂದ ಈ ಕೃತಿಗಳು ನೆನಪಿನಲ್ಲುಳಿದಿವೆ. ಹೈ ಟೈಡ್ ಆನ್ ದಿ ಕೋಸ್ಟ್ ಆಫ್ ಲಿಂಕನ್‍ಷೈರ್ (1871) ಎಂಬುದು ಈಕೆಯ ಅತ್ಯುತ್ತಮ ಕಿರುಗವಿತೆಯೆಂದು ಪರಿಗಣಿಸಲಾಗಿದೆ. ಎ ಸ್ಟೋರಿ ಆಫ್ ಡೂಮ್ (1867) ಎಂಬುದು ಪ್ರಕಟವಾದಾಗ ಅದಕ್ಕೆ ಒಳ್ಳೆಯ ಸ್ವಾಗತ ದೊರಕಿತು. ಡಿವೈಡೆಡ್ ಎಂಬುದೂ ಒಂದು ಯಶಸ್ವೀಕವಿತೆ.

ಈಕೆ ಮಕ್ಕಳ ಸಾಹಿತ್ಯವನ್ನೂ ಕಾದಂಬರಿಗಳನ್ನೂ ಬರೆದಿದ್ದಾಳೆ. ಮೋಪ್ಸಾ ದಿ ಫೇರಿ (1867) ಎಂಬುದು ಈಕೆ ಮಕ್ಕಳಿಗಾಗಿ ಬರೆದ ಕಥೆಗಳಲ್ಲಿ ಪ್ರಸಿದ್ಧ. ಫೇಟೆಡ್ ಟು ಬಿ ಫ್ರೀ ಎಂಬ ಕಾದಂಬರಿ ನಿಯತಕಾಲಿಕವೊಂದರಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು (1875). ಆಫ್ ಸ್ಕೆಲ್ಲಿಂಗ್ (1877), ಸರಾ ಡಿ ಬೆರೆಂಜರ್ (1879), ಡಾನ್ ವಾನ್ (1881) ಎಂಬುವು ಆಮೇಲೆ ಬಂದ ಕಾದಂಬರಿಗಳು. (ಎಚ್.ವಿ.ಎಸ್.; ಎನ್.ಎಸ್.ಎಲ್.)