ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇಕ್ಕೇರಿ ವರಹಗಳು

ವಿಕಿಸೋರ್ಸ್ದಿಂದ

ಇಕ್ಕೇರಿ ವರಹಗಳು- ಇಕ್ಕೇರಿ ಅರಸರು ಅಚ್ಚು ಹಾಕುತ್ತಿದ್ದ ಪ್ರಸಿದ್ಧ ಚಿನ್ನದ ನಾಣ್ಯಗಳು. ಇವುಗಳಲ್ಲಿ ಸದಾಶಿವನಾಯಕನ ಕಾಲದವು ಮಾತ್ರ ದೊರಕಿವೆ. ಇಕ್ಕೇರಿ ಅರಸರ ಆಳ್ವಿಕೆಯಲ್ಲಿ ಇದೇ ನಾಣ್ಯಗಳನ್ನೇ ಪುನಃ ಪುನಃ ಅಚ್ಚು ಹಾಕುತ್ತಿದ್ದರೆಂದೂ ಪ್ರಾಯಶಃ ಈ ಕಾರಣದಿಂದಲೇ ಆ ಅರಸುಮನೆತನದ ಇತರ ರಾಜರ ನಾಣ್ಯಗಳಾವುವೂ ದೊರೆತಿಲ್ಲವೆಂದೂ ಕೆಲವು ವಿದ್ವಾಂಸರ ಅಭಿಪ್ರಾಯ.

ಸದಾಶಿವನಾಯಕನ ನಾಣ್ಯಗಳು, ವಿಜಯನಗರದ ಹರಿಹರ, ದೇವರಾಯ, ಸದಾಶಿವರಾಯ ಮುಂತಾದವರ ನಾಣ್ಯಗಳ ಮಾದರಿಯಲ್ಲೇ ಇವೆ. ವೃತ್ತಾಕಾರದ ಈ ನಾಣ್ಯಗಳ ಮುಮ್ಮುಖದಲ್ಲಿ ಬಲಗೈಯಲ್ಲಿ ತ್ರಿಶೂಲವನ್ನು, ಎಡಗೈಯಲ್ಲಿ ಮೃಗವನ್ನು ಧರಿಸಿ, ಎಡತೊಡೆಯ ಮೇಲೆ ಪಾರ್ವತಿಯನ್ನು ಕುಳ್ಳಿರಿಸಿಕೊಂಡಿರುವ ಶಿವನ ಚಿತ್ರವೂ ಹಿಮ್ಮುಖದಲ್ಲಿ ಎರಡು ಅಥವಾ ಮೂರು ಅಡ್ಡಗೆರೆಗಳ ಮಧ್ಯೆ ಶ್ರೀ ಸದಾಶಿವ ಎಂಬ ನಾಗರಾಕ್ಷರದ ಬರವಣಿಗೆಯೂ ಇದೆ. (ಎಸ್.ಎನ್.)