ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇನ್ವರ್ಟ್ ಸಕ್ಕರೆ

ವಿಕಿಸೋರ್ಸ್ದಿಂದ

ಇನ್‍ವರ್ಟ್ ಸಕ್ಕರೆ ಬಳಕೆ ಸಕ್ಕರೆಯನ್ನು ಆಮ್ಲದಿಂದ ಅಥವಾ ಇನ್‍ವರ್ಟೇಸ್ (ನೋಡಿ- ಇನ್‍ವರ್ಟೇಸ್) ಕಿಣ್ವದ ಸಹಾಯದಿಂದ ಜಲವಿಚ್ಛೇದನೆಗೊಳಿಸಿದಾಗ ಗ್ಲೂಕೋಸ್ ಮತ್ತು ಫ್ರಕ್ಟೋಸ್ ಸಕ್ಕರೆಗಳನ್ನು 1: 1 ಪ್ರಮಾಣದಲ್ಲಿ ಒಳಗೊಂಡ ಮಿಶ್ರಣ ಉತ್ಪತ್ತಿಯಾಗುತ್ತದೆ. ಔದ್ಯೋಗಿಕವಾಗಿ 96% ಪ್ರಮಾಣ ಸಕ್ಕರೆಯ ದ್ರಾವಣವನ್ನು ವಿಚ್ಛೇದಿಸಿ ಇನ್‍ವರ್ಟ್ ಸಕ್ಕರೆಯನ್ನು ತಯಾರಿಸುತ್ತಾರೆ. ಫಲಿತವಸ್ತು ಮೂಲವಸ್ತುವಿನಲ್ಲಿ ಹಾಯುವ ಧ್ರುವೀಕೃತ ಬೆಳಕಿನ ಸಮತಲದ ದಿಕ್ಕನ್ನು ಬಲದಿಂದ ಎಡಕ್ಕೆ ತಿರುಗಿಸಿ, ಚಿಹ್ನೆಯ ಸಂಕೇತವನ್ನು [(+) ( (-)] ಧನದಿಂದ ಋಣಕ್ಕೆ ಬದಲಾಯಿಸುವುದರಿಂದ (ತಲೆಕೆಳಗು ಮಾಡುವುದರಿಂದ) ಇದಕ್ಕೆ ಇನ್‍ವರ್ಟ್ ಸಕ್ಕರೆ ಎಂದು ಹೆಸರಿಡಲಾಗಿದೆ. ನೀರನ್ನು ಅತಿಶೀಘ್ರವಾಗಿ ಹೀರುತ್ತದೆ. ಆದ್ದರಿಂದ ಈ ಮಿಶ್ರಣವನ್ನು ಸಾಮಾನ್ಯವಾಗಿ ಪಾಕದ (ಸಿರಪ್) ರೂಪದಲ್ಲಿ ಉಪಯೋಗಿಸುತ್ತಾರೆ. ಸಕ್ಕರೆಗಿಂತ ಸಿಹಿ ಹೆಚ್ಚು. ಆಹಾರ ಮತ್ತು ಔಷಧ ಉದ್ಯಮಗಳಲ್ಲಿಯೂ ಮದ್ಯಸಾರದ ತಯಾರಿಕೆಯಲ್ಲೂ ಉಪಯೋಗವಾಗುತ್ತದೆ. (ಎಚ್.ಎಸ್.ಎಸ್.)