ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉದ್ಭವಾವಸ್ಥೆ

ವಿಕಿಸೋರ್ಸ್ದಿಂದ

ಉದ್ಭವಾವಸ್ಥೆ: ಸಂಯುಕ್ತಸ್ಥಿತಿಯಿಂದ ಆಗ ತಾನೆ ಬೇರ್ಪಟ್ಟ ವಸ್ತುವಿನ ಅವಸ್ಥೆ (ನೇಸೆಂಟ್ ಸ್ಟೇಜ್). ಕೆಲವು ಮೂಲವಸ್ತುಗಳಿಗೆ ಈ ಅವಸ್ಥೆಯಲ್ಲಿ ಹೆಚ್ಚು ಕ್ರಿಯಾಶಕ್ತಿ ಇರುವುದು ಕಂಡುಬಂದಿದೆ. ಇದಕ್ಕೆ ಜಲಜನಕ ಉತ್ತಮ ನಿದರ್ಶನ. ಕೂಡಿಟ್ಟ ಜಲಜನಕವನ್ನು ಆಮ್ಲಮಿಶ್ರಿತ ಪೊಟ್ಯಾಸಿಯಂ ಪರ್ಮಾಂಗನೇಟಿನ ದ್ರಾವಣದ ಮೂಲಕ ಹಾಯಿಸಿದಾಗ ಅದರ ಊದಾ ಬಣ್ಣ ಬದಲಾಯಿಸುವುದಿಲ್ಲ. ಆದರೆ ದ್ರಾವಣಕ್ಕೆ ಒಂದು ಚೂರು ಅಶುದ್ಧ ಸತುವನ್ನು ಸೇರಿಸಿದರೆ ಅದು ಅಲ್ಲಿರುವ ಆಮ್ಲದಿಂದ ಜಲಜನಕವನ್ನು ಪಲ್ಲಟಿಸುವುದು. ಬಿಡುಗಡೆಯಾದ ಜಲಜನಕ ಉದ್ಭವಾವಸ್ಥೆಯಲ್ಲಿರುವುದರಿಂದ ತತ್ಕ್ಷಣ ಪರ್ಮಾಂಗನೇಟನ್ನು ಅಪಕರ್ಷಿಸಲು ಪ್ರಾರಂಭಿಸುವುದು. ದ್ರಾವಣದ ಊದಾಬಣ್ಣ ಕ್ರಮೇಣ ಮಾಯವಾಗುವುದು. ಹೀಗಾಗಲು ಉದ್ಭವಾವಸ್ಥೆಯಲ್ಲಿರುವ ಜಲಜನಕದಲ್ಲಿ ಹೆಚ್ಚು ಕ್ರಿಯಾಶಕ್ತಿ ಇರುವುದೇ ಕಾರಣ. ನವಜಾತ ಜಲಜನಕವನ್ನು ಪಡೆಯಲು ಕೆಳಕಂಡ ಮಿಶ್ರಣಗಳನ್ನು ಉಪಯೋಗಿಸ ಬಹುದು: (i) ಅಶುದ್ಧ ಸತು ಮತ್ತು ದುರ್ಬಲ ಸಲ್ಫ್ಯೂರಿಕ್ ಆಮ್ಲ. (ii) ತವರ ಮತ್ತು ಹೈಡ್ರೊಕ್ಲೋರಿಕ್ ಆಮ್ಲ. (iii) ಕಬ್ಬಿಣ ಮತ್ತು ಸ್ವಲ್ಪ ಹೈಡ್ರೊಕ್ಲೋರಿಕ್ ಆಮ್ಲ ಬೆರೆಸಿರುವ ನೀರು. ಆರೊಮ್ಯಾಟಿಕ್ ನೈಟ್ರೊ ಸಂಯುಕ್ತಗಳನ್ನು ಅಮೈನೋ ಸಂಯುಕ್ತಗಳನ್ನಾಗಿ ಅಪಕರ್ಷಿಸಲು ಈ ಮಿಶ್ರಣ ಸಹಕಾರಿ. (iv) ಸೋಡಿಯಂ ಮತ್ತು ಆಲ್ಕೊಹಾಲ್. ಆಲ್ಕೈಲ್ ಸಯನೈಡುಗಳನ್ನು ಇದು ಪ್ರೈಮರಿ ಅಮೀನುಗಳಾಗಿ ಪರಿವರ್ತಿಸುವುದು. (v) ಸತು-ತಾಮ್ರದ ಜೋಡಿ ಮತ್ತು ಆಲ್ಕೊಹಾಲ್. ಇದರಿಂದ ಆಲ್ಕೈಲ್ ಹ್ಯಾಲೈಡುಗಳನ್ನು ಪ್ಯಾರಫಿನ್ ಹೈಡ್ರೊಕಾರ್ಬನ್ನುಗಳಾಗಿ ಪರಿವರ್ತಿಸಬಹುದು.

ಉದ್ಭವಾವಸ್ಥೆಗೂ ಕ್ರಿಯಾಶಕ್ತಿಗೂ ಇರುವ ಸಂಬಂಧವನ್ನು ವಿವರಿಸುವ ಅನೇಕ ಸಿದ್ಧಾಂತಗಳಿವೆ. ಮೊದಲನೆಯ ವಾದ ಹೀಗಿದೆ : ಕೂಡಿಟ್ಟ ಜಲಜನಕದಲ್ಲಿ ಅಣುಗಳಿವೆ. ಅವನ್ನು ಒಡೆದು ಪರಮಾಣು ರೂಪಕ್ಕೆ ತರಲು ಶಕ್ತಿ ವ್ಯಯವಾಗಬೇಕು. ಅನಂತರವೇ ಅದು ಅಪಕರ್ಷಣಕಾರಿಯಾಗಿ ವರ್ತಿಸಲು ಸಾಧ್ಯ. ಆದರೆ ನವಜಾತ ಜಲಜನಕದಲ್ಲಿ ಪರಮಾಣುಗಳು ಸಿದ್ಧವಾಗಿರುತ್ತವೆ. ಆದ್ದರಿಂದ ಆ ಜಲಜನಕ ನೇರವಾಗಿ ಅಪಕರ್ಷಿತವಾಗುವ ವಸ್ತುವಿನೊಡನೆ ವ್ಯವಹರಿಸಬಲ್ಲುದು. ಈ ವಾದ ಆಕರ್ಷಕವಾಗಿದೆ. ಆದರೆ ವಿವಿಧ ಮೂಲಗಳಿಂದ ಪಡೆದ ನವಜಾತ ಜಲಜನಕದ ಕ್ರಿಯಾಶಕ್ತಿಯಲ್ಲಿ ವ್ಯತ್ಯಾಸವಿರಲು ಕಾರಣವೇನು ಎಂಬ ಪ್ರಶ್ನೆಯನ್ನು ಇದು ಉತ್ತರಿಸುವುದಿಲ್ಲ. ಉದಾಹರಣೆಗೆ, ಸತು ಮತ್ತು ಸಲ್ಫ್ಪ್ಯೂರಿಕಾಮ್ಲ ದಿಂದ ಪಡೆದ ನವಜಾತ ಜಲಜನಕ ಕ್ಲೋರೇಟುಗಳನ್ನು ಕ್ಲೋರೈಡುಗಳಾಗಿ ಅಪಕರ್ಷಿಸುತ್ತದೆ. ಆದರೆ ಸೋಡಿಯಂ ಅಮಾಲ್ಗಂ ಮತ್ತು ನೀರಿನಿಂದ ಉದ್ಭವಿಸಿದ ಜಲಜನಕ ಹೀಗೆ ಮಾಡುವುದಿಲ್ಲ. ಇದೇ ರೀತಿ ಬೇರೆ ಬೇರೆ ಲೋಹಗಳನ್ನು ಋಣಧ್ರುವವಾಗಿಟ್ಟುಕೊಂಡು ವಿದ್ಯುದ್ವಿಧಾನದಿಂದ ಪಡೆದ ಜಲಜನಕದ ಕ್ರಿಯಾಶಕ್ತಿಯಲ್ಲೂ ವ್ಯತ್ಯಾಸವಿರುವುದು ವ್ಯಕ್ತವಾಗಿದೆ. ಬೆಳ್ಳಿಗಿಂತ ಸೀಸದ ಋಣಧ್ರುವದಲ್ಲಿ ಜಲಜನಕ ಬಿಡುಗಡೆಯಾಗಲು 0.49 ವೋಲ್ಟುಗಳಷ್ಟು ಹೆಚ್ಚು ವಿದ್ಯುತ್ತು ಅಗತ್ಯ. ಅಂಥ ಜಲಜನಕ ನಾವು ಬಳಸಿದ ಹೆಚ್ಚು ವಿದ್ಯುಚ್ಛಕ್ತಿಯನ್ನು ಮೈಗೂಡಿಸಿಕೊಂಡು ವಿಶೇಷ ಪಟುತ್ವವನ್ನು ಪ್ರದರ್ಶಿಸುವುದು. ಇದರಂತೆಯೇ ವಿವಿಧ ಕ್ರಿಯೆಗಳಲ್ಲಿ ಹುಟ್ಟುವ ಶಕ್ತಿಯಲ್ಲಿ ವ್ಯತ್ಯಾಸವಿರುತ್ತದೆ. ಆ ಶಕ್ತಿಯೆಲ್ಲಾ ಉಷ್ಣದ ರೂಪದಲ್ಲೇ ಹೊರಬೀಳುವುದಿಲ್ಲ. ಸ್ವಲ್ಪಭಾಗವನ್ನು ನವಜಾತ ಜಲಜನಕ ಹೊಂದಿರಲು ಸಾಕು. ಇದರಿಂದ ಅದರ ಕ್ರಿಯಾಶಕ್ತಿ ಹೆಚ್ಚಾಗಬಹುದು. ಇದು ಕೆಲವರ ಮತ. ರೂಢಿಯಲ್ಲಿರುವ ಮತ್ತೊಂದು ವಿವರಣೆ ಹೀಗಿದೆ: ಹುಟ್ಟು ಸ್ಥಿತಿಯಲ್ಲಿ ಜಲಜನಕ ಸೂಕ್ಷ್ಮಗುಳ್ಳೆಗಳ ರೂಪದಲ್ಲಿರುತ್ತದೆ. ಪರಿಣಾಮವಾಗಿ ಅದರ ಆಂತರಿಕ ಒತ್ತಡ ಹೆಚ್ಚಿ ಪಟುತ್ವ ವೃದ್ಧಿಯಾಗುತ್ತದೆ. ಕೂಡಿಟ್ಟ ಜಲಜನಕವನ್ನು ವಿಪರೀತ ಒತ್ತಡಕ್ಕೆ ಗುರಿಪಡಿಸಿದಾಗ ಅದರ ಪಟುತ್ವ ಹೆಚ್ಚುವುದೆಂದು ಪ್ರಯೋಗಗಳಿಂದ ಶ್ರುತಪಟ್ಟಿದೆ. ಇದು ಮೇಲ್ಕಂಡ ವಾದವನ್ನು ಪುಷ್ಟೀಕರಿಸುತ್ತದೆ. ಆದರೆ ಈ ಬಗ್ಗೆ ತಜ್ಞರಲ್ಲಿ ಒಮ್ಮತವಿಲ್ಲ. ಅಂತೂ ನವಜಾತ ಜಲಜನಕದ ಉನ್ನತ ಚಟುವಟಿಕೆಗೆ ಅದು ಪರಮಾಣುಸ್ಥಿತಿಯಲ್ಲಿರುವುದೇ ಕಾರಣ ಎಂಬ ವಾದದ ಬಗ್ಗೆ ಒಲವು ಕಡಿಮೆಯಾಗಿದೆ. (ಎಚ್.ಜಿ.ಎಸ್.)