ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉಪಾಲಿ

ವಿಕಿಸೋರ್ಸ್ದಿಂದ

ಉಪಾಲಿ: ಬುದ್ಧನ ಸಮಕಾಲೀನ, ರಾಜಮನೆತನಕ್ಕೆ ಸೇರಿದವ, ಪ್ರಾರಂಭದಲ್ಲಿ ಮಹಾವೀರನ ಬೋಧನೆಯನ್ನು ಸ್ವೀಕರಿಸಿ ಗೃಹಸ್ಥಾಶ್ರಮವನ್ನನುಸರಿಸುತ್ತಿದ್ದು ಬುದ್ಧನ ತತ್ತ್ವಗಳನ್ನು ವಿರೋಧಿಸುತ್ತಿದ್ದವರಲ್ಲಿ ಒಬ್ಬನಾಗಿದ್ದ. ಒಮ್ಮೆ ಬುದ್ಧ ರಾಜಗೃಹಕ್ಕೆ ಬಂದಾಗ ಆತನನ್ನು ವಿರೋಧಿಸಲು ಹೊರಟು ಬುದ್ಧನ ವ್ಯಕ್ತಿತ್ವ ಮತ್ತು ಬೋಧನೆಗೆ ಮಾರುಹೋಗಿ ಬೌದ್ಧಮತಾವಲಂಬಿಯಾದ. ಮುಂದೆ ಮಹಾವೀರನನ್ನು ವಿರೋಧಿಸಲು ಪ್ರಾರಂಭಿಸಿದ; ಬುದ್ಧನ ನಿರ್ವಾಣಾನಂತರ ಬೌದ್ಧಧರ್ಮ ಪ್ರಚಾರಕರಲ್ಲಿ ಗಣ್ಯನಾದ. ರಾಜಗೃಹದಲ್ಲಿ ಸೇರಿದ್ದ ಮೊದಲ ಬೌದ್ಧ ಮಹಾಸಮ್ಮೇಳನದಲ್ಲಿ ಆನಂದನೂ ಉಪಾಲಿಯೂ ಬುದ್ಧನ ತತ್ತ್ವಗಳನ್ನು ವಿವರಿಸಿದುದಲ್ಲದೆ ಅವನ್ನು ಗ್ರಂಥಸ್ಥಗೊಳಿಸಲು ನೆರವಾದರು. (ಜಿ.ಆರ್.ಆರ್.)