ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉಪ್ಪುರು ನಾರ್ಣಪ್ಪ ಭಾಗವತ

ವಿಕಿಸೋರ್ಸ್ದಿಂದ

ಉಪ್ಪುರು ನಾರ್ಣಪ್ಪ ಭಾಗವತ: 1918-84. ಯಕ್ಷಗಾನ ಬಡಗುತಿಟ್ಟಿನ ಹಳೆಯ ತಲೆಮಾರಿನ ಸಾಂಪ್ರದಾಯಿಕ ಶೈಲಿಯ ಪ್ರಸಿದ್ಧ ಭಾಗವತರು. ಖಚಿತ ರಾಗಜ್ಞಾನ ದಿಂದ, ಕುಣಿತಕ್ಕೆ ತಕ್ಕ ತಾಳವನ್ನು ನಡೆಸುವ ಸಾಮರ್ಥ್ಯದಿಂದ, ಹಾಡಿನ ಪದ ಪದಗಳನ್ನೂ ಹಿಂಜಿ ಅದರ ಭಾವವನ್ನು ಬಿಂಬಿಸುವ ಅಪರೂಪದ ಶೈಲಿಯಿಂದಾಗಿ ಯಕ್ಷಗಾನದ ಪ್ರಾಚಾರ್ಯರೆಂದೇ ಪರಿಚಿತರು. ಇವರು 1918ರಲ್ಲಿ ಜನಿಸಿದರು. ತಂದೆ ಶ್ರೀನಿವಾಸಭಾಗವತ. ಅವರೇ ಭಾಗವತಿಕೆಯಲ್ಲಿ ಮೊದಲ ಗುರು. ಉಪ್ಪೂರರು ಮೊದಲಿಗೆ ಸಂಗೀತಗಾರರಾಗಿ ಅನುಭವ ಪಡೆದು ಅನಂತರ ತಮ್ಮ 20ನೆಯ ವಯಸ್ಸಿನಲ್ಲೇ ಭಾಗವತರಾಗಿ ರೂಪುಗೊಂಡರು. ಅಮೃತೇಶ್ವರಿ, ಮಾರಣಕಟ್ಟೆ, ಕೊಲ್ಲೂರು, ಪೆರ್ಡೂರು, ಸೌಕೂರು, ಸಾಲಿಗ್ರಾಮ ಮುಂತಾದ ಮೇಳಗಳಲ್ಲಿ 30 ವರ್ಷಗಳನ್ನು ಕಳೆದರು.

ಭಾಗವತಿಕೆಯಲ್ಲಿ ಹೆಸರಾದಂತೆ ಇವರು ಯಕ್ಷಗಾನ ಕಲಿಕೆಯಲ್ಲಿ ಸಿದ್ಧಹಸ್ತರು. ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಪ್ರಾಚಾರ್ಯರಾಗಿ 13 ವರ್ಷ ಯಕ್ಷಗಾನದಲ್ಲಿ ತರಬೇತಿ ನೀಡಿದರು. ಅಪಾರ ಸಂಖ್ಯೆಯ ಶಿಷ್ಯರನ್ನು ಬೆಳೆಸಿದ್ದು, ಹಲವು ಮೇಳಗಳಲ್ಲಿ ಇವರ ಶಿಷ್ಯಂದಿರು ಅಗ್ರಪಂಕ್ತಿಯ ಕಲಾವಿದರಾಗಿರುವುದು ಉಲ್ಲೇಖನೀಯ. ಯಕ್ಷಗಾನ ಲೋಕದಲ್ಲಿ ಮಿಂಚಿ ಬಹುಬೇಗ ಮಾಯವಾದ ಪ್ರತಿಭಾವಂತ ಯುವ ಭಾಗವತ ಗುಂಡ್ಮಿ ಕಾಳಿಂಗ ನಾವಡ ಎನೋಡಿಏ ಇವರ ಪ್ರಮುಖ ಶಿಷ್ಯರಲ್ಲೊಬ್ಬರು.

ಇವರು ಯಕ್ಷಗಾನ ಕುರಿತು ಯಕ್ಷಗಾನ ಶಿಕ್ಷಕ, ಯಕ್ಷಗಾನ ಅಧ್ಯಯನ ಎಂಬ ಗ್ರಂಥಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಯಕ್ಷಗಾನದ ರಾಗ, ತಾಳ, ಕುಣಿತಗಳ ಬಗ್ಗೆ ದೀರ್ಘವಾದ ವಿವರಗಳು ಮತ್ತು ಮಾರ್ಗದರ್ಶಕ ಸೂತ್ರಗಳಿವೆ. ಸತ್ಯಂ ವಧ ಧರ್ಮಂ ಚರ ಎಂಬುದು ಇವರ ಒಂದು ಯಕ್ಷಗಾನ ಪ್ರಸಂಗ. ಉಪ್ಪೂರರು ಭಾಗವತರಾಗಿ ವಿದ್ವತ್ತು, ಸಹೃದಯತೆಯ ಜೊತೆಗೆ ಕಲಾವಿದರಿಗೆ ಮಾದರಿಯಾಗಬಲ್ಲ ವ್ಯಕ್ತಿತ್ವ ಹೊಂದಿದ್ದರು. ಸಂಪ್ರದಾಯಬದ್ಧ ಭಾಗವತಿಕೆಯನ್ನು ಮೈಗೂಡಿಸಿಕೊಂಡಿದ್ದರೂ ಹಲವಾರು ಅರ್ಥಪೂರ್ಣ ಬದಲಾವಣೆಗಳಿಗೆ ತಮ್ಮನ್ನು ಒಡ್ಡಿಕೊಂಡಿದ್ದರು. ಆದರೆ ಕೆಲವೊಮ್ಮೆ ಅತಿರೇಕದ ಬದಲಾವಣೆ ಗಳಿಗೆ ಇವರು ರಾಜಿಯಾಗಲಿಲ್ಲ. ಶಿವರಾಮ ಕಾರಂತರ ನೃತ್ಯ ನಾಟಕಗಳಲ್ಲಿ ಭಾಗವತರಾಗಿ ಭಾಗವಹಿಸಿದ್ದರಿಂದ, ಕಾರಂತರ ಪ್ರಯೋಗಗಳಿಂದ ತಮ್ಮ ಅನುಭವ ವಿಸ್ತಾರಗೊಂಡಿದ್ದನ್ನು ಇವರು ಒಪ್ಪಿಕೊಂಡಿದ್ದರು. ಯಕ್ಷಗಾನಕ್ಕೆ ನಾಟಕಗಳಲ್ಲಿರುವಂತೆ ನಿರ್ದೇಶನದ ಅಗತ್ಯವಿದೆ ಎಂಬ ಬಗ್ಗೆ ಇವರ ಸಹಮತವಿತ್ತು. ಇವರು 1984 ಏಪ್ರಿಲ್ 11ರಂದು ನಿಧನರಾದರು.