ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉಭಯ ವೇದಾಂತ

ವಿಕಿಸೋರ್ಸ್ದಿಂದ

ಉಭಯ ವೇದಾಂತ: ವೇದಾಂತದರ್ಶನದ ಸಮಗ್ರ ಸ್ವರೂಪವನ್ನು ತಿಳಿಯಲು ಸಂಸ್ಕೃತದಲ್ಲಿರುವ ಉಪನಿಷತ್ತುಗಳು, ಬ್ರಹ್ಮಸೂತ್ರ ಮತ್ತು ಗೀತೆಯೊಡನೆ, ದ್ರಾವಿಡ ಪ್ರಬಂಧಗಳ ಅನುಭವವಾಣಿಯನ್ನೂ ಸೇರಿಸಿಕೊಳ್ಳಬೇಕು ಎಂದು ವಾದಿಸಿ ಈ ದ್ವಿಮುಖವಾದ ಅನ್ಯೋನ್ಯ ಪೋಷಕ ಸಾಹಿತ್ಯರಾಶಿಗೆ ಉಭಯ ವೇದಾಂತವೆಂಬ ಪಾರಿಭಾಷಿಕ ನಿರ್ದೇಶವನ್ನು ಕೊಡಲಾಗಿದೆ. ವೇದಾಂತವನ್ನು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ರಾಮಾನುಜಾಚಾರ್ಯರು ನಿರೂಪಿಸಿದ್ದಾರೆ. ಅವರು ಸಂಸ್ಕೃತ ಆಧಾರಗಳಿಂದ ಒದಗಿಬಂದ ಈ ದರ್ಶನ ಸಂಪ್ರದಾಯ ದೊಡನೆ ದ್ರಾವಿಡದೇಶದಲ್ಲಿ ಪ್ರಾಚೀನ ಕಾಲದಿಂದಲೂ ಬೆಳೆದು ಬಂದಿದ್ದ, ಆಳ್ವಾರುಗಳೆಂಬ ಭಕ್ತ ಪರಂಪರೆಯ, ಕೃತಿಗಳಾದ ದಿವ್ಯ ಪ್ರಬಂಧವನ್ನೂ ಸಂಯೋಜನೆ ಮಾಡುತ್ತಾರೆ. ಈ ಪ್ರಬಂಧಗಳು ವೇದ-ವೇದಾಂತದ ತಮಿಳು ಪರಿವರ್ತನೆಯೆಂದು ಶ್ರೀವೈಷ್ಣವ ಸಂಪ್ರದಾಯ ಪರಿಗಣಿಸುತ್ತದೆ. ಕೆಲವು ವೇಳೆ ಸಂಸ್ಕೃತ ಪ್ರಮಾಣಗಳ ಮೂಲಕ ನಿರ್ಣೀತವಾದ ವಿಷಯಗಳೂ ದ್ರಾವಿಡ ವೇದಗಳಲ್ಲಿ ಖಚಿತಗೊಳ್ಳುವುವೆಂದು ವೇದಾಂತದೇಶಿಕರೇ ಮೊದಲಾದ ಪ್ರಧಾನ ಸಾಧಕರು ಅಭಿಪ್ರಾಯಪಡುತ್ತಾರೆ. ಈ ಪ್ರಬಂಧಗಳಿಗೆ ವಿಪುಲವಾದ ಭಾಷ್ಯಗಳು ಬೆಳೆದಿವೆ. ಇವಕ್ಕೆ ಸಾಮೂಹಿಕ ಭಗವದ್ವಿಷಯ ಎಂದು ಹೆಸರು ಬಂದಿದೆ.

ಉಭಯ ವೇದಾಂತ ಸಂಪ್ರದಾಯದ ಅಂತಿಮ ತಾತ್ಪರ್ಯ ಒಂದೇ ಆದರೂ ಪ್ರತಿಪಾದನೆ ಮಾತ್ರ ಸಂಸ್ಕೃತ ವೇದಾಂತ ಮತ್ತು ದ್ರಾವಿಡವೇದಾಂತ ಇವೆರಡರ ಆಧಾರದಿಂ ದಲೂ ನಡೆಯುತ್ತದೆ ಎಂಬುದು ಇಲ್ಲಿನ ವಿಶೇಷ. (ಎಸ್.ಎಸ್.ಆರ್.)