ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉರ್

ವಿಕಿಸೋರ್ಸ್ದಿಂದ

ಉರ್: ದಕ್ಷಿಣ ಮೆಸಪೊಟೇಮಿಯದ ಸುಮೇರಿಯನ್ ಸಂಸ್ಕೃತಿಗೆ ಸಂಬಂಧಿಸಿದ ಪ್ರಾಚೀನ ನಗರ. ಯೂಫ್ರಟೀಸ್ ನದಿಯ ದಡದಲ್ಲಿ ಈಗಿನ ಬಾಗ್ದಾದಿಗೆ ಸಮೀಪದಲ್ಲಿದೆ. ಇಲ್ಲಿ ನಡೆದ ಪುರಾತತ್ತ್ವ ಶೋಧನೆಗಳಿಂದ ಸುಮೇರಿಯ ಸಂಸ್ಕೃತಿಯ ವೈಶಿಷ್ಟ್ಯ ಬೆಳಕಿಗೆ ಬಂದಿದೆ. ಈಗಿನ ಟೆಲ್ ಮುಕಾಯರ್ ಪ್ರದೇಶವೇ ಪ್ರಾಚೀನ ಉರ್ ಪಟ್ಟಣ. ಇಲ್ಲಿ ಪರಿಶೋಧನೆ ಪ್ರಾರಂಭವಾದದ್ದು 1854ರಿಂದ. ಈ ಸ್ಥಳವನ್ನು ಮೊದಲಬಾರಿಗೆ ಉತ್ಖನನ ಮಾಡಿ ಅವಶೇಷಗಳನ್ನು ಬೆಳಕಿಗೆ ತಂದ ಕೀರ್ತಿ ಜೆ. ಇ. ಟೇಲರ್ ಎಂಬ ಪುರಾತತ್ತ್ವ ಶೋಧಕನದು. ಅನಂತರ ಲಂಡನ್ನಿನ ಬ್ರಿಟಿಷ್ ಮ್ಯೂಸಿಯಂ ಅಧಿಕಾರಿಗಳೂ ಪೆನ್ಸಿಲ್ವೇನಿಯ ವಿಶ್ವವಿದ್ಯಾಲಯದ ಅಧಿಕಾರಿಗಳೂ ಉರ್ನಲ್ಲಿ ಶೋಧ ನಡೆಸಿದರು. 1922ರಿಂದ 12 ವರ್ಷಗಳ ಕಾಲ ಸತತವಾಗಿ ಉತ್ಖನನ ಕಾರ್ಯ ಕೈಗೊಂಡು ಈ ನಗರದ ಅವಶೇಷಗಳನ್ನು ಬಹುವಾಗಿ ಹೊರತೆಗೆದ ಕೀರ್ತಿ ಸರ್ ಲಿಯೋನಾರ್ಡ್ ವೂಲಿ ಎಂಬ ಪ್ರಾಕ್ತನಶಾಸ್ತ್ರಜ್ಞನಿಗೆ ಸಲ್ಲುತ್ತದೆ. ಈತ ನಡೆಸಿದ ಉತ್ಖನನಗಳಿಂದ ಉರ್ ನಗರದ ಸಂಪೂರ್ಣ ಚರಿತ್ರೆ ಬೆಳಕಿಗೆ ಬಂತು.

ಈ ನಗರಕ್ಕೆ ಸಮೀಪದಲ್ಲಿರುವ ಉಬಾಯ್ಡ್‌ನಲ್ಲಿ ದೊರಕಿರುವ ಅವಶೇಷಗಳೇ ಇಲ್ಲಿನ ಪ್ರಾಚೀನತಮ ನಾಗರಿಕತೆಯ ಕುರುಹುಗಳು. ಮಣ್ಣಿನ ಮಡಕೆಯ ಹೋಲಿಕೆಗಳಿಂದ ಇಲ್ಲಿಯ ನಾಗರಿಕತೆ ಇರಾನಿಗೆ ಸಂಬಂಧಿಸಿ ದ್ದೆಂದು ಹೇಳಬಹುದು. ಉಬಾಯ್ಡ್‌ ಸಂಸ್ಕೃತಿಯ ಅನಂತರ ಸುಮೇರಿಯ ಸಂಸ್ಕೃತಿ ಬೇರೂರುವುದಕ್ಕೆ ಮೊದಲು ಈ ಎರಡು ವಿಭಿನ್ನ ಸಂಸ್ಕೃತಿಯ ಜನರು ಅಲ್ಲಿ ವಾಸವಾಗಿದ್ದರೆಂದು ಉರುಕ್ನಲ್ಲಿ ದೊರಕಿರುವ ಅವಶೇಷ ಗಳಿಂದಲೂ ಜಂಡೆಟ್ನಾಸ್ರ್‌ ಎಂಬಲ್ಲಿ ದೊರಕಿರುವ ಅವಶೇಷಗಳಿಂದಲೂ ತಿಳಿದುಬರುತ್ತದೆ. ಈ ಸಂಸ್ಕೃತಿಯ ಕಾಲವನ್ನು ಪ್ರ.ಶ.ಪು.4400-3000 ಎಂದು ನಿರ್ಧರಿಸಲಾಗಿದೆ. ಅನಂತರ ಈ ನಗರದ ರಾಜವಂಶಗಳ ಸಂಸ್ಕೃತಿಯ ಕಾಲವನ್ನು ಕಾಣುತ್ತೇವೆ. ಈ ರಾಜವಂಶದ ಸ್ಥಾಪಕ ಮೆಸ್-ಅನ್ನಿ ಪದ್ದನೆಂದು ತಿಳಿಯುತ್ತದೆ. ಈ ವಂಶದ ಅನೇಕ ರಾಜರುಗಳ ನೇತೃತ್ವದಲ್ಲಿ ಈ ನಗರ ಸರ್ವತೋಮುಖ ಪ್ರಗತಿ ಸಾಧಿಸಿ ಸುಮೇರಿಯ ಸಂಸ್ಕೃತಿ ಪ್ರಸಿದ್ಧವಾಗಲು ನೆರವಾಯಿತು. ಈ ಕಾಲದಲ್ಲಿ ರಾಜವಂಶ ಬೇರೂರಿದಂತೆ ನ್ಯಾಯಾಂಗ ವಿಶೇಷವಾಗಿ ಬೆಳೆಯಿತು. ರಾಜತ್ವದ ಜೊತೆಯಲ್ಲೇ ಧರ್ಮಗಳೂ ಬೆಳೆದವು. ಇದರಿಂದ ದೇವತೆಗಳ ಸಮೂಹವೊಂದು ರಚಿತವಾಯಿತು. ದೇವತೆಗಳಿಗೆ ದೇವಾಲಯವನ್ನು ಕಟ್ಟುವ ಕಾರ್ಯಕ್ಕೆ ಹೆಚ್ಚಾಗಿ ಪ್ರೋತ್ಸಾಹ ಸಿಕ್ಕಿ, ವಾಸ್ತು ಮತ್ತು ಶಿಲ್ಪಕಲೆಗಳು ಉಚ್ಛ್ರಾಯ ಸ್ಥಿತಿಯನ್ನು ಮುಟ್ಟಿದುವು. ಇವುಗಳನ್ನು ಕಾಪಾಡಿಕೊಂಡು ಬರಲು ಮತ್ತು ಶತ್ರುಗಳನ್ನು ಸೋಲಿಸಲು ಸುಭದ್ರ ಸೈನ್ಯದ ವ್ಯವಸ್ಥೆ ರೂಢಿಗೆ ಬಂದಿತು. ಈ ಎಲ್ಲ ಪ್ರಗತಿಗಳಿಂದ ಸಾಮಾನ್ಯ ಜನಗಳ ಜೀವನ ಸುಖಮಯವಾಗುವಂತೆ ಆಯಿತು. ಇದಕ್ಕೆ ಉದಾಹರಣೆಯಾಗಿ ಮೊದಲನೆಯ ರಾಜವಂಶದ ಗೋರಿಗಳನ್ನು ನೋಡಬಹುದು. ಈ ಗೋರಿಗಳು ವಿಶಾಲವಾ ಗಿದ್ದು ಬೆಲೆಬಾಳುವ ಆಭರಣ ಗಳು, ಮಂಚ, ಕುರ್ಚಿ, ಮಡಕೆ ಮುಂತಾದವುಗಳ ನ್ನೊಳಗೊಂಡಿವೆ. ಜೊತೆಗೆ ರಾಜನ ಸೇವೆಯಲ್ಲಿ ನಿರತರಾಗಿದ್ದ ಎಲ್ಲ ಆಳುಕಾಳುಗಳ ಗೋರಿಗಳನ್ನೂ ಕಾಣಬಹುದು. ಸ್ವಲ್ಪ ಕಾಲಾನಂತರ ಈ ನಗರ ಇತರ ನಗರಗಳ ಆಳ್ವಿಕೆಗೆ ಒಳಪಟ್ಟಿತು. ಮೂರನೆಯ ರಾಜವಂಶದ ಸ್ಥಾಪಕನಾದ ಅರ್ನಮ್ಮು ಎಂಬ ರಾಜನ ಕಾಲದಲ್ಲಿ ಮತ್ತೆ ಪ್ರಾಮುಖ್ಯತೆಗೆ ಬಂತು. ಈತ ನಿರ್ಮಿಸಿದ (2100) ಕಟ್ಟಡಗಳಲ್ಲಿ ಜಿಗ್ಗುರಾಟ್ ಮುಖ್ಯವಾದುದು. ಇದು ಸು.70ಮೀ ಉದ್ದ, ಸು.42ಮೀ ಅಗಲ ಮತ್ತು ಸು.17ಮೀ ಎತ್ತರವಿರುವ ಇಟ್ಟಿಗೆಗಳಿಂದ ಕಟ್ಟಿದ ಭವ್ಯಸೌಧ. ಎಲ್ಲ ಜಿಗ್ಗುರಾಟ್ಗಳಂತೆ ಇದೂ ಚೌಕ ಪ್ರಕಾರಗಳನ್ನುಳ್ಳ ಕಟ್ಟಡ. ಹೊರಗಿನ ಪ್ರಾಕಾರಕ್ಕಿಂತ ಒಳಗಿನ ಪ್ರಾಕಾರ ಕಿರಿದಾಗಿರುತ್ತ ಬಂದು ಕೊನೆಗೆ ಎತ್ತರದ ಜಗಲಿಯಲ್ಲಿ ಕೊನೆಗೊಳ್ಳುತ್ತದೆ. ಇದೇ ದೇವರ ವಾಸಸ್ಥಾನ. ಅರ್ನಮ್ಮುವಿನಿಂದ ರಚಿತವಾದ ಜಿಗ್ಗುರಾಟ್ ದೇವಾಲಯಕ್ಕೆ ಮುಂಭಾಗದಲ್ಲಿ ಮೂರು ದಿಕ್ಕಿನಲ್ಲೂ ಮೆಟ್ಟಲುಗಳಿವೆ. ಇವುಗಳನ್ನು ಹತ್ತಿ ಒಳಗಿನ ಪ್ರಾಕಾರಕ್ಕೆ ಹೋಗಬೇಕು. ಈ ಪ್ರಾಕಾರಗಳ ಗೋಡೆಯ ಒಳಭಾಗಗಳು ಶಿಲ್ಪಫಲಕ ಗಳಿಂದ ಅಲಂಕೃತವಾಗಿವೆ. ಈ ಫಲಕಗಳು ಉರ್ ನಗರದ ಚರಿತ್ರೆಯನ್ನು ತಿಳಿಸುತ್ತವೆ.

ಪ್ರ.ಶ.ಪು.1800ರಲ್ಲಿ ಉಂಟಾದ ಕ್ಷೋಭೆಯಲ್ಲಿ ಉರ್ ನಗರ ನಾಶವಾಗಿ ಕಟ್ಟಡಗಳೆಲ್ಲ ಒಡೆಯಲ್ಪಟ್ಟು, ಅವುಗಳ ಭವ್ಯತೆ ನಾಶವಾಯಿತು. 300 ವರ್ಷಗಳ ಅನಂತರ ಆಳಿದ ರಾಜರು ನಗರದ ಪುನರ್ನಿರ್ಮಾಣ ಕಾರ್ಯವನ್ನು ಕೈಗೊಂಡರು. ಪ್ರ.ಶ.ಪು.7ನೆಯ ಶತಮಾನದಿಂದ ಮತ್ತೆ ಈ ನಗರ ಪ್ರಾಮುಖ್ಯ ಪಡೆಯಿತು. ನೆಬುಚೆಡ್ನಸರ್ ಎಂಬ ರಾಜ ಇಲ್ಲಿನ ದೇವಾಲಯಗಳನ್ನು ಪುನರ್ನಿರ್ಮಿಸಿ ನಗರದ ಸೌಂದರ್ಯವನ್ನು ಹೆಚ್ಚಿಸಿದ. ಆದರೆ ಪರ್ಷಿಯನ್ನರ ದಂಡಯಾತ್ರೆಗಳ ಅನಂತರ ಸುಮೇರಿಯ ಮತಧರ್ಮಗಳು ಅವನತಿ ಹೊಂದಿದುವು. ಅವುಗಳ ಜೊತೆಯಲ್ಲಿಯೇ ಜಿûಗ್ಗುರಾಟ್ಗಳೂ ನಾಶವಾದುವು. ಪ್ರ.ಶ.ಪು. 4ನೆಯ ಶತಮಾನದಿಂದ ಈ ನಗರ ಪೂರ್ಣ ನಾಶವಾಗಿ ಮತ್ತೆ ಉಚ್ಛ್ರಾಯ ಸ್ಥಿತಿಯನ್ನು ಕಾಣಲಿಲ್ಲ. (ಎ.ವಿ.ಎನ್.)