ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಎರ್ಗೊಸ್ಟೀರಾಲ್

ವಿಕಿಸೋರ್ಸ್ದಿಂದ

ಎರ್ಗೊಸ್ಟೀರಾಲ್: ವಿಕಾಸದ ದೃಷ್ಠಿಯಿಂದ ಹಿಂದುಳಿದವೆಂದು ಹೇಳಲಾದ ಸಸ್ಯಗಳಾದ ಶಿಲೀಂಧ್ರ ಬೂಸ್ಟುಗಳಲ್ಲಿ ದೊರೆಯುವ ಒಂದು ಸ್ಟೀರಾಯ್ಡ್‌ ಆಲ್ಕೊಹಾಲ್. ಇದನ್ನು ಮೊದಲ ಬಾರಿಗೆ ರೈ ಮತ್ತು ಇನ್ನು ಹಲವು ಧಾನ್ಯಗಳ ಮೇಲೆ ಬರುವ ಎರ್ಗಟ್ ಬೂಸ್ಟಿನಿಂದ ಪಡೆದುದರಿಂದ ಈ ಸಂಯುಕ್ತಕ್ಕೆ ಎರ್ಗೊಸ್ಟೀರಾಲ್ ಎಂದು ಹೆಸರಾಯಿತು. ಎರ್ಗೊಸ್ಟೀರಾಲ್ ಮತ್ತು ಅದರ ಕೆಲವು ವ್ಯುತ್ಪನ್ನ ಮತ್ತು ಸಂಬಂಧಿಗಳು ಹಲವು ನಿರ್ದಿಷ್ಟ ತಳಿಯ ಯೀಸ್ಟ್‌, ಆಸ್ಪರ್ಜಿಲಸ್ ಮತ್ತು ಪೆನ್ಸಿಲಿನ್ ಬೂಸ್ಟುಗಳಲ್ಲಿ ದೊರೆಯುತ್ತವೆ. ವಾಣಿಜ್ಯ ಪ್ರಮಾಣದ ತಯಾರಿಕೆಗೆ ಇವೇ ಮುಖ್ಯ ಆಕರಗಳು. ಈ ಮುಂದೆ ತೋರಿಸಿರುವ ಎರ್ಗೊಸ್ಟೀರಾಲ್ಸಮಘಟಕಗಳನ್ನು (ಐಸೋಮರ್ಸ್‌) ಎರ್ಗೊಸ್ಟೀರಾಲಿನಿಂದ ತಯಾರಿಸಬಹುದು.

ಎರ್ಗೊಸ್ಟೀರಾಲಿನ ರಚನಾರಹಸ್ಯದ ಶೋಧನೆಯಲ್ಲಿ ವಿಂಡಾಸ್ ಮತ್ತು ಆತನ ಸಹೋದ್ಯೋಗಿಗಳ ಕಾಣಿಕೆ ಮುಖ್ಯವಾದುದು. ಇದನ್ನು ಪ್ರಯೋಗ ಶಾಲೆಯಲ್ಲಿಯೂ ಸಂಯೋಜಿಸಲಾಗಿದೆ ಮತ್ತು ಇದರ ಜೈವಿಕ ಉತ್ಪಾದನೆಯ ಬಗೆಯನ್ನೂ ಅರಿಯಲಾಗಿದೆ.

ಎರ್ಗೊಸ್ಟೀರಾಲನ್ನು ನಿಯಂತ್ರಿತ ರೀತಿಯಲ್ಲಿ ಅತಿನೇರಿಳೆ ವಿಸರಣಕ್ಕೆ ಒಳಪಡಿಸಿ ಕ್ಯಾಲ್ಸಿಫೆರಾಲ್ ಅಥವಾ ಜೀವಾತು-ಆ2 ಸಂಯುಕ್ತವನ್ನು ತಯಾರಿಸಬಹುದು. ಅಲ್ಪಪ್ರಮಾಣದಲ್ಲಿ ವೈದ್ಯಕೀಯ ಸಂಶೋಧನೆಗಳಲ್ಲೂ ಬಹುಮಟ್ಟಿಗೆ ಜೀವಾತು ಆ2 ತಯಾರಿಸಲೂ ಎರ್ಗೊಸ್ಟೀರಾಲನ್ನು ಉಪಯೋಗಿಸಲಾಗುತ್ತಿದೆ. (ಕೆ.ಟಿ.ಎಸ್.)