ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಎರ್ರಗುಡಿ

ವಿಕಿಸೋರ್ಸ್ದಿಂದ

ಎರ್ರಗುಡಿ: ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ಪತ್ತಿಕೊಂಡ ತಾಲ್ಲೂಕಿನಲ್ಲಿರುವ ಒಂದು ಗ್ರಾಮ. ಸಮೀಪದ ಕೆಲವು ಬಂಡೆಗಳಲ್ಲಿ ಅಶೋಕನ ಶಾಸನಗಳು ದೊರಕಿವೆ. ಇವುಗಳ ಭಾಷೆ ಆ ಕಾಲದ ಪ್ರಾಕೃತ. ಲಿಪಿ ಬ್ರಾಹ್ಮೀ. ಅಶೋಕನ ಗೌಣ ಶಿಲಾಶಾಸನಗಳಲ್ಲಿ ಮೊದಲ ಎರಡೂ ಬೃಹದ್ ಶಿಲಾಶಾಸನಗಳಲ್ಲಿ ಮೊದಲ ಹದಿಮೂರೂ ಇಲ್ಲಿವೆ. ಅಶೋಕನ ದಕ್ಷಿಣ ರಾಜಧಾನಿಗಳಲ್ಲೊಂದಾದ ಸುವರ್ಣಗಿರಿಯೇ ಈ ಎರ್ರಗುಡಿ ಇರಬಹುದೆಂದು ಕೆಲವು ವಿದ್ವಾಂಸರು ಊಹಿಸುತ್ತಾರೆ. (ಎಸ್.ಎನ್.)