ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಎಲ್ಮ್‌ ಗಿಡ

ವಿಕಿಸೋರ್ಸ್ದಿಂದ

ಎಲ್ಮ್‌ ಗಿಡ: ಅಲ್ಮೇಸಿ ಕುಟುಂಬಕ್ಕೆ ಸೇರಿದ ಅಲ್ಮಸ್ ಜಾತಿಯ ಒಂದು ಗಿಡ. ಈ ಜಾತಿಯಲ್ಲಿ ಸು.16 ಪ್ರಭೇದಗಳಿವೆ ಇವು ಉತ್ತರಗೋಳದ ಸಮಶೀತೋಷ್ಣ ಪ್ರದೇಶಗಳ ಬೆಟ್ಟಗುಡ್ಡಗಳಲ್ಲೂ ಉಷ್ಣ ಪ್ರದೇಶಗಳ ಎಲೆ ಉದುರುವ ಕಾಡುಗಳಲ್ಲೂ ಬೆಳೆಯುತ್ತವೆ. ಅಲ್ಮಸ್ ಇಂಟೆಗ್ರಿಪೋಲಿಯ ಅಥವಾ ಹೊಲೋಪ್ಟೀಲಿಯ ಇಂಟೆಗ್ರಿಫೋಲಿಯ ಎಂಬ ಪ್ರಭೇದವನ್ನು ಇಂಡಿಯನ್ ಎಲ್ಮ್‌ ಎಂದೂ ಕನ್ನಡದಲ್ಲಿ ತಪ್ಸಿಮರ ಎಂದೂ ಕೊಡವ ಭಾಷೆಯಲ್ಲಿ ಕಲಾದ್ರಿ ಎಂದೂ ಕರೆಯುತ್ತಾರೆ. ಸಂಸ್ಕೃತದಲ್ಲಿ ಇದನ್ನು ಚಿರಬಿಲ್ವ ಎಂದು ಹೇಳುತ್ತಾರೆ. ಇದು ಹಿಮಾಲಯದ ಬೆಟ್ಟಗಳಲ್ಲಿ 700 ಮೀ ಮೇಲ್ಮಟ್ಟದ ಪ್ರದೇಶಗಳಲ್ಲೂ ಮಧ್ಯಭಾರತ ಮತ್ತು ಇತರ ಕಡೆಗಳಲ್ಲೂ ಬೆಳೆಯುತ್ತದೆ. ಆಲ್ಮಸ್ ಕಾಂಪೆಸ್ಟ್ರಿಸ್ ಎಂಬುದನ್ನು ಇಂಗ್ಲಿಷ್ ಎಲ್ಮ್‌ ಎಂದು ಕರೆಯುತ್ತಾರೆ, ಇದನ್ನು ಇಂಗ್ಲೆಂಡಿನಲ್ಲಿ ಉದ್ಯಾನ, ಹುಲ್ಲುಗಾವಲುಗಳಲ್ಲಲ್ಲದೆ ಬೇಲಿಗಿಡವಾಗಿಯೂ ಬೆಳೆಸುತ್ತಾರೆ. ಇದರಲ್ಲಿ ಕೊಂಬೆಗಳಿಂದ ಮಾತ್ರ ವ್ಯವಸಾಯ ಸಾಧ್ಯ. ಅಲ್ಮಸ್ ಸಟೈವ ಎಂಬುದನ್ನು ಕಿರು ಎಲೆಗಳ ಎಲ್ಮ್‌ ಎಂದೂ ಅಲ್ಮಸ್ ನೈಟೆನ್ಸನ್ನು ನುಣುಪೆಲೆಗಳ ಎಲ್ಮ್‌ ಎಂದೂ ಆಲ್ಮಸ್ ಗ್ಲಾಬ್ರವನ್ನು ವಿಚ್ ಎಲ್ಮ್‌ ಎಂದೂ ಕರೆಯುತ್ತಾರೆ.ಹಾಗೆಯೇ ಡಚ್ ಎಲ್ಮ್‌ (ಆಲ್ಮಸ್ ಹಾಲೆಂಡಿಕ), ಕಾರ್ನಿಷ್ ಎಲ್ಮ್‌ (ಆಲ್ಮಸ್ ಮೈನರ್), ಅಮೆರಿಕನ್ ಎಲ್ಮ್‌ (ಆಲ್ಮಸ್ ಅಮೆರಿಕಾನ) ಎಂಬವೂ ಎಲ್ಮ್‌ ಗಿಡಗಳ ಗುಂಪಿಗೆ ಸೇರಿವೆ. ಎಲ್ಮ್‌ ಗಿಡದಲ್ಲಿ ಹೂಗಳು ಗೊಂಚಲುಗೊಂಚಲಾಗಿ ಬಿಡುತ್ತವೆ. ಹೂಗಳ ಪುಷ್ಪಪತ್ರಗಳಿಗೂ ದಳಗಳಿಗೂ ಯಾವ ವ್ಯತ್ಯಾಸವೂ ಕಂಡುಬರುವುದಿಲ್ಲ. ಅಂಡಾಶಯ ಎರಡು ಕಾರ್ಪೆಲ್ಲುಗಳಿಂದ ಕೂಡಿದ ಸಂಯುಕ್ತ ರೂಪದ್ದು. ಇಂಡಿಯನ್ ಎಲ್ಮ್‌ ಗಿಡದ ಬೀಜಗಳಿಂದ ಒಂದು ವಿಧವಾದ ಎಣ್ಣೆಯನ್ನು ತೆಗೆಯುತ್ತಾರೆ. ಮರ ತಿಳಿಹಳದಿ ಮಿಶ್ರಿತ ಬೂದು ಬಣ್ಣವಾಗಿದೆ. ಚೇಗು ಇಲ್ಲ. ಮರವನ್ನು ವಾಣಿಜ್ಯ ಭಾಷೆಯಲ್ಲಿ ಕಂಜಿ ಎಂದು ಕರೆಯುತ್ತಾರೆ. ಮರ ಮನೆ ಕಟ್ಟುವುದಕ್ಕೂ ಗಾಡಿಗಳನ್ನು ತಯಾರಿಸುವುದಕ್ಕೂ ಕೆತ್ತನೆ ಕೆಲಸಕ್ಕೂ ಬರುತ್ತದೆ. ಕೆಲವು ಕಡೆಗಳಲ್ಲಿ ಸೌದೆಗೂ ಇದ್ದಲು ತಯಾರಿಸುವುದಕ್ಕೂ ಇದನ್ನು ಉಪಯೋಗಿಸುತ್ತಾರೆ. (ಎಂ.ಸಿ.ಆರ್.)