ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಏಕಶೃಂಗಿ

ವಿಕಿಸೋರ್ಸ್ದಿಂದ

ಏಕಶೃಂಗಿ: ಒಂದು ಕೊಂಬಿನ ಕಾಲ್ಪನಿಕ ಪ್ರಾಣಿ (ಯೂನಿಕಾರ್ನ್). ಕುದುರೆಯಂತಹ ತಲೆ, ಜಿಂಕೆಯ ಕಾಲು, ಸಿಂಹದ ಬಾಲ, ಹೋತದ ಗಡ್ಡ ಹೊಂದಿರುವ ಹಾಗೆ ಪ್ರತಿನಿಧಿಸಲಾಗಿದೆ. ಇದರ ತಲೆ ಮತ್ತು ದೇಹ ಕುದುರೆಯಂತಿದ್ದು ಹಿಂಗಾಲುಗಳ ಜಿಂಕೆಯ ಕಾಲಿನಂತಿವೆ. ಬಾಲ ಸಿಂಹದ ಬಾಲದಂತೆ. ಕುದುರೆಯ ಬಾಲದಂತೆ ಚಿತ್ರಿತವಾಗಿರುವುದೂ ಉಂಟು. ಹೋತನಂತೆ ಗಡ್ಡವಿದೆ. ಹಣೆಯಲ್ಲಿ ತಿರುಚಿಕೊಂಡು ನೇರಚಾಚಿರುವ ಒಂದು ಕೊಂಬಿದೆ. ಈ ಪ್ರಾಣಿ ಶೌಚಗುಣದ ಪ್ರತೀಕವಾಗಿತ್ತು. ಶುದ್ದ ಕನ್ಯೆಗಲ್ಲದೆ ಬೇರಾರಿಗೂ ವಶವಾಗುತ್ತಿರಲಿಲ್ಲ.

ಭಾರತದಲ್ಲಿ ಕೆಲವು ಬಿಳಿಕತ್ತೆಗಳಿಗೆ ಏಕಶೃಂಗವಿತ್ತೆಂದು ಟೆಸಿಯಸ್ ತಿಳಿಸುತ್ತಾನೆ. ಇದರ ಕೊಂಬಿನಿಂದಾದ ಪಾನಪಾತ್ರೆ ವಿಷಾಪಹಾರಿಯೆಂದು ಅವನ ಹೇಳಿಕೆ. ಏಕಶೃಂಗಿಗಳಾದ ಓರಿಕ್ಸ್‌ ಮತ್ತು ಭಾರತದ ಕತ್ತೆಗಳ ವಿಷಯವನ್ನು ಅರಿಸ್ಟಾಟಲ್ ಪ್ರಸ್ತಾಪಮಾಡಿದ್ದಾನೆ. ಪ್ಲಿನಿ ಇದರ ಉಲ್ಲೇಖ ಮಾಡಿದ್ದಾನೆ. ಬೈಬಲ್ಲಿನಲ್ಲಿ ಇಂಥದೊಂದು ಪ್ರಾಣಿಯ ಉಲ್ಲೇಖವಿದೆ. ಏಕಶೃಂಗಿಯ ವಿಷಪರಿಹಾರಕ ಗುಣದಲ್ಲಿ ನಂಬಿಕೆ ಇದ್ದ ಮಧ್ಯಯುಗದವರು ತಮ್ಮ ಪಾನಪಾತ್ರೆಗಳ ಮೇಲೆ ಅದರ ಚಿತ್ರ ಬಿಡಿಸುತ್ತಿದ್ದರು. ಈ ಪರಿಪಾಟಿ ಎರಡನೆಯ ಚಾಲ್ರ್ಸ್‌ನ ಕಾಲದವರೆಗೂ ಪ್ರಚಲಿತವಾಗಿತ್ತು. ರಾಜಭೋಜನವನ್ನು ಪರೀಕ್ಷಿಸಲು ಫ್ರಾನ್ಸಿನವರು 1789ರ ವರೆಗೂ ಏಕಶೃಂಗಿಯ ಕೊಂಬಿನಿಂದ ಮಾಡಿದ ಒಂದು ವಸ್ತುವನ್ನು ಬಳಸುತ್ತಿದ್ದರು. ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡಿನ ರಾಜಲಾಂಛನಗಳಲ್ಲಿ ಏಕಶೃಂಗಿಯ ಚಿತ್ರವಿದೆ.

ಮೆಕ್ಸಿಕೋದ ಒಂದು ಗಿಡಕ್ಕೆ ಏಕಶೃಂಗಿ ಎಂಬ ಹೆಸರಿದೆ. ಇದನ್ನು ಭೂತದ ಕೈ ಎಂದೂ ಕರೆಯುತ್ತಾರೆ. ಮಾರ್ಟಿನಿಯೇಸಿ ಕುಟುಂಬಕ್ಕೆ ಸೇರಿದ ಈ ಸಸ್ಯದ ಕಾಯಿ ಬಾಗಿರುವ ಕೊಂಬಿನಂತಿದ್ದು ತೊಟ್ಟಿನಿಂದ ಕೆಳಗೆ ನೇತುಬಿದ್ದಿರುತ್ತದೆ.

ನರ್ವ್ಹಾಲ್ ಎಂಬ ತಿಮಿಂಗಿಲ ಒಂದಕ್ಕೆ ಮೂತಿಯ ತುದಿಯಲ್ಲಿ ಈಟಿಯಂಥ ಮೂಳೆಯೊಂದಿದೆ. ಇದು ಶೀತವಲಯದ ಸಮುದ್ರಗಳಲ್ಲಿ ವಾಸಿಸುತ್ತದೆ. ಇದರ ಶರೀರ 7 ಮೀ ಉದ್ದ. ಮೂತಿಯಲ್ಲಿನ ಶೃಂಗ 3 ಮೀಗಳವರೆಗೂ ಬೆಳೆಯಬಲ್ಲುದು. ಈ ತಿಮಿಂಗಿಲದ ಮೂಳೆಗಳೇ ಏಕಶೃಂಗಿಯ ಕಲ್ಪನೆಗೆ ಕಾರಣವಾಗಿರ ಬಹುದೆಂದು ಹೇಳಲಾಗಿದೆ. (ಎ.ಎಸ್.ಜಿ.)