ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಐಡಿಯಲಿಸಂ

ವಿಕಿಸೋರ್ಸ್ದಿಂದ

ಐಡಿಯಲಿಸಂ: ಪಾಶ್ಚಾತ್ಯ ದರ್ಶನ ಪದ್ಧತಿಯಲ್ಲಿ ಪ್ರಸಿದ್ಧವಾದ ಒಂದು ಪಂಥ. ಇದನ್ನು ಧ್ಯೇಯವಾದ ಅಥವಾ ಚಿದೇಕಸತ್ಯತಾವಾದ ಎಂದು ಭಾಷಾಂತರಿಸಬಹುದು. ಮೊದಲ ಅರ್ಥದಲ್ಲಿ ಪ್ಲೇಟೊವಿನ ಸಿದ್ಧಾಂತವನ್ನು ಐಡಿಯಲಿಸಂ ಎಂದು ವ್ಯವಹರಿಸುವುದುಂಟು. ಐಡಿಯಲ್ ಎಂದರೆ ಧ್ಯೇಯ, ಆದರ್ಶ, ಗುರಿ ಎಂದು ಅರ್ಥ. ಪ್ಲೇಟೊ ಪ್ರತ್ಯಕ್ಷ ಸಿದ್ಧವಾದ ಪ್ರಪಂಚಕ್ಕಿಂತ ಸತ್ಯ ಸೌಂದರ್ಯ ಮತ್ತು ಧಾರ್ಮಿಕ ಪುರುಷಾರ್ಥಗಳು ಹೆಚ್ಚು ಮೂಲಭೂತವಾದ ತತ್ತ್ವಗಳೆಂದೂ ಅವೇ ವಿಶ್ವದ ತಳಹದಿಯಾಗಿರುವುವಲ್ಲದೆ ಅಂತಿಮ ಪ್ರಯೋಜನಗಳಾಗಿಯೂ ಇವೆಯೆಂದು ಸಾಧಿಸಿದ್ದರಿಂದ ಅವನ ಸಂಪ್ರದಾಯಕ್ಕೆ ಐಡಿಯಲಿಸಂ ಎಂದು ಪ್ರಸಿದ್ಧಿ ಬಂತು. ಆಧುನಿಕ ಐರೋಪ್ಯ ದರ್ಶನದಲ್ಲಿ ಬಾಕೆರ್ಲ್‌ ಎಂಬುವನ ವಾದಕ್ಕೆ ಐಡಿಯಲಿಸಂ ಎಂದು ಹೆಸರು ಬಂದಿತು. ಇವರ ಪ್ರಕಾರ ಬಾಹ್ಯಪ್ರಪಂಚ, ಭೌತಿಕ ವಸ್ತು ಎಂಬುವುದು ಇಲ್ಲವೇ ಇಲ್ಲ. ಕೇವಲ ಚಿತ್ ಅಥವಾ ಜ್ಞಾನ ಮಾತ್ರ ಸತ್ಯ. ಬಾಹ್ಯಪ್ರಪಂಚ ಕೇವಲ ಚಿತ್ಕಲ್ಪಿತ. ಇವರ ನಿಲುವು ಪ್ರತ್ಯೇಕಪ್ರತ್ಯೇಕವಾದ ಜೀವಚೈತನ್ಯವನ್ನು ಅವಲಂಬಿಸಿರುವುದರಿಂದ, ಈ ಪಕ್ಷಕ್ಕೆ ವ್ಯಕ್ತಿನಿಷ್ಠ ಚಿದೇಕ ಸತ್ಯವಾದ ಎಂದು ಹೆಸರಾಯಿತು. ಇದು ಭಾರತೀಯ ದರ್ಶನದ ಯೋಗಾಚಾರಕ್ಕೆ ಹೋಲುತ್ತದೆ. ಮುಂದೆ ಬಂದ ಫಿಷ್ಟೆ, ಷಿಲಿಂಗ್, ಹೆಗೆಲ್ ಇವರು ಮೂಲಭೂತವಾದ ಅನಂತಚೈತನ್ಯ ಒಂದೇ ಸತ್ಯವೆಂದು ವಾದಿಸಿದರು. ಇವರ ಮತ ಅದ್ವೈತವೇದಾಂತವನ್ನು ಹೋಲುತ್ತದೆ. ವಿಶ್ವಚೈತನ್ಯವನ್ನು ಏಕಮಾತ್ರ ಪರಮಾರ್ಥವೆಂದು ಎತ್ತಿಹಿಡಿದಿದ್ದರಿಂದ ಈ ಪಂಥಕ್ಕೆ ವಿಶ್ವಚೈತನ್ಯ ಸತ್ಯತಾವಾದ (ಆಬ್ಚೆಕ್ಟಿವ್, ಸ್ಪೆಕ್ಯುಲೆಟಿವ್, ಆಬ್ಸಲೂಟ್ ಐಡಿಯಲಿಸಂ) ಎಂದು ಖ್ಯಾತಿ ಬಂದಿತು. ಐಡಿಯಲಿಸಂ ಬಹಳ ಮೇಧಾವಿ ತಾತ್ತ್ವಿಕರಿಂದ ಪೋಷಿತವಾಗಿದ್ದು ಇಡೀ ದರ್ಶನಪ್ರಪಂಚದಲ್ಲೇ ಒಂದು ಪ್ರಧಾನ ಮಾರ್ಗವಾಗಿದೆ. ಇತ್ತೀಚಿನ ದರ್ಶನ ವಿಮರ್ಶೆಯಲ್ಲಿ ಇದರ ಪ್ರಾಬಲ್ಯ ಸ್ವಲ್ಪ ಕಡಿಮೆಯಾಗಿದೆ. ಸ್ಥಿತಿ ಹೀಗೆಯೇ ಮುಂದೆಯೂ ಇರುವುದೆಂದು ಹೇಳಬರದು. (ಎಸ್.ಎಸ್.ಆರ್.)