ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಒಡಿಸ್ಸಿ

ವಿಕಿಸೋರ್ಸ್ದಿಂದ

ಒಡಿಸ್ಸಿ: ಪ್ರ.ಶ.ಪು. 9 ಅಥವಾ 8ನೆಯ ಶತಮಾನದ ಸುಮಾರಿನಲ್ಲಿ ಪ್ರಾಚೀನ ಗ್ರೀಕ್ ಕವಿ ಹೋಮರ್ ರಚಿಸಿದನೆಂದು (ಅಥವಾ ಸಂಕಲನ ಮಾಡಿದನೆಂದು) ಪ್ರಖ್ಯಾತವಾಗಿರುವ ಎರಡು ಮಹಾಕಾವ್ಯಗಳಲ್ಲಿ ಒಂದು. ಅವನ ಮೊದಲನೆಯ ಮಹಾಕಾವ್ಯ ಇಲಿಯಡ್ (ನೋಡಿ). ಅದರಲ್ಲಿ ಗ್ರೀಕರು ಟ್ರಾಯ್ ಪಟ್ಟಣಕ್ಕೆ ಮುತ್ತಿಗೆ ಹಾಕಿದ್ದು, ಅಕಿಲೀಸನ ಉಗ್ರಕೋಪ, ಅದು ಗ್ರೀಕರಿಗೂ ಟ್ರೋಜನರಿಗೂ ತಂದ ವಿಪತ್ಪರಂಪರೆಗಳು-ಮುಂತಾದವುಗಳ ವಿಸ್ತಾರವಾದ ವರ್ಣನೆ ಇದೆ. ಅದರ ಕಥೆ ಒಡಿಸಿಯಲ್ಲಿ ಮುಂದುವರಿದಿದೆ. ಹತ್ತು ವರ್ಷಗಳ ಭಯಂಕರ ಯುದ್ದದ ಅನಂತರ ಒಡಿಸಿಯಸ್ ಮನೆಗೆ ಹೊರಟವನು ದಾರಿಯಲ್ಲಿ ಅಕಸ್ಮಾತಾಗಿ ಒದಗಿದ ವಿಘ್ನಗಳನ್ನೆದುರಿಸಬೇಕಾಗಿ ಬಂದು ಅನೇಕ ಸಾಹಸ ಕಾರ್ಯಗಳಲ್ಲಿ ತೊಡಗುತ್ತಾನೆ. ಪರಿಣಾಮವಾಗಿ ತನ್ನೊಡನೆ ತಾಯ್ನಾಡಿನಿಂದ ಬಂದು, ಯುದ್ಧದಲ್ಲಿ ಹೋರಾಡಿ, ಸುಖವಾಗಿ ಹಿಂತಿರುಗುತ್ತಿದ್ದ ಎಲ್ಲ ಗೆಳೆಯರನ್ನೂ ಕಳೆದುಕೊಳ್ಳುತ್ತಾನೆ. ಒಡಿಸಿಯಸನ ಹತ್ತು ವರ್ಷಗಳ ಬಗೆಬಗೆಯ ಅನುಭವಗಳನ್ನು 24 ಕಾಂಡಗಳ ತನ್ನ ಒಡಿಸಿ ಮಹಾಕಾವ್ಯದಲ್ಲಿ ಹೋಮರ್ ವರ್ಣರಂಜಿತವಾಗಿ ಚಿತ್ರಿಸಿದ್ದಾನೆ. ಹರಹು ಹತ್ತು ವರ್ಷದ್ದಾದರೂ ಇಲಿಯಡ್ನಂತೆ ಇಲ್ಲಿಯೂ ವರ್ಣಿತವಾಗಿರುವುದು ಕೇವಲ ನಲವತ್ತು ದಿನಗಳ ಕ್ರಿಯೆ, ಅದರಲ್ಲೂ ವಿವರವಾಗಿ ವರ್ಣಿತವಾಗಿರುವುದು ಕೆಲವೇ ದಿನಗಳದ್ದು.

ದೇವತೆಗಳ ಸಭೆಯೊಂದಿಗೆ ಕಾವ್ಯ ಪ್ರಾರಂಭವಾಗುತ್ತದೆ. ಒಡಿಸಿಯಸನ ವಿಷಯದಲ್ಲಿ ಮೊದಲಿನಿಂದಲೂ ವಿಶೇಷವಾದ ವಾತ್ಸಲ್ಯವನ್ನು ತಳೆದ ಅಥೀನಾ ದೇವತೆ (ಈ ವಿಷಯ ನಮಗೆ ತಿಳಿಯುವುದು ಇಲಿಯಡ್ ಕಾವ್ಯದಿಂದ) ಜóÆ್ಯಸ್ ದೇವತೆಗೆ ದೂರು ಕೊಡುತ್ತಾಳೆ. ಅದರ ಸಾರಾಂಶ ಇಷ್ಟು: ಟ್ರಾಯ್ ಪಟ್ಟಣ ಧೂಳೀಪಟವಾಗಿ ಹತ್ತು ವರ್ಷಗಳಾದುವು. ಆದರೂ ವೀರನಾದ ಒಡಿಸಿಯಸಿಗೆ ಮನೆ ಸೇರಲು ಸಾಧ್ಯವಾಗಿಲ್ಲ. ಅದಕ್ಕೆ ಕಾರಣ ಕಲಿಪ್ಸೋ (ಬಚ್ಚಿಡುವವಳು) ಎಂಬ ಉಪದೇವತೆಯೊಬ್ಬಳು ಅವನನ್ನು ತಡೆ ಹಾಕಿದ್ದಾಳೆ, ಇತ್ತ ಇಥಾಕದಲ್ಲಿ ಅವನ ಹೆಂಡತಿ ಪೆನೆಲೊಪೆ ಮತ್ತು ಅವನ ಮಗ ಟೆಲಿಮಾಕಸ್ ರಾಜ್ಯವನ್ನು ಉಳಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಪೆನೆಲೊಪೆಯನ್ನು ವರಿಸಿ ರಾಜ್ಯವನ್ನು ದಕ್ಕಿಸಿಕೊಳ್ಳಲು ಶ್ರೀಮಂತ ವರ್ಗದವರು ನಾನು ಮುಂದು ತಾನು ಮುಂದು ಎಂದು ಹೋರಾಡುತ್ತಿದ್ದಾರೆ. ಇದನ್ನೆಲ್ಲ ಕೇಳಿದ ಜ಼Æ್ಯಸ್ ದೇವತೆ ಅಥೀನಾ ದೇವತೆಗೆ ಪುರ್ಣ ಸ್ವಾತಂತ್ರ್ಯ ನೀಡುತ್ತಾನೆ. ಆಕೆ ವೇಷ ಮರೆಸಿಕೊಂಡು ಟೆಲಿಮಾಕಸನ ಮನೆಗೆ ಅತಿಥಿಯಾಗಿ ಬರುತ್ತಾಳೆ. ಅವಳ ಸಲಹೆಯಂತೆ ಆತ ಪುರಜನರ ಸಭೆ ಕರೆದು ತಾನು ತನ್ನ ತಂದೆಯನ್ನು ಹುಡುಕಿಕೊಂಡು ಬರಲು ಹೋಗುವುದಾಗಿ ತಿಳಿಸುತ್ತಾನೆ. ಸಭೆಯಲ್ಲಿ ಕವಿ ಫೀಮಿಯಸ್ ಟ್ರಾಯ್ ಯುದ್ಧದ ಘಟನೆಯ ಭಾಗಗಳನ್ನು ಹಾಡುತ್ತಾನೆ. ಪತಿಯ ಬಗ್ಗೆ ನಿಷ್ಠೆಯಿದ್ದರೂ ಕಿಂಚಿತ್ ಚಂಚಲಳಾದ ಪೆನೆಲೊಪೆ ಕಂಬನಿಗರೆಯುತ್ತಾಳೆ. ಅವಳನ್ನು ಟೆಲಿಮಾಕಸ್ ಗದರಿಸಿ, ತನ್ನ ತಾಯಿಯ ಕೈ ಹಿಡಿಯಲು ತವಕಪಡುತ್ತಿರುವ ಯಾವನೊಬ್ಬನೂ ತಾನು ಹಿಂತಿರುಗುವವರೆಗೂ ತನ್ನ ಮನೆಗೆ ಕಾಲಿಡಕೂಡದೆಂದು ಕಟ್ಟಪ್ಪಣೆ ಮಾಡುತ್ತಾನೆ.

ಒಂದರಿಂದ ನಾಲ್ಕರವರೆಗಿನ ಕಾಂಡಗಳಲ್ಲಿ ಟೆಲಿಮಾಕಸ್ ನಡೆಸಿದ ಕಾರ್ಯಗಳ ವರ್ಣನೆಯಿದೆ. ಆತನಿಗೆ ತಂದೆಯ ವಿಷಯ ತಿಳಿಯಬಹುದಾದದ್ದು ಇಬ್ಬರಿಂದ ಮಾತ್ರ. ಒಬ್ಬ ಪೈಲಾಸಿನ ನೆಸ್ಟರ್. ಮತ್ತೊಬ್ಬ ಇತ್ತೀಚೆಗೆ ಸ್ಪಾರ್ಟಾಕ್ಕೆ ಹಿಂತಿರುಗಿದ್ದ ಮೆನೆಲಾಸ್, ಟೆಲಿಮಾಕಸ್ ಮೊದಲು ನೆಸ್ಟರನ್ನು ಕಂಡ. ಆತ ಊರಿಗೆ ಹಿಂತಿರುಗಿ ಬಹಳ ದಿನಗಳಾಗಿವೆ. ಒಡಿಸಿಯಸನಿಗೆ ಏನಾಯಿತು ಎಂಬುದು ಅವನಿಗೆ ತಿಳಿಯದು. ಬದಲಿಗೆ ಟ್ರಾಯ್ ಯುದ್ಧದ ವಿವರವಾದ ವರ್ಣನೆಯನ್ನೂ ಅಲ್ಲಿಂದ ಹಿಂತಿರುಗುತ್ತಿದ್ದ ವೀರರಿಗೆ ಒದಗಿದ್ದ ಅನಾಹುತಗಳ ವಿವರಗಳನ್ನೂ ಆತ ನೀಡುತ್ತಾನೆ. ಅದನ್ನೆಲ್ಲ ಕೇಳಿ ಟೆಲಿಮಾಕಸ್ ಲೆಸೆಡಮಾನಿನಲ್ಲಿದ್ದ ಮೆನೆಲಾಸನ ಭವ್ಯವಾದ ಅರಮನೆಗೆ ಬರುತ್ತಾನೆ. ಮೆನೆಲಾಸ್ ಆತನಿಗೆ ತಾನು ಈಜಿಪ್ಟಿನಲ್ಲಿ ನಡೆಸಿದ ಸಾಹಸಗಳನ್ನು ವರ್ಣಿಸುತ್ತಾನೆ. ಟ್ರಾಯ್ ಯುದ್ಧಕ್ಕೆ ಕಾರಣಳಾಗಿ ಅನೇಕ ಸಹಸ್ರ ಜನರ ಪ್ರಾಣವನ್ನು ಆಹುತಿಯಾಗಿ ಪಡೆದ ಹೆಲೆನಳ ಮೃತ್ಯುಸೌಂದರ್ಯವನ್ನು ಟೆಲಿಮಾಕಸ್ ಕಣ್ಣಾರೆ ಕಾಣುತ್ತಾನೆ. ಒಡಿಸಿಯಸ್ ಬದುಕಿದ್ದಾನೆಂದೂ ಶೀಘ್ರದಲ್ಲೇ ಮನೆಗೆ ಹಿಂತಿರುಗುವುದು ಖಂಡಿತವೆಂದೂ ಮೆನೆಲಾಸ್ ಟೆಲಿಮಾಕಸನಿಗೆ ಭರವಸೆ ನೀಡುತ್ತಾನೆ. ಈ ಎರಡು ಸ್ಥಳಗಳಿಗೆ ಬಂದದ್ದರಿಂದ ತಂದೆಯ ವಿಷಯ ತಿಳಿಯದಿದ್ದರೂ ಟೆಲಿಮಾಕಸನಿಗೆ ಜನರ ಸಂಪರ್ಕದಿಂದಾಗಿ ಹೆಚ್ಚಿನ ಲೋಕಾನುಭವ ದೊರೆತು ಮನಸ್ಸು ಪಕ್ವವಾಗುತ್ತದೆ.

ಇದ್ದಕ್ಕಿದ್ದಂತೆ ದೃಶ್ಯ ಬದಲಾಗಿ ನಾವು ಟೆಲಿಮಾಕಸನ ಅರಮನೆಯನ್ನು ಕಾಣುತ್ತೇವೆ. ಅಲ್ಲಿ ಮಗನೂ ಇಲ್ಲದೆ ಪೆನೆಲೊಪೆ ದುಃಖತಪ್ತಳಾಗಿದ್ದಾಳೆ. ಅವಳನ್ನು ಸಂತೈಸಲು ಅಥೀನೆ ಒಂದು ಸುಂದರವಾದ ಸ್ವಪ್ನವನ್ನು ಕರುಣಿಸುತ್ತಾಳೆ. ಪೆನೆಲೊಪೆಯನ್ನು ವರಿಸಲು ತವಕಿಸುತ್ತಿದ್ದವರು ಟೆಲಿಮಾಕಸ್ ಹಿಂತಿರುಗಿದಾಗ ಅವನಿಗೆ ಕೇಡುಮಾಡಲು ಹಡಗಿನಲ್ಲಿ ಕಾಯುತ್ತಿರುತ್ತಾರೆ. ಮುಂದೇನಾಗುತ್ತದೆ ಎಂಬುದನ್ನೂ ಹೇಳದೆ ಹದಿನೈದನೆಯ ಕಾಂಡದವರೆಗೆ ಕಲಾತ್ಮಕ ಕುತೂಹಲದಲ್ಲಿ ಕವಿ ನಮ್ಮನ್ನು ಕರೆದೊಯ್ಯುತ್ತಾನೆ.

ಒಡಿಸಿಯಸನಿಗೆ ಒದಗಿದ ವಿಧವಿಧವಾದ ಅನುಭವಗಳನ್ನು ಕವಿ ಅವನ ಬಾಯಿಯಿಂದಲೇ ಬೇರೆ ಬೇರೆ ಸಂದರ್ಭಗಳಲ್ಲಿ ಹೇಳಿಸಿದ್ದಾನೆ. ಸಹಜವಾದ ಮಾನವ ಲೋಕದಿಂದ ಆತ ನಂಬಲು ಕಷ್ಟವಾದ ಅನೇಕ ಪೌರಾಣಿಕ, ಅತಿ ಪ್ರಾಕೃತಿಕ ಪ್ರದೇಶಗಳಿಗೆಲ್ಲ ಹೋಗಬೇಕಾಗಿ ಬರುತ್ತದೆ. ಟ್ರಾಯ್ ಪಟ್ಟಣವನ್ನು ಬಿಟ್ಟಕೂಡಲೇ ಆತ ಸಿಸೋನಿಯರ ಪಟ್ಟಣವಾದ ಇಸ್ಮೇರಸಿಗೆ ಒಯ್ಯಲ್ಪಡುತ್ತಾನೆ. ಇವನೇನೋ ಆ ಪಟ್ಟಣವನ್ನು ಕೊಳ್ಳೆಹೊಡೆಯುತ್ತಾನೆ. ಆದರೆ ಆಶ್ಚರ್ಯಕರವಾದ ರೀತಿಯಲ್ಲಿ ತನ್ನ ಎಪ್ಪತ್ತೆರಡು ಜನ ಸಂಗಡಿಗರನ್ನು ಕಳೆದುಕೊಳ್ಳುತ್ತಾನೆ. ಮೇಲಿಯೊ ಭೂಶಿರವನ್ನು ಸುತ್ತುಹಾಕಬೇಕು ಎಂದು ಆತ ಯೋಚಿಸುತ್ತಿದ್ದಾಗ ಬಿರುಗಾಳಿ ಅವನನ್ನು ‘ಲೋಟಸ್’ ಗಿಡಗಳ (ನಮ್ಮ ‘ತಾವರೆ’ ಹೂ) ದೇಶಕ್ಕೆ ಒಯ್ಯುತ್ತದೆ. ಅದರ ಆಹಾರದ ಆಸೆಗೆ ತಮ್ಮ ಊರನ್ನು ಮರೆಯಲಿದ್ದ ತನ್ನ ಸಂಗಡಿಗರನ್ನು ಆತ ಬಲಾತ್ಕಾರವಾಗಿ ಎಳೆದುಕೊಂಡು ಅಲ್ಲಿಂದ ಹೊರಡುತ್ತಾನೆ. ಅಲ್ಲಿಂದ ಅವನ ಹಡಗು ಆ ಕಾಲದ ಗ್ರೀಕರಿಗೆ ತಿಳಿಯದಿದ್ದ ಪೌರಾಣಿಕ ಪ್ರದೇಶಗಳಿಗೆ ತೇಲುತ್ತದೆ. ಮೊದಲು ಅವನು ಹೋದದ್ದು ಸೈಕ್ಲೋಪರು ಇದ್ದ ಊರಿಗೆ. ಪಾಲಿಫೀಮಸ್ ಎಂಬ ಸೈಕ್ಲೊಪ್ ರಾಕ್ಷಸ ಇವನನ್ನೂ ಇವನ ಹನ್ನೆರಡು ಜನ ಸಂಗಾತಿಗಳನ್ನೂ ತನ್ನ ಗುಹೆಯಲ್ಲಿ ಕೂಡಿಹಾಕುತ್ತಾನೆ. ಒಡಿಸಿಯಸ್ ಕೆಲವು ಸಂಗಡಿಗರನ್ನು ಕಳೆದುಕೊಂಡರೂ ರಾಕ್ಷಸನ ಕಣ್ಣನ್ನು ಕುರುಡಾಗಿಸಿ ಉಪಾಯದಿಂದ ತಪ್ಪಿಸಿಕೊಳ್ಳುತ್ತಾನೆ. ಆದರೆ ಇದರ ಪರಿಣಾಮ ಭೀಕರವಾಗುತ್ತದೆ. ಏಕೆಂದರೆ ಪಾಲಿಫೀಮಸನ ತಂದೆ ಸಮುದ್ರದೇವತೆಯಾದ ಪೊಸೈಡನ್ ಇವನ ಹಡಗು ಊರು ಸೇರದಂತೆ ಸರ್ವಪ್ರಯತ್ನ ವನ್ನೂ ಮಾಡುತ್ತಾನೆ. ವಾಯುವಿನ ಹತೋಟಿಗೆ ಕಾರಣನಾದ ಈಯೊಲಸನ ಆತಿಥ್ಯ ಒಡಿಸಿಯಸನಿಗೆ ದೊರಕುತ್ತದೆ. ಅಲ್ಲಿಂದ ಹೊರಡುವಾಗ ಪಶ್ಚಿಮ ಮಾರುತವೊಂದನ್ನುಳಿದು ಉಳಿದೆಲ್ಲ ಗಾಳಿಗಳನ್ನೂ ಈಯೊಲಸ್ ಒಂದು ಚರ್ಮದ ಚೀಲದಲ್ಲಿ ಹಾಕಿ ಒಡಿಸಿಯಸನಿಗೆ ಕೊಡುತ್ತಾನೆ. ಇದರಿಂದ ಆತ ಒಂಬತ್ತೇ ದಿನಗಳಲ್ಲಿ ಇಥಾಕವನ್ನು ಸೇರಬಹುದಿತ್ತು. ನಾಯಕ ವಿಶ್ರಾಂತಿ ಪಡೆಯುತ್ತಿದ್ದಾಗ ಅವನ ಮಿತ್ರರು, ಆ ಚೀಲದಲ್ಲಿ ಐಶ್ವರ್ಯ ತುಂಬಿದೆ ಎಂದು ಭಾವಿಸಿ ಅದನ್ನು ತೆರೆದುಬಿಡುತ್ತಾರೆ. ಕೂಡಲೆ ಆ ಗಾಳಿಗಳು ಅವರನ್ನೆಲ್ಲ ಹೊರಟಲ್ಲಿಗೇ ತಂದುಬಿಡುತ್ತವೆ. ಮುಂದೆ ಅವರು ರಾಕ್ಷಸಾಗಾರದ ನರಭಕ್ಷಕರ ಕೈಗೆ ಸಿಕ್ಕಿಕೊಳ್ಳುತ್ತಾರೆ. ಅವರು ಒಡಿಸಿಯಸನ ಹನ್ನೊಂದು ಹಡಗುಗಳನ್ನು ಒಡೆದು ಪುಡಿ ಪುಡಿ ಮಾಡುತ್ತಾರೆ. ಹನ್ನೆರಡನೆಯದು ಹೇಗೋ ಉಳಿಯುತ್ತದೆ. ಮುಂದೆ ಇವರು ಹೋದದ್ದು ಏಂಖಯಾ ದ್ವೀಪಕ್ಕೆ. ಅಲ್ಲಿದ್ದ ಮಾಟಗಾತಿ ಸರ್ಸಿ ಇವರ ಗುಂಪಿನಲ್ಲಿ ಕೆಲವರನ್ನು ಹಂದಿಗಳಾಗಿ ಮಾಡುತ್ತಾಳೆ. ಆಗ ಹರ್ಮಿಸ್ ದೇವತೆಯ ಕೃಪೆಯಿಂದ ಒಡಿಸಿಯಸ್ ಅವರನ್ನೆಲ್ಲ ಮತ್ತೆ ಮನುಷ್ಯರನ್ನಾಗಿ ಮಾಡಿ ಒಂದು ವರ್ಷ ಕಾಲ ಅವಳೊಡನೆ ಸುಖಸಂತೋಷಗಳಲ್ಲಿ ಇದ್ದುಬಿಡುತ್ತಾನೆ. ಊರಿಗೆ ಹೊರಟಾಗ ಸರ್ಸಿ ನಡುವೆ ಬಾಯಿಹಾಕಿ ಒಡಿಸಿಯಸ್ ಪಶ್ಚಿಮದ ತುತ್ತತುದಿಗೆ ಹೋಗಿ ಅಲ್ಲಿ ಕೆಳಜಗತ್ತಿನ ಪ್ರದೇಶದ ಬಳಿ ದಾರ್ಶನಿಕ ಟಕೀಷಿಯಸನಿಂದ ತನ್ನ ಭವಿಷ್ಯವನ್ನು ತಿಳಿದುಕೊಳ್ಳಬೇಕೆಂದು ಸೂಚಿಸುತ್ತಾಳೆ. ಒಡಿಸಿಯಸ್ ಅದರಂತೆ ಮಾಡುತ್ತಾನೆ. ಅಲ್ಲದೆ ಅವನ ಭವಿಷ್ಯವಾಣಿ ನಿಜವಾಗುವ ಘಟನೆಗಳೂ ಮುಂದೆ ನಡೆಯುತ್ತವೆ.

ಒಡಿಸಿಯಸ್ ಮತ್ತೆ ಸರ್ಸಿಯ ದ್ವೀಪಕ್ಕೆ ಹಿಂತಿರುಗಿದಾಗ ಆಕೆ ಅವನಿಗೆ ಉಪಯುಕ್ತವಾದ ಸಲಹೆಗಳನ್ನೂ ಅನುಕೂಲ ಮಾರುತವನ್ನೂ ಮತ್ತೆ ಕರುಣಿಸುತ್ತಾಳೆ. ಮುಂದೆ ಹೊರಟಾಗ ಸೈರೆನರ ದ್ವೀಪಗಳಿಂದ ಮಧುರವಾದ ಸಂಗೀತ ಇವನ ಮತ್ತು ಇವನ ಗುಂಪಿನ ಜನರನ್ನು ಮೋಹಿಸುತ್ತದೆ. ಸೈರೆನರ ಉದ್ದೇಶ ಇವರನ್ನೆಲ್ಲ ಆಕರ್ಷಿಸಿ ನಾಶಮಾಡಬೇಕು ಎಂಬುದು. ಆದರೆ ಒಡಿಸಿಯಸ್ ಕ್ಷಣಮಾತ್ರದಲ್ಲಿ ವಿಷಯವನ್ನು ಗ್ರಹಿಸಿ ತನ್ನ ಸಂಗಾತಿಗಳ ಕಿವಿಗೆ ಮೇಣವನ್ನು ತುಂಬಿ ಅವರ ಕಿವಿಗೆ ಸಂಗೀತ ಬೀಳದಂತೆ ನೋಡಿಕೊಳ್ಳುತ್ತಾನಲ್ಲದೆ ತಾನು ಹಡಗಿನ ಧ್ವಜಸ್ತಂಭಕ್ಕೆ ನೇತುಬೀಳುತ್ತಾನೆ. ಹೀಗಾಗಿ ಅವರ ಹಡಗು ಸುಖವಾಗಿ ಮುಂದುಮುಂದಕ್ಕೆ ತೇಲುತ್ತದೆ. ಸಿಲ್ಲಾ ಮತ್ತ ಚಾರಿಬ್ಡಿಸ್ಗಳನ್ನು ದಾಟಿ ಅವರು ಥಿನೇಷಿಯಾ ದ್ವೀಪವನ್ನು ಸೇರುತ್ತಾರೆ. ಸಂಗಡಿಗರು ತುಂಬ ಬಲವಂತ ಮಾಡಿದ್ದರಿಂದ ಒಡಿಸಿಯಸ್ ಅವರ ಜೊತೆ ಆ ದ್ವೀಪದೊಳಗೆ ಹೋಗುತ್ತಾನೆ. ತಮ್ಮ ಪ್ರಯಾಣಕ್ಕೆ ವಿರೋಧವಾದ ಗಾಳಿ ಬೀಸತೊಡಗಿದ್ದರಿಂದ ಅವರೆಲ್ಲ ಅಲ್ಲೇ ಒಂದು ತಿಂಗಳವರೆಗೆ ಉಳಿಯುವುದು ಅನಿವಾರ್ಯವಾಗುತ್ತದೆ. ಹಸಿವು ಹೆಚ್ಚಿದಾಗ ಸಂಗಡಿಗರು ನಾಯಕನಿಗೆ ಕೊಟ್ಟಿದ್ದ ವಚನವನ್ನು ಮುರಿದು, ಅವನಿಲ್ಲದಾಗ ಹೆಲಿಯಸನ ಅತ್ಯುತ್ತಮ ದನಗಳನ್ನು ಕೊಂದು ತಿನ್ನುತ್ತಾರೆ. ಈ ಅಪರಾಧಕ್ಕೆ ಶಿಕ್ಷೆಯಾಗಿ ಜ್ಯೂóಸ್ ದೇವತೆ ಕೋಪದಿಂದ ಮಳೆ ಬಿರುಗಾಳಿಗಳನ್ನು ಕರೆಯಲಾಗಿ ಹೊರಟಿದ್ದ ಇವರ ಹಡಗು ಎರಡು ಹೋಳಾಗುತ್ತದೆ. ಒಡಿಸಿಯಸನ ಸಂಗಡಿಗರೆಲ್ಲ ನೀರು ಪಾಲಾಗುತ್ತಾರೆ. ಅವನೊಬ್ಬ ಮಾತ್ರ ಉಳಿದುಕೊಳ್ಳುತ್ತಾನೆ. ಹಾಯಿಕಂಬಕ್ಕೆ ಜೋತುಬಿದ್ದಿದ್ದ ಆತ ಒಂಬತ್ತು ದಿನಗಳ ಬಳಿಕ ಒಗೀಜಿಯಾ ದ್ವೀಪವನ್ನು ಸೇರುತ್ತಾನೆ. ಅಟ್ಲಾಸನ ಮಗಳು ಕಲಿಪ್ಸೋವಿನ ಸ್ಥಳ ಅದು. ಏಳು ವರ್ಷಗಳಕಾಲ ಒಡಿಸಿಯಸ್ ಆಕೆಯ ಜೊತೆ ಇರುತ್ತಾನೆ. ತನ್ನ ಪತಿಯಾಗಿ ತನ್ನ ಜೊತೆಯಲ್ಲೇ ಇರಲು ಒಪ್ಪಿದರೆ ಅವನಿಗೆ ಅಮರತ್ವವನ್ನೂ ನಿರಂತರ ಯೌವನವನ್ನೂ ಕರುಣಿಸುವುದಾಗಿ ಆಕೆ ಪ್ರಲೋಭನೆ ಒಡ್ಡುತ್ತಾಳೆ. ಆದರೆ ಮನೆಯ ಕರೆ, ಸತಿಯ ನೆನಪು ತೀವ್ರವಾಗಿದ್ದುದರಿಂದ ಆಕೆ ತೋರಿಸಿದ ಆಸೆ ಅವನನ್ನು ಚಂಚಲಗೊಳಿಸುವುದಿಲ್ಲ. ಅದೇ ದಿನ ಆತ ಕಡಲ ತಡಿಯಲ್ಲಿ ಕುಳಿತು ಕಂಬನಿದುಂಬಿದ ಕಣ್ಣುಗಳಿಂದ ದಿಗಂತದತ್ತ ದೃಷ್ಟಿ ಹಾಯಿಸುತ್ತಾನೆ. ಸಾಯುವುದಕ್ಕೆ ಮೊದಲು ತನ್ನ ಮನೆಯಿಂದ ಮೇಲೆದ್ದ ಹೊಗೆಯನ್ನಾದರೂ ಒಮ್ಮೆ ನೋಡಬೇಕೆಂಬುದೇ ಆತನ ಉತ್ಕಟ ಬಂiÀÄಕೆಯಾಗಿತ್ತು. ಅವನನ್ನು ಉದ್ದಕ್ಕೂ ರಕ್ಷಿಸುತ್ತ ಬಂದ ಅಥೀನ, ಪೊಸೈಡನ್ ಇಲ್ಲದಾಗ ದೇವತೆಗಳ ಸಭೆಯಲ್ಲಿದ್ದ ಜ್ಯೂóಸ್ ದೇವನನ್ನು ಒಡಿಸಿಯಸ್ ಮನೆಗೆ ಹಿಂತಿರುಗುವಂತೆ ಕರುಣಿಸಬೇಕೆಂದು ಬೇಡುತ್ತಾಳೆ. ಇಷ್ಟರಲ್ಲಿ ಒಡಿಸಿಯಸ್ ತಾನೇ ಕಟ್ಟಿಕೊಂಡ ಒಂದು ಹಡಗಿನಲ್ಲಿ ಮತ್ತೆ ಪ್ರಯಾಣ ಹೊರಟು ಹದಿನೆಂಟು ದಿನಗಳ ಯಾನಮಾಡಿ ಫೀಯೇಷಿಯನರ ದ್ವೀಪದ ಹತ್ತಿರಕ್ಕೆ ಬಂದು ಪೊಸೈಡನನ ಕಣ್ಣಿಗೆ ಬೀಳುತ್ತಾನೆ. ಕೂಡಲೇ ಪೊಸೈಡನ್ ಅವನ ಹಡಗನ್ನು ಚೂರು ಚೂರು ಮಾಡುತ್ತಾನೆ. ಆದರೂ ಆತ ಸುಖವಾಗಿ ನೆಲವನ್ನು ಕಾಣುತ್ತಾನೆ. ಅಲ್ಲಿ ಅವನಿಗೆ ರಾಜಕುಮಾರಿ ನೌಸಿಕಾಳ ಪರಿಚಯವಾಗುತ್ತದೆ. ಅವಳು ಅವನನ್ನು ಥೀಷಿಯಸ್ ನಗರಕ್ಕೆ ಒಯ್ದು ತನ್ನ ತಂದೆತಾಯಿಗಳ ಬಳಿ ನಿಲ್ಲಿಸುತ್ತಾಳೆ. ಅಲ್ಲಿ ಆತನಿಗೆ ಸೊಗಸಾದ ಆತಿಥ್ಯ ದೊರಕುತ್ತದಲ್ಲದೆ ಅಲ್ಲಿನ ಅತ್ಯುತ್ತಮ ಹಡಗಿನಲ್ಲಿ ಅವನಿಗೆ ಪ್ರಯಾಣದ ಯೋಗವೂ ದೊರಕಿ ಆತ ಸುಖವಾಗಿ ಊರು ಸೇರುತ್ತಾನೆ.

ಆತ ಸಕಾಲದಲ್ಲಿ ಊರಿಗೆ ಹಿಂತಿರುಗಿ ಬಂದದ್ದರಿಂದ ಅನೇಕ ವಿಪತ್ಪರಂಪರೆಗಳೇ ತಪ್ಪುತ್ತವೆ. ಆತ ಬರುವ ವೇಳೆ ಅವನ ತಾಯಿ ಆಂಟಿಕ್ಲಿಯ ಪುತ್ರಶೋಕದಿಂದ ತೀರಿಕೊಂಡಿದ್ದಳು. ನೂರಕ್ಕೂ ಹೆಚ್ಚಿನ ಯುವಕರು ಪೆನೆಲೊಪೆಯ ಕೈಹಿಡಿಯಲು ಸ್ಪರ್ಧಿಸುತ್ತಿದ್ದರು. ಸುಂದರಿಯಾದ ಪೆನೆಲೊಪೆ ಪತಿಯ ಆಗಮನಕ್ಕಾಗಿ ತವಕಪಡುತ್ತಿದ್ದಳು. ಯುವಕನಾದ ಮಗ ಟೆಲಿಮಾಕಸನನ್ನು ನೂರಕ್ಕೂ ಹೆಚ್ಚಿನ ಯುವಕರು ಹಿಂಸಿಸುತ್ತಿದ್ದುದನ್ನೂ ಅವಳು ಕಂಡು ಸಹಿಸಬೇಕಾಗಿತ್ತು. ತನ್ನ ಮಾವನಿಗೆ ಒಂದು ವಸ್ತ್ರವನ್ನು ಹೆಣೆದು ಮುಗಿಸುವವರೆಗೆ ತನಗೆ ಕಾಲಾವಕಾಶ ಕೊಡಬೇಕೆಂದು ತನ್ನನ್ನು ವರಿಸಲು ನಾ ಮುಂದು ತಾ ಮುಂದೆಂದು ಬರುತ್ತಿದ್ದ ಯುವಕರನ್ನು ಆಕೆ ಕೇಳಿಕೊಂಡಿದ್ದಳು. ಕಾಲ ತಳ್ಳುವ ಉದ್ದೇಶದಿಂದ ಹಗಲೆಲ್ಲ ಹೆಣೆದ ಹೆಣಿಗೆಯನ್ನು ಅವಳು ರಾತ್ರಿ ಬಿಚ್ಚಿಬಿಡುತ್ತಿದ್ದಳು. ನಾಲ್ಕನೆಯ ವರ್ಷದಲ್ಲಿ ಅವಳ ರಹಸ್ಯ ಬಂiÀÄಲಾಗಿ ಹೋಗಿ ಅವಳು ವಸ್ತ್ರವನ್ನು ಮುಗಿಸಲೇಬೇಕಾಗಿಬಂತು. ಯಾರನ್ನಾದರೂ ವರಿಸದೆ ಗತ್ಯಂತರವೇ ಇಲ್ಲ ಎಂದಾಗ ಅವಳು ಒಂದು ಷರತ್ತು ಹಾಕಿದಳು: ತನ್ನ ಪತಿ ಒಡಿಸಿಯಸನ ಬಿಲ್ಲನ್ನು ಹೆದೆಯೇರಿಸಿ ಬಾಣ ಹೂಡಿದವನನ್ನು ತಾನು ಮದುವೆಯಾಗುವುದಾಗಿ ಆಕೆ ಹೇಳಿದಳು. ಅದನ್ನು ಹೆದೆಯೇರಿಸುವಂಥ ವೀರರು ಯಾರೂ ಇಲ್ಲವೆಂದೇ ಅವಳ ನಂಬಿಕೆ. ಆ ಪರೀಕ್ಷೆ ನಡೆಯಬೇಕಾಗಿದ್ದ ದಿನದ ಹಿಂದಿನ ದಿನವೇ ಒಡಿಸಿಯಸ್ ಇಥಾಕಕ್ಕೆ ಬಂದದ್ದು. ಅಥೀನೆಯ ಮಾತಿನಂತೆ ಆತ ಭಿಕ್ಷುಕನ ವೇಷದಲ್ಲಿ ಬಂದು ತನ್ನ ಹಳೆಯ ನಂಬಿಕಸ್ತ ಹಂದಿವಳ ಯುಮೇಯಸನಲ್ಲಿ ಆಶ್ರಯ ಪಡೆದ. ಭಿಕ್ಷುಕನ ವೇಷದಲ್ಲಿದ್ದವನನ್ನು ಅವನು ಗುರುತಿಸದಿದ್ದರೂ ಒಳ್ಳೆಯ ಆತಿಥ್ಯ ನೀಡಿದ. ಅಥೀನ ಅಲ್ಲಿಗೆ ಟೆಲಿಮಾಕಸನನ್ನು ಕರೆದುತಂದಳು. ಇಪ್ಪತ್ತು ವರ್ಷಗಳ ಹಿಂದೆ ಒಡಿಸಿಯಸ್ ಊರು ಬಿಟ್ಟು ಯುದ್ಧಕ್ಕೆ ಹೊರಟಿದ್ದಾಗ ಈತ ಇನ್ನೂ ಮಗು. ಇಪ್ಪತ್ತರ ಹರೆಯದ ತನ್ನ ಮಗನನ್ನು ಒಡಿಸಿಯಸ್ ಹಿಗ್ಗುಹೆಮ್ಮೆಗಳಿಂದ ನೋಡಿದ. ಶತ್ರುಗಳು ಟೆಲಿಮಾಕಸನನ್ನು ತೀರಿಸಿಹಾಕಲು ಬೇಕಾದಷ್ಟು ಸಲ, ಅನೇಕ ರೀತಿಗಳಲ್ಲಿ ಪ್ರಯತ್ನಿಸಿದ್ದರು. ಆದರೆ ಅವೆಲ್ಲ ವಿಫಲವಾಗಿ ಆತ ಸುಖವಾಗಿದ್ದ. ಅದೇ ತಾನೆ ಊರಿಗೆ ಬಂದ ಒಡಿಸಿಯಸ್ ಯಾರು ಎಂಬುದು ಯುಮೇರಿಯಸನಿಗೂ ಟೆಲಿಮಾಕಸನಿಗೂ ಗೊತ್ತಾಯಿತು. ಇಲ್ಲಿ ಪ್ರತಿಯೊಂದು ಕ್ರಿಯೆಯಲ್ಲೂ ನಾಟಕೀಯತೆ ಉಂಟು. ಅನಂತರ ಮೂರು ಜನವೂ ಸೇರಿ ಪೆನೆಲೊಪೆಯನ್ನು ವರಿಸಲು ಒತ್ತಾಯ ಮಾಡುತ್ತಿದ್ದವರನ್ನು ಹೇಗೆ ನಾಶಗೊಳಿಸಬೇಕು ಎಂಬ ಹಂಚಿಕೆ ಹಾಕಿದರು. ಇಲ್ಲಿಗೆ 16 ಕಾಂಡಗಳು ಮುಗಿಯುತ್ತವೆ. ಹದಿನೇಳು ಮತ್ತು ಹದಿನೆಂಟನೆಯ ಕಾಂಡಗಳಲ್ಲಿ ಮೊದಲು ಟೆಲಿಮಾಕಸ್ ಅರಮನೆಯನ್ನು ಪ್ರವೇಶಿಸುವುದರ ವರ್ಣನೆಯಿದೆ. ಅನಂತರ ಭಿಕ್ಷುಕನ ವೇಷದಲ್ಲಿ ಒಡಿಸಿಯಸ್ ಅರಮನೆಯನ್ನು ಸೇರುತ್ತಾನೆ. ಈ ಸಂದರ್ಭದಲ್ಲಿ ಅನೇಕ ಭಾವತುಮುಲಗಳ ಸಚಿತ್ರವರ್ಣನೆಯಿದೆ. ಒಡಿಸಿಯಸನ ಹಳೆಯ ನಾಯಿ ಇಪ್ಪತ್ತು ವರ್ಷಗಳ ಅನಂತರ ಬಂದ ತನ್ನ ಸ್ವಾಮಿಯನ್ನು ಕಂಡು, ಹೃದಯ ತುಂಬಿ ಬಂದು, ಉದ್ರೇಕವನ್ನು ತಾಳಲಾರದೆ ಪ್ರಾಣಬಿಡುತ್ತದೆ. ಪೆನೆಲೊಪೆಯ ಭಾವೀ ಪತಿಗಳ ಔದ್ಧತ್ಯ, ದುರಹಂಕಾರಗಳನ್ನು ಹೋಮರ್ ಎತ್ತಿತೋರಿಸಿ ಅವರಿಗೆ ಮುಂದೆ ದೊರೆತ ಶಿಕ್ಷೆಗೆ ಅವರು ಸರ್ವದಾ ಅರ್ಹರು ಎಂಬುದನ್ನು ಇಲ್ಲಿ ಪ್ರತಿಪಾದಿಸಿದ್ದಾನೆ. ಒಡಿಸಿಯಸ್ ಪೆನೆಲೊಪೆಯನ್ನು ಕಾಣುತ್ತಾನೆ. ಎಷ್ಟರಮಟ್ಟಿಗೆ ಅವನು ಪೆನೆಲೊಪೆಯ ಬಗೆಗೆ ಪ್ರೀತಿ, ಶತ್ರುಗಳ ಬಗೆಗೆ ದ್ವೇಷ-ಎರಡನ್ನೂ ದಮನಗೊಳಿಸಿಡಬಲ್ಲ ಎಂಬುದಕ್ಕೆ, ಅವನ ಪ್ರಚಂಡ ಇಂದ್ರಿಯನಿಗ್ರಹಕ್ಕೆ, ಈ ಕಾಂಡ ಒಳ್ಳೆಯ ಉದಾಹರಣೆಯಾಗಿದೆ. 19ನೆಯ ಕಾಂಡದಲ್ಲಿ ಎರಡು ದಶಕಗಳ ಅನಂತರ ಮೊಟ್ಟಮೊದಲ ಸಲ ಒಡಿಸಿಯಸ್ ಪೆನೆಲೊಪೆಯನ್ನು ಮಾತನಾಡಿಸುತ್ತಾನೆ. ಅವಳಿಗಿನ್ನೂ ಇವನು ಯಾರು ಎಂಬುದು ತಿಳಿಯದು. ಆದರೆ ವೃದ್ದ ದಾದಿ ಯೂರಿಕ್ಲಿಯ ಇವನ ಕಾಲು ತೊಳೆಯುವಾಗ, ಯುವಕನಾಗಿದ್ದಾಗ ಈತನಿಗೆ ಆಗಿದ್ದ ಗಾಯದ ಗುರುತಿನಿಂದ ಇವನಾರೆಂಬುದನ್ನು ಕಂಡುಹಿಡಿಯುತ್ತಾಳೆ.

ಒಡಿಸಿಯಸ್ ನಿದ್ರೆಯಿಲ್ಲದೆ ಕೋಪದಲ್ಲಿ ಕುದಿಯುತ್ತ ಕಳೆದ ರಾತ್ರಿಯ ವರ್ಣನೆಯಿದೆ, ಇಪ್ಪತ್ತನೆಯ ಕಾಂಡದಲ್ಲಿ. ಭಾವೀ ಪತಿಗಳಿಗೆ ಕಾದಿರುವ ಘೋರ ಶಿಕ್ಷೆಯನ್ನು ಒಬ್ಬ ಕಣಿ ಹೇಳುವವ ಸೂಚಿಸುತ್ತಾನೆ. ಆದರೂ ಅವರು ಅದನ್ನು ಗಮನಿಸದೆ ಉನ್ಮತ್ತರಾಗಿಯೇ ಇರುತ್ತಾರೆ. ಓದುಗರ ಕುತೂಹಲವನ್ನು ತುತ್ತತುದಿಗೇರಿಸುವುದು ಇಪ್ಪತ್ತೊಂದನೆಯ ಕಾಂಡ. ಅಥೀನೆಯ ಸಲಹೆಯಂತೆ ಧನುಸ್ಸನ್ನು ಹೆದೆಯೇರಿಸಿ ಬಾಣಪ್ರಯೋಗ ಮಾಡುವ ಪರೀಕ್ಷೆಗೆ ಎಲ್ಲ ಸಿದ್ದತೆಗಳನ್ನೂ ಮಾಡುತ್ತಾರೆ. ಒಡಿಸಿಯಸ್ಸ್‌ ಚಿಕ್ಕವನಿದ್ದಾಗ ಇಫಿಟಸ್ ತನ್ನ ತಂದೆ ಯೂರಿಟಸನ ಧನಸ್ಸನ್ನು ಅವನಿಗೆ ಬಹುಮಾನವಾಗಿ ಕೊಟ್ಟಿದ್ದ. ಅದೇ ಬಿಲ್ಲನ್ನು ಹೆದೆಯೇರಿಸಿ ಹನ್ನೆರಡು ಕೊಡಲಿಗಳ ಹಿಡಿಗಳ ಮೂಲಕ ಬಾಣವನ್ನು ತೂರಿಸಬೇಕಾಗಿತ್ತು. ಒಬ್ಬನಾದ ಮೇಲೊಬ್ಬನಂತೆ ಆ ಭಾವೀ ಪತಿಗಳೆಲ್ಲ ಪ್ರಯತ್ನಿಸಿದರು. ಬಾಣಪ್ರಯೋಗ ಮಾಡುವುದಿರಲಿ, ಒಬ್ಬನಿಗಾದರೂ ಬಿಲ್ಲಿಗೆ ಹೆದೆಯೇರಿಸುವುದು ಕೂಡ ಸಾಧ್ಯವಾಗಲಿಲ್ಲ. ಭಿಕ್ಷುಕನ ವೇಷದಲ್ಲಿದ್ದ ಒಡಿಸಿಯಸ್ ಪ್ರಯತ್ನಿಸಲು ಮುಂದೆ ಬಂದ. ಈಗಾಗಲೇ ಅವಮಾನಿತರಾಗಿದ್ದ ತರುಣರೆಲ್ಲ ಕೂಡದು ಎಂದು ಕೂಗು ಹಾಕಿದರು. ಅದನ್ನು ಲೆಕ್ಕಿಸದೆ ಒಡಿಸಿಯಸ್ ತನ್ನ ವಿಶ್ವಾಸದ ಸೇವಕರ ನೆರವಿನಿಂದ ಎಲ್ಲ ಬಾಗಿಲುಗಳನ್ನೂ ಭದ್ರಪಡಿಸಿದ. ಅನಂತರ ಲೀಲಾಜಾಲವಾಗಿ ಬಿಲ್ಲಿಗೆ ಹೆದೆಯೇರಿಸಿ ಬಾಣ ಪ್ರಯೋಗ ಮಾಡಿದ. ಮರುಕ್ಷಣವೇ ಜ್ಯೂóಸ್ ದೇವತೆಯ ಗುಡುಗಿನ ಶಬ್ದ ಕೇಳಿಸಿತು. ತತ್ಕ್ಷಣ ಒಡಿಸಿಯಸ್ ಮೊದಲು ಉದ್ಧತನಾದ ಆಂಟಿನೋವಸನನ್ನು ಬಳಿಕ ಉಳಿದ ಭಾವೀ ಪತಿಗಳನ್ನು ಕೊಂದುಹಾಕಿದ. ಇಲ್ಲಿಗೆ ಇಪ್ಪತ್ತೆರಡು ಕಾಂಡಗಳು ಮುಗಿದುವು. ಅನೇಕರು ಕಾವ್ಯವೂ ಇಲ್ಲಿಗೆ ಮುಗಿಯಿತು ಎಂದು ತೀರ್ಮಾನ ಮಾಡಿದ್ದಾರೆ. ಆದರೆ ಮುಂದಿನ ಎರಡು ಕಾಂಡಗಳಲ್ಲಿ ಕಾವ್ಯರಂಜನೆಯೂ ಕಥಾಸ್ವಾರಸ್ಯವೂ ಇಲಿಯಡ್ ಮತ್ತು ಒಡಿಸಿ ಎರಡೂ ಗ್ರಂಥಗಳ ದೃಷ್ಟಿಯಿಂದ ಮುಖ್ಯವಾದ ಅನೇಕ ಘಟನೆಗಳ ವರ್ಣನೆಯೂ ಉಂಟು. ಇಪ್ಪತ್ತಮೂರನೆಯ ಕಾಂಡದಲ್ಲಿ ಒಡಿಸಿಯಸ್ ಮತ್ತು ಪೆನೆಲೊಪೆಯರ ನಿಜವಾದ ಪುನಸ್ಸಮಾಗಮ ನಡೆಯುತ್ತದೆ. ಟೆಲಿಮಾಕಸ್ ತನ್ನ ತಾಯಿ ಪೆನೆಲೊಪೆಯನ್ನು ಅತ್ಯಂತ ಕಠಿಣಹೃದಯಿ ಎಂದು ಕರೆಯುತ್ತಾನೆ. ಕೊನೆಗೆ ಅವಳು ಒಡಿಸಿಯಸನನ್ನು ಗುರುತಿಸುತ್ತಾಳೆ. ಅತ್ಯಂತ ಮಧುರವಾದ, ನಿಜವಾದ, ಆತ್ಮೀಯವಾದ ಸುಖಸಮಾಗಮ ಅದು. ಕೊನೆಯ ಕಾಂಡದಲ್ಲಿ-ಅನೇಕ ವಿಮರ್ಶಕರು ಅದನ್ನು ಪ್ರಕ್ಷಿಪ್ತ ಎಂದಿದ್ದಾರೆ-ಸತ್ತ ಭಾವೀ ಪತಿಗಳ ಆತ್ಮಗಳು, ಹೇಡೀಗೆ (ಅಧೋಲೋಕ) ಹೋಗುವುದು, ಒಡಿಸಿಯಸ್ ತನ್ನ ವೃದ್ದ ತಂದೆಯನ್ನು ಊರ ಹೊರಗಿನ ಅವನ ಜಮೀನಿನ ಮನೆಯಲ್ಲಿ ಸಂದರ್ಶಿಸುವುದು-ಮುಂತಾದವುಗಳ ವರ್ಣನೆಯಿದೆ. ಸತ್ತ ಭಾವೀ ಪತಿಗಳ ಬಂಧುಗಳು ಆಯುಧಗಳನ್ನು ಹಿಡಿದು ಒಡಿಸಿಯಸನ ಮೇಲೆ ಸೇಡು ತೀರಿಸಿಕೊಳ್ಳಲು ಸನ್ನದ್ದರಾಗುತ್ತಾರೆ. ಆದರೆ ಮೆಂಟರ್ ರೂಪ ಧರಿಸಿದ್ದ ಅಥೀನೆ ಅವರನ್ನೆಲ್ಲ ಸಮಾಧಾನಗೊಳಿಸಿ ಶಾಂತಿಯನ್ನು ಸ್ಥಾಪಿಸುತ್ತಾಳೆ.

ಗ್ರೀಕ್ ಸಾಹಿತ್ಯದಲ್ಲಿ ಆಚಾರ್ಯಸ್ಥಾನದಲ್ಲಿ ನಿಂತ ಮಹಾಕಾವ್ಯಗಳು ಇಲಿಯಡ್ ಮತ್ತು ಒಡಿಸಿ. ಇಡೀ ಜಗತ್ತಿನ ಅನೇಕಾನೇಕ ಕವಿಗಳು, ನಾಟಕಕಾರರು, ಶಿಲ್ಪಿಗಳು, ಚಿತ್ರಕಾರರು ಈ ಕೃತಿಗಳಿಂದ ಪ್ರಭಾವಿತರಾಗಿದ್ದಾರೆ. ಕೆಲವು ವಿಮರ್ಶಕರ ದೃಷ್ಟಿಯಲ್ಲಿ ಒಡಿಸಿಯೇ ಕಲಾದೃಷ್ಟಿಯಿಂದ ಹೆಚ್ಚು ಉತ್ಕೃಷ್ಟವಾದದ್ದು. ಇಲ್ಲಿನ ಕಥೆಯ ಹರಹು ದೊಡ್ಡದು. ಇದರಲ್ಲಿ ಜಾನಪದ ಮತ್ತು ಪೌರಾಣಿಕ ಕಥೆಗಳು ಕಲಾತ್ಮಕವಾಗಿ ಬೆರೆತಿವೆ. ನಾಟಕೀಯತೆಯಂತೂ ಪದೇ ಪದೇ ತಲೆದೋರಿ ಓದುಗರನ್ನು ಹರ್ಷಗೊಳಿಸುತ್ತದೆ. ಇಡೀ ಕಾವ್ಯವನ್ನು ಆಕ್ರಮಿಸಿ ಆಳುತ್ತಿರುವ ಮುಖ್ಯ ನೀತಿ ಯಾವುದು ಎಂಬುದು ಮಾತ್ರ ಹೇಳುವುದು ಕಷ್ಟ. ಕೆಲವರು ಇದರಲ್ಲಿ ವ್ಯಕ್ತವಾಗುವುದು ಮನೆಯ ಹಿರಿಮೆ ಎಂದಿದ್ದಾರೆ. ಮತ್ತೆ ಕೆಲವರು ಇಲಿಯಡ್ ಶೌರ್ಯದ ಕಾವ್ಯವಾದರೆ ಇದು ಜಾಣ್ಮೆಯ ಕಾವ್ಯ ಎನ್ನುತ್ತಾರೆ. ಹೊರೆಸನಿಗಾದರೋ ಇಲ್ಲಿ ಮುಖ್ಯವಾಗಿ ಕಾಣುವುದು ಒಡಿಸಿಯಸನ ಚಾರಿತ್ರ್ಯ.-ಅದರಲ್ಲಿಯೂ ಜಾಣ್ಮೆ, ವಿಶ್ವಾಸಾರ್ಹತೆ, ವಿಧವಿಧವಾಗಿ ಪೆಟ್ಟುಗಳನ್ನು ವಿಧಿ ನೀಡುತ್ತಿದ್ದರೂ ಅವುಗಳನ್ನೆಲ್ಲ ಸಹಿಸುವ ಧೃತಿ. ತಡವಾಗಿಯಾದರೂ ಕೊನೆಗೊಮ್ಮೆ ಧರ್ಮ ಗೆಲ್ಲುತ್ತದೆ ಎಂಬ ಗ್ರೀಕರ ನಂಬಿಕೆ ಆಧುನಿಕರಿಗೆ ಇದರಲ್ಲಿ ಪ್ರತಿಧ್ವನಿಸುತ್ತದೆ. (ಪಿ.)

‘ಇಲಿಯಡ್’ನಲ್ಲಿ ಮನುಷ್ಯನ ಸಾಹಸಕ್ಕೆ ಪ್ರಾಧಾನ್ಯ, ಸಂಯಮದ ಅಗತ್ಯವನ್ನು ಕವಿ ಪರೋಕ್ಷವಾಗಿ ಸೂಚಿಸುತ್ತಾನೆ. ‘ಓಡಿಸ್ಸಿ’ ಯಲ್ಲಿ ಮನುಷ್ಯನ ವಿವೇಕಕ್ಕೆ ಪ್ರಾಧಾನ್ಯ. ಒಡಿಸ್ಯೂಸ್ ಶೂರನೇ ಹೌದು. ಆದರೆ ಅವನು ಎಲ್ಲ ಆಪತ್ತುಗಳನ್ನು ಗೆದ್ದು ಸುರಕ್ಷಿತವಾಗಿ ಹಿಂದಿರುಗಿ, ಅರಮನೆಯನ್ನಾಕ್ರಮಿಸಿದ್ದ ದುರುಳರನ್ನು ಗೆಲ್ಲುವುದು ತನ್ನ ಬುದ್ಧಿಶಕ್ತಿಯಿಂದ, ತಾಳ್ಮೆಯಿಂದ, ವಿವೇಚನೆಯಿಂದ, ದೇವತೆಗಳಿಗೆ ತಲೆಬಾಗುವುದರಿಂದ. ಈ ಮಹಾಕಾವ್ಯದ ನಾಯಕ ಸಂವೇದನಾಶೀಲ. ಅಸಮಾನ ಬುದ್ಧಿವಂತ. ಮಾನವೀಯ ಸಂಬಂಧಗಳಿಗೆ ಬೆಲೆ ಕೊಡುವವನು. ಯಾವಾಗ ಶೌರ್ಯವು ಪರಿಣಾಮಕಾರಿಯಾಗಬಲ್ಲದು, ಯಾವಾಗ ತಾಳ್ಮೆ ಅಗತ್ಯ, ಯಾವಾಗ ಬುದ್ಧಿಶಕ್ತಿಯನ್ನು ಬಳಸಬೇಕು ಎಂದು ಬಲ್ಲವನು. ಈ ಮಹಾಕಾವ್ಯದಲ್ಲಿಯೂ ಮನುಷ್ಯನ ಜಗತ್ತಿನ ಮೇಲೆ ದೇವತೆಗಳ ಲೋಕ ಬಾಗಿದೆ, ದೇವತೆಗಳು ಮನುಷ್ಯನ ಬದುಕಿನಲ್ಲಿ ಪ್ರವೇಶಿಸುತ್ತಾರೆ, ಅವರಲ್ಲಿ ಹಲವರು ನೈತಿಕವಾಗಿ ಪುಜಾರ್ಹರೇನೂ ಅಲ್ಲ. ಆದರೆ ಒಡಿಸ್ಯೂಸ್ ದೇವತೆಗಳಿಗೆ ತಲೆಬಾಗಿ ನಡೆದುಕೊಳ್ಳುತ್ತಾನೆ. ಅಥೀನೆ ಅವನನ್ನು ಕಾಪಾಡುತ್ತಾಳೆ. ಹೋಮರ್ ಕಂಡ ಪರಿಪುರ್ಣತೆಯ ಎರಡು ರೂಪಗಳಲ್ಲಿ ಒಡಿಸ್ಯೂಸ್ ಒಂದು ರೂಪ. * (ಎಲ್.ಎಸ್.ಎಸ್.)