ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಕೇಸಿಯನ್ ಭಾಷಾ ಪರಿವಾರ

ವಿಕಿಸೋರ್ಸ್ದಿಂದ

ಕಕೇಸಿಯನ್ ಭಾಷಾ ಪರಿವಾರ : ಕಪ್ಪು ಸಮುದ್ರ ಮತ್ತು ಕ್ಯಾಸ್ಪಿಯನ್ ಸಮುದ್ರಗಳ ಮಧ್ಯ ಭಾಗದಲ್ಲಿ ಇರುವ ಬಹು ವಿಶಾಲವಾದ ಕಕೇಸಿಯ ಪ್ರದೇಶದಲ್ಲಿ ವಾಸಿಸುವ ಜನ ಆಡುತ್ತಿರುವ ವಿವಿಧ ಭಾಷೆಗಳ ಒಂದು ಸಮೂಹ. ಈ ಭಾಷಾಕ್ಷೇತ್ರ ರಷ್ಯದ ದಕ್ಷಿಣದಲ್ಲಿ ಕಕೇಸಿಯನ್ ಭೂಸಂಧಿಯಿಂದ ಮೊದಲಾಗಿ ತುರ್ಕಿ ಮತ್ತು ಇರಾನ್ ದೇಶಗಳವರೆಗೂ ಹರಡಿಕೊಂಡಿದೆ. ಈ ವಿಶಾಲವಾದ ಭೂಪ್ರದೇಶದಲ್ಲಿ ಸು. 40 ಲಕ್ಷಕ್ಕೂ ಹೆಚ್ಚು ಜನ ಈ ಭಾಷೆಗಳನ್ನು ಬಳಸುತ್ತಿದ್ದಾರೆ. ಈ ಭಾಷಾಪರಿವಾರಕ್ಕೆ ಸೇರಿದ ಹೆಚ್ಚು ಉಪಭಾಷೆಗಳು ಕಾಕಸಸ್ ಪರ್ವತದ ಸುತ್ತಮುತ್ತಲ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಈ ಎಲ್ಲ ಭಾಷೆ ಮತ್ತು ಉಪಭಾಷೆಗಳನ್ನು ಅಧ್ಯಯನ ಮಾಡಲು ಹೊರಟಾಗ ಅವು ಪರಸ್ಪರ ಭಿನ್ನ ಭಿನ್ನವಾಗಿಯೇ ಕಂಡುಬಂದಿವೆ. ಈ ಕಾರಣಗಳಿಂದಾಗಿ ಇವು ವಿಶ್ವದ ಯಾವ ಭಾಷಾ ಪರಿವಾರಕ್ಕೂ ಸೇರದೆ ಒಂದು ಸ್ವತಂತ್ರಭಾಷಾ ಪರಿವಾರವಾಗಿಯೇ ಉಳಿದಿವೆ. ಇವು ಪ್ರಾಚೀನ ಮೆಡಿಟರೇನಿಯನ್ ಭಾಷೆಗಳ ಪಳೆಯುಳಿಕೆಗಳಿಂದ ವಿಕಾಸಗೊಂಡ ಭಾಷೆಗಳಿರಬೇಕೆಂದು ಕೆಲವು ವಿದ್ವಾಂಸರ ಅಭಿಪ್ರಾಯ. ಹೆಚ್ಚಿನ ವಿಚಾರಗಳನ್ನು ತಿಳಿಯಲು ಸಾಕಷ್ಟು ಪುರಾವೆಗಳಿಲ್ಲದೆ ಇವು ಇನ್ನೂ ಅಸ್ಪಷ್ಟವಾಗಿಯೇ ಉಳಿದಿವೆ. ಈ ಬಗ್ಗೆ ಇನ್ನೂ ಸಂಶೋಧನೆ ನಡೆಯಬೇಕಾಗಿದೆ.

ಕಕೇಸಿಯನ್ ಭಾಷಾಪರಿವಾರಕ್ಕೆ ಸೇರಿದ ಭಾಷೆಗಳನ್ನು ಮುಖ್ಯವಾಗಿ ಮೂರು ವರ್ಗಗಳನ್ನಾಗಿ ವಿಂಗಡಿಸಬಹುದು:

  1. . ಪುರ್ವ ಕಕೇಸಿಯನ್ ಭಾಷಾವರ್ಗ: (1) ಚೆಚೆನ್ (2) ಅಮ್ರೊ-ಅಂದಿ (3) ದರ್ಘಿ (4) ಸಮುರ್ (5) ಲಕ್ ಅಥವಾ ಕಸಿ-ಕುಮುಕ್ (6) ಅರ್ತ್ಜಿ (7) ಹಿನುಲುಘ್ (8) ಉದಿ ಎಂಬ ಎಂಟು ಭಾಷಾಶಾಖೆಗಳು ಸೇರಿವೆ.
  2. . ಪಶ್ಚಿಮ ಕಕೇಸಿಯನ್ ಭಾಷಾವರ್ಗ: (1) ಅಭಜóó (2) ಉಭಿಕ್ (3) ಅದಿಘೆ ಎಂಬ ಮೂರು ಭಾಷಾ ಶಾಖೆಗಳು ಸೇರಿವೆ.
  3. . ದಕ್ಷಿಣ ಕಕೇಸಿಯನ್ ಭಾಷಾವರ್ಗ: (1) ಜಾರ್ಜಿಯಸ್ (2) ಮಿಂಗ್ರೆಲಿಯನ್ ಮತ್ತು ಲeóï (3) ಸ್ವನೇತಿಯನ್ ಎಂಬ ಭಾಷಾಶಾಖೆಗಳು ಸೇರಿವೆ.

ಈ ಭಾಷಾರ್ಗೀಕರಣವನ್ನು ಸಮರ್ಪಕ ಹಾಗೂ ಪರಿಪುರ್ಣ ಎಂದು ಒಪ್ಪದ ಕೆಲವು ವಿದ್ವಾಂಸರು ಈ ವರ್ಗದ ಕೆಲವು ಭಾಷೆಗಳನ್ನು ಆಳವಾಗಿ ಅಧ್ಯಯನ ಮಾಡಿ ಅವುಗಳಲ್ಲಿ ಮುಖ್ಯವಾಗಿ ಕಂಡುಬರಬಹುದಾದ ಸಾಮ್ಯಗಳನ್ನು ಆಧಾರವಾಗಿರಿಸಿಕೊಂಡು ಅವನ್ನು ಮತ್ತೆ ವರ್ಗೀಕರಿಸತೊಡಗಿದರು. ಪುರ್ವ ಮತ್ತು ಪಶ್ಚಿಮ ಕಕೇಸಿಯನ್ ಭಾಷೆಗಳಲ್ಲಿ ಸಾಕಷ್ಟು ಸಾಮ್ಯ ಕಂಡು ಬಂದ ಕಾರಣದಿಂದ ಅವನ್ನು ಒಟ್ಟುಗೂಡಿಸಿ ಉತ್ತರ ಕಕೇಸಿಯನ್ ಭಾಷಾವರ್ಗವೆಂದು ಕರೆದರು. ಅಂದಿನಿಂದ ಈ ಕಕೇಸಿಯನ್ ಭಾಷಾಪರಿವಾರಕ್ಕೆ ಸೇರಿದ ಎಲ್ಲ ಭಾಷೆಗಳನ್ನೂ ಉತ್ತರ ಮತ್ತು ದಕ್ಷಿಣ ಕಕೇಸಿಯನ್ ಭಾಷಾವರ್ಗಗಳೆಂದು ಕರೆಯುವುದು ರೂಢಿಗೆ ಬಂತು. ಉತ್ತರ ಕಕೇಸಿಯನ್ ಭಾಷೆಗಳಾದ ಪುರ್ವ ಮತ್ತು ಪಶ್ಚಿಮ ಕಕೇಸಿಯನ್ ಭಾಷೆಗಳು ದಕ್ಷಿಣ ಕಾಕೇಸಿಯನ್ ಭಾಷೆಗಳೊಡನೆ ಹೋಲಿಸಿದಾಗ ಪರಸ್ಪರ ಭಿನ್ನವಾಗಿಯೇ ಕಂಡುಬರುತ್ತವೆ. (ಕೆ.ಕೆ.ಜಿ.)